ಹಿಂದುಳಿದ ವರ್ಗಕ್ಕೆ ಆಘಾತ ನೀಡಿದ್ದಕ್ಕೆ ಭವಿಷ್ಯದಲ್ಲಿ ಮಹಾಯುತಿ ಬೆಲೆ ತೆರಬೇಕಾದೀತು: ಛಗನ್ ಭುಜಬಲ್
ನಾಸಿಕ್: ಮಹಾರಾಷ್ಟ್ರ ಮಹಾಯುತಿ ಕೂಟದಲ್ಲಿ ಹೊಗೆಯಾಡುತ್ತಿರುವ ಅಸಮಾಧಾನ ದಟ್ಟವಾಗುತ್ತಿದ್ದು, ಸಂಪುಟದಲ್ಲಿ ಸ್ಥಾನ ಪಡೆಯಲು ವಿಫಲರಾಗಿರುವ ಎನ್ ಸಿಪಿ ಹಿರಿಯ ಮುಖಂಡ ಛಗನ್ ಭುಜಬಲ್, ಹಿಂದುಳಿದ ವರ್ಗಗಳನ್ನು ವಿರೋಧಿಸುತ್ತಿರುವ ಆಡಳಿತಾರೂಢ ಮೈತ್ರಿಕೂಟವನ್ನು ಎಚ್ಚರಿಸಿದ್ದಾರೆ.
ಮಹಾತ್ಮ ಪುಲೆ ಸಮತಾ ಪರಿಷತ್ ಸದಸ್ಯರನ್ನು ಮತ್ತು ಪ್ರಮುಖ ಒಬಿಸಿ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಅವರು, "ನನಗೆ ಸಚಿವ ಸ್ಥಾನ ನಿರಾಕರಿಸಿದ ಕ್ರಮ ಹಿರಿಯರಿಗೆ ಮಾಡಿದ ಅವಮಾನ. ಹಿಂದುಳಿದ ವರ್ಗಗಳ ಸಮುದಾಯ ಇದನ್ನು ಸಹಿಸುವುದಿಲ್ಲ" ಎಂದರು.
"ವಿಧಾನಸಭಾ ಚುನಾವಣೆ ಖಂಡಿತವಾಗಿಯೂ ಕೊನೆಯದಲ್ಲ. ಮಹಾನಗರ ಪಾಲಿಕೆ, ಜಿಲ್ಲಾ ಪರಿಷತ್ ಮತ್ತು ಪಂಚಾಯ್ತಿ ಸಮಿತಿ ಚಉನಾವಣೆಗಳು ನಮ್ಮ ಮುಂದೆ ಬಾಕಿ ಇವೆ" ಎಂದು ಎಚ್ಚರಿಸಿದರು. ಆಡಳಿತಾರೂಢ ಕೂಟದ ಪರವಾಗಿ ಮತ ಚಲಾಯಿಸಿದ ಮತದಾರರು ದೂರ ಉಳಿದರೆ ಮಹಾಯುತಿ ಕೂಟ ಭಾರಿ ಬೆಲೆ ತೆರಬೇಕಾದೀತು ಎಂದು ಎಚ್ಚರಿಸಿದು.
ಮಹಾಯುತಿ ಕೂಟ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಗಳಿಸಿದ್ದು ಕೇವಲ ಲಡ್ಕಿ ಬಹಿನ್ ಯೋಜನೆಯಿಂದ ಮಾತ್ರವಲ್ಲ; ಆಡಳಿತಾರೂಢ ಮೈತ್ರಿಕೂಟದ ಪರವಾಗಿ ಓಬಿಸಿ ಸಮುದಾಯ ಅಚಲವಾಗಿ ನಿಂತ ಕಾರಣದಿಂದ ಎಂದು ವಿಶ್ಲೇಷಿಸಿದರು. ಎನ್ ಸಿಪಿ ಮುಖಂಡರು ಮಾಡಿದ ಅನ್ಯಾಯದ ವಿರುದ್ಧದ ಹೋರಾಟವನ್ನು ಸಮುದಾಯ ಬೆಂಬಲಿಸಬೇಕು ಎಂದು ಕೋರಿದರು.