ಶ್ರೀನಗರ | 133 ವರ್ಷಗಳಲ್ಲಿ ಮೂರನೇ ಅತ್ಯಂತ ಶೀತಲ ರಾತ್ರಿಯ ಅನುಭವ
ಶ್ರೀನಗರ : ಕಾಶ್ಮೀರದಲ್ಲಿ 40 ದಿನಗಳ ತೀವ್ರ ಚಳಿಗಾಲ ‘ಚಿಲ್ಲಾಯಿ-ಕಲಾನ್’ ಶನಿವಾರದಿಂದ ಆರಂಭಗೊಂಡಿದ್ದು,ಜಮ್ಮು-ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರದಲ್ಲಿ ಶುಕ್ರವಾರ ತಾಪಮಾನ ಮೈನಸ್ 8 ಡಿ.ಸೆ.ಗೆ ಕುಸಿದ ಪರಿಣಾಮ ಕಳೆದ ಮೂರು ದಶಕಗಳಲ್ಲಿ ಡಿಸೆಂಬರ್ ತಿಂಗಳಿನ ಅತ್ಯಂತ ಶೀತಲ ರಾತ್ರಿಗೆ ಸಾಕ್ಷಿಯಾಗಿತ್ತು. ಇದು 133 ವರ್ಷಗಳಲ್ಲಿ ಶ್ರೀನಗರದಲ್ಲಿ ಮೂರನೇ ಅತ್ಯಂತ ಶೀತಲ ರಾತ್ರಿಯೂ ಆಗಿತ್ತು. 1990ರಲ್ಲಿ ಶ್ರೀನಗರದಲ್ಲಿ ಮೈನಸ್ 8.5 ಡಿ.ಸೆ.ಕನಿಷ್ಠ ತಾಪಮಾನ ದಾಖಲಾಗಿತ್ತು.
ಕಣಿವೆಯ ಇತರ ಪ್ರದೇಶಗಳಲ್ಲಿಯೂ ತೀವ್ರ ಚಳಿ ಬಿದ್ದಿದ್ದು,ಶೋಪಿಯಾನ್ನಲ್ಲಿ ಮೈನಸ್ 10.4 ಡಿ.ಸೆ.,ಅನಂತನಾಗ್ನಲ್ಲಿ ಮೈನಸ್ 10.5 ಡಿ.ಸೆ. ಮತ್ತು ಪುಲ್ವಾಮಾದಲ್ಲಿ ಮೈನಸ್ 10.3ಡಿ.ಸೆ.ಕನಿಷ್ಠ ತಾಪಮಾನ ದಾಖಲಾಗಿತ್ತು.
ಕಾಶ್ಮೀರದಲ್ಲಿ ಬೀಸುತ್ತಿರುವ ತೀವ್ರ ಶೀತ ಮಾರುತಕ್ಕೆ ಲಾ ನಿನಾ ಪರಿಣಾಮ ಕಾರಣವೆಂದು ಹವಾಮಾನ ತಜ್ಞರು ಹೇಳಿದ್ದಾರೆ.
ಲಾ ನಿನಾ ಸಂದರ್ಭದಲ್ಲಿ ಪೆಸಿಫಿಕ್ ಮಹಾಸಾಗರದ ಮೇಲ್ಮೈ ತಾಪಮಾನವು ಕುಸಿಯುತ್ತದೆ ಮತ್ತು ವಾತಾವರಣದ ಪರಿಚಲನೆ ಮಾದರಿಗಳಿಗೆ ಅಡ್ಡಿಯನ್ನುಂಟು ಮಾಡಿ ವಿಶ್ವಾದ್ಯಂತ ಪ್ರತಿಕೂಲ ಹವಾಮಾನ ಸ್ಥಿತಿಗಳಿಗೆ ಕಾರಣವಾಗುತ್ತದೆ.
ಕಾಶ್ಮೀರದ ಬಯಲು ಪ್ರದೇಶದಲ್ಲಿ ಈವರೆಗೆ ಹಿಮಪಾತವಾಗಿಲ್ಲ, ಆದರೆ ಗುಲ್ಮಾರ್ಗ್,ಪಹಲ್ಗಾಮ್,ಸೋನಾಮಾರ್ಗ ಮತ್ತು ಕಿಷ್ತವಾರ್ ಸೇರಿದಂತೆ ಎತ್ತರದ ಪ್ರದೇಶಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹಿಮ ಬಿದ್ದಿದೆ.
ಜಲವಿದ್ಯುತ್ ಉತ್ಪಾದನೆ ಕಡಿಮೆಯಾಗಿರುವುದರಿಂದ ವಿದ್ಯುತ್ ಕಡಿತವು ಕಾಶ್ಮೀರದಲ್ಲಿ ಜನರು ಎದುರಿಸುತ್ತಿರುವ ತೊಂದರೆಗಳನ್ನು ಉಲ್ಬಣಗೊಳಿಸಿದೆ. ಪ್ರದೇಶದ ವಿದ್ಯುತ್ ಅಗತ್ಯಗಳನ್ನು ಪೂರೈಸಲು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ಚಳಿಗಾಲದಲ್ಲಿ ಕಾಶ್ಮೀರಕ್ಕೆ ಹೆಚ್ಚುವರಿ ವಿದ್ಯುತ್ ಪೂರೈಕೆ ಬೇಡಿಕೆಯನ್ನು ಕೇಂದ್ರದ ನಾಯಕರೆದುರು ಮಂಡಿಸಿದ್ದಾರೆ.
ತಾಪಮಾನದಲ್ಲಿ ತೀವ್ರ ಕುಸಿತವು ಹೃದಯಾಘಾತದ ಅಪಾಯಗಳನ್ನು ಹೆಚ್ಚಿಸುವುದರಿಂದ ಮನೆಗಳನ್ನು ಬೆಚ್ಚಗಿರಿಸಿಕೊಳ್ಳುವ ಮೂಲಕ ಎಚ್ಚರಿಕೆ ವಹಿಸುವಂತೆ ವೈದ್ಯರು ಕಾಶ್ಮೀರದ ನಿವಾಸಿಗಳಿಗೆ ಎಚ್ಚರಿಕೆಯನ್ನು ನೀಡಿದ್ದರೆ
ಕಣಿವೆಯಲ್ಲಿ ಆರಂಭಗೊಂಡಿರುವ ‘ಚಿಲ್ಲಾಯಿ ಕಲಾನ್’ ಮುಂದಿನ ವರ್ಷದ ಜ.31ರಂದು ಅಂತ್ಯಗೊಳ್ಳಲಿದೆ. ಆದರೆ ಶೀತಮಾರುತವು ಮುಂದಿನ 20 ದಿನಗಳ ಕಾಲ ‘ಚಿಲ್ಲಾಯಿ-ಖುರ್ದ್’ ಮತ್ತು 10 ದಿನಗಳ ‘ಚಿಲ್ಲಾಯಿ-ಬಚ್ಚಾ’ಅವಧಿಗಳಲ್ಲಿ ಮುಂದುವರಿಯಲಿದೆ.