ಸಂವಿಧಾನ ಬದಲಾಯಿಸಲು ಬಿಜೆಪಿ 400ಕ್ಕೂ ಹೆಚ್ಚಿನ ಸ್ಥಾನಗಳನ್ನು ಬಯಸುತ್ತಿದೆ : ಶರದ್ ಪವಾರ್
ಪುಣೆ: ಸಂವಿಧಾನವನ್ನು ಬದಲಾಯಿಸಲು 2024ರ ಲೋಕಸಭೆ ಚುನಾವಣೆಯಲ್ಲಿ 400 ಪ್ಲಸ್ ಸ್ಥಾನಗಳನ್ನು ಪಡೆಯಲು ಬಿಜೆಪಿ ಬಯಸುತ್ತಿದೆ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎಸ್ಪಿ)ದ ವರಿಷ್ಠ ಶರದ್ ಪವಾರ್ ರವಿವಾರ ಹೇಳಿದ್ದಾರೆ.
ಬಾರಾಮತಿ ಲೋಕಸಭಾ ಕ್ಷೇತ್ರದ ಭಾಗವಾಗಿರುವ ಪುಣೆಯ ಸಸ್ವಾದ್ ತೆಹ್ಸಿಲ್ನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಈ ವರ್ಷದ ಸಾರ್ವತ್ರಿಕ ಚುನಾವಣೆ ಭಿನ್ನವಾಗಿದೆ. ಯಾಕೆಂದರೆ ಇದು ನಮ್ಮ ದೇಶದಲ್ಲಿ ಯಾವ ರೀತಿಯಲ್ಲಿ ಕೆಲಸ ಮಾಡಲಿದೆ ಎಂಬುದನ್ನು ನಿರ್ಧರಿಸುತ್ತದೆ ಎಂದರು.
‘‘ದಿಲ್ಲಿ ಮುಖ್ಯಮಂತ್ರಿ (ಅರವಿಂದ ಕೇಜ್ರಿವಾಲ್) ಅವರನ್ನು ಕಂಬಿಯ ಹಿಂದೆ ಇರಿಸಲಾಗಿದೆ. ಬಿಜೆಪಿ ಸರ್ವಾಧಿಕಾರದತ್ತ ಸಾಗುತ್ತಿದೆ ಹಾಗೂ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದೆ. ಆದುದರಿಂದ ನಮ್ಮ ರಾಷ್ಟ್ರವನ್ನು ಉಳಿಸಲು ಅವರನ್ನು ಸೋಲಿಸಬೇಕಿದೆ’’ ಎಂದು ಅವರು ಹೇಳಿದರು.
‘‘ದೇಶ ಪ್ರಜಾಪ್ರಭುತ್ವದ ಅಡಿಯಲ್ಲಿ ನಡೆಯಬೇಕು. ಆದರೆ, ನಮಗೆ ಆತಂಕವಾಗಿದೆ. ಸಂವಿಧಾನದಲ್ಲಿ ಬದಲಾವಣೆ ತರಲು ಅವರು 400 ಸ್ಥಾನಗಳನ್ನು ಬಯಸುತ್ತಿದ್ದಾರೆ’’ ಎಂದು ಅವರು ಪ್ರತಿಪಾದಿಸಿದರು.
ಎನ್ಸಿಪಿ (ಎಸ್ಪಿ) ಹಾಲಿ ಸಂಸದೆ ಹಾಗೂ ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಅವರನ್ನು ಬಾರಾಮತಿಯಿಂದ ಕಣಕ್ಕಿಳಿಸಿದೆ. ಸುಳೆ ಅವರು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.