ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದರೂ ಅಲ್ಲು ಅರ್ಜುನ್ ಚಿತ್ರಮಂದಿರದಿಂದ ಹೊರಬರಲಿಲ್ಲ: ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಆರೋಪ

Update: 2024-12-22 08:06 GMT

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ (PTI)

ಹೈದರಾಬಾದ್: ಪೊಲೀಸರು ಅನುಮತಿ ನಿರಾಕರಿಸಿದ್ದರೂ ನಟ ಅಲ್ಲು ಅರ್ಜುನ್ 'ಪುಷ್ಪ-2' ಪ್ರೀಮಿಯರ್ ಶೋಗೆ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು ಎಂದು ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಹೇಳಿದ್ದು, ಈ ಆರೋಪವನ್ನು ನಟ ಅಲ್ಲು ಅರ್ಜುನ್ ನಿರಾಕರಿಸಿದ್ದಾರೆ.

ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದರೂ, ಅಲ್ಲು ಅರ್ಜುನ್ ಚಿತ್ರಮಂದಿರದಿಂದ ಹೊರಬರಲಿಲ್ಲ, ಇದರಿಂದಾಗಿ ಪೊಲೀಸರು ಅವರನ್ನು ಬಲವಂತವಾಗಿ ಹೊರಹಾಕಿದ್ದಾರೆ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ. ಎಐಎಂಐಎಂ ಶಾಸಕ ಅಕ್ಬರುದ್ದೀನ್ ಉವೈಸಿ ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ನಂತರ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ರೆಡ್ಡಿ, ಭಾರೀ ಜನಸಂದಣಿಯ ನಡುವೆ ಅಲ್ಲು ಅರ್ಜುನ್ ಕೈ ಬೀಸುತ್ತಾ ತೆರಳಿರುವುದು ವೈರಲ್ ವೀಡಿಯೊಗಳಲ್ಲಿ ಕಂಡು ಬಂದಿದೆ ಎಂದು ಹೇಳಿದ್ದಾರೆ.

ಅಲ್ಲು ಅರ್ಜುನ್ ಮತ್ತು ಇತರರು ಚಿತ್ರಮಂದಿರಕ್ಕೆ ಭೇಟಿ ನೀಡಲಿರುವುದರಿಂದ ಭದ್ರತೆಯನ್ನು ನೀಡುವಂತೆ ಥಿಯೇಟರ್ ಆಡಳಿತ ಮಂಡಳಿಯು ಪೊಲೀಸರಿಗೆ ಮನವಿ ಪತ್ರವನ್ನು ನೀಡಿದೆ. ಆದರೆ, ಹೆಚ್ಚಿನ ಜನಸಂದಣಿ ಸೇರುವ ಸಾಧ್ಯತೆ ಮತ್ತು ಚಿತ್ರಮಂದಿರದಲ್ಲಿ ಕೇವಲ ಒಂದೇ ಒಂದು ಪ್ರವೇಶ ಮತ್ತು ನಿರ್ಗಮನ ದ್ವಾರ ಇದ್ದ ಕಾರಣಗಳನ್ನು ಉಲ್ಲೇಖಿಸಿ ಅನುಮತಿ ನಿರಾಕರಿಸಲಾಗಿದೆ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.

ಥಿಯೇಟರ್ ಗೆ ಪ್ರವೇಶಿಸುವ ಮತ್ತು ನಿರ್ಗಮಿಸುವ ಮೊದಲು, ಅಲ್ಲು ಅರ್ಜುನ್ ತನ್ನ ಕಾರಿನ ಸನ್ ರೂಫ್ ಮೂಲಕ ನಿಂತು ರೋಡ್ ಶೋನಲ್ಲಿ ಜನಸಂದಣಿಯತ್ತ ಕೈಬೀಸಿದರು. ಅವರನ್ನು ನೋಡಲು ಸೇರಿದ್ದ ಸಾವಿರಾರು ಅಭಿಮಾನಿಗಳು ಮುಂದಾಗಿದ್ದು ನೂಕುನುಗ್ಗಲಿಗೆ ಕಾರಣವಾಗಿದೆ. ಈ ವೇಳೆ ನಟನ ಖಾಸಗಿ ಭದ್ರತಾಧಿಕಾರಿಗಳು ಅಭಿಮಾನಿಗಳನ್ನು ತಳ್ಳಿದ್ದರಿಂದ ಕಾಲ್ತುಳಿತ ಸಂಭವಿಸಿದೆ ಎಂದು ಹೇಳಿದ್ದಾರೆ.

ಅಲ್ಲು ಅರ್ಜುನ್ ಈ ಆರೋಪಗಳನ್ನು ತಳ್ಳಿಹಾಕಿದ್ದು, ಇದು ನಿಜವಲ್ಲ ಮತ್ತು ವಾಸ್ತವವಾಗಿ, ಪೊಲೀಸರ ನಿರ್ದೇಶನದ ಮೇರೆಗೆ ತೆರಳಿರುವುದಾಗಿ ಹೇಳಿದ್ದಾರೆ. ʼಅನುಮತಿ ಇಲ್ಲದಿದ್ದರೆ, ಅವರು ನಮಗೆ ಹಿಂತಿರುಗಲು ಹೇಳುತ್ತಿದ್ದರು. ಕಾನೂನು ಪಾಲಿಸುವ ನಾಗರಿಕನಾಗಿರುವ ನಾನು ಅದನ್ನು ಅನುಸರಿಸುತ್ತಿದ್ದೆ. ಅಂತಹ ಯಾವುದೇ ಮಾಹಿತಿಯನ್ನು ನನಗೆ ನೀಡಲಾಗಿಲ್ಲ. ನಾನು ಅವರ ಮಾರ್ಗದರ್ಶನವನ್ನು ಅನುಸರಿಸುತ್ತಿದ್ದೆ. ಅಲ್ಲಿ ಯಾವುದೇ ಮೆರವಣಿಗೆ ಮಾಡಲಾಗಿಲ್ಲ. ಥಿಯೇಟರ್ನಿಂದ ಕೆಲವೇ ಮೀಟರ್ಗಳಷ್ಟು ದೂರದಲ್ಲಿ ಜನಸಂದಣಿ ಇತ್ತು. ಪೊಲೀಸರೇ ನಮಗೆ ದಾರಿಯನ್ನು ಮಾಡಿಕೊಟ್ಟಿದ್ದು, ಅವರ ನಿರ್ದೇಶನದಂತೆಯೇ ಸ್ಥಳಕ್ಕೆ ತೆರಳಿದ್ದೇನೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News