ಮಂಗಳೂರು: ಬೀದಿ ಬದಿ ವ್ಯಾಪಾರಿಗಳಿಂದ ಮಹಾ ನಗರ ಪಾಲಿಕೆಯ ಕಮಿಷನರ್ ಕಚೇರಿಗೆ ಮುತ್ತಿಗೆ
ಮಂಗಳೂರು: ಬೀದಿ ಬದಿ ವ್ಯಾಪಾರಿಗಳಿಗೆ ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿ ನೀಡಲು ವಿಳಂಭ ಧೋರಣೆ ಅನುಸರಿಸಲಾಗಿತ್ತಿದೆ ಎಂದು ಆರೋಪಿಸಿ ನೂರಾರು ಬೀದಿ ಬದಿ ವ್ಯಾಪಾರಿಗಳು ಮಂಗಳೂರು ಮಹಾ ನಗರ ಪಾಲಿಕೆಯ ಕಮಿಷನರ್ ಅವರ ಕಚೇರಿಗೆ ಗುರುವಾರ ಬೆಳಗ್ಗೆ ಮುತ್ತಿಗೆ ಹಾಕಿದರು.
ಆಯುಕ್ತರಿಂದ ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ. 3 ವರ್ಷಗಳಿಂದ ನಮ್ಮ ಪ್ರಮಾಣ ಪತ್ರವಾಗಲೀ, ಗುರುತಿನ ಚೀಟಿಯನ್ನಾಗಲೀ ನವೀಕರಿಸಿ ನೀಡಿಲ್ಲ ಎಂದು ಆರೋಪಿಸಿದ ವ್ಯಾಪಾರಿಗಳು, ಹಲವು ವರ್ಷಗಳಿಂದ ಆಯುಕ್ತರು ನಾಟವಾಡುತ್ತಾ, ಬೀದಿ ಬದಿ ವ್ಯಾಪಾರಿಗಳನ್ನು ಹೀನಾಯವಾಗಿ ಮಾತನಾಡುತ್ತಿದ್ದು, ಅವರೊಂದಿಗೆ ಮಾತನಾಡಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಾ ನಗರ ಪಾಲಿಕೆ ಬೀದಿಬದಿ ವ್ಯಾಪಾರಿಗಳನ್ನು ಕಡೆಗಣಿಸಲು ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್ ಅವರು ನೇರ ಹೊಣೆ. ಅವರ ಒತ್ತಡಕ್ಕೆ ಮಣಿದು ಅಧಿಕಾರಿಗಳು ಪ್ರಮಾಣ ಪತ್ರ, ಗುರುತಿನ ಚೀಟಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. 3 ಕೋ.ರೂ.ಲಂಚ ನೀಡಿ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ತಮ್ಮ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದು ಬೀದಿ ಬದಿವ್ಯಾಪಾರಿಗಳ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಗಂಭೀರ ಆರೋಪ ಮಾಡಿದರು.
ಈ ಮಧ್ಯೆ ಬೀದಿಬದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು 2ಲಕ್ಷ ರೂ. ಪಡೆದುಕೊಂಡು ಬೀದಿ ಬದಿ ವ್ಯಾಪಾರಿಗಳನ್ನು ವಂಚಿಸುತ್ತಿದ್ದಾರೆ ಎಂದು ಆಯುಕ್ತರು ಆರೋಪಿಸಿದ್ದಾರೆ.