ಕೋಲ್ಕತ್ತಾ: ಬಾಂಗ್ಲಾದೇಶದ ಹಿಂದೂಯೇತರ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡುವುದನ್ನು ನಿಲ್ಲಿಸುವಂತೆ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ
ಕೋಲ್ಕತ್ತಾ: ಬಾಂಗ್ಲಾದೇಶದ ಹಿಂದೂಯೇತರ ರೋಗಿಗಳಿಗೆ ಖಾಸಗಿ ಆಸ್ಪತ್ರೆ ವೈದ್ಯಕೀಯ ಚಿಕಿತ್ಸೆ ನೀಡುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಕೋಲ್ಕತ್ತಾದ ಮುಕುಂದಪುರ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಕೋಲ್ಕತ್ತಾದಲ್ಲಿ ಬಿಜೆಪಿ ನಾಯಕ ಲಾಕೆಟ್ ಚಟರ್ಜಿ ಮತ್ತು ಸನ್ಯಾಸಿಗಳು 'ಬಂಗಾಳಿ ಹಿಂದೂ ಸುರಕ್ಷಾ ಸಮಿತಿ' ವೇದಿಕೆಯಡಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.
ಪ್ರತಿಭಟನಾಕಾರರು ಆಸ್ಪತ್ರೆಗೆ ಪತ್ರವೊಂದನ್ನು ನೀಡಿದ್ದು, “ದೇಶವು ಮೊದಲು, ನಮ್ಮ ಸಹೋದರ ಸಹೋದರಿಯರನ್ನು ಅಲ್ಲಿ ಚಿತ್ರಹಿಂಸೆ ನೀಡಿ ಕೊಲ್ಲಲಾಗುತ್ತಿದೆ. ಹೀಗಾಗಿ, ಹಿಂದೂ ಅಲ್ಲದ ಬಾಂಗ್ಲಾದೇಶಿಗಳಿಗೆ ಯಾವುದೇ ವೈದ್ಯಕೀಯ ಚಿಕಿತ್ಸೆಯನ್ನು ನೀಡಬಾರದು ಎಂದು ಬರೆಯಲಾಗಿದೆ.
“ಬಾಂಗ್ಲಾದೇಶದಲ್ಲಿ ನಮ್ಮ ಅಲ್ಪಸಂಖ್ಯಾತ ಹಿಂದೂ ಸಹೋದರ ಸಹೋದರಿಯರಿಗೆ ಏನಾಗುತ್ತಿದೆ ಎಂಬುದರ ಬಗ್ಗೆ ನಮಗೆ ನೋವಾಗಿದೆ. ಅವರನ್ನು ಚಿತ್ರಹಿಂಸೆ ನೀಡಿ ಕೊಲ್ಲಲಾಗುತ್ತಿದೆ. ಇದನ್ನು ನಿಲ್ಲಿಸಬೇಕು. ರಾಷ್ಟ್ರವು ಯಾವಾಗಲೂ ಮೊದಲು ಬರುತ್ತದೆʼ ಎಂದು ಪ್ರತಿಭಟನಾಕಾರರ ಗುಂಪಿನಲ್ಲಿದ್ದ ನಾರಾಯಣ್ ಚಟರ್ಜಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದಕ್ಕೂ ಮೊದಲು ಉತ್ತರ ಕೋಲ್ಕತ್ತಾದ ಮಾಣಿಕ್ತಾಲಾ ಆಸ್ಪತ್ರೆಯೊಂದು ಬಾಂಗ್ಲಾದೇಶದ ರೋಗಿಗಳಿಗೆ ಇನ್ನು ಮುಂದೆ ಚಿಕಿತ್ಸೆ ನೀಡುವುದಿಲ್ಲ ಎಂದು ಘೋಷಿಸಿತ್ತು. ಬಾಂಗ್ಲಾದೇಶಿ ಪ್ರಜೆಗಳು ಭಾರತೀಯ ಧ್ವಜಕ್ಕೆ ಅವಮಾನ ಮಾಡಿದ್ದಾರೆ. ಈ ಕಾರಣಕ್ಕಾಗಿ ಬಾಂಗ್ಲಾದೇಶದ ಪ್ರಜೆಗಳಿಗೆ ಚಿಕಿತ್ಸೆ ನೀಡುವುದಿಲ್ಲ ಎಂದು ಹೇಳಿತ್ತು.