ಅಂಬೇಡ್ಕರ್ ಗೆ ಅವಮಾನ | ಅಮಿತ್ ಶಾ ವಿರುದ್ಧ ಮಾಯಾವತಿ ಆಕ್ರೋಶ
ಲಕ್ನೋ : ಸಂವಿಧಾನ ಶಿಲ್ಪಿ ಬಿ. ಆರ್. ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಶನಿವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಮಿತ್ ಶಾ ತನ್ನ ಹೇಳಿಕೆಗಾಗಿ ದೇಶದ ಜನತೆಯ ಕ್ಷಮೆ ಕೋರಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಅವರು ಕ್ಷಮೆ ಕೋರದಿದ್ದರೆ, ಬಿಎಸ್ಪಿ ಡಿಸೆಂಬರ್ 24ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಅವರು ಎಚ್ಚರಿಸಿದ್ದಾರೆ.
‘‘ದಲಿತರು, ವಂಚಿತರು ಮತ್ತು ದೇಶದ ಇತರ ನಿರ್ಲಕ್ಷಿತ ಜನರ ಸ್ವಾಭಿಮಾನ ಮತ್ತು ಮಾನವ ಹಕ್ಕುಗಳನ್ನು ಖಾತರಿಪಡಿಸಲು ಅತ್ಯಂತ ಮಾನವೀಯ ಮತ್ತು ಕಲ್ಯಾಣ ಸಂವಿಧಾನದ ರೂಪದಲ್ಲಿರುವ ಮೂಲಪುಸ್ತಕದ ಲೇಖಕ ಬಾಬಾಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ರನ್ನು ದೇವರಂತೆ ಆರಾಧಿಸಲಾಗುತ್ತಿದೆ. ಅವರನ್ನು ಅಮಿತ್ ಶಾ ಅಗೌರವಿಸಿರುವುದು ಜನರ ಭಾವನೆಗಳನ್ನು ಘಾಸಿಗೊಳಿಸಿದೆ’’ ಎಂದು ಎಕ್ಸ್ನಲ್ಲಿ ಹಾಕಿದ ಸರಣಿ ಸಂದೇಶಗಳಲ್ಲಿ ಮಾಯಾವತಿ ಹೇಳಿದ್ದಾರೆ.
ಇಂಥ ಶ್ರೇಷ್ಠ ವ್ಯಕ್ತಿಯ ಬಗ್ಗೆ ದೇಶದ ಸಂಸತ್ನಲ್ಲಿ ಅಮಿತ್ ಶಾ ಆಡಿರುವ ಮಾತುಗಳಿಂದ ದೇಶದ ಎಲ್ಲಾ ವರ್ಗಗಳಿಗೆ ಸೇರಿದ ಜನರು ಆಕ್ರೋಶಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
‘‘ಅಮಿತ್ ಶಾ ತನ್ನ ಹೇಳಿಕೆಯನ್ನು ವಾಪಸ್ ಪಡೆಯಬೇಕು ಮತ್ತು ಪಶ್ಚಾತ್ತಾಪ ಪಡಬೇಕು ಎಂದು ಅಂಬೇಡ್ಕರ್ವಾದಿ ಬಿಎಸ್ಪಿ ಒತ್ತಾಯಿಸಿದೆ’’ ಎಂದು ಅವರು ತಿಳಿಸಿದ್ದಾರೆ.