ಅಬಕಾರಿ ನೀತಿ ಹಗರಣ: ಅರವಿಂದ್ ಕೇಜ್ರಿವಾಲ್‌ಗೆ ಏಳನೆಯ ಬಾರಿ ಸಮನ್ಸ್ ಜಾರಿಗೊಳಿಸಿದ ಈಡಿ

Update: 2024-02-22 15:38 GMT

ಅರವಿಂದ್ ಕೇಜ್ರಿವಾಲ್ (PTI)

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಈ.ಡಿ.) ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ 7ನೇ ಸಮನ್ಸ್ ನೀಡಿದೆ ಹಾಗೂ ಫೆಬ್ರವರಿ 26ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಅರವಿಂದ ಕೇಜ್ರಿವಾಲ್ ಅವರು ಇದುವರೆಗೆ 6 ಸಮನ್ಸ್ ಗೆ ಗೈರು ಹಾಜರಾಗಿದ್ದಾರೆ.

ಸಮನ್ಸ್ ಬಗ್ಗೆ ಪ್ರತಿಕ್ರಿಯಿಸಿರುವ ಆಮ್ ಆದ್ಮಿ ಪಕ್ಷದ ಸಚಿವೆ ಅತಿಶಿ, ಜಾರಿ ನಿರ್ದೇಶನಾಲಯ ಕೇಜ್ರಿವಾಲ್ ಅವರ ವಿರುದ್ಧ ಮತ್ತೊಂದು ಕಾನೂನು ಬಾಹಿರ ಸಮನ್ಸ್ ನೀಡಿದೆ. ಚಂಡಿಗಡ ಮೇಯರ್ ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ಬಿಜೆಪಿ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದಿದ್ದಾರೆ.

ಚುನಾವಣಾ ಅಧಿಕಾರಿ ಅನಿಲ್ ಮಸೀಹ್ ಫಲಿತಾಂಶ ತಿದ್ದಿರುವುದಾಗಿ ಉಲ್ಲೇಖಿಸಿ ಸುಪ್ರೀಂ ಕೋರ್ಟ್ ಚಂಡಿಗಢ ಮೇಯರ್ ಚುನಾವಣೆಯ ಫಲಿತಾಂಶ ರದ್ದುಗೊಳಿಸಿತ್ತು. ಅಲ್ಲದೆ, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಕುಲದೀಪ್ ಕುಮಾರ್ ಅವರ ಪರವಾಗಿ ತೀರ್ಪು ನೀಡಿತ್ತು.

‘‘ಜಾರಿ ನಿರ್ದೇಶನಾಲಯದ ಪ್ರತಿ ಕಾನೂನು ಬಾಹಿರ ಸಮನ್ಸ್ ಕುರಿತು ನಾವು ಕಾನೂನಾತ್ಮಕ ಪ್ರಶ್ನೆ ಎತ್ತಿದ್ದೇವೆ. ಆದರೆ, ಇದುವರೆಗೆ ಜಾರಿ ನಿರ್ದೇಶನಾಲಯದಿಂದ ಒಂದೇ ಒಂದು ಪ್ರತಿಕ್ರಿಯೆ ಸ್ವೀಕರಿಸಿಲ್ಲ. ಇದು ಕಾನೂನು ಕ್ರಮ ಅಲ್ಲ. ಇದೆಲ್ಲವೂ ಕೇವಲ ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಕ್ಷಕ್ಕೆ ಬೆದರಿಕೆ ಒಡ್ಡುತ್ತಿರುವುದು. ಚಂಡಿಗಡ ಮೇಯರ್ ಚುನಾವಣೆಯ ಫಲಿತಾಂಶದ ಕುರಿತಂತೆ ಸೇಡು ತೀರಿಸಿಕೊಳ್ಳುವ ಪ್ರಯತ್ನವಾಗಿ ಜಾರಿ ನಿರ್ದೇಶನಾಲಯ ಈ ಸಮನ್ಸ್ ಕಳುಹಿಸಿದೆ’’ ಎಂದು ಅತಿಶಿ ಹೇಳಿದ್ದಾರೆ,

ಈ ಹಿಂದೆ ಫೆಬ್ರವರಿ 19ರಂದು ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ 6ನೇ ಸಮನ್ಸ್ ನೀಡಿತ್ತು. ಆದರೆ, ಅವರು ಗೈರು ಹಾಜರಾಗಿದ್ದರು. ಅನಂತರ ಆಮ್ ಆದ್ಮಿ ಪಕ್ಷದ ವಕ್ತಾರರಾದ ಪ್ರಿಯಾಂಕ ಕಕ್ಕರ್, ಪಕ್ಷ ಎಲ್ಲಾ ಸಮನ್ಸ್ಗಳಿಗೆ ಪ್ರತಿಕ್ರಿಯೆ ನೀಡಿದೆ. ಈ ಪ್ರಕರಣದ ಕುರಿತಂತೆ ನ್ಯಾಯಾಲಯದ ತೀರ್ಪು ಬರುವ ವರೆಗೆ ಜಾರಿ ನಿರ್ದೇಶನಾಲಯ ಕಾಯಬೇಕು ಎಂದು ಹೇಳಿದ್ದರು. ಜಾರಿ ನಿರ್ದೇಶನಾಲಯದ ಸಮನ್ಸ್ ಕಾನೂನು ಬಾಹಿರ ಎಂದು ಪಕ್ಷ ಮತ್ತೆ ಮತ್ತೆ ಹೇಳಿತ್ತು. ಇದಕ್ಕಿಂತ ಮೊದಲು ಕೇಜ್ರಿವಾಲ್ ಅವರು 2013 ನವೆಂಬರ್ 2 ಹಾಗೂ ಡಿಸೆಂಬರ್ 21, ಈ ವರ್ಷ ಜನವರಿ 3, ಜನವರಿ 18 ಹಾಗೂ ಫೆಬ್ರವರಿ 2ರಂದು ಜಾರಿ ನಿರ್ದೇಶನಾಲಯದ ಸಮನ್ಸ್ಗೆ ಹಾಜರಾಗಿರಲಿಲ್ಲ.

ಅಬಕಾರಿ ನೀತಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತನ್ನ ಸಮನ್ಸ್ ಅನುಸರಿಸದ ಕೇಜ್ರಿವಾಲ್ ಅವರ ವಿರುದ್ಧ ಜಾರಿ ನಿದೇಶನಾಲಯ ದಿಲ್ಲಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿತ್ತು. ಇದಕ್ಕೆ ಸಂಬಂಧಿಸಿದ ವಿಚಾರಣೆಯಲ್ಲಿ ವೈಯುಕ್ತಿಕ ಹಾಜರಾತಿಯಿಂದ ಕೇಜ್ರಿವಾಲ್ ಅವರಿಗೆ ದಿಲ್ಲಿ ನ್ಯಾಯಲಯ ಫೆ. 17ರಂದು ವಿನಾಯತಿ ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News