ಕೇಜ್ರಿವಾಲ್ ಅವರಿಂದ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ಸೌಲಭ್ಯ ‘ಸಂಜೀವನಿ ಯೋಜನೆ’ ಘೋಷಣೆ
ಹೊಸದಿಲ್ಲಿ : ಅರುವತ್ತು ಹಾಗೂ ಅದಕ್ಕಿಂತ ಹೆಚ್ಚು ವಯಸ್ಸಿನ ಹಿರಿಯ ನಾಗರಿಕರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಒದಗಿಸುವ ಗುರಿ ಹೊಂದಿರುವ ಆರೋಗ್ಯ ಸೌಲಭ್ಯ ‘ಸಂಜೀವಿನಿ ಯೋಜನೆ’ಯನ್ನು ಆಮ್ ಆದ್ಮಿ ಪಕ್ಷ (ಎಎಪಿ)ದ ವರಿಷ್ಠ ಅರವಿಂದ ಕೇಜ್ರಿವಾಲ್ ಬುಧವಾರ ಘೋಷಿಸಿದ್ದಾರೆ.
ಈ ಉಪಕ್ರಮ ಹಿರಿಯರ ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಆಪ್‌ನ ದೃಷ್ಟಿಕೋನದ ಪ್ರಮುಖ ಭಾಗವಾಗಿದೆ ಎಂದು ಕೇಜ್ರಿವಾಲ್ ಅವರು ವಿವರಿಸಿದ್ದಾರೆ.
2025ರ ಆರಂಭದಲ್ಲಿ ನಡೆಯಲಿರುವ ದಿಲ್ಲಿ ವಿಧಾನ ಸಭೆ ಚುನಾವಣೆಯ ಬಳಿಕ ಈ ಯೋಜನೆಯನ್ನು ಪರಿಚಯಿಸಲಾಗುವುದು ಎಂದು ಅವರು ಹೇಳಿದ್ದಾರೆ. ಈ ಯೋಜನೆಯು ಎಲ್ಲಾ ಹಿರಿಯ ನಾಗರಿಕರಿಗೆ ಆರೋಗ್ಯ ಸೇವೆ ಲಭ್ಯವಾಗುವುದನ್ನು ಖಾತರಿಪಡಿಸಲು ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಒದಗಿಸಲಿದೆ.
2025 ಫೆಬ್ರವರಿಯಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾದ ದಿಲ್ಲಿ ವಿಧಾನ ಸಭೆ ಚುನಾವಣೆಯ ಮುನ್ನ ಆಪ್ ಈ ಘೋಷಣೆ ಮಾಡಿದೆ. ಈ ವಿಧಾನ ಸಭೆಯ ಅವಧಿ 2025 ಫೆಬ್ರವರಿ 23ರಂದು ಅಂತ್ಯಗೊಳ್ಳಲಿದೆ. ಆದರೆ, ಚುನಾವಣಾ ಆಯೋಗ ಚುನಾವಣಾ ದಿನಾಂಕವನ್ನು ಇನ್ನೂ ಕೂಡ ಅಂತಿಮಗೊಳಿಸಿಲ್ಲ.