ಇಂದು ಮೊದಲ ಏಕದಿನ: ವೆಸ್ಟ್ ಇಂಡೀಸ್ ವಿರುದ್ಧ ಸತತ 13ನೇ ದ್ವಿಪಕ್ಷೀಯ ಸರಣಿ ಗೆಲವಿನತ್ತ ಭಾರತ ಚಿತ್ತ

Update: 2023-07-26 18:27 GMT

ಬಾರ್ಬಡೋಸ್: ವೆಸ್ಟ್ಇಂಡೀಸ್ ವಿರುದ್ಧದ 3 ಪಂದ್ಯಗಳ ದ್ವಿಪಕ್ಷೀಯ ಏಕದಿನ ಸರಣಿಯು ಗುರುವಾರ ಆರಂಭವಾಗಲಿದ್ದು, ರೋಹಿತ್ ಶರ್ಮಾ ಬಳಗ ವಿಂಡೀಸ್ ವಿರುದ್ಧ ಸತತ 13ನೇ ಏಕದಿನ ಸರಣಿ ಗೆಲ್ಲುವತ್ತ ಚಿತ್ತ ಹರಿಸಿದೆ. ವಿಂಡೀಸ್ 2006ರಲ್ಲಿ 17 ವರ್ಷಗಳ ಹಿಂದೆ ತವರು ನೆಲದಲ್ಲಿ ಕೊನೆಯ ಬಾರಿ ಭಾರತವನ್ನು ಸೋಲಿಸಿ ಏಕದಿನ ಸರಣಿಯನ್ನು ಜಯಿಸಿತ್ತು.

ಏಕದಿನ ಸರಣಿ ಆರಂಭಕ್ಕೆ ಮೊದಲೇ ಭಾರತವು ಮತ್ತೊಮ್ಮೆ ಫೇವರಿಟ್ ತಂಡವಾಗಿ ಹೊರಹೊಮ್ಮಿದೆ. ಭಾರತವು ಏಕದಿನ ಕ್ರಿಕೆಟ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಜನವರಿ 2007 ಹಾಗೂ ಜುಲೈ 2022ರ ನಡುವೆ ಸತತ 12 ದ್ವಿಪಕ್ಷೀಯ ಸರಣಿ(ಭಾರತದಲ್ಲಿ 7 ಹಾಗೂ ಕೆರಿಬಿಯನ್ನಲ್ಲಿ 5)ಗೆದ್ದುಕೊಂಡಿದೆ.ವಿಂಡೀಸ್ 2006ರಲ್ಲಿ ತನ್ನ ನೆಲದಲ್ಲಿ 4-1 ಅಂತರದಿಂದ ಭಾರತವನ್ನು ಸೋಲಿಸಿತ್ತು.

ವೆಸ್ಟ್ಇಂಡೀಸ್ನಲ್ಲಿ ಉಭಯ ತಂಡಗಳ ನಡುವೆ ನಡೆದಿರುವ ಹಿಂದಿನ 10 ಪಂದ್ಯಗಳ ಪೈಕಿ ಭಾರತ 9ರಲ್ಲಿ ಗೆಲುವು, ಒಂದರಲ್ಲಿ ಸೋಲುಂಡಿತ್ತು. 2015 ಹಾಗೂ 2022ರ ಮಧ್ಯೆ ವೆಸ್ಟ್ಇಂಡೀಸ್ ವಿರುದ್ಧ ಆಡಿರುವ ಹಿಂದಿನ 24 ಏಕದಿನ ಪಂದ್ಯಗಳ ಪೈಕಿ ಭಾರತ 18ರಲ್ಲಿ ಜಯ ಸಾಧಿಸಿದೆ. 3ರಲ್ಲಿ ಸೋತಿದೆ. ವೆಸ್ಟ್ಇಂಡೀಸ್ ವಿರುದ್ಧ ಆಡಿರುವ 139 ಪಂದ್ಯಗಳ ಪೈಕಿ ಭಾರತ 70ರಲ್ಲಿ ಜಯ, 63ರಲ್ಲಿ ಸೋತಿದೆ. 2 ಪಂದ್ಯ ಟೈ, 4ರಲ್ಲಿ ಫಲಿತಾಂಶ ಬಂದಿಲ್ಲ. ಕೆರಿಬಿಯನ್ನಲ್ಲಿ ಉಭಯ ತಂಡಗಳು 42 ಪಂದ್ಯಗಳನ್ನಾಡಿದ್ದು, ಈ ಪೈಕಿ ಭಾರತ 19ರಲ್ಲಿ ಜಯ, 20ರಲ್ಲಿ ಸೋತಿದೆ.

3 ಪಂದ್ಯದಲ್ಲಿ ಫಲಿತಾಂಶ ಬಂದಿಲ್ಲ. ಭಾರತ-ವಿಂಡೀಸ್ ನಡುವಿನ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ 2,000ಕ್ಕೂ ಅಧಿಕ ರನ್ ಗಳಿಸಿದ ಭಾರತದ ಏಕೈಕ ಬ್ಯಾಟ್ಸ್ಮನ್ ಆಗಿದ್ದಾರೆ. ಸೂರ್ಯಕುಮಾರ್ ಯಾದವ್ ತನ್ನ ಏಕದಿನ ದಾಖಲೆಯನ್ನು ಉತ್ತಮಪಡಿಸಿಕೊಳ್ಳುವ ಉದ್ದೇಶ ಹೊಂದಿದ್ದರೆ, ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ವಿಕೆಟ್ಕೀಪರ್ ಸ್ಥಾನದಲ್ಲಿ ಕಾಣಿಸಿಕೊಳ್ಳಲು ಪೈಪೋಟಿ ನಡೆಸುತ್ತಿದ್ದಾರೆ.

ಭಾರತವು ವಿಂಡೀಸ್ ವಿರುದ್ಧ ಸರಣಿಯನ್ನು ಏಶ್ಯಕಪ್ಗೆ ಕೆಲವು ಆಟಗಾರರನ್ನು ಆಯ್ಕೆ ಮಾಡುವ ಮಾನದಂಡವಾಗಿ ಬಳಸಿಕೊಳ್ಳಲು ನಿರ್ಧರಿಸಿದೆ. 2 ಪಂದ್ಯಗಳ ಟೆಸ್ಟ್ ಸರಣಿಯಂತೆಯೇ ಏಕದಿನ ಸರಣಿಯಲ್ಲೂ ಭಾರತ ಪ್ರಾಬಲ್ಯ ಸಾಧಿಸಲು ಎದುರು ನೋಡುತ್ತಿದೆ. ಈ ಸರಣಿಯು ಸೂರ್ಯಕುಮಾರ್, ಇಶಾನ್, ಸ್ಯಾಮ್ಸನ್, ಯಜುವೇಂದ್ರ ಚಹಾಲ್ ಹಾಗೂ ಉಮ್ರಾನ್ ಮಲಿಕ್ಗೆ ಉತ್ತಮ ಅವಕಾಶವಾಗಿದೆ. ಸೂರ್ಯಕುಮಾರ್ಗೆ ತಮ್ಮ ಟಿ-20 ಫಾರ್ಮನ್ನು ಏಕದಿನ ಕ್ರಿಕೆಟ್ನಲ್ಲಿ ಪುನರಾವರ್ತಿಸಲು ಸಾಧ್ಯವಾಗಿಲ್ಲ. ಅವರು ಗಾಯಾಳು ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ 4ನೇ ಕ್ರಮಾಂಕದಲ್ಲಿ ಆಡುವ ವಿಶ್ವಾಸದಲ್ಲಿದ್ದಾರೆ.

ಕೆ.ಎಲ್.ರಾಹುಲ್ ಗಾಯಗೊಂಡಿರುವ ಕಾರಣ ವಿಕೆಟ್ಕೀಪರ್ ಸ್ಥಾನಕ್ಕಾಗಿ ಕಿಶನ್ ಹಾಗೂ ಸ್ಯಾಮ್ಸನ್ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ರಾಹುಲ್ ಅನುಪಸ್ಥಿತಿಯಲ್ಲಿ ಕಿಶನ್ ಹಾಗೂ ಸ್ಯಾಮ್ಸನ್ 2ನೇ ವಿಕೆಟ್ಕೀಪರ್ ಸ್ಥಾನ ವಶಪಡಿಸಿಕೊಳ್ಳುವ ಅವಕಾಶ ಪಡೆಯಲು ಪೈಪೋಟಿಯಲ್ಲಿದ್ದಾರೆ. ಏಕದಿನ ವಿಶ್ವಕಪ್ಗೆ ಅರ್ಹತೆ ಪಡೆಯಲು ವಿಫಲವಾಗಿರುವ ವೆಸ್ಟ್ಇಂಡೀಸ್ ತಂಡ ಈ ಸರಣಿಯಲ್ಲಿ ಉತ್ತಮ ಆರಂಭದ ನಿರೀಕ್ಷೆಯಲ್ಲಿದೆ.

ಶಿಮ್ರೆನ್ ಹೆಟ್ಮೆಯರ್ ಹಾಗೂ ಒಶಾನ್ ಥಾಮಸ್ ವಾಪಸಾಗಿದ್ದು, ತಂಡಕ್ಕೆ ಶಕ್ತಿ ನೀಡಿದೆ. ಈ ಇಬ್ಬರು 2021ರಲ್ಲಿ ಕೊನೆಯ ಬಾರಿ ಆಡಿದ್ದರು. ಅಲಿಕ್ ಅಥನಾಝ್ ಟೆಸ್ಟ್ ಸರಣಿಯಲ್ಲಿ ಭರವಸೆ ಮೂಡಿಸಿದ ಏಕೈಕ ಬ್ಯಾಟರ್ ಆಗಿದ್ದು, ಎಲ್ಲರ ಗಮನ ಇವರ ಮೇಲಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News