ವಂಚನೆ ಪ್ರಕರಣದಲ್ಲಿ ಬಂಧನ ವಾರೆಂಟ್: ರಾಬಿನ್ ಉತ್ತಪ್ಪ ಹೇಳಿದ್ದೇನು?

Update: 2024-12-22 02:08 GMT

ಬೆಂಗಳೂರು: ಭವಿಷ್ಯನಿಧಿ ವಂಚನೆ ಪ್ರಕರಣದಲ್ಲಿ ಬಂಧನ ವಾರೆಂಟ್ ಎದುರಿಸುತ್ತಿರುವ ಖ್ಯಾತ ಕ್ರಿಕೆಟರ್ ರಾಬಿನ್ ಉತ್ತಪ್ಪ ಕೊನೆಗೂ ಮೌನ ಮುರಿದಿದ್ದಾರೆ. ಭಾರತ ಕ್ರಿಕೆಟ್ ನ ಮಾಜಿ ತಾರೆ ಉತ್ತಪ್ಪ ಮಾಲೀಕತ್ವದ ಜವಳಿ ಕಂಪನಿಯೊಂದರ ಉದ್ಯೋಗಿಗಳ ಭವಿಷ್ಯನಿಧಿ ದೇಣಿಗೆಗೆ ಸಂಬಂಧಿಸಿದ ವಂಚನೆ ಪ್ರಕರಣದಲ್ಲಿ ಅವರ ವಿರುದ್ಧ ಬಂಧನ ವಾರೆಂಟ್ ಹೊರಡಿಸಲಾಗಿತ್ತು.

ಭವಿಷ್ಯನಿಧಿಗೆ ಬಾಕಿ ಇರುವ 24 ಲಕ್ಷ ರೂಪಾಯಿಗಳನ್ನು ಪಾವತಿಸಲು ಡಿಸೆಂಬರ್ 27ರವರೆಗೆ ಅವಕಾಶವಿದ್ದು, ತಪ್ಪಿದಲ್ಲಿ ಬಂಧನವನ್ನು ಎದುರಿಸಬೇಕಾಗುತ್ತದೆ. ಇದೇ ಮೊದಲ ಬಾರಿಗೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತಪ್ಪ. ಈ ಸಮಸ್ಯೆ ಬಗೆಹರಿಸಲು ಕಾನೂನು ಸಲಹೆಗಾರರು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

"ನನ್ನ ವಿರುದ್ಧದ ಪಿಎಫ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟ್ರಾಬೆರ್ರಿ ಲೆನ್ಸೇರಿಯ ಪ್ರೈವೆಟ್ ಲಿಮಿಟೆಡ್, ಸೆಂಚುರಸ್ ಲೈಫ್ಸ್ಟೈಲ್ ಬ್ರಾಂಡ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಬೆರ್ರಿಝ್ ಫ್ಯಾಷನ್ ಹೌಸ್ನಲ್ಲಿ ನನ್ನ ಪಾಲ್ಗೊಳ್ಳುವಿಕೆ ಬಗ್ಗೆ ನಾನು ಕೆಲ ಸ್ಪಷ್ಟನೆಗಳನ್ನು ನೀಡಲು ಬಯಸುತ್ತೇನೆ. 2018-19ರಲ್ಲಿ ನನ್ನನ್ನು ಈ ಕಂಪನಿಗಳ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿತ್ತು. ಆದಾಗ್ಯೂ ದೈನಂದಿನ ವ್ಯವಹಾರಗಳಲ್ಲಿ ನಾನು ಎಕ್ಸಿಕ್ಯೂಟಿವ್ ಹೊಣೆಯಲ್ಲಿ ಸಕ್ರಿಯವಾಗಿ ಇರಲಿಲ್ಲ. ಕ್ರಿಕೆಟ್ ವೃತ್ತಿಯಲ್ಲಿ, ಟಿವಿ ನಿರೂಪಕರಾಗಿ ಮತ್ತು ವೀಕ್ಷಕ ವಿವರಣೆಕಾರನಾಗಿ ನನ್ನ ಎಡಬಿಡದ ಒತ್ತಡದ ನಡುವೆ ಇವುಗಳ ಕಾರ್ಯಾಚರಣೆಯಲ್ಲಿ ಭಾಗವಹಿಸಲು ನನಗೆ ಸಮಯ ಅಥವಾ ಪರಿಣತಿ ಇರಲಿಲ್ಲ. ನಾನು ಹಣಕಾಸು ಒದಗಿಸಿದ ಯಾವುದೇ ಕಂಪನಿಗಳ ಎಕ್ಸಿಕ್ಯೂಟಿವ್ ಹೊಣೆಯನ್ನು ನಾನು ನಿಭಾಯಿಸಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

"ವಿಷಾದವೆಂದರೆ ನಾನು ನೀಡಿದ ಹಣವನ್ನು ಈ ಕಂಪನಿಗಳು ನನಗೆ ಆಪಾಸು ನೀಡಿಲ್ಲ; ಈ ಕಾರಣದಿಂದ ನಾನು ಕಾನೂನು ಪ್ರಕ್ರಿಯೆ ಆರಂಭಿಸಿದ್ದೇನೆ. ಇದು ನ್ಯಾಯಾಲಯದಲ್ಲಿ ಇರುವುದರಿಂದ ಈ ಬಗ್ಗೆ ಮಾತನಾಡುವಂತಿಲ್ಲ. ನನ್ನ ನಿರ್ದೇಶಕತ್ವದಿಂದ ಹಲವು ವರ್ಷ ಮೊದಲೇ ನಾನು ರಾಜೀನಾಮೆ ನೀಡಿ ಹೊರಬಂದಿದ್ದೇನೆ" ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News