ಪದೇ ಪದೇ ವಿದೇಶಗಳಿಗೆ ಹಾರುವ ಪ್ರಧಾನಿಗಾಗಿ ಮುಂದುವರಿದ ಮಣಿಪುರದ ಕಾಯುವಿಕೆ : ಕಾಂಗ್ರೆಸ್
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿಯವರ ವಿದೇಶ ಪ್ರವಾಸಗಳಿಗಾಗಿ ಶನಿವಾರ ಅವರನ್ನು ಟೀಕಿಸಿರುವ ಕಾಂಗ್ರೆಸ್, ಕಳೆದ ಒಂದೂವರೆ ವರ್ಷದಿಂದಲೂ ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿರುವ ಮಣಿಪುರಕ್ಕೆ ಭೇಟಿ ನೀಡುವುದರಿಂದ ನುಣುಚಿಕೊಳ್ಳುತ್ತಿರುವ ‘ಪದೇ ಪದೇ ಹಾರುತ್ತಲೇ ಇರುವ ಪ್ರಧಾನಿ’ ಈಗ ಕುವೈತ್ಗೆ ತೆರಳಿದ್ದಾರೆ ಎಂದು ಹೇಳಿದೆ.
ರಕ್ಷಣೆ ಮತ್ತು ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಬಲಗೊಳಿಸಲು ಮೋದಿ ಶನಿವಾರ ಎರಡು ದಿನಗಳ ಭೇಟಿಗಾಗಿ ಕುವೈತ್ಗೆ ತೆರಳಿದ್ದಾರೆ.
‘‘ಇದು ಮಣಿಪುರದ ಜನರ ಹಣೆಬರಹ. ರಾಜ್ಯಕ್ಕೆ ಭೇಟಿ ನೀಡಲು ಮೋದಿಯವರಿಗೆ ಸಮಯವಿಲ್ಲ. ಅವರಿಗಾಗಿ ಮಣಿಪುರ ಜನತೆಯ ಕಾಯುವಿಕೆ ಮುಂದುವರಿದಿದೆ ಮತ್ತು ನಮ್ಮ ‘ಪದೇ ಪದೇ ಹಾರುತ್ತಲೇ ಇರುವ ಪ್ರಧಾನಿ’ ಈಗ ಕುವೈತ್ಗೆ ತೆರಳಿದ್ದಾರೆ ’’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಎಕ್ಸ್ ಪೋಸ್ಟ್ನಲ್ಲಿ ಕುಟುಕಿದ್ದಾರೆ.
ಮಣಿಪುರಕ್ಕೆ ಭೇಟಿ ನೀಡುವಂತೆ ಕಾಂಗ್ರೆಸ್ ಪದೇ ಪದೇ ಮೋದಿಯವರನ್ನು ಆಗ್ರಹಿಸುತ್ತಲೇ ಇದೆ. ಮೋದಿ ವಿದೇಶ ಪ್ರವಾಸಕ್ಕೆ ತೆರಳಿದಾಗ ಮಣಿಪುರಕ್ಕೆ ಭೇಟಿ ನೀಡದ್ದಕ್ಕಾಗಿ ಅದು ಸರಕಾರವನ್ನು, ಪ್ರಧಾನಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಲೇ ಇದೆ. ನವಂಬರ್ನಲ್ಲಿ ಮೋದಿ ಬ್ರಝಿಲ್, ನೈಜೀರಿಯಾ ಮತ್ತು ಗಯಾನಾಕ್ಕೆ ಭೇಟಿ ನೀಡಿದಾಗ ಕಾಂಗ್ರೆಸ್ ಅದನ್ನು ‘ನಿಯತಕಾಲಿಕ ವಿದೇಶ ವಿಹಾರ’ ಎಂದು ಬಣ್ಣಿಸಿತ್ತು.
‘ಮುಂದಿನ ಮೂರು ದಿನಗಳವರೆಗೆ ನಾವು ನಮ್ಮ ಅಜೈವಿಕ ಪ್ರಧಾನಿಯ ಅತಿಯಾದ ಸುಳ್ಳುಗಳ, ಘನತೆಯ ಕೊರತೆಯ ಚುನಾವಣಾ ಪ್ರಚಾರದಿಂದ ಪಾರಾಗಲಿದ್ದೇವೆ. ಅವರು ತನ್ನ ನಿಯತಕಾಲಿಕ ವಿದೇಶ ವಿಹಾರದಲ್ಲಿದ್ದಾರೆ’ ಎಂದು ರಮೇಶ್ ಹೇಳಿದ್ದಾರೆ.