ಉತ್ತರ ಪ್ರದೇಶ | ಪಕ್ಷದ ಕಚೇರಿಯ ವಿರುದ್ಧವೇ ಬುಲ್ಡೋಝರ್ ಕಾರ್ಯಾಚರಣೆ ; ಬಿಜೆಪಿ ನಾಯಕನಿಂದ ಅನಿರ್ದಿಷ್ಟಾವಧಿ ಧರಣಿ
ಬಲ್ಲಿಯ : ಇಲ್ಲಿನ ಬಿಜೆಪಿ ಶಿಬಿರ ಕಚೇರಿಯನ್ನು ನೆಲಸಮಗೊಳಿಸಿರುವುದನ್ನು ವಿರೋಧಿಸಿ ಬುಧವಾರ ಉತ್ತರ ಪ್ರದೇಶದ ಬಲ್ಲಿಯ ಜಿಲ್ಲೆಯ ಬಿಜೆಪಿ ನಾಯಕ ಸುರೇಂದ್ರ ಸಿಂಗ್ ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಿದ್ದಾರೆ. ಈ ಕಚೇರಿಯನ್ನು ಸಾರ್ವಜನಿಕ ಸ್ಥಳವನ್ನು ಒತ್ತುವರಿ ಮಾಡಿ ನಿರ್ಮಿಸಲಾಗಿತ್ತು ಎಂದು ಆರೋಪಿಸಲಾಗಿದೆ.
ಚಿಟ್ಟು ಪಾಂಡೆ ಪ್ರದೇಶದ ಇಂದಿರಾ ಮಾರುಕಟ್ಟೆಯಲ್ಲಿರುವ ಬಿಜೆಪಿ ಕಚೇರಿಯನ್ನು ಮಂಗಳವಾರ ಬಲ್ಲಿಯ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತದ ಜಂಟಿ ತಂಡಗಳು ಒತ್ತುವರಿ ತೆರವು ಕಾರ್ಯಾಚರಣೆಯಡಿ ನೆಲಸಮಗೊಳಿಸಿದ್ದವು.
“ಜಿಲ್ಲಾಡಳಿತಕ್ಕೆ ಧಿಕ್ಕಾರ” ಎಂದು ಘೋಷಣೆ ಕೂಗಿದ ಬಲ್ಲಿಯ ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷ ಸುರೇಂದ್ರ ಸಿಂಗ್, ನೆಲಸಮ ಕಾರ್ಯಾಚರಣೆಯನ್ನು ಖಂಡಿಸಿದರು. ಈ ಪ್ರದೇಶದಲ್ಲಿ 40 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಕಚೇರಿಯನ್ನು ಯಾವುದೇ ಮುನ್ನೆಚ್ಚರಿಕೆ ನೀಡದೆ ಅಥವಾ ಚರ್ಚೆ ನಡೆಸದೆ ನೆಲಸಮಗೊಳಿಸಲಾಗಿದೆ ಎಂದು ಅವರು ಆರೋಪಿಸಿದರು.
ಪ್ರತಿಭಟನಾ ಸ್ಥಳದಲ್ಲಿ ಅವರು, “ಜಿಲ್ಲಾಡಳಿತದ ಅನ್ಯಾಯ ಮತ್ತು ನಿರಂಕುಶ ಕ್ರಮದ ವಿರುದ್ಧ ಸಾಮೂಹಿಕ ಪ್ರತಿಭಟನೆ” ಎಂಬ ಬ್ಯಾನರ್ ಗಳನ್ನೂ ಪ್ರದರ್ಶಿಸಿದರು.
ಅಲ್ಲದೆ, ಬಲ್ಲಿಯ ಜಿಲ್ಲಾಡಳಿತವು ಸಮಾಜವಾದಿ ಪಕ್ಷದ ಪ್ರಭಾವದಡಿ ಕಾರ್ಯನಿರ್ವಹಿಸುತ್ತಿದೆ ಎಂದೂ ಅವರು ಆರೋಪಿಸಿದರು. “ಜಿಲ್ಲಾಡಳಿತದ ಅಧಿಕಾರಿಗಳು ಸಮಾಜವಾದಿ ಪಕ್ಷದ ಏಜೆಂಟ್ ಗಳಂತೆ ಕಾರ್ಯನಿರ್ವಹಿಸುತ್ತಿದ್ದು, ಒತ್ತುವರಿ ತೆರವು ಕಾರ್ಯಾಚರಣೆ ಸೋಗಿನಲ್ಲಿ ಕಿರುಕುಳ ಮತ್ತು ಸುಲಿಗೆಯಲ್ಲಿ ತೊಡಗಿದ್ದಾರೆ” ಎಂದೂ ಅವರು ದೂರಿದರು