ಮಹಾರಾಷ್ಟ್ರ | ಅಪಘಾತ ಸಂದರ್ಭ ಬ್ಯಾಗ್ ನೊಂದಿಗೆ ಬಸ್‌ನಿಂದ ಹೊರಗೆ ಹಾರಿದ್ದ ಚಾಲಕ; ವಿಡಿಯೊ ವೈರಲ್
ಮುಂಬೈ: ಸೋಮವಾರ ರಾತ್ರಿ ಕುರ್ಲಾದಲ್ಲಿ ನಡೆದ ವಿದ್ಯುತ್ ಚಾಲಿತ ಬಸ್ ಅಪಘಾತದ ಸಂದರ್ಭದಲ್ಲಿ ಬಸ್ ಚಾಲಕ ತನ್ನ ಬೆನ್ನಿಗೆ ಎರಡು ಬ್ಯಾಗ್ ಗಳನ್ನು ಕಟ್ಟಿಕೊಂಡು ಬಸ್‌ನ ಕಿಟಕಿಯಿಂದ ಹೊರಗೆ ಹಾರಿರುವ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಸೋಮವಾರ ರಾತ್ರಿ ಸುಮಾರು 9.30ರ ವೇಳೆಗೆ ಬೃಹನ್ ಮುಂಬೈ ಮಹಾನಗರ ಪಾಲಿಕೆ ನಿರ್ವಹಿಸುವ ಬೆಸ್ಟ್ ವಿದ್ಯುತ್ ಚಾಲಿತ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಪಶ್ಚಿಮ ಕುರ್ಲಾದ ಎಸ್.ಜಿ.ಬರ್ವೆ ಮಾರ್ಗದ ಜನನಿಬಿಡ ರಸ್ತೆಯಲ್ಲಿ ಅಡ್ಡಾದಿಡ್ಡಿ ಚಲಿಸಿದ್ದರಿಂದ, 22 ವಾಹನಗಳು ಜಖಂಗೊಂಡು, ಕರ್ತವ್ಯದಲ್ಲಿದ್ದ ನಾಲ್ವರು ಪೊಲೀಸರು ಸೇರಿದಂತೆ ಒಟ್ಟು ಏಳು ಮಂದಿ ಮೃತಪಟ್ಟಿದ್ದರು.
ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ 50 ಸೆಕೆಂಡ್‌ನಿಂದ ಒಂದು ನಿಮಿಷದವರೆಗಿನ ವಿಡಿಯೊದಲ್ಲಿ ಬಸ್ ಚಾಲಕ ಸಂಜಯ್ ಮೋರೆ ಅಪಘಾತ ನಡೆದ ಸಂದರ್ಭದಲ್ಲಿ ತನ್ನ ಬೆನ್ನಿಗೆ ಎರಡು ಚೀಲಗಳನ್ನು ಕಟ್ಟಿಕೊಂಡು, ಬಸ್‌ನ ಕಿಟಕಿಯಿಂದ ಹೊರಗೆ ಹಾರಿರುವುದು ಸೆರೆಯಾಗಿದೆ. ಬಸ್ ನಿರ್ವಾಹಕ ಹಿಂಬದಿಯ ಬಾಗಿಲಿನಿಂದ ಹೊರ ಜಿಗಿದಿರುವುದೂ ವಿಡಿಯೊದಲ್ಲಿ ದಾಖಲಾಗಿದೆ.
ಈ ಅಪಘಾತ ನಡೆದ ಸಂದರ್ಭದಲ್ಲಿ ಬಸ್‌ನಲ್ಲಿದ್ದ ಪ್ರಯಾಣಿಕರು ಗಾಬರಿಗೊಳಗಾಗಿದ್ದು, ಅಡ್ಡಾದಿಡ್ಡಿ ಚಲಿಸುತ್ತಿದ್ದ ಬಸ್ ಒಳಗೆ ನಿಯಂತ್ರಣ ಸಾಧಿಸಲು ಬಸ್ ಒಳಗಿನ ಕಂಬಗಳು ಹಾಗೂ ಪರಸ್ಪರ ಕೈಗಳನ್ನು ಹಿಡಿದುಕೊಂಡಿರುವುದು ವಿಡಿಯೊದಲ್ಲಿ ಕಂಡು ಬಂದಿದೆ.
ಈ ಸಂಬಂಧ, ಚಾಲಕ ಸಂಜಯ್ ಮೋರೆಯನ್ನು ಪೊಲೀಸರು ಬಂಧಿಸಿ, ನ್ಯಾಯಾಲಯದೆದುರು ಹಾಜರುಪಡಿಸಿದ್ದು, ಆತನನ್ನು ಡಿಸೆಂಬರ್ 21ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
ವಿವರಗಳ ಪ್ರಕಾರ, ಚಾಲಕ ಸಂಜಯ್ ಮೋರೆಗೆ ವಿದ್ಯುತ್ ಚಾಲಿತ ವಾಹನ ಚಲಾಯಿಸುವುದರಲ್ಲಿ ಯಾವುದೇ ಅನುಭವವಿರಲಿಲ್ಲ ಹಾಗೂ ಕೇವಲ 10 ದಿನಗಳ ಚಾಲನಾ ತರಬೇತಿ ಪಡೆದಿದ್ದ ಎಂದು ಹೇಳಲಾಗಿದೆ.