"ನನಗೆ ಪರಿಹಾರ ಮೊತ್ತ ಬಾಕಿ ಇದೆ": ನಿರ್ಮಲಾ ಹೇಳಿಕೆಗೆ ಮಲ್ಯ ಪ್ರತಿಕ್ರಿಯೆ
ಹೊಸದಿಲ್ಲಿ: ಕಿಂಗ್ ಫಿಶರ್ ಏರ್ ಲೈನ್ಸ್ ಪ್ರಕರಣದಲ್ಲಿ ಬ್ಯಾಂಕ್ ಗಳಿಗೆ ಬಾಕಿ ಇದ್ದ ಮೊತ್ತಕ್ಕಿಂತ ದುಪ್ಪಟ್ಟು ಹಣವನ್ನು ವಸೂಲಿ ಮಾಡಿಕೊಳ್ಳಲಾಗಿದೆ ಎಂದು ಉದ್ಯಮಿ ವಿಜಯ್ ಮಲ್ಯಾ ಹೇಳಿದ್ದಾರೆ. ಈ ಪ್ರಕರಣದಲ್ಲಿ ತಮಗೆ ಪರಿಹಾರ ಮೊತ್ತ ಸಿಗಲು ಬಾಕಿ ಇದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಮಂಗಳವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಹೇಳಿಕೆ ನೀಡಿ, ಬ್ಯಾಂಕ್ ಗಳು ಮಲ್ಯ ಅವರಿಂದ 14131.60 ಕೋಟಿ ರೂಪಾಯಿ ವಸೂಲಿ ಮಾಡಿಕೊಂಡಿವೆ ಎಂದು ಸ್ಪಷ್ಟಪಡಿಸಿದ್ದರು. ಕಿಂಗ್ ಫಿಶರ್ ನಿಂದ ಬ್ಯಾಂಕ್ ಗಳಿಗೆ 6,203 ಕೋಟಿ ರೂಪಾಯಿ ಬಾಕಿ ಇದೆ ಎಂದು ನ್ಯಾಯಮಂಡಳಿ ಅಂದಾಜಿಸಿತ್ತು.
ಎಕ್ಸ್ ನಲ್ಲಿ ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಮಲ್ಯ, "ಸಾಲ ವಸೂಲಾತಿ ನ್ಯಾಯಮಂಡಳಿ 1200 ಕೋಟಿ ರೂಪಾಯಿ ಬಡ್ಡಿ ಸೇರಿದಂತೆ ಕಿಂಗ್ ಫಿಶರ್ ಏರ್ ಲೈನ್ಸ್ ಸಾಲವನ್ನು 6203 ಕೋಟಿ ರೂಪಾಯಿ ಎಂದು ಅಂದಾಜಿಸಿತ್ತು. ಕಾನೂನು ಜಾರಿ ನಿರ್ದೇಶನಾಲಯದ ಮೂಲಕ ಬ್ಯಾಂಕ್ ಗಳು 14131.60 ಕೋಟಿ ರೂಪಾಯಿ ವಸೂಲಿ ಮಾಡಿಕೊಂಡಿವೆ ಎಂದು ಹಣಕಾಸು ಸಚಿವರು ಹೇಳಿಕೆ ನೀಡಿದ್ದಾರೆ. ನ್ಯಾಯಮಂಡಳಿ ತೀರ್ಪು ನೀಡಿದ ದುಪ್ಪಟ್ಟು ಹಣವನ್ನು ವಸೂಲಿ ಮಾಡಿಕೊಂಡಿದ್ದರೂ ನಾನು ಇನ್ನೂ ಆರ್ಥಿಕ ಅಪರಾಧಿಯೇ ಎಂದು ಪ್ರಶ್ನಿಸಿದ್ದಾರೆ. ಜಾರಿ ನಿರ್ದೇಶನಾಲಯ ಹಾಗೂ ಬ್ಯಾಂಕ್ ಗಳು ಕಾನೂನುಬದ್ಧವಾಗಿ ಹೇಗೆ ಸಾಲದ ಎರಡು ಪಟ್ಟು ಹಣವನ್ನು ವಸೂಲಿ ಮಾಡಿಕೊಂಡಿದ್ದಾಗಿ ಸಮರ್ಥಿಸಿಕೊಳ್ಳದಿದ್ದರೆ ನಾನು ಪರಿಹಾರಕ್ಕೆ ಅರ್ಹ ಹಾಗೂ ಅದಕ್ಕಾಗಿ ಪ್ರಯತ್ನಿಸುತ್ತೇನೆ" ಎಂದು ವಿವರಿಸಿದ್ದಾರೆ.
"ಕೆಎಫ್ಎಗೆ ಜಾಮೀನುದಾರನಾಗಿ ನನ್ನ ಹೊಣೆಗಾರಿಕೆಯ ಬಗ್ಗೆ ನಾನು ನೀಡಿರುವ ಹೇಳಿಕೆಯನ್ನು ಕಾನೂನುಬದ್ಧವಾಗಿ ದೃಢೀಕರಿಸಿಕೊಳ್ಳಬಹುದು. ಇಷ್ಟಾಗಿಯೂ ತೀರ್ಪು ನೀಡಲಾದ ಮೊತ್ತಕ್ಕಿಂತ 8000 ರೂಪಾಯಿಯನ್ನು ಹೆಚ್ಚಾಗಿ ವಸೂಲಿ ಮಾಡಿಕೊಳ್ಳಲಾಗಿದೆ. ನನ್ನನ್ನು ಮುಕ್ತವಾಗಿ ನಿಂದಿಸುವವರಿಂದ ಹಿಡಿದು ಯಾರಾದರೂ, ಈ ಅನ್ಯಾಯವನ್ನು ಪ್ರಶ್ನಿಸುತ್ತಾರೆಯೇ? " ಎಂದು ಕೇಳಿದ್ದಾರೆ.