'ವಾಸಕ್ಕೆ ಮನೆ ಇಲ್ಲ, ಜಾಮೀನು ರದ್ದು ಮಾಡಿ' ಎಂದು ಕೋರ್ಟ್ ಮೊರೆ ಹೋದ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ !
ಹೊಸದಿಲ್ಲಿ: "ಮುಂಬೈನಲ್ಲಿ ನನಗೆ ವಾಸಕ್ಕೆ ಮನೆ ಇಲ್ಲ; ಆದ್ದರಿಂದ ಪ್ರತಿದಿನ ವಿಚಾರಣೆಗೆ ಹಾಜರಾಗಲು ಅನುವಾಗುವಂತೆ ನನ್ನ ಜಾಮೀನು ರದ್ದುಪಡಿಸಿ, ಕಸ್ಟಡಿಗೆ ತೆಗೆದುಕೊಳ್ಳಿ" ಎಂದು 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ, ಸುಧಾಕರ ಚತುರ್ವೇದಿ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾನೆ.
ನ್ಯಾಯಾಲಯಕ್ಕೆ ಈ ಸಂಬಂಧ ಅರ್ಜಿ ಸಲ್ಲಿಸಿರುವ ಚತುರ್ವೇದಿ, ಹೇಳಿಕೆಯನ್ನು ದಾಖಲಿಸಲು ಪ್ರತಿದಿನ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಮುಂಬೈನಲ್ಲಿ ನನ್ನ ವಾಸಕ್ಕೆ ವ್ಯವಸ್ಥೆ ಇಲ್ಲ. ನಾನು ಉತ್ತರ ಭಾರತದವನು. ಅಪರಾಧ ದಂಡಸಂಹಿತೆ ಸೆಕ್ಷನ್ 313ರ ಅನ್ವಯ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಕೆಲ ತಿಂಗಳ ಕಾಲ ಮುಂದುವರಿಯುವ ಸಾಧ್ಯತೆ ಇದ್ದು, ಮುಂಬೈನಲ್ಲಿ ವಸತಿಗೆ ವ್ಯವಸ್ಥೆ ಇಲ್ಲ ಎಂದು ಹೇಳಿದ್ದಾನೆ.
ಈ ಪ್ರಕರಣದ ವಿಚಾರಣೆ ವೇಳೆ ಎಟಿಎಸ್ ಅಧಿಕಾರಿಗಳು ದೌರ್ಜನ್ಯ ಎಸಗಿದ್ದು, ಈ ಬಗ್ಗೆ ಮುಂಬೈ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದೇನೆ. ಆದರೆ ಈ ಅರ್ಜಿ 2013ರಿಂದ ಹೈಕೋರ್ಟ್ ನಲ್ಲಿ ಬಾಕಿ ಇದೆ ಎಂದು ಆರೋಪಿ ಉಲ್ಲೇಖಿಸಿದ್ದಾನೆ. ಹೈಕೋರ್ಟ್ ಆದೇಶವನ್ನು 10 ವರ್ಷ ಕಳೆದರೂ ಮಹಾರಾಷ್ಟ್ರ ಗೃಹ ಇಲಾಖೆ ಜಾರಿಗೊಳಿಸಿಲ್ಲ ಎಂದು ಆಪಾದಿಸಿದ್ದಾನೆ.
ಈ ಅರ್ಜಿ ಸಂಬಂಧ ನ್ಯಾಯಾಲಯ ಮುಂದಿನ ಸೋಮವಾರ ತೀರ್ಪು ನಿಡುವ ಸಾಧ್ಯತೆ ಇದೆ. 2008ರ ಸೆಪ್ಟೆಂಬರ್ 29ರಂದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್ ನಲ್ಲಿ ಬೈಕ್ ನಲ್ಲಿ ಇರಿಸಿದ್ದ ಸ್ಫೋಟಕ ಸಾಧನ ಸ್ಫೋಟಗೊಂಡ ಘಟನೆಯಲ್ಲಿ ಆರು ಮಂದಿ ಮೃತಪಟ್ಟಿದ್ದಲ್ಲದೇ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.