ಮೊಹಾಲಿ ಕಟ್ಟಡ ಕುಸಿತ: ಇಬ್ಬರು ಮೃತ್ಯು, ಹಲವರು ಕಟ್ಟಡದಡಿ ಸಿಲುಕಿರುವ ಶಂಕೆ

Update: 2024-12-22 06:15 GMT

Photo credit: PTI

ಮೊಹಾಲಿ: ಶನಿವಾರ ಸಂಜೆ ಪಂಜಾಬ್ ನ ಮೊಹಾಲಿಯಲ್ಲಿ ನಡೆದ ಕಟ್ಟಡ ಕುಸಿತ ಘಟನೆಯಲ್ಲಿ ಹಿಮಾಚಲ ಪ್ರದೇಶದ 20 ವರ್ಷದ ಯುವತಿ ಸೇರಿದಂತೆ ಕನಿಷ್ಠ ಪಕ್ಷ ಇಬ್ಬರು ಮೃತಪಟ್ಟಿದ್ದು, ಹಲವರು ಇನ್ನೂ ಕಟ್ಟಡದ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

ಮೃತರ ಪೈಕಿ ಓರ್ವ ವ್ಯಕ್ತಿಯನ್ನು ಥಿಯೋಗ್ ನ ದೃಷ್ಟಿ ವರ್ಮ ಎಂದು ಗುರುತಿಸಲಾಗಿದ್ದು, ಕಳೆದ ರಾತ್ರಿ ಅವಶೇಷಗಳಡಿ ಸಿಲುಕಿಕೊಂಡು ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ರಕ್ಷಿಸಿ, ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು.

ಇಂದು ಬೆಳಗ್ಗೆ ಮತ್ತೊಬ್ಬ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಅವರನ್ನು ಹರ್ಯಾಣದ ಅಂಬಾಲಾ ಜಿಲ್ಲೆಯ ಅಭಿಷೇಕ್ ಎಂದು ಗುರುತಿಸಲಾಗಿದೆ.

ಕಳೆದ 17 ಗಂಟೆಗಳಿಂದ ಭಾರತೀಯ ಸೇನೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಇನ್ನೂ ಹಲವರು ಕಟ್ಟಡಗಳ ಅವಶೇಷಗಳಡಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಶೇ. 60ರಷ್ಟು ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಯ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿ ದೀಪಕ್ ಪರೀಕ್, “ಪ್ರಾಥಮಿಕ ತನಿಖೆಯಲ್ಲಿ, ಕಟ್ಟಡದ ಮಾಲಕರು ಕಟ್ಟಡದ ಪಕ್ಕದಲ್ಲಿರುವ ನಿವೇಶನದಲ್ಲಿ ಯಾವುದೇ ಅನುಮತಿಯಿಲ್ಲದೆ ಮಣ್ಣು ತೋಡುತ್ತಿದ್ದರು ಎಂದು ತಿಳಿದು ಬಂದಿದೆ” ಎಂದು ತಿಳಿಸಿದ್ದಾರೆ.

ಕಟ್ಟಡದ ಮಾಲಕರಾದ ಪರ್ವಿಂದರ್ ಸಿಂಗ್ ಹಾಗೂ ಗಗನ್ ದೀಪ್ ಸಿಂಗ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 105ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್, ಸ್ಥಳದಲ್ಲಿನ ಪರಿಸ್ಥಿತಿಯ ಮೇಲೆ ಫೋನ್ ಮೂಲಕ ನಿಗಾ ವಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News