'ಮಾಸ್ಟರ್ ಶೆಫ್' ವಿಜೇತ ಮುಹಮ್ಮದ್ ಆಶಿಕ್ ಗೆ ಡಿ.10ರಂದು ಮಂಗಳೂರಿನಲ್ಲಿ ಅದ್ದೂರಿ ಸ್ವಾಗತ
ಮಂಗಳೂರು, ಡಿ.9: ಸೋನಿ ಲೈವ್ ಒಟಿಟಿ ಪ್ಲಾಟ್ ಫಾರ್ಮ್ ಮುಂಬೈಯಲ್ಲಿ ಆಯೋಜಿಸಿದ್ದ ದೇಶದ ಪ್ರತಿಷ್ಠಿತ ಅಡುಗೆ ಸ್ಪರ್ಧೆ 'ಮಾಸ್ಟರ್ ಶೆಫ್ ಇಂಡಿಯಾ' ಎಂಟನೇ ಸೀಸನ್ ನ ವಿಜೇತರಾಗಿ ತವರಿಗೆ ಆಗಮಿಸುತ್ತಿರುವ ಮುಹಮ್ಮದ್ ಆಶಿಕ್ ಡಿ.10ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಮುಂಬೈನಿಂದ ಅಪರಾಹ್ನ 2 ಗಂಟೆಗೆ ಮಂಗಳೂರು ಆಗಮಿಸಲಿರುವ ಅವರನ್ನು ಮುಹಮ್ಮದ್ ಆಶಿಕ್ ಫ್ಯಾನ್ಸ್ ಕುಡ್ಲ ಗೆಳೆಯರ ಬಳಗ ಅದ್ದೂರಿಯಾಗಿ ಸ್ವಾಗತಿಸಲು ಸಜ್ಜಾಗಿದೆ ಎಂದು ಸೈಫ್ ಸುಲ್ತಾನ್ ತಿಳಿಸಿದ್ದಾರೆ.
ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಈ ಬಗ್ಗೆ ಮಾಹಿತಿ ನೀಡಿದ ಅವರು, ಜೆಪ್ಪುವಿನ ಸಾಮಾನ್ಯ ಕುಟುಂಬದ ಯುವಕ, ಕುಲ್ಕಿ ಹಬ್ ಎಂಬ ಜೂಸ್ ಹಾಗೂ ಸ್ನ್ಯಾಕ್ಸ್ ಮಳಿಗೆ ನಡೆಸುತ್ತಿರುವ ಆಶಿಕ್ ಅವರ ಸಾಧನೆ ಮಂಗಳೂರು ಮಾತ್ರವಲ್ಲ, ಇಡೀ ರಾಜ್ಯಕ್ಕೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಅಂತರ್ ರಾಷ್ಟ್ರೀಯ ಖ್ಯಾತಿಯ ಸೂಪರ್ ಸ್ಟಾರ್ ಶೆಫ್ ಗಳು ತೀರ್ಪುಗಾರರಾಗಿರುವ ಸೋನಿ ಲೈವ್ ನಲ್ಲಿ ಪ್ರಸಾರವಾದ ಮಾಸ್ಟರ್ ಶೆಫ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿರುವ ಪ್ರಪ್ರಥಮ ದಕ್ಷಿಣ ಭಾರತೀಯ ಮುಹಮ್ಮದ್ ಆಶಿಕ್ ಎಂಬುದು ನಮ್ಮೆಲ್ಲರಿಗೂ ಅತ್ಯಂತ ಹೆಮ್ಮೆ ತಂದಿದೆ. ಅವರಿಗೆ ಮಂಗಳೂರು ಹಾಗೂ ತುಳುನಾಡಿನ ಸಾಂಪ್ರದಾಯಿಕ ಹಾಗೂ ವೈಭವದ ಸ್ವಾಗತ ನೀಡಲಾಗುವುದು. ಚಂಡೆ ವಾದ್ಯಗಳ ಸಹಿತ ಭರ್ಜರಿ ಸ್ವಾಗತ ನೀಡಲು ತಯಾರಿ ನಡೆದಿದೆ. ಅವರನ್ನು ವಿಮಾನ ನಿಲ್ದಾಣದಿಂದ ಕರೆದುಕೊಂಡು ಬಂದು ಮಂಗಳೂರು ನಗರದಲ್ಲಿ ಮೆರವಣಿಗೆ ಮಾಡಿ ಬಳಿಕ ನೆಕ್ಸಸ್ ಫಿಝಾ ಮಾಲ್ ನಲ್ಲಿ ಸನ್ಮಾನಿಸಲಾಗುವುದು ಎಂದವರು ತಿಳಿಸಿದರು.
24 ವರ್ಷದ ಮುಹಮ್ಮದ್ ಆಶಿಕ್ ಆರ್ಥಿಕ ಸಮಸ್ಯೆಗಳನ್ನು ಎದುರಿಸಿ ಅದರಿಂದ ಒಂದಿಷ್ಟೂ ಹಿಂಜರಿಯದೆ ಕುಟುಂಬಕ್ಕೆ ಆಸರೆಯಾಗುತ್ತಲೇ ತನ್ನ ಕನಸಿನ ಹಿಂದೆ ಹೋದವರು. ಮಂಗಳೂರಿನಲ್ಲಿ ಕುಲ್ಕಿ ಹಬ್ ಎಂಬ ಸಣ್ಣ ಮಳಿಗೆ ಪ್ರಾರಂಭಿಸಿ ವೈವಿಧ್ಯಮಯ ಹಾಗೂ ವಿನೂತನ ಪಾನೀಯ ಹಾಗೂ ಉಪಾಹಾರಗಳ ಮೂಲಕ ಜನಪ್ರಿಯತೆ ಗಳಿಸಿದವರು. ಅದರ ಜೊತೆಜೊತೆಗೆ ಪಾಕಶಾಸ್ತ್ರದಲ್ಲಿ ಪ್ರವೀಣನಾಗುವ ತನ್ನ ಪ್ರಯತ್ನ ಮುಂದುವರಿಸಿ ಈ ಹಿಂದಿನ ಮಾಸ್ಟರ್ ಶೆಫ್ ಆಯ್ಕೆಯಾದರೂ ಮುಂದಿನ ಹಂತಕ್ಕೆ ಹೋಗಲು ಸಾಧ್ಯವಾಗಿರಲಿಲ್ಲ. ಆದರೆ ಛಲ ಬಿಡದ ಮುಹಮ್ಮದ್ ಆಶಿಕ್ ಈ ಬಾರಿ ಅಲ್ಲಿ ಜಯಬೇರಿ ಬಾರಿಸಿದ್ದಾರೆ. ದೇಶದ ವಿವಿಧಡೆಗಳಿಂದ ಬಂದಿದ್ದ ಸ್ಪರ್ಧಿಗಳನ್ನು ಹಿಂದಿಕ್ಕಿದ್ದಾರೆ.
ಅವರ ಅಭಿಮಾನಿ ಬಳಗ ಅಪಾರ ಸಂಖ್ಯೆಯಲ್ಲಿದ್ದು ಆಶಿಕ್ ಅವರನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಆಶಿಕ್ ಅವರ ಕುಟುಂಬ ಸದಸ್ಯರಾದ ಜಾಬೀರ್ ಅಹ್ಮದ್, ಮುಹಮ್ಮದ್ ಅಲಿ, ಕಾರ್ಯಕ್ರಮ ಸಂಚಾಲಕ ಅಬ್ದುರ್ರಹ್ಮಾನ್ ಅಯಾನ್ ಉಪಸ್ಥಿತರಿದ್ದರು.