ಉತ್ತರಪ್ರದೇಶ |ಬೈಕ್ ಗೆ ಢಿಕ್ಕಿ ಹೊಡೆದ ತಹಶೀಲ್ದಾರ್ ಕಾರು: ಮೃತದೇಹವನ್ನು 30 ಕಿ.ಮೀ. ಎಳೆದೊಯ್ದ ವಾಹನ
ಲಕ್ನೋ: ಉತ್ತರಪ್ರದೇಶದಲ್ಲಿ ತಹಶೀಲ್ದಾರ್ ತೆರಳುತ್ತಿದ್ದ ಕಾರು ಬೈಕ್ ಗೆ ಢಿಕ್ಕಿ ಹೊಡೆದು ವ್ಯಕ್ತಿಯೋರ್ವನನ್ನು 30 ಕಿ.ಮೀ ದೂರಕ್ಕೆ ಎಳೆದೊಯ್ದ ಘಟನೆ ಬಹ್ರೈಚ್ ನಲ್ಲಿ ನಡೆದಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಬೈಕ್ ಸವಾರ ಮೃತಪಟ್ಟಿದ್ದಾರೆ.
ಗುರುವಾರ ಸಂಜೆ ಲಕ್ನೋದಿಂದ 127 ಕಿಮೀ ದೂರದಲ್ಲಿರುವ ನನ್ ಪಾರಾ-ಬಹ್ರೈಚ್ ರಸ್ತೆಯಲ್ಲಿ ಘಟನೆ ನಡೆದಿದೆ. ಸಂತ್ರಸ್ತನನ್ನು ಪಯಾಗ್ ಪುರ ನಿವಾಸಿ ನರೇಂದ್ರ ಕುಮಾರ್ ಹಲ್ದಾರ್ ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಹಾಲ್ದಾರ್ ಅವರ ಮೃತದೇಹ ಕಾರಿಗೆ ಸಿಲುಕಿಕೊಂಡಿತು. ಕಾರು ಅವರ ಮೃತದೇಹವನ್ನು ನನ್ಪಾರ ತಾಲೂಕಿನ ವರೆಗೆ ಎಳೆದುಕೊಂಡು ಹೋಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬೆನ್ನಲ್ಲೇ ಅಪಘಾತದ ವೇಳೆ ವಾಹನದಲ್ಲಿದ್ದ ನಾಯಬ್ ತಹಸೀಲ್ದಾರ್ ಶೈಲೇಶ್ ಕುಮಾರ್ ಅವಸ್ತಿ ಅವರನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಮೋನಿಕಾ ರಾಣಿ ಅಮಾನತುಗೊಳಿಸುವಂತೆ ಶಿಫಾರಸು ಮಾಡಿದ್ದಾರೆ. ವಾಹನದ ಚಾಲಕ ಮಹರಾಜ್ ಅಹ್ಮದ್ ಅವರನ್ನು ಬಂಧಿಸಲಾಗಿದೆ.
ನಾಯಬ್ ತಹಸೀಲ್ದಾರ್ ಅವರು ಕೆಲಸದ ನಿಮಿತ್ತ ಸರಕಾರಿ ಕಾರಿನಲ್ಲಿ ಬಹ್ರೈಚ್ಗೆ ಬಂದು ನಾನ್ ಪಾರಾಕ್ಕೆ ವಾಪಸಾಗುತ್ತಿದ್ದ ವೇಳೆ ಕಾರು ಬೈಕ್ ವೊಂದಕ್ಕೆ ಢಿಕ್ಕಿ ಹೊಡೆದು, ಬೈಕ್ ಸವಾರನನ್ನು ಎಳೆದೊಯ್ಯಲಾಗಿದೆ. ಘಟನೆಗೆ ಸಂಬಂಧಿಸಿ ಕಾರಿನಲ್ಲಿದ್ದ ನಾಯಿಬ್ ತಹಸೀಲ್ದಾರ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಮೋನಿಕಾ ರಾಣಿ ಹೇಳಿದ್ದಾರೆ.
ಘಟನೆಯನ್ನು ಪೊಲೀಸ್ ಅಧೀಕ್ಷಕರಾದ ವೃಂದಾ ಶುಕ್ಲಾ ದೃಢಪಡಿಸಿದ್ದಾರೆ. ‘‘ಅಪಘಾತ ಸಂಭವಿಸಿದ ಬಳಿಕ ನರೇಂದ್ರ ಹಲ್ದಾರ್ ಹಾಗೂ ತಹಶೀಲ್ದಾರ್ ಚಾಲಕ ಮೆಹರಾಜ್ ಅಹ್ಮದ್ ಅವರನ್ನು ಪತ್ತೆ ಮಾಡಿದಾಗ ಮೃತದೇಹವನ್ನು 30 ಕಿ.ಮೀ. ಎಳೆದೊಯ್ದಿರುವುದು ದೃಡಪಟ್ಟಿತು’’ ಎಂದು ಅವರು ಹೇಳಿದ್ದಾರೆ.
ಈ ಘಟನೆ ಅತಿ ದೊಡ್ಡ ನಿರ್ಲಕ್ಷ್ಯ ಎಂದು ಹೇಳಿರುವ ಅವರು, ಮೃತದೇಹವು 30 ಕಿ.ಮೀ.ವರೆಗೆ ಸಿಕ್ಕಿ ಹಾಕಿಕೊಳ್ಳಲು ಹಾಗೂ ಅದು ಯಾರದೇ ಗಮಕ್ಕೆ ಬಾರದಿರಲು ಸಾಧ್ಯವೇ ಇಲ್ಲ. ಭೀತಿಯಿಂದ ವಾಹನವನ್ನು ನಿಲ್ಲಿಸದೇ ಹೊಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಅಪಘಾತಕ್ಕೆ ಕಾರಣವಾದ ಅಂಶಗಳ ಕುರಿತು ನಿರ್ಧರಿಸಲು ಕೂಲಕಂಷ ತನಿಖೆ ನಡೆಯುತ್ತಿದೆ. ಘಟನೆಯ ಸನ್ನಿವೇಶವನ್ನು ಮರು ಸೃಷ್ಟಿಸಲು ಪೊಲೀಸರು 30 ಕಿ.ಮೀ. ರಸ್ತೆಯ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.