ಕೇರಳ: ವಿವಾದಾತ್ಮಕ ಐಪಿಎಸ್ ಅಧಿಕಾರಿ ಅಜಿತ್ ಕುಮಾರ್ ಡಿಜಿಪಿಯಾಗಿ ಭಡ್ತಿ
ತಿರುವನಂತಪುರ : ಹಿರಿಯ ಐಪಿಎಸ್ ಅಧಿಕಾರಿ ಎಡಿಜಿಪಿ ಎಂ.ಆರ್. ಅಜಿತ್ ಕುಮಾರ್ ಅವರನ್ನು ಪೊಲೀಸ್ ಮಹಾ ನಿರ್ದೇಶಕರ (ಡಿಜಿಪಿ) ಶ್ರೇಣಿಗೆ ಬಡ್ತಿ ನೀಡಲು ಕೇರಳ ಸರಕಾರ ಬುಧವಾರ ನಿರ್ಧರಿಸಿದೆ.
ಆರ್‌ಎಸ್‌ಎಸ್ ನಾಯಕರೊಂದಿಗೆ ‘‘ವಿವಾದಾತ್ಮಕ ಭೇಟಿ’’ ನಡೆಸಿರುವ ಕುರಿತ ರಾಜಕೀಯ ವಿವಾದದಲ್ಲಿ ಅವರು ಇತ್ತೀಚಿಗೆ ಸಿಲುಕಿಕೊಂಡಿದ್ದರು.
ಅಜಿತ್ ಕುಮಾರ್ ವಿರುದ್ಧದ ವಿವಾದಗಳು ಹಾಗೂ ಆರೋಪದ ಹಿನ್ನೆಲೆಯಲ್ಲಿ ಅವರನ್ನು ರಾಜ್ಯದ ಕಾನೂನು ಸುವ್ಯವಸ್ಥೆ ಕರ್ತವ್ಯದಿಂದ ತೆಗೆದು ಹಾಕಲಾಗಿತ್ತು ಹಾಗೂ ಅಕ್ಟೋಬರ್‌ನಲ್ಲಿ ಶಸಸ್ತ್ರ ಪೊಲೀಸ್ ಬೆಟಾಲಿಯನ್‌ಗೆ ನಿಯೋಜಿಸಲಾಗಿತ್ತು.
ಆದರೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಬುಧವಾರ ನಡೆದ ಸಂಪುಟ ಸಭೆ ಎಂ.ಆರ್. ಅಜಿತ್ ಅವರ ಬಡ್ತಿಗೆ ಅನುಮತಿ ನೀಡಲು ನಿರ್ಧರಿಸಿದೆ. 1995ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಅಜಿತ್ ಕುಮಾರ್ ಅವರಿಗೆ ಉನ್ನತ ಸ್ಥಾನಕ್ಕೆ ಬಡ್ತಿ ನೀಡಲಾಗುವುದು.
ಭದ್ರತಾ ಸಮಿತಿ ಸಲ್ಲಿಸಿದ ಶಿಫಾರಸಿಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಮುಖ್ಯಮಂತ್ರಿ ಕಚೇರಿ (ಸಿಎಂಒ) ಹೇಳಿಕೆ ತಿಳಿಸಿದೆ.
ಅಜಿತ್ ಕುಮಾರ್ ಅಲ್ಲದೆ, 1995ರ ಬ್ಯಾಚ್‌ನ ಇನ್ನೋರ್ವ ಅಧಿಕಾರಿ ಎಸ್. ಸುರೇಶ್ ಅವರನ್ನು ಕೂಡ ಡಿಜಿಪಿಯಾಗಿ ಬಡ್ತಿ ನೀಡಲಾಗುವುದು ಎಂದು ಹೇಳಿಕೆ ತಿಳಿಸಿದೆ.
1994ರ ಬ್ಯಾಚ್‌ನ ಅಧಿಕಾರಿ ಮನೋಜ್ ಅಬ್ರಹಾಂ ಅವರನ್ನು ನಿಯೋಜನೆ ಮಾಡಿದ ಬಳಿಕ ಪದೋನ್ನತಿಯ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಕಚೇರಿಯ ಹೇಳಿಕೆ ತಿಳಿಸಿದೆ.