ಜಿಎಸ್ಟಿ ಮಂಡಳಿ ಸಭೆ: ಸಾರವರ್ಧಿತ ಅಕ್ಕಿಗೆ ತೆರಿಗೆ ಶೇ.5ಕ್ಕೆ ಇಳಿಕೆ, ಬ್ಯಾಂಕ್ ದಂಡಗಳಿಗೆ ತೆರಿಗೆಯಿಂದ ವಿನಾಯಿತಿ
ಹೊಸದಿಲ್ಲಿ: ಶನಿವಾರ ರಾಜಸ್ಥಾನದ ಜೈಸಲ್ಮೇರ್ನಲ್ಲಿ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ 55ನೇ ಜಿಎಸ್ಟಿ ಮಂಡಳಿ ಸಭೆಯು ಹಲವಾರು ಪ್ರಮುಖ ತೆರಿಗೆ ಸುಧಾರಣೆಗಳನ್ನು ಪ್ರಕಟಿಸಿದೆ. 2,000 ರೂ.ಗಿಂತ ಕಡಿಮೆ ವಹಿವಾಟುಗಳನ್ನು ನಿರ್ವಹಿಸುವ ಪೇಮೆಂಟ್ ಅಗ್ರಿಗೇಟರ್ (Google Pay, Paytm ಇತ್ಯಾದಿ) ಗಳಿಗೆ ಜಿಎಸ್ಟಿಯಿಂದ ವಿನಾಯಿತಿಗೆ ಅನುಮೋದನೆ ನೀಡಿದ ಸಭೆಯು ಕ್ಷಿಪಣಿ ಬಿಡಿಭಾಗಗಳಿಗೆ ತೆರಿಗೆ ಪರಿಹಾರವನ್ನು ಮುಂದುವರಿಸಿದೆ.
ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಸಾಲಗಾರರಿಗೆ ವಿಧಿಸುವ ದಂಡಗಳ ಮೇಲೆ ಜಿಎಸ್ಟಿಯನ್ನು ಸಂಗ್ರಹಿಸುವ ಅಗತ್ಯವಿಲ್ಲ ಎಂದು ಸೀತಾರಾಮನ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಸಭೆಯಲ್ಲಿನ ಪ್ರಮುಖ ನಿರ್ಧಾರಗಳು:
*ಸಾರವರ್ಧಿತ ಅಕ್ಕಿಯ ಮೇಲಿನ ಜಿಎಸ್ಟಿ ಶೇ.5ಕ್ಕೆ ಇಳಿಕೆ
*ಜೀನ್ ಥೆರಪಿಗೆ ಸಂಪೂರ್ಣ ಜಿಎಸ್ಟಿ ವಿನಾಯಿತಿ
*ಪ್ಯಾಕ್ ಮಾಡಲಾದ ಮತ್ತು ಲೇಬಲ್ ಹೊಂದಿರುವ ವಸ್ತುಗಳಿಗೆ ಪರಿಷ್ಕೃತ ವ್ಯಾಖ್ಯಾನದ ಪ್ರಸ್ತಾವ
*ವಿಮಾ ಪ್ರೀಮಿಯಂ ಮೇಲೆ ತೆರಿಗೆ ಕಡಿತ ಪ್ರಸ್ತಾವ ಮುಂದೂಡಿಕೆ
*ಶೇ.50ಕ್ಕೂ ಅಧಿಕ ಹಾರುಬೂದಿಯನ್ನು ಒಳಗೊಂಡ ಎಸಿಸಿ ಬ್ಲಾಕ್ಗಳಿಗೆ ಇನ್ನು ಶೇ.12 ಜಿಎಸ್ಟಿ ದರ ಅನ್ವಯ
*ದೀರ್ಘವ್ಯಾಪ್ತಿಯ ನೆಲದಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆಗಳಿಗೆ ತೆರಿಗೆ ವಿನಾಯಿತಿ
*ಆರೋಗ್ಯ ವಿಮೆ ಕಂತುಗಳ ಮೇಲೆ ತೆರಿಗೆ ಕಡಿತ ಕುರಿತು ನಿರ್ಧಾರ ಮುಂದೂಡಿಕೆ
*ಪ್ಯಾಕ್ ಮಾಡದೇ ಬಿಡಿಯಾಗಿ ಮಾರಾಟವಾಗುವ ಉಪ್ಪು-ಖಾರ ಮಿಶ್ರಿತ ಪಾಪ್ಕಾರ್ನ್ಗೆ ಶೇ.5 ಜಿಎಸ್ಟಿ ಹಾಗೂ ಪ್ಯಾಕ್ ಮಾಡಿ ಲೇಬಲ್ ಅಂಟಿಸಿದ್ದರೆ ಶೇ.12 ಜಿಎಸ್ಟಿ