ವಿವಾದಿತವಾಗಿರುವ ಯಾವುದೇ ಧಾರ್ಮಿಕ ಕೇಂದ್ರಗಳ ಸಮೀಕ್ಷೆಗೆ ನಿರ್ದೇಶಿಸದಂತೆ ವಿಚಾರಣಾ ನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್ ಆದೇಶ
ಹೊಸದಿಲ್ಲಿ: ಆರಾಧನಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆ- 1991ರಡಿಯಲ್ಲಿ ಅಸ್ತಿತ್ವದಲ್ಲಿರುವ ಧಾರ್ಮಿಕ ಸ್ಥಳವೊಂದರ ಧಾರ್ಮಿಕ ಸ್ವರೂಪವನ್ನು ವಿವಾದವನ್ನಾಗಿಸುವ ಪ್ರಕರಣಗಳಲ್ಲಿ ಸಮೀಕ್ಷೆ ಸೇರಿದಂತೆ ಯಾವುದೇ ಪರಿಣಾಮಕಾರಿ ಆದೇಶಗಳನ್ನು ನೀಡದಂತೆ ಸುಪ್ರೀಂ ಕೋರ್ಟ್ ವಿಚಾರಣಾ ನ್ಯಾಯಾಲಯಗಳಿಗೆ ನಿರ್ದೇಶನ ನೀಡಿದೆ.
ಧಾರ್ಮಿಕ ಸ್ವರೂಪವನ್ನು ವಿವಾದಿಸಿ ದಾಖಲಾದ ದಾವೆಗಳಲ್ಲಿ ಅಸ್ತಿತ್ವದಲ್ಲಿರುವ ಧಾರ್ಮಿಕ ರಚನೆಗಳ ವಿರುದ್ಧ ಆದೇಶಗಳನ್ನು ಅಥವಾ ಸಮೀಕ್ಷೆಗಳನ್ನು ನಡೆಸಲು ಆದೇಶಿಸಬಾರದು ಮತ್ತು ಮುಂದಿನ ಆದೇಶದವರೆಗೆ ದೇಶದಲ್ಲಿ ಪೂಜಾ ಸ್ಥಳಗಳ ವಿರುದ್ಧ ಯಾವುದೇ ದಾವೆಗಳನ್ನು ದಾಖಲಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠ ಈ ಮಹತ್ವದ ಆದೇಶವನ್ನು ನೀಡಿದೆ. ಪೀಠದಲ್ಲಿ ನ್ಯಾಯಮೂರ್ತಿಗಳಾದ ಪಿವಿ ಸಂಜಯ್ ಕುಮಾರ್ ಮತ್ತು ಕೆವಿ ವಿಶ್ವನಾಥನ್ ಅವರಿದ್ದರು.
ಬಾಕಿ ಉಳಿದಿರುವ ಮೊಕದ್ದಮೆಗಳಲ್ಲಿ (ಉದಾಹರಣೆಗೆ ಜ್ಞಾನವಾಪಿ ಮಸೀದಿ, ಮಥುರಾ ಶಾಹಿ ಈದ್ಗಾ, ಸಂಭಲ್ ಜಾಮಾ ಮಸೀದಿ ಇತ್ಯಾದಿ) ನ್ಯಾಯಾಲಯಗಳು ಸಮೀಕ್ಷೆಯ ಆದೇಶಗಳನ್ನು ಒಳಗೊಂಡಂತೆ ಪರಿಣಾಮಕಾರಿ ಮಧ್ಯಂತರ ಅಥವಾ ಅಂತಿಮ ಆದೇಶಗಳನ್ನು ನೀಡಬಾರದು ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶವನ್ನು ನೀಡಿದೆ.
ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆ, 1991 ಅನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಈ ಸುಪ್ರೀಂಕೋರ್ಟ್ ಈ ಮಧ್ಯಂತರ ಆದೇಶವನ್ನು ನೀಡಿದೆ.