2009ರಲ್ಲಿ ಅಮೆರಿಕ ಉದ್ಯಮಿ ಜಾರ್ಜ್ ಸೊರೊಸ್ ರೊಂದಿಗಿನ ಔತಣ ಕೂಟ | ಹರ್ದೀಪ್ ಸಿಂಗ್-ಶಶಿ ತರೂರ್ ನಡುವೆ ವಾಗ್ಯುದ್ಧ
ಹೊಸದಿಲ್ಲಿ: 2009ರಲ್ಲಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ನ್ಯೂಯಾರ್ಕ್ ನಲ್ಲಿ ಅಮೆರಿಕ ಉದ್ಯಮಿ ಜಾರ್ಜ್ ಸೊರೊಸ್ ಅವರಿಗೆ ಔತಣ ಕೂಟ ಏರ್ಪಡಿಸಿದ್ದ ವಿಷಯವೀಗ ಹರ್ದೀಪ್ ಸಿಂಗ್ ಹಾಗೂ ಶಶಿ ತರೂರ್ ನಡುವಿನ ವಾಗ್ಯುದ್ಧಕ್ಕೆ ಕಾರಣವಾಗಿದೆ. ಇದಕ್ಕೂ ಮುನ್ನ, ಅಮೆರಿಕ ಉದ್ಯಮಿ ಜಾರ್ಜ್ ಸೊರೊಸ್ ಹಾಗೂ ಕಾಂಗ್ರೆಸ್ ನಡುವೆ ನಂಟಿದೆ ಎಂದು ಬಿಜೆಪಿ ಆರೋಪಿಸಿದ್ದ ಕಾರಣ, ಈ ಕುರಿತು ವಿವಾದ ಭುಗಿಲೆದ್ದಿತ್ತು.
ಶಶಿ ತರೂರ್ ಆರೋಪದ ಕುರಿತು ತಿರುಗೇಟು ನೀಡಿರುವ 2009ರಲ್ಲಿ ಅಮೆರಿಕ ರಾಯಭಾರಿಯಾಗಿದ್ದ ಸಚಿವ ಹರ್ದೀಪ್ ಸಿಂಗ್ ಪುರಿ, ಆಗ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾಗಿದ್ದ ಶಶಿ ತರೂರ್ ಅವರೇ ಜಾರ್ಜ್ ಸೊರೊಸ್ ಸೇರಿದಂತೆ ಔತಣ ಕೂಟದ ಆಹ್ವಾನಿತರ ಪಟ್ಟಿಯನ್ನು ಒದಗಿಸಿದ್ದರು ಎಂದು ಎಕ್ಸ್ ನಲ್ಲಿ ಆರೋಪಿಸಿದ್ದಾರೆ. “ಸದ್ಯ ಪ್ರಶ್ನೆಗೊಳಗಾಗಿರುವ ವ್ಯಕ್ತಿಯು ರಾಜೀವ್ ಗಾಂಧಿ ಪ್ರತಿಷ್ಠಾನದ ದಾನಿಗಳ ಪೈಕಿ ಒಬ್ಬರಾಗಿದ್ದರು ಹಾಗೂ ರಾಜ್ಯ ಸಚಿವರು ಅವರನ್ನು ಭೇಟಿಯಾಗಲು ಉತ್ಸುಕರಾಗಿದ್ದರು ಎಂಬುದು ಇದರಿಂದ ಅರ್ಥವಾಗುತ್ತದೆ” ಎಂದೂ ಅವರು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಶನಿವಾರ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಶಶಿ ತರೂರ್, “ಬಿಜೆಪಿ ಉತ್ಪ್ರೇಕ್ಷೆ ಮಾಡುತ್ತಿದೆ. ನಮ್ಮ ನೆನಪುಗಳು ನಿಮಗಿಂತ ಭಿನ್ನವಾಗಿವೆ ಪ್ರಿಯ ಹರ್ದೀಪ್” ಎಂದು ಪ್ರತಿಕ್ರಿಯಿಸಿದ್ದಾರೆ. “ನಿಮ್ಮ ಅಚ್ಚುಕಟ್ಟಾದ ಔತಣ ಕೂಟದಲ್ಲಿ ನಾನು ಈ ಹಿಂದೆಂದೂ ಭೇಟಿ ಮಾಡಿರದ ಹಲವರು ಉಪಸ್ಥಿತರಿದ್ದರು. ಆದರೆ, ನಮ್ಮ ನ್ಯೂಯಾರ್ಕ್ ಅಥವಾ ಜಿನಿವಾದಲ್ಲಿನ ವಾಸ್ತವ್ಯದ ಸಂದರ್ಭದಲ್ಲಿ ನಾವಿಬ್ಬರೂ ನಮ್ಮ ಸಂಪರ್ಕಗಳ ಕುರಿತು ಹಂಚಿಕೊಳ್ಳಲು ಯಾವುದೇ ಕಾರಣಗಳಿರಲಿಲ್ಲ” ಎಂದೂ ಬರೆದುಕೊಂಡಿದ್ದಾರೆ.
ಭಾರತದ ಪ್ರತಿಷ್ಠಾನದೊಂದಿಗಿನ ಸೊರೊಸ್ ಸಂಬಂಧಗಳು ಯಾವುದೊ ಬಗೆಯ ಪರಿಣಾಮ ಬೀರಿತ್ತು ಎಂಬ ಹರ್ದೀಪ್ ಸಿಂಗ್ ಪುರಿ ಅವರ ವಾದವನ್ನೂ ಶಶಿ ತರೂರ್ ತಳ್ಳಿ ಹಾಕಿದ್ದಾರೆ. “ಭಾರತದ ಪ್ರತಿಷ್ಠಾನದೊಂದಿಗೆ ಸೊರೊಸ್ ಸಂಬಂಧ ಹೊಂದಿರುವ ಬಗ್ಗೆ ನನಗೆ ಒಂದಿನಿತೂ ತಿಳಿದಿರಲಿಲ್ಲ ಹಾಗೂ ನಾನು ಈ ಕುರಿತು ಅವರೊಂದಿಗೆ ಚರ್ಚೆಯನ್ನೂ ನಡೆಸಲಿಲ್ಲ. ಆದರೆ, ಔತಣ ಕೂಟದಲ್ಲಿ ಜಾಗತಿಕ ತಾಪಮಾನ ಏರಿಕೆ ಕುರಿತು ಭಾರತ ತೆಗೆದುಕೊಂಡಿದ್ದ ನಿಲುವನ್ನು ಸೊರೊಸ್ ಟೀಕಿಸಿದ್ದರು” ಎಂದು ಅವರು ಸ್ಮರಿಸಿಕೊಂಡಿದ್ದಾರೆ.
2009ರ ಔತಣ ಕೂಟದಲ್ಲಿ ಸೊರೊಸ್ ಅವರನ್ನು ತಮ್ಮ ಹಳೆಯ ಮಿತ್ರ ಎಂದು ಪ್ರಶಂಸಿಸಿದ್ದ ಶಶಿ ತರೂರ್, ಭಾರತದ ಕುರಿತ ಅವರ ಆಸಕ್ತಿಯನ್ನು ಪ್ರಶಂಸಿಸಿದ್ದರು ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ಆರೋಪಿಸಿದ ನಂತರ, ಈ ವಿವಾದ ಭುಗಿಲೆದ್ದಿದೆ.