ಶರದ್ ಪವಾರ್ ರ ಎನ್ ಸಿ ಪಿ ಗೆ ‘ಕಹಳೆ ಊದುತ್ತಿರುವ ವ್ಯಕ್ತಿ’ ಚಿಹ್ನೆ ಮಂಜೂರು ಮಾಡಿದ ಚುನಾವಣಾ ಆಯೋಗ

Update: 2024-02-23 15:51 GMT

ಶರದ್ ಪವಾರ್ , Photo: X \ @NCPspeaks

ಹೊಸದಿಲ್ಲಿ: ನ್ಯಾಷನಲ್ ಕಾಂಗ್ರೆಸ್ ಪಕ್ಷದ ಸ್ಥಾಪಕ ಶರದ್ ಪವಾರ್ ಬಣಕ್ಕೆ ಚುನಾವಣಾ ಆಯೋಗ ಗುರುವಾರ ‘ಕಹಳೆ ಊದುತ್ತಿರುವ ವ್ಯಕ್ತಿ’ ಚಿಹ್ನೆಯನ್ನು ಮಂಜೂರು ಮಾಡಿದೆ.

ನ್ಯಾಷನಲ್ ಕಾಂಗ್ರೆಸ್ ಪಕ್ಷ-ಶರದ್ ಚಂದ್ರ ಪವಾರ್ ನೂತನ ಪಕ್ಷದ ಚಿಹ್ನೆ ಮಂಜೂರು ಮಾಡಿ ಚುನಾವಣಾ ಆಯೋಗ ನೀಡಿದ ಆದೇಶವನ್ನು ಸಾಮಾಜಿಕ ಮಾಧ್ಯಮದಲ್ಲಿ ಶುಕ್ರವಾರ ಹಂಚಿಕೊಂಡಿದೆ. ಅಲ್ಲದೆ, ಕುಸಮಾಗ್ರಜ ಬರೆದ ಕವಿತೆ ‘ತುತ್ತೂರಿ’ಯ ಸಾಲೊಂದನ್ನು ಉಲ್ಲೇಖಿಸಿದೆ.

‘‘ಮುಂದಿನ ಚುನಾವಣೆಗೆ ಕಹಳೆ ಊದುತ್ತಿರುವ ವ್ಯಕ್ತಿಯ ಚಿಹ್ನೆಯನ್ನು ಪಡೆದಿರುವುದು ನಮ್ಮ ಪಕ್ಷಕ್ಕೆ ಅತಿ ದೊಡ್ಡ ಗೌರವ. ನಮ್ಮ ಕಹಳೆ ಈಗ ಶರದ್ ಚಂದ್ರ ಪವಾರ್ ಅವರ ನಾಯಕತ್ವದಲ್ಲಿ ದಿಲ್ಲಿಯ ಸಿಂಹಾಸವನ್ನು ನಡುಗಿಸಲು ಸಿದ್ಧವಾಗಿದೆ’’ ಎಂದು ಪಕ್ಷ ಹೇಳಿದೆ.

ಚುನಾವಣಾ ಆಯೋಗ ಫೆಬ್ರವರಿ 6ರಂದು ಅಜಿತ್ ಪವಾರ್ ಬಣ ನಿಜವಾದ ನ್ಯಾಶನಲ್ ಕಾಂಗ್ರೆಸ್ ಪಕ್ಷ ಎಂದು ಪರಿಗಣಿಸಿತ್ತು ಹಾಗೂ ಅದಕ್ಕೆ ‘ಗಡಿಯಾರ’ವನ್ನು ಚುನಾವಣಾ ಚಿಹ್ನೆಯಾಗಿ ಮಂಜೂರು ಮಾಡಿತ್ತು.

ಮಹಾರಾಷ್ಟ್ರದಲ್ಲಿ 6 ರಾಜ್ಯ ಸಭಾ ಸ್ಥಾನಕ್ಕೆ ಫೆಬ್ರವರಿ 27ರಂದು ನಡೆಯಲಿರುವ ಚುನಾವಣೆಗಾಗಿ ಹೊಸ ಹೆಸರನ್ನು ಬಳಸಲು ಚುನಾವಣಾ ಆಯೋಗ ಶರದ್ ಪವಾರ್ ಬಣಕ್ಕೆ ಅನುಮತಿ ನೀಡಿತ್ತು. ಅದು ಫೆಬ್ರವರಿ 7ರಂದು ಈ ಬಣಕ್ಕೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ-ಶರದ್ ಚಂದ್ರ ಪವಾರ್ ಎಂದು ಹೆಸರು ನೀಡಿತ್ತು.

ನ್ಯಾಷನಲ್ ಕಾಂಗ್ರೆಸ್ ಪಕ್ಷದ ಸ್ಥಾಪಕ ಶರದ್ ಪವಾರ್ ಅವರು ಚುನಾವಣಾ ಆಯೋಗದ ಆದೇಶವನ್ನು ಪ್ರಶ್ನಿಸಿದ ತನ್ನ ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ಫೆಬ್ರವರಿ 16ರಂದು ಸುಪ್ರೀಂ ಕೋರ್ಟ್ ನಲ್ಲಿ ಮನವಿ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News