DHL ಕೊರಿಯರ್ ಹೆಸರಿನಲ್ಲಿ QR ಕೋಡ್ ಹಗರಣ: ಇಲ್ಲಿದೆ ಈ ವಂಚನೆ ಬಗ್ಗೆ ನಿಮಗೆ ತಿಳಿದರಲೇಬೇಕಾದ ಮಾಹಿತಿ...
ಹೊಸದಿಲ್ಲಿ: ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತ ಅನೇಕ ಜನರು DHL ಕೊರಿಯರ್ ವಿತರಣಾ ವಂಚನೆಗಳಿಗೆ ಗುರಿಯಾಗಿದ್ದಾರೆ. ಐರ್ಲೆಂಡ್, ಸಿಂಗಾಪುರ ಮತ್ತು ಭಾರತದಲ್ಲೂ DHL ಹೆಸರಿನಲ್ಲಿ ವಂಚನೆ ನಡೆದಿರುವುದಕ್ಕೆ ಹಲವಾರು ನಿದರ್ಶನವಿದೆ.
ವಂಚಕರು DHL ಬಳಸುವ ಶೈಲಿ, ಭಾಷೆ ಮತ್ತು ಹಳದಿ ಬಣ್ಣವನ್ನು ಸಂಶಯ ಬರದಂತೆ ನಿಖರವಾಗಿ ನಕಲಿಸಿಕೊಂಡು ಗ್ರಾಹಕರಿಗೆ ವಂಚನೆಯನ್ನು ಮಾಡುತ್ತಿದ್ದಾರೆ.
ನೀವು ಎಂದಾದರೂ ಕೊರಿಯರ್ ಸೇವೆಗಳನ್ನು ಬಳಸಿದ್ದು, ಸಿಬ್ಬಂದಿಗಳು ನಿಮ್ಮನ್ನು ತಲುಪಲು ಸಾಧ್ಯವಾಗದಿದ್ದರೆ ಕೊರಿಯರ್ ಸಿಬ್ಬಂದಿಗಳು ನಿಮಗೆ ಕರೆ ಮಾಡುತ್ತಾರೆ ಅಥವಾ ನೀವು ಸಂಪರ್ಕಕ್ಕೆ ಸಿಗದಿದ್ದರೆ ಸಂದೇಶದ ಟಿಪ್ಪಣಿಯನ್ನು ಕಳುಹಿಸುತ್ತಾರೆ. ಇದೇ ರೀತಿಯ ವ್ಯವಸ್ಥೆಯನ್ನು DHL ಕೂಡ ಅನುಸರಿಸುತ್ತದೆ. ಟಿಪ್ಪಣಿಯಲ್ಲಿ QR ಕೋಡ್ ಮತ್ತು ಪರ್ಯಾಯ ವಿತರಣಾ ಪ್ರಯತ್ನಕ್ಕೆ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಸೂಚನೆಗಳನ್ನು ಒಳಗೊಂಡಿರುತ್ತದೆ.
DHL ಸಾಮಾನ್ಯ ಮಾದರಿಯ ಮಧ್ಯಮ ಗಾತ್ರದ ಪೋಸ್ಟ್ ಕಾರ್ಡ್ ರೂಪದ ಸ್ಲಿಪ್ ಅನ್ನು ಬಳಸುತ್ತದೆ. ನಿಜವಾದ DHL ಟಿಪ್ಪಣಿಯು ನಿಮ್ಮನ್ನು ಅಧಿಕೃತ DHL ವೆಬ್ ಸೈಟ್ ಗೆ ತೆರಳಲು ಸಹಕಾರಿಯಾಗುವ ರೀತಿಯಲ್ಲಿ QR ಕೋಡ್ ಮತ್ತು ವೆಬ್ ಲಿಂಕ್ ನ್ನು ಹೊಂದಿರುತ್ತದೆ. ಮರು ಡೆಲಿವರಿಗೆ DHL ಎಂದಿಗೂ ಹಣವನ್ನು ವಿಧಿಸುವುದಿಲ್ಲ. ಆದ್ದರಿಂದ ನಿಮಗೆ ಪಾವತಿಗೆ ಸೂಚಿಸಿದರೆ ಅದು ನಕಲಿ ಮತ್ತು ನಿಜವಾದ DHL ವೆಬ್ ಸೈಟ್ ಅಲ್ಲ ಎನ್ನುವುದು ತಿಳಿಯುತ್ತದೆ.
ನೀವು ಎಂದಾದರೂ ಅಂತಹ ಟಿಪ್ಪಣಿಯನ್ನು ಸ್ವೀಕರಿಸಿದರೆ ಅಧಿಕೃತ ಕೊರಿಯರ್ ವೆಬ್ ಸೈಟ್ ಗೆ ಹೋಗಿ ಬಿಲ್ ಸಂಖ್ಯೆಯನ್ನು ಪರಿಶೀಲಿಸಿ. ಈ ವೇಳೆ ಅಸಲಿಯಾ ಅಥವಾ ನಕಲಿಯಾ ಎಂದು ತಿಳಿಯಲಿದೆ. ಅಥವಾ ನೀವು QR ಕೋಡ್ ಅನ್ನು ಸ್ಕ್ಯಾನ್ ಮಾಡಿದಾಗ ಅಧಿಕೃತ ವೆಬ್ ಸೈಟ್ ತೆರೆಯುತ್ತಾ ಅಥವಾ ಬೇರೆ ವೆಬ್ ಸೈಟ್ ತೆರೆಯುತ್ತಾ ಎಂದು ತಿಳಿಯುತ್ತದೆ. ಇದಲ್ಲದೆ ನೀವು DHL ಇಂಡಿಯಾದ ಗ್ರಾಹಕ ಸೇವಾ ಸಂಖ್ಯೆಗೆ ಕರೆ ಮಾಡಿ ಕೂಡ ವಿಚಾರಿಸಬಹುದಾಗಿದೆ.