ಕೇಂದ್ರದಲ್ಲಿ ಎನ್‌ಡಿಎ ಸರಕಾರ ರಚನೆಗೆ ಬೆಂಬಲಕ್ಕೆ ಪ್ರತಿಯಾಗಿ ಬಿಹಾರ ಮತ್ತು ಆಂಧ್ರಪ್ರದೇಶಗಳಿಗೆ ವಿಶೇಷ ಸ್ಥಾನಮಾನಕ್ಕಾಗಿ ಪಟ್ಟು?
ಹೊಸದಿಲ್ಲಿ: ಲೋಕಸಭಾ ಚುನಾವಣೆಗಳಲ್ಲಿ ಅಸ್ಪಷ್ಟ ಜನಾದೇಶವು ಕೇಂದ್ರದಲ್ಲಿ ನೂತನ ಸರಕಾರದ ರಚನೆಯಲ್ಲಿ ಟಿಡಿಪಿ ವರಿಷ್ಠ ಚಂದ್ರಬಾಬು ನಾಯ್ಡು ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರ ಪಾತ್ರದ ಮೇಲೆ ಬೆಳಕು ಚೆಲ್ಲಿದೆ. ಬೆಂಬಲಕ್ಕೆ ಪ್ರತಿಯಾಗಿ ಆಂಧ್ರಪ್ರದೇಶ ಮತ್ತು ಬಿಹಾರಗಳಿಗೆ ವಿಶೇಷ ಸ್ಥಾನಮಾನದ ತಮ್ಮ ಹಿಂದಿನ ಬೇಡಿಕೆಗಳನ್ನು ಈ ನಾಯಕರು ಪುನರುಚ್ಚರಿಸುವ ಸಾಧ್ಯತೆಯಿದೆ.
ಲೋಕಸಭಾ ಚುನಾವಣೆಗಳಲ್ಲಿ ಟಿಡಿಪಿ 16 ಮತ್ತು ಜೆಡಿಯು 12 ಸ್ಥಾನಗಳನ್ನು ಗೆದ್ದಿವೆ. ಕೇವಲ 240 ಸ್ಥಾನಗಳನ್ನು ಗೆದ್ದಿರುವ ಬಿಜೆಪಿಗೆ ಸರಕಾರ ರಚನೆಯಲ್ಲಿ ಈ ಎರಡು ಪಕ್ಷಗಳ ಬೆಂಬಲ ಹೆಚ್ಚು ನಿರ್ಣಾಯಕವಾಗಿದೆ.
ಏನಿದು ವಿಶೇಷ ಸ್ಥಾನಮಾನ?
1969ರಲ್ಲಿ ಐದನೇ ಹಣಕಾಸು ಆಯೋಗವು ಐತಿಹಾಸಿಕ ಆರ್ಥಿಕ ಅಥವಾ ಭೌಗೋಳಿಕ ಅನಾನುಕೂಲತೆಗಳನ್ನು ಎದುರಿಸುವ ರಾಜ್ಯಗಳ ಅಭಿವೃದ್ಧಿ ಮತ್ತು ತ್ವರಿತ ಬೆಳವಣಿಗೆಗಾಗಿ ಅವುಗಳಿಗೆ ವಿಶೇಷ ವರ್ಗ ಸ್ಥಾನಮಾನವನ್ನು ಜಾರಿಗೆ ತಂದಿತ್ತು.
ದುರ್ಗಮ ಮತ್ತು ಗುಡ್ಡಗಾಡು ಪ್ರದೇಶ, ಕಡಿಮೆ ಜನಸಾಂದ್ರತೆ ಅಥವಾ ಗಣನೀಯ ಬುಡಕಟ್ಟು ಜನಸಂಖ್ಯೆ,ಗಡಿಗಳಲ್ಲಿ ಆಯಕಟ್ಟಿನ ಸ್ಥಳಗಳು, ಆರ್ಥಿಕ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಹಿಂದುಳಿದಿರುವಿಕೆ ಮತ್ತು ರಾಜ್ಯದ ಕಳಪೆ ಹಣಕಾಸು ಸ್ಥಿತಿ ಇವೇ ಮುಂತಾದ ಅಂಶಗಳನ್ನು ಪರಿಗಣಿಸಿ ರಾಜ್ಯಗಳಿಗೆ ವಿಶೇಷ ಸ್ಥಾನಮಾನವನ್ನು ನೀಡಬಹುದಾಗಿದೆ. ತೆರಿಗೆ ವಿಕೇಂದ್ರೀಕರಣವನ್ನು ಶೇ.32ರಿಂದ ಶೇ.42ಕ್ಕೆ ಹೆಚ್ಚಿಸುವ ಮೂಲಕ ರಾಜ್ಯಗಳ ಸಂಪನ್ಮೂಲ ಕೊರತೆಯನ್ನು ತುಂಬಬೇಕು ಎಂಬ ಪ್ರಸ್ತಾವದ ಬಳಿಕ 14ನೇ ಹಣಕಾಸು ಆಯೋಗವು ವಿಶೇಷ ವರ್ಗದ ಪರಿಕಲ್ಪನೆಯನ್ನು ರದ್ದುಗೊಳಿಸಿತ್ತು.
ಯಾವ ರಾಜ್ಯಗಳು ವಿಶೇಷ ವರ್ಗ ಸ್ಥಾನಮಾನವನ್ನು ಹೊಂದಿವೆ?
1969ರಲ್ಲಿ ಗಾಡ್ಗೀಳ ನಿಧಿ ಹಂಚಿಕೆ ಸೂತ್ರವನ್ನು ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯು ಅನುಮೋದಿಸಿತ್ತು ಮತ್ತು ಅಸ್ಸಾಂ, ಜಮ್ಮು-ಕಾಶ್ಮೀರ ಹಾಗೂ ನಾಗಾಲ್ಯಾಂಡ್ ರಾಜ್ಯಗಳಿಗೆ ವಿಶೇಷ ವರ್ಗ ಸ್ಥಾನಮಾನವನ್ನು ನೀಡಲಾಗಿತ್ತು. ಈ ರಾಜ್ಯಗಳಿಗೆ ಶೇ.90ರಷ್ಟು ಅನುದಾನದ ರೂಪದಲ್ಲಿ ಕೇಂದ್ರದಿಂದ ನೆರವು ಮತ್ತು ಶೇ.10ರಷ್ಟು ಸಾಲವನ್ನು ಒದಗಿಸಲಾಗಿತ್ತು. ನಂತರದ ವರ್ಷಗಳಲ್ಲಿ ಹಿಮಾಚಲ ಪ್ರದೇಶ,ಮಣಿಪುರ,ಮೇಘಾಲಯ, ತ್ರಿಪುರಾ,ಸಿಕ್ಕಿಂ,ಅರುಣಾಚಲ ಪ್ರದೇಶ,ಮಿಜೋರಾಮ್ ಮತ್ತು ಉತ್ತರಾಖಂಡ ರಾಜ್ಯಗಳು ವಿಶೇಷ ವರ್ಗ ಸ್ಥಾನಮಾನವನ್ನು ಪಡೆದುಕೊಂಡಿದ್ದವು.
ಪ್ರಸ್ತುತ ತೆಲಂಗಾಣ ಸೇರಿದಂತೆ ದೇಶದಲ್ಲಿ 11 ರಾಜ್ಯಗಳು ವಿಶೇಷ ವರ್ಗ ಸ್ಥಾನಮಾನವನ್ನು ಹೊಂದಿವೆ.
ರಾಜ್ಯಗಳಿಗೇನು ಲಾಭ?
ವಿಶೇಷ ವರ್ಗ ಸ್ಥಾನಮಾನದಡಿ ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ಶೇ.90ರಷ್ಟನ್ನು ಅನುದಾನದ ರೂಪದಲ್ಲಿ ಒದಗಿಸಲಾಗುತ್ತದೆ. ವಿಶೇಷ ಸ್ಥಾನಮಾನವನ್ನು ಹೊಂದಿರದ ರಾಜ್ಯಗಳಿಗೆ ಶೇ.30ರಷ್ಟು ಕೇಂದ್ರ ಅನುದಾನ ಮತ್ತು ಶೇ.70ರಷ್ಟು ಸಾಲ ಲಭಿಸುತ್ತದೆ.
ರಾಜ್ಯಕ್ಕೆ ವಿಶೇಷ ಮಹತ್ವದ ಯೋಜನೆಗಳಿಗಾಗಿ ವಿಶೇಷ ವರ್ಗ ಸ್ಥಾನಮಾನದ ರಾಜ್ಯಗಳಿಗೆ ವಿಶೇಷ ಯೋಜನಾ ನೆರವನ್ನೂ ಒದಗಿಸಲಾಗುತ್ತದೆ, ಅಲ್ಲದೆ ಅವು ಖರ್ಚಾಗಿರದ ಹಣವನ್ನು ವಿತ್ತವರ್ಷದ ಅಂತ್ಯದಲ್ಲಿ ಕೇಂದ್ರಕ್ಕೆ ಮರಳಿಸಬೇಕಾಗಿಲ್ಲ.
ಬಿಹಾರ ಮತ್ತು ಆಂಧ್ರಪ್ರದೇಶ ವಿಶೇಷ ಸ್ಥಾನಮಾನಕ್ಕೆ ಏಕೆ ಆಗ್ರಹಿಸುತ್ತಿವೆ?
2000ರಲ್ಲಿ ಖನಿಜ ಸಮೃದ್ಧ ಜಾರ್ಖಂಡ್ ಬಿಹಾರದಿಂದ ಬೇರ್ಪಟ್ಟು ಪ್ರತ್ಯೇಕ ರಾಜ್ಯವಾದ ಬಳಿಕ ನಿತೀಶ್ ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸುತ್ತಿದ್ದರು.
ಸುಮಾರು 54,000 ರೂ.ಗಳ ತಲಾವಾರು ಜಿಡಿಪಿಯೊಂದಿಗೆ ಬಿಹಾರವು ನಿರಂತರವಾಗಿ ಅತ್ಯಂತ ಬಡ ರಾಜ್ಯಗಳಲ್ಲೊಂದಾಗಿದೆ. ರಾಜ್ಯದಲ್ಲಿ 94 ಲಕ್ಷ ಬಡ ಕುಟುಂಬಗಳಿವೆ ಮತ್ತು ವಿಶೇಷ ಸ್ಥಾನಮಾನವನ್ನು ನೀಡುವುದರಿಂದ ಮುಂದಿನ ಐದು ವರ್ಷಗಳಿಗೆ ಕಲ್ಯಾಣ ಯೋಜನೆಗಳಿಗೆ ಅಗತ್ಯವಾದ ಸುಮಾರು 2.5 ಲಕ್ಷ ಕೋಟಿ ರೂ.ಗಳ ಅನುದಾನವನ್ನು ಪಡೆಯಲು ರಾಜ್ಯಕ್ಕೆ ನೆರವಾಗುತ್ತದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದರು.
ಕೇಂದ್ರದ ಬಹುಆಯಾಮ ಬಡತನ ಸೂಚ್ಯಂಕ (ಎಂಪಿಐ) ವರದಿಯ ಪ್ರಕಾರ ಬಿಹಾರ ದೇಶದ ಅತ್ಯಂತ ಬಡ ರಾಜ್ಯವಾಗಿದೆ. ರಾಜ್ಯದಲ್ಲಿಯ ಸುಮಾರು ಶೇ.52ರಷ್ಟು ಜನರಿಗೆ ಅಗತ್ಯ ಆರೋಗ್ಯ,ಶಿಕ್ಷಣ ಮತ್ತು ಜೀವನಮಟ್ಟ ಕೊರತೆಯನ್ನು ಅಂದಾಜಿಸಲಾಗಿದೆ.
ರಾಜ್ಯವು ವಿಶೇಷ ವರ್ಗ ಸ್ಥಾನಮಾನಕ್ಕಾಗಿ ಹೆಚ್ಚಿನ ಮಾನದಂಡಗಳನ್ನು ಪೂರೈಸುತ್ತದೆಯಾದರೂ, ಇತರ ಎರಡು ಅಗತ್ಯಗಳಾದ ಗುಡ್ಡಗಾಡು ಮತ್ತು ಭೌಗೋಳಿಕವಾಗಿ ದುರ್ಗಮ ಪ್ರದೇಶಗಳನ್ನು ಅದು ಹೊಂದಿಲ್ಲ.
2014ರಲ್ಲಿ ವಿಭಜನೆಗೊಂಡ ಬಳಿಕ ಆಂಧ್ರಪ್ರದೇಶವೂ ಹೆಚ್ಚಿನ ಅಭಿವೃದ್ಧಿಯು ಕೇಂದ್ರೀಕೃತವಾಗಿದ್ದ ಹೈದರಾಬಾದ್ ತೆಲಂಗಾಂಣದ ಭಾಗವಾಗಿರುವುದರಿಂದ ಆದಾಯ ನಷ್ಟದ ಕಾರಣವನ್ನು ಮುಂದಿಟ್ಟುಕೊಂಡು ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸುತ್ತಿದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಆಗಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಅವರ ಉತ್ತರಾಧಿಕಾರಿ ಜಗನ್ಮೋಹನ್ ರೆಡ್ಡಿಯವರು ರಾಜ್ಯದ ಆರ್ಥಿಕ ಸಂಕಷ್ಟ ನೀಗುವಂತಾಗಲು ಪದೇ ಪದೇ ವಿಶೇಷ ಸ್ಥಾನಮಾನದ ಬೇಡಿಕೆಯನ್ನು ಮುಂದಿಟ್ಟಿದ್ದರು.
ನ್ಯಾಯಸಮ್ಮತವಲ್ಲದ ರೀತಿಯಲ್ಲಿ ಆಂಧ್ರಪ್ರದೇಶವನ್ನು ವಿಭಜಿಸಲಾಗಿತ್ತು. ಸುಮಾರು ಶೇ.59ರಷ್ಟು ಜನಸಂಖ್ಯೆ,ಸಾಲ ಮತ್ತು ಹೊಣೆಗಾರಿಕೆ ರಾಜ್ಯದ ಪಾಲಿಗೆ ಬಂದಿದ್ದರೆ ಕೇವಲ ಶೇ.47ರಷ್ಟು ಆದಾಯವನ್ನು ಅದು ಪಡೆದುಕೊಂಡಿತ್ತು ಎನ್ನುವುದು ಸರಕಾರದ ವಾದವಾಗಿದೆ.
ಇಂದು ಆಂಧ್ರಪ್ರದೇಶವು ಮೂಲಭೂತವಾಗಿ ಕೃಷಿ ಪ್ರಧಾನ ರಾಜ್ಯವಾಗಿದೆ. 2015-16ರಲ್ಲಿ ತೆಲಂಗಾಣದ ತಲಾದಾಯ 14,411 ರೂ.ಗಳಾಗಿದ್ದರೆ ಆಂಧ್ರಪ್ರದೇಶದ ತಲಾದಾಯ ಕೇವಲ 8,397 ರೂ.ಆಗಿತ್ತು.
2014ರಲ್ಲಿ ಮೋದಿ ಸರಕಾರವು ಅಧಿಕಾರಕ್ಕೆ ಬಂದಾಗಿನಿಂದಲೂ ನಾಯ್ಡು ವಿಶೇಷ ವರ್ಗ ಸ್ಥಾನಮಾನಕ್ಕಾಗಿ ಒತ್ತಾಯಿಸುತ್ತಿದ್ದರು. ಆದರೆ ಕೇಂದ್ರವು ಅದಕ್ಕೆ ನಿರಾಕರಿಸಿದಾಗ 2018,ಮಾರ್ಚ್‌ನಲ್ಲಿ ಟಿಡಿಪಿಯ ಇಬ್ಬರು ಸಚಿವರಾಗಿದ್ದ ಪ.ಅಶೋಕ ಗಜಪತಿ ಬಾಬು ಮತ್ತು ವೈ.ಸತ್ಯನಾರಾಯಣ ಚೌದರಿ ಅವರಿಗೆ ಹುದ್ದೆಗೆ ರಾಜೀನಾಮೆ ಸಲ್ಲಿಸುವಂತೆ ಸೂಚಿಸಿದ್ದರು. ಬಳಿಕ ಎನ್‌ಡಿಎ ಅನ್ನು ತೊರೆದ ಅವರು 2019ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರೋಧಿ,ಮೋದಿ ವಿರೋಧಿ ಅಭಿಯಾನವನ್ನು ಆರಂಭಿಸಿದ್ದರು.