ವಿಶ್ವಸಂಸ್ಥೆಯ ಆಂತರಿಕ ನ್ಯಾಯ ಮಂಡಳಿ ಅಧ್ಯಕ್ಷರಾಗಿ ಸುಪ್ರೀಂ ಮಾಜಿ ನ್ಯಾಯಾಧೀಶ ಲೋಕೂರ್ ನೇಮಕ
ಹೊಸದಿಲ್ಲಿ : ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಮದನ್ ಬಿ.ಲೋಕೂರ್ ಅವರನ್ನು ವಿಶ್ವಸಂಸ್ಥೆಯ ಆಂತರಿಕ ನ್ಯಾಯ ಮಂಡಳಿ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದೆ. ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಅವರು ನ್ಯಾ.ಲೋಕೂರ್ ಅವರಿಗೆ ಡಿ.19ರಂದು ಬರೆದಿರುವ ಪತ್ರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.
ಆಂತರಿಕ ನ್ಯಾಯಮಂಡಳಿ(ಐಜೆಸಿ)ಯು ವಿಶ್ವಾದ್ಯಂತ ಹಲವಾರು ಪ್ರತಿಷ್ಠಿತ ನ್ಯಾಯಶಾಸ್ತ್ರಜ್ಞರನ್ನು ಒಳಗೊಂಡಿದೆ.
ನ್ಯಾ.ಲೋಕೂರ್ ಅಧ್ಯಕ್ಷತೆಯ ಮಂಡಳಿಯಲ್ಲಿ ಉರುಗ್ವೆಯ ಕಾರ್ಮೆನ್ ಅರ್ಟಿಗಾಸ್ , ಆಸ್ಟ್ರೇಲಿಯಾದ ರೋಸಲೀ ಬಾಲ್ಕಿನ್,ಆಸ್ಟ್ರಿಯಾದ ಸ್ಟೆಫನ್ ಬ್ರೆಜಿನಾ ಮತ್ತು ಅಮರಿಕದ ಜೇ ಪೊಜೆನೆಲ್ ಸದಸ್ಯರಾಗಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ವಿಶ್ವಸಂಸ್ಥೆಯ ನ್ಯಾಯ ವ್ಯವಸ್ಥೆಯ ಆಡಳಿತದಲ್ಲಿ ಸ್ವಾತಂತ್ರ್ಯ,ವೃತ್ತಿಪರತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ನೆರವಾಗಲು ನೂತನ ಆಂತರಿಕ ನ್ಯಾಯ ವ್ಯವಸ್ಥೆಯ ಭಾಗವಾಗಿ ಐಜಿಸಿಯನ್ನು ಸ್ಥಾಪಿಸಿದೆ.
1953ರಲ್ಲಿ ಜನಿಸಿದ ನ್ಯಾ.ಲೋಕೂರ್ ಅವರು 2012,ಜೂ.4ರಿಂದ 2018,ಡಿ.30ರವರೆಗೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದರು. ಐಜೆಸಿ ಅಧ್ಯಕ್ಷರಾಗಿ 2028,ನ.12ರವರೆಗೆ ಅವರು ಅಧಿಕಾರಾವಧಿಯನ್ನು ಹೊಂದಿರಲಿದ್ದಾರೆ.