ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಆಂಧ್ರದ ಐದು ಜಿಲ್ಲೆಗಳಲ್ಲಿ ರೆಡ್ ಆಲರ್ಟ್
ವಿಜಯವಾಡ : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಭಾರೀ ಮಳೆಯ ಸಾಧ್ಯತೆಯ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಪಿಎಸ್‌ಡಿಎಂಎ) ಬುಧವಾರ ರಾಜ್ಯದಲ್ಲಿ ರೆಡ್ ಆಲರ್ಟ್ ಘೋಷಿಸಿದೆ. ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆಯೆಂದು ಭಾರತೀಯ ಹವಾಮಾನ ಇಲಾಖೆ (ಐಜಂಡಿ) ತಿಳಿಸಿದೆ.
ವ್ಯಾಪಕ ಮಳೆಯಾಗುವ ಸಾಧ್ಯತೆಯಿರುವುದರಿಂದ ನೆಲ್ಲೂರು, ತಿರುಪತಿ, ಕಾಕಿನಾಡ, ಆನಗಪಲ್ಲಿ ಹಾಗೂ ವಿಶಾಖಪಟ್ಟಣಂ ಜಿಲ್ಲೆಗಳಲ್ಲಿ ಆರೆಂಜ್ ಆಲರ್ಟ್ ಘೋಷಿಸಲಾಗಿದೆ. ಕೃಷ್ಣ, ಬಾಪಟ್ಲ, ಪ್ರಕಾಶಂ ಹಾಗೂ ವಿಜಯನಗರಂ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ವಿಶಾಖಪಟ್ಟಣಂ ಕರಾವಳಿಯಲ್ಲಿ ಕಡಲು ಪ್ರಕ್ಷುಬ್ಧವಾಗಿದ್ದು, ಭಾರೀ ಗಾತ್ರದ ಹೆದ್ದರೆಗಳು ತೀರಪ್ರದೇಶಕ್ಕೆ ಅಪ್ಪಳಿಸುತ್ತಿವೆ. ಮಂಗಳವಾರದಂದು ಪರಿಸರದಲ್ಲಿ ಅ ಮಳೆಯಾಗಿತ್ತು.
ಬುಧವಾರದಿಂದ ವಿಶಾಖಪಟ್ಟಣಂ,ಯಾನಂ ಹಾಗೂ ರಾಯಲಸೀಮಾ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆಯೆಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ. ಕರಾವಳಿ ಭಾಗದಲ್ಲಿ ತಾಸಿಗೆ 35-45 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ದಕ್ಷಿಣ ಆಂಧ್ರ ಪ್ರದೇಶ ಕರಾವಳಿ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಡಿಸೆಂಬರ್ 19ರಂದು ಕೂಡಾ ಭಾರೀ ಮಳೆಯಾಗಲಿದೆ ಎಂದು ಐಜಂಡಿ ತಿಳಿಸಿದೆ.