ಬಿಹಾರ | ಯುವಕನಿಗೆ ಥಳಿಸಿ ಉಗುಳು ನೆಕ್ಕುವಂತೆ ಬಲವಂತ; ವಿಡಿಯೋ ವೈರಲ್
ಪಾಟ್ನಾ: ಬಿಹಾರದ ಕಾಲೇಜು ಕ್ಯಾಂಪಸ್ ವೊಂದರಲ್ಲಿ ಗುಂಪೊಂದು ಯುವಕನೋರ್ವನಿಗೆ ಚಿತ್ರಹಿಂಸೆ ನೀಡಿರುವ ಘಟನೆ ನಡೆದಿದ್ದು, ಈ ಕುರಿತ ವೀಡಿಯೊ ವೈರಲ್ ಆಗುತ್ತಿದ್ದಂತೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ವೀಡಿಯೊದಲ್ಲಿ ಗುಂಪು ಯುವಕನಿಗೆ ಕೋಲಿನಿಂದ ಮತ್ತು ಬೆಲ್ಟ್ ನಿಂದ ಹಲ್ಲೆ ನಡೆಸಿದ್ದಲ್ಲದೆ, ಅವನ ಕಿವಿಗಳನ್ನು ಹಿಡಿದುಕೊಂಡು ಕುಳಿತುಕೊಳ್ಳುವಂತೆ ಬಲವಂತ ಮಾಡುವುದು ಕಂಡು ಬಂದಿದೆ. ಈ ಘಟನೆಯನ್ನು ಹಲವರು ನಿಂತುಕೊಂಡು ನೋಡುತ್ತಿದ್ದರು, ಆದರೆ ಯಾರೂ ಕೂಡ ಮಧ್ಯಪ್ರವೇಶಿಸಿಲ್ಲ. ಈ ವೇಳೆ ಯುವಕ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ.
ಮುಜಾಫರ್ ಪುರದ ಎಂಎಸ್ ಕೆಬಿ ಕಾಲೇಜಿನಲ್ಲಿ ನಡೆದ ಘಟನೆಯ ವೀಡಿಯೊ ಇದು ಎಂದು ಹೇಳಲಾಗಿದೆ. ʼಫೇಸ್ಬುಕ್ ನಲ್ಲಿ ವಿಡಿಯೋ ವೈರಲ್ ಆದ ನಂತರವೇ ನಮಗೆ ವಿಷಯ ತಿಳಿದಿದೆ. ಆರೋಪಿಗಳು ಚಾಕು ತೋರಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರಿಂದ ಆತ ಬೆದರಿ ಸುಮ್ಮನಿದ್ದ, ಆದರೆ ಇದೀಗ ವೀಡಿಯೊ ವೈರಲ್ ಬಳಿಕ ಪ್ರಶ್ನಿಸಿದಾಗ ಎಲ್ಲವೂ ಬಯಲಾಗಿದೆ. ನೆಲದಿಂದ ಉಗುಳು ನೆಕ್ಕುವಂತೆ ನನ್ನ ಮಗನಿಗೆ ಬಲವಂತ ಮಾಡಲಾಗಿದೆ, ಆತನಿಂದ 2000ರೂ. ಹಣವನ್ನು ದೋಚಲಾಗಿದೆʼ ಎಂದು ಸಂತ್ರಸ್ತ ಯುವಕನ ತಾಯಿ ಆರೋಪಿಸಿದ್ದಾರೆ.
ಸಂತ್ರಸ್ತ ಯುವಕನ ತಾಯಿ ಈ ಕುರಿತು ಲಿಖಿತ ದೂರು ನೀಡಿದ್ದು, ಎಫ್ಐಆರ್ ಕೂಡ ದಾಖಲಿಸಲಾಗಿದೆ. ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.