ಪಂಜಾಬ್ ರೈತರಿಂದ ರೈಲ್ ರೋಖೋ | ರೈಲು ಸಂಚಾರ ಅಸ್ತವ್ಯಸ್ತ
ಚಂಡೀಗಡ : ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಂಜಾಬ್‌ನಲ್ಲಿ ರೈತರು ಬುಧವಾರ ಮೂರು ತಾಸುಗಳ ಕಾಲ ರೈಲೋರೋಕೋ ನಡೆಸಿದ್ದು, ರಾಜ್ಯದ ವಿವಿಧೆಡೆ ರೈಲು ಸಂಚಾರ ಅಸ್ತವ್ಯಸ್ತಗೊಂಡಿತು. ಪಂಜಾಬ್‌ನ 74 ಸ್ಥಳಗಳಲ್ಲಿ ರೈತರು ರೈಲ್ವೆ ಹಳಿಗಳಲ್ಲಿ ಧರಣಿ ನಡೆಸಿ ರೈಲು ಸಂಚಾರಕ್ಕೆ ಅಡ್ಡಿಪಡಿಸಿದರು. ಫಿರೋಜ್‌ಪುರ ಹಾಗೂ ಅಂಬಾಲಪುರ ರೈಲ್ವೆ ವಿಭಾಗಗಳಲ್ಲಿ ರೈಲುಗಳ ಸಂಚಾರ ತೀವ್ರವಾಗಿ ಬಾಧಿತವಾದವು.
‘‘ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೇಂದ್ರ ಸರಕಾರವು ಕುರುಡಾಗಿ ವರ್ತಿಸುತ್ತಿದ್ದು, ನಮ್ಮ ಅಹವಾಲುಗಳು ಅದು ಕೇಳುವಂತೆ ಮಾಡಲು ಈ ಹೋರಾಟವನ್ನು ನಡೆಸಬೇಕಾಗಿ ಬಂದಿದೆ ಎಂದು ರೈತರ ಪ್ರತಿಭಟನೆಯ ನೇತೃತ್ವ ವಹಿಸಿರುವ ಕಿಸಾನ್ ಮಜ್ಧೂರ್ ಮೋರ್ಚಾ (ಕೆಎಂಎಂ) ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ-ರಾಜಕೀಯೇತರ)ದ ಸಮನ್ವಯಕಾರ ಸರ್ವಾನ್ ಸಿಂಗ್ ಪಂಧೇರ್ ತಿಳಿಸಿದ್ದಾರೆ. ಎಸ್‌ಕೆಎಂನ ಸಹಸಂಘಟನೆಯಾದ ಭಾರತೀಯ ಕಿಸಾನ್ ಯೂನಿಯನ್ (ಡಾಕುಂಡಾ-ಧನೇರ್ ಬಣ) ಕೂಡಾ ಈ ಪ್ರತಿಭಟನೆಯನ್ನು ಬೆಂಬಲಿಸಿದೆ.
ಫಿರೋಝ್‌ಪುರ ವಿಭಾಗದ 52 ಸ್ಥಳಗಳು ಹಾಗೂ ಅಂಬಾಲ ವಿಭಾಗದ 22 ಸ್ಥಳಗಳಲ್ಲಿ ರೈತರು ರೈಲ್ ರೋಖೋ ನಡೆಸಿದ್ದಾರೆ. ಅಮೃತಸರ ಜಿಲ್ಲೆಯಲ್ಲಿ ದೇವಿದಾಸ್‌ಪುರ ರೈಲು ನಿಲ್ದಾಣದಲ್ಲಿ ರೈತರು ಪ್ರತಿಭಟನೆ ನಡೆಸಿದ್ದು, ದಿಲ್ಲಿಯತ್ತ ಮುಖ್ಯ ರೈಲು ಸಂಚಾರದಲ್ಲಿ ವ್ಯತ್ಯಯವುಂಟಾಯಿತು.