ಭಾರತೀಯ ನೌಕಾಪಡೆಗಾಗಿ ಭವಿಷ್ಯದ ಪೀಳಿಗೆಯ ಕ್ಷಿಪಣಿ ವಾಹಕ ನೌಕೆ ನಿರ್ಮಾಣವನ್ನು ಪ್ರಾರಂಭಿಸಿದ ಕೊಚ್ಚಿನ್ ಶಿಪ್ ಯಾರ್ಡ್
ಕೊಚ್ಚಿ: ಭಾರತೀಯ ನೌಕಾಪಡೆಗಾಗಿ ಭವಿಷ್ಯದ ಪೀಳಿಗೆಯ ಕ್ಷಿಪಣಿ ವಾಹನ ನೌಕೆ ನಿರ್ಮಾಣಕ್ಕೆ ಉಕ್ಕನ್ನು ತುಂಡರಿಸುವ ಸಮಾರಂಭದ ಮೂಲಕ ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ ಚಾಲನೆ ನೀಡಿತು. ಆ ಮೂಲಕ, ದೇಶಕ್ಕೆ ಸುಧಾರಿತ ಶಸ್ತ್ರಾಸ್ತ್ರ ತೀವ್ರತೆ ಹೊಂದಿರುವ ವೇದಿಕೆಗಳ ನಿರ್ಮಾಣದ ಮುಂಚೂಣಿಗೆ ಬಂದಿದೆ.
ಹಡಗು ನಿರ್ಮಾಣ ಪ್ರಕ್ರಿಯೆಯಲ್ಲಿ ಈ ಸಮಾರಂಭ ಮಹತ್ವದ ಮೈಲಿಗಲ್ಲಾಗಿದ್ದು, ಯುದ್ಧ ನೌಕೆ ಸಾಗರೋತ್ತರ ತಂಡದ ಯುದ್ಧ ನೌಕೆ ಉತ್ಪಾದನಾ ವರಿಷ್ಠಾಧಿಕಾರಿ ಕಮಾಡೋರ್ ಎಸ್.ಪಾರ್ಥಿಬನ್ ಈ ಸಮಾರಂಭಕ್ಕೆ ಚಾಲನೆ ನೀಡಿದರು ಎಂದು ಬುಧವಾರ ಬಿಡುಗಡೆ ಮಾಡಲಾಗಿರುವ ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಾರ್ಚ್ 2023ರಲ್ಲಿ ಅಂದಾಜು ವೆಚ್ಚ 9,804 ಕೋಟಿ ಮೊತ್ತದ ಆರು ಭವಿಷ್ಯದ ಪೀಳಿಗೆಯ ಕ್ಷಿಪಣಿ ವಾಹಕ ನೌಕೆಗಳನ್ನು ಭಾರತೀಯ ನೌಕಾಪಡೆಗಾಗಿ ನಿರ್ಮಿಸುವ ಗುತ್ತಿಗೆ ಒಪ್ಪಂದಕ್ಕೆ ಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ ಸಹಿ ಮಾಡಿತ್ತು. ಈ ಪೈಕಿ ಮೊದಲ ನೌಕೆಯನ್ನು ಮಾರ್ಚ್ 2027ರಲ್ಲಿ ಸರಬರಾಜು ಮಾಡುವ ನಿರೀಕ್ಷೆ ಇದ್ದು, ಉಳಿದ ನೌಕೆಗಳನ್ನು ನಂತರದ ವರ್ಷಗಳಲ್ಲಿ ಸರಬರಾಜು ಮಾಡಲಾಗುತ್ತದೆ ಎಂದು ಹೇಳಲಾಗಿದೆ.