ಯತಿ ನರಸಿಂಹಾನಂದರ ಧರ್ಮ ಸಂಸತ್ತನ್ನು ತಿರಸ್ಕರಿಸುವಂತೆ ಹಿಂದೂ ಧಾರ್ಮಿಕ ನಾಯಕರಿಗೆ ಕರೆ ನೀಡಿದ ಸತ್ಯ ಧರಂ ಸಂವಾದ್
ಹೊಸದಿಲ್ಲಿ: ಹಿಂದುತ್ವವಾದಿ ನಾಯಕ ಯತಿ ನರಸಿಂಹಾನಂದ ಆಯೋಜಿಸಿರುವ ಧರ್ಮ ಸಂಸತ್ ವಿಭಜನಕಾರಿಯಾಗಿದ್ದು, ಸಮಾನ ಮನಸ್ಕ ಹಿಂದೂ ಧಾರ್ಮಿಕ ನಾಯಕರು ಹಾಗೂ ಸಂಘಟನೆಗಳು ಆ ಕಾರ್ಯಕ್ರಮವನ್ನು ತಿರಸ್ಕರಿಸಬೇಕು ಎಂದು ಸತ್ಯ ಧರಂ ಸಂವಾದ್ ಮನವಿ ಮಾಡಿದೆ.
“ನಿರ್ದಿಷ್ಟ ಧರ್ಮಗಳನ್ನು ಗುರಿಯಾಗಿಸಿಕೊಂಡು ಡಿಸೆಂಬರ್ 17, 2024ರಿಂದ ನಡೆಯುತ್ತಿರುವ ವಿಶ್ವ ಧಾರ್ಮಿಕ ಸಮ್ಮೇಳನವು ಸನಾತನ ಧರ್ಮದ ನೈಜ ಸ್ಫೂರ್ತಿಗೆ ವಿರುದ್ಧವಾಗಿದೆ. ಇಂತಹ ಕೃತ್ಯಗಳಿಂದ ಕೇವಲ ಹಿಂದೂ ಧರ್ಮದ ಆಧ್ಯಾಮತ್ಮಿಕ ಪಾವಿತ್ರ್ಯತೆ ಮಾತ್ರ ಮಣ್ಣುಗೂಡುವುದಿಲ್ಲ ಬದಲಿಗೆ, ವೈವಿಧ್ಯತೆ ಹಾಗೂ ಅಂತರ್ಧರ್ಮ ಸಹ ಬಾಳ್ವೆಯ ಮೇಲೆ ನಿಂತಿರುವ ದೇಶದ ಸೌಹಾರ್ದತೆ ಮತ್ತು ಏಕತೆಗೆ ಧಕ್ಕೆಯೊದಗಲಿದೆ” ಎಂದು ಸತ್ಯ ಧರಂ ಸಂವಾದ್ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಹೇಳಿದೆ.
ಇಡೀ ವಿಶ್ವವೇ ಒಂದು ಕುಟುಂಬ ಹಾಗೂ ಸರ್ವ ಧರ್ಮ ಸಂಭವ ಎಂಬ ಕಾಲಾತೀತ ಪರಿಕಲ್ಪನೆಯನ್ನು ಹೊಂದಿರುವ ಹಿಂದುತ್ವವು ಯಾವಾಗಲೂ ಶಾಂತಿ, ಸಮ್ಮತಿ ಹಾಗೂ ಐಕ್ಯತೆಯ ದೀಪವಾಗಿ ಉಳಿದುಕೊಂಡು ಬಂದಿದೆ ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.