ಆರ್ಥಿಕ ಸಮೀಕ್ಷೆ ಕುರಿತ ಹೇಳಿಕೆ: ರಾಹುಲ್ ಗಾಂಧಿಗೆ ಬರೇಲಿ ನ್ಯಾಯಾಲಯದಿಂದ ಸಮನ್ಸ್
ಬರೇಲಿ: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಆರ್ಥಿಕ ಸಮೀಕ್ಷೆ ಕುರಿತು ನೀಡಿದ ಹೇಳಿಕೆಗೆ ಸಂಬಂಧಿಸಿ ಜನವರಿ 7ರಂದು ವಿಚಾರಣೆಗೆ ಹಾಜರಾಗುವಂತೆ ರಾಹುಲ್ ಗಾಂಧಿಗೆ ಬರೇಲಿ ನ್ಯಾಯಾಲಯ ಸಮನ್ಸ್ ನೀಡಿದೆ.
ಅಖಿಲ ಭಾರತ ಹಿಂದೂ ಮಹಾಸಂಘ ಸಂಘಟನೆಯ ಮಂಡಲ ಅಧ್ಯಕ್ಷ ಪಂಕಜ್ ಪಾಠಕ್ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸುಧೀರ್ ಕುಮಾರ್ ರಾಹುಲ್ ಗಾಂಧಿಗೆ ಸಮನ್ಸ್ ಜಾರಿ ಮಾಡಿದ್ದಾರೆ.
ಮೊದಲಿಗೆ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಪಂಕಜ್ ಪಾಠಕ್ ಅರ್ಜಿ ಸಲ್ಲಿಸಿದ್ದರು. ಆದರೆ, ರಾಹುಲ್ ವಿರುದ್ಧ ಮೊಕದ್ದಮೆ ದಾಖಲಿಸಲು ನ್ಯಾಯಾಲಯ ನಿರಾಕರಿಸಿದ ಹಿನ್ನೆಲೆ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದು, ಇದೀಗ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ದೇಶದಲ್ಲಿ ದುರ್ಬಲ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ಅವರಲ್ಲಿ ಆಸ್ತಿ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಇದು ಹೀಗೆ ಮುಂದುವರಿದರೆ ಅತಿ ಹೆಚ್ಚು ಜನಸಂಖ್ಯೆ ಇರುವ ಜನ ಹೆಚ್ಚಿನ ಆಸ್ತಿಗೆ ಬೇಡಿಕೆ ಇಡಬೇಕಾಗುತ್ತದೆ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ದುರ್ಬಲ ವರ್ಗದ ಜನರಲ್ಲಿ ದ್ವೇಷ ಬಿತ್ತಲು ಪ್ರಚೋದಿಸಿದ್ದಾರೆ ಎಂದು ಪಂಕಜ್ ಪಾಠಕ್ ಪರ ವಕೀಲ ವೀರೇಂದ್ರ ಪಾಲ್ ಗುಪ್ತಾ ಹೇಳಿದ್ದಾರೆ.