ಶಾಂತಿಯುತ ಹೋರಾಟವನ್ನೂ ಅಪಾಯವೆಂದು ಬಿಂಬಿಸುವ ಕುತಂತ್ರ!

Update: 2025-03-14 09:24 IST
Editor : Ismail | Byline : ಆಜಿತ್ ಕೆ.ಸಿ.
ಶಾಂತಿಯುತ ಹೋರಾಟವನ್ನೂ ಅಪಾಯವೆಂದು ಬಿಂಬಿಸುವ ಕುತಂತ್ರ!
  • whatsapp icon

ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಮಾರ್ಚ್ 17ರಂದು ದಿಲ್ಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ.

ಎನ್‌ಡಿಎ ಸರಕಾರದ ಪಕ್ಷಗಳು ಮಾತ್ರವಲ್ಲ, ಜಾತ್ಯತೀತ ರಾಜಕೀಯ ಪಕ್ಷಗಳ ಆತ್ಮಸಾಕ್ಷಿಯನ್ನೂ ಎಚ್ಚರಿಸುವುದು ಈ ಪ್ರತಿಭಟನೆಯ ಉದ್ದೇಶವಾಗಿದೆ ಎಂದು ಅದು ಹೇಳಿದೆ.

ಪ್ರತಿಭಟನೆಗೆ ಅನೇಕ ಸಂಸದರನ್ನು ಆಹ್ವಾನಿಸಲಾಗಿದೆ ಎಂದು ಮಂಡಳಿಯ ವಕ್ತಾರ ಸೈಯದ್ ಖಾಸಿಂ ರಸೂಲ್ ಇಲ್ಯಾಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಮಸೂದೆ ವಕ್ಫ್ ಆಸ್ತಿಗಳನ್ನು ಕಬಳಿಸಲು ದಾರಿ ಮಾಡಿಕೊಡುತ್ತದೆ ಮತ್ತು ಇದು ಮುಸ್ಲಿಮರ ಮೇಲಿನ ನೇರ ದಾಳಿ ಎಂದು ಮಂಡಳಿ ತೀರ್ಮಾನಿಸಿರುವುದಾಗಿ ಅವರು ಹೇಳಿದ್ದಾರೆ.

ಮಂಡಳಿಯ ಸಲಹೆಗಳನ್ನು ಸಂಸತ್ತಿನ ಜಂಟಿ ಸಮಿತಿ ಗಣನೆಗೆ ತೆಗೆದುಕೊಳ್ಳುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಅದು ನಮ್ಮ ಅಭಿಪ್ರಾಯವನ್ನು ಪರಿಗಣಿಸಿಲ್ಲ. ವಿಪಕ್ಷಗಳು ಪ್ರಸ್ತಾಪಿಸಿದ ತಿದ್ದುಪಡಿಗಳನ್ನೂ ಸೇರಿಸಿಲ್ಲ ಎಂದು ಇಲ್ಯಾಸ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹಿಂದೂಗಳು ಮತ್ತು ಸಿಖ್ಖರ ದತ್ತಿಗಳ ನಿರ್ವಹಣೆಯಲ್ಲಿ ಅಂತಹ ಯಾವುದೇ ನಿಬಂಧನೆ ಇಲ್ಲದಿರುವಾಗ ವಕ್ಫ್ ಮಂಡಳಿಗಳು ಮತ್ತು ಮಂಡಳಿಗಳಲ್ಲಿ ಮುಸ್ಲಿಮೇತರ ಸದಸ್ಯರನ್ನು ಸೇರಿಸುವುದು ತಾರತಮ್ಯ ಎಂದು ಅವರು ಹೇಳಿದ್ದಾರೆ.

ಐದು ಕೋಟಿ ಮುಸ್ಲಿಮರು ಮಸೂದೆ ವಿರುದ್ಧ ಜಂಟಿ ಸಮಿತಿಗೆ ಇಮೇಲ್‌ಗಳನ್ನು ಕಳುಹಿಸಿದ್ದರೂ ಮತ್ತು ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ, ಪ್ರಮುಖ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಮುಸ್ಲಿಮ್ ಸಂಘಟನೆಗಳು ಮತ್ತು ಪ್ರಮುಖ ವ್ಯಕ್ತಿಗಳ ಅಭಿಪ್ರಾಯದ ಹೊರತಾಗಿಯೂ, ಸರಕಾರ ತನ್ನ ನಿಲುವನ್ನು ಮರುಪರಿಶೀಲಿಸಲು ನಿರಾಕರಿಸಿದೆ. ಮಾತ್ರವಲ್ಲದೆ ಮಸೂದೆಯನ್ನು ಹೆಚ್ಚು ಕಠಿಣ ಮತ್ತು ವಿವಾದಾತ್ಮಕವಾಗಿಸಿದೆ ಎಂದು ಎಐಎಂಪಿಎಲ್‌ಬಿ ಪ್ರಧಾನ ಕಾರ್ಯದರ್ಶಿ ಮೌಲಾನಾ ಫಝ್ಲುರ‌್ರಹೀಂ ಮುಜದ್ದಿದಿ ಮತ್ತು ಇಲ್ಯಾಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ, ಯಾವುದೇ ಕಾನೂನು ಅಥವಾ ಮಸೂದೆಯನ್ನು ಸಾಮಾನ್ಯವಾಗಿ ಮೊದಲು ಅದರ ಭಾಗೀದಾರರೊಂದಿಗೆ ಚರ್ಚಿಸಲಾಗುತ್ತದೆ. ಆದರೆ ಈ ಸರಕಾರ ಮೊದಲಿನಿಂದಲೂ ಸರ್ವಾಧಿಕಾರಿ ವಿಧಾನವನ್ನೇ ಅನುಸರಿಸಿದೆ ಎಂದು ಅವರು ಟೀಕಿಸಿ ದ್ದಾರೆ. ಮಸೂದೆಯ ವಿರುದ್ಧ ರಾಷ್ಟ್ರವ್ಯಾಪಿ ಅಭಿಯಾನ ನಡೆಸುವುದಾಗಿ ಎಐಎಂಪಿಎಲ್‌ಬಿ ಹೇಳಿದೆ.

ಸರಕಾರವು ಸಾರ್ವಜನಿಕ ಆಕ್ರೋಶವನ್ನು ಹೇಗೆ ನಿರ್ವಹಿಸುತ್ತಿದೆ ಎಂಬುದರ ಬಗ್ಗೆ ಇತ್ತೀಚಿನ ಅನೇಕ ಉದಾಹರಣೆಗಳಿವೆ.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಗಳು ಮತ್ತು ರೈತರ ಹೋರಾಟ ಸರಕಾರದ ಪ್ರತಿಕ್ರಿಯೆಯ ಇತ್ತೀಚಿನ ಉದಾಹರಣೆಯಾಗಿವೆ. ಈ ಎರಡೂ ಪ್ರತಿಭಟನೆಗಳೂ ಪ್ರಭಾವಿ ರೀತಿಯಲ್ಲಿ ನಡೆಯಿತು, ಆದರೆ ಸರಕಾರವು ಆರಂಭದಲ್ಲಿ ಪ್ರತಿಭಟನಾಕಾರರನ್ನು ಕಡೆಗಣಿಸಿತು, ಆನಂತರ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿತು ಮತ್ತು ಕೊನೆಗೆ ರಾಜಕೀಯ ಲೆಕ್ಕಾಚಾರಗಳ ನಂತರ ಕೆಲವೊಂದಿಷ್ಟು ಬೇಡಿಕೆಗಳನ್ನು ಒಪ್ಪಿಕೊಳ್ಳಲಾಯಿತು.

ಇದರಿಂದ ಒಂದು ಪ್ರಶ್ನೆ ಉದ್ಭವಿಸುತ್ತದೆ? - ವಕ್ಫ್ ತಿದ್ದುಪಡಿ ಮಸೂದೆ ವಿರೋಧದ ಬಗ್ಗೆ ಕೂಡಾ ಮೋದಿ ಸರಕಾರ ಇದೇ ರೀತಿಯ ವಿಳಂಬ, ಆಮೇಲೆ ತಡೆಯುವ ಪ್ರಯತ್ನ ಮತ್ತು ಕೊನೆಗೆ ರಾಜಕೀಯ ಲೆಕ್ಕಾಚಾರ ನಡೆಸಬಹುದೇ?

ಮಸೂದೆ ವಿಪಕ್ಷಗಳ ತೀವ್ರ ಟೀಕೆಗೆ ಒಳಗಾದಾಗ 31 ಸದಸ್ಯರ ಜಂಟಿ ಸಮಿತಿ ರಚಿಸಲಾಯಿತು. ಆದರೆ ಅದು ಆಡಳಿತ ಪಕ್ಷದ ಸದಸ್ಯರ ಪ್ರಾಬಲ್ಯದಿಂದಾಗಿ ಮೇಲ್ನೋಟಕ್ಕಷ್ಟೇ ಮಾರ್ಪಾಡುಗಳನ್ನು ಮಾಡಿತು ಮತ್ತು ಮಸೂದೆಯನ್ನು ಮತ್ತಷ್ಟು ಬಿಗಿಗೊಳಿಸಿತು ಎಂದು ಎಐಎಂಪಿಎಲ್‌ಬಿ ಹೇಳಿದೆ.

ಜಂಟಿ ಸದನ ಸಮಿತಿಯ ಸ್ಥಾಪನೆಯು ಮಸೂದೆಗೆ ವಿರೋಧವನ್ನು ಕಡಿಮೆ ಮಾಡಲು ಮತ್ತು ಪ್ರತಿಭಟನಾಕಾರರನ್ನು ನಂಬಿಸಲು ಮಾಡಿದ ತಂತ್ರವೇ ಹೊರತು, ನಿಜವಾದ ಪರಿಷ್ಕರಣೆಗಾಗಿ ನಡೆಸಿದ ಪ್ರಾಮಾಣಿಕ ಪ್ರಯತ್ನವಲ್ಲ.

ಈ ಸಮಿತಿಯ ಸದಸ್ಯರ ಪೈಕಿ ಬಹುತೇಕರು ಆಡಳಿತ ಪಕ್ಷದವರೇ ಆಗಿರುವುದರಿಂದ, ಅದು ಸರಕಾರದ ಧೋರಣೆಗೇ ಅನುಗುಣವಾಗಿ ಕಾರ್ಯನಿರ್ವಹಿಸಿದ್ದು ಸ್ಪಷ್ಟ. ಈ ಸಮಿತಿ ಪ್ರತಿಪಕ್ಷಗಳು ಹೇಳಿರುವ ತಿದ್ದುಪಡಿ ಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿರುವುದರಿಂದ, ಇದು ಕೇವಲ ನಾಟಕೀಯ ಕ್ರಮವಾಗಿತ್ತು ಎಂಬ ಅನುಮಾನಗಳು ಹೆಚ್ಚು ಬಲಪಡುತ್ತವೆ.

ಸಮಿತಿ ಮುಸ್ಲಿಮ್ ಸಮುದಾಯದಿಂದ ಬಂದ ಆಕ್ಷೇಪಗಳು ಮತ್ತು ಸಲಹೆಗಳನ್ನು ಹಾಗೂ ಸಮಿತಿಯ ಭಾಗವಾಗಿದ್ದ ವಿರೋಧ ಪಕ್ಷದ ಸದಸ್ಯರು ಪ್ರಸ್ತಾಪಿಸಿದ 44 ತಿದ್ದುಪಡಿಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ ಎಂದು ಎಐಎಂಪಿಎಲ್‌ಬಿ ಹೇಳಿಕೆಯಲ್ಲಿ ತಿಳಿಸಿದೆ.

ಮುಸ್ಲಿಮ್ ಸಮುದಾಯದ ಪ್ರಮುಖ ವಿದ್ವಾಂಸರು, ಕಾನೂನು ತಜ್ಞರು ಮತ್ತು ಸಾಮಾಜಿಕ ನಾಯಕರು ಈ ಮಸೂದೆಗೆ ಸಂಬಂಧಿಸಿದಂತೆ ಏನೇ ಸಲಹೆ ನೀಡಿದರೂ, ಅವುಗಳನ್ನು ಕಡೆಗಣಿಸಲಾಗಿದೆ. ಇದು ಹಿಂದಿನ ತೀರ್ಮಾನಗಳಲ್ಲಿ ಮತ್ತು ಮಸೂದೆಗಳನ್ನು ರೂಪಿಸುವಾಗ ಕಂಡುಬರುವ ಸರಕಾರಿ ಧೋರಣೆಯ ಭಾಗವಾಗಿದೆ.

ಈ ಹಿಂದೆಯೂ ಹಲವಾರು ಮುಸ್ಲಿಮ್ ಕಾನೂನು ತಜ್ಞರು ಮತ್ತು ಹಕ್ಕು ಪರ ಸಂಘಟನೆಗಳು ಸಿಎಎ, ತ್ರಿವಳಿ ತಲಾಖ್ ತಿದ್ದುಪಡಿ ಮೊದಲಾದ ಮಸೂದೆಗಳನ್ನು ಸರಿಯಾದ ಸಮಾಲೋಚನೆ ಇಲ್ಲದೇ ಮಾಡಿರುವುದನ್ನು ಟೀಕಿಸಿದ್ದರು.

ಇದು ಮುಸ್ಲಿಮರ ಲಾಭಕ್ಕಾಗಿ ರಚಿಸಲಾದ ಕಾಯ್ದೆ ಎಂದು ಸರಕಾರ ಹೇಳುವುದು ಎಂತಹ ಮೂರ್ಖತನ. ಇಡೀ ಮುಸ್ಲಿಮ್ ಸಮುದಾಯ ತಮ್ಮ ಆಂತರಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಈ ಮಸೂದೆಯನ್ನು ವಿರೋಧಿಸುತ್ತಿದೆ.

ಎಐಎಂಪಿಎಲ್‌ಬಿ ನಿಯೋಗ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿ ಅವರ ಬೆಂಬಲ ಕೋರಿದೆ ಎಂದು ಅದರ ವಕ್ತಾರರು ತಿಳಿಸಿದ್ದಾರೆ.

ಟಿಡಿಪಿ, ಜೆಡಿಯು, ಆರ್‌ಎಲ್‌ಡಿ ಮತ್ತು ಎಲ್‌ಜೆಪಿ (ರಾಮ್‌ವಿಲಾಸ್) ಮಸೂದೆ ಬೆಂಬಲಿಸದಂತೆ ಎಐಎಂಪಿಎಲ್‌ಬಿ ಒತ್ತಾಯಿಸಿದೆ. ಆ ಪಕ್ಷಗಳು ಹಾಗೆ ಮಾಡದಿದ್ದರೆ ಮುಂದಿನ ಕ್ರಮವನ್ನು ನಾವು ನಿರ್ಧರಿಸಬೇಕಾಗುತ್ತದೆ ಎಂದು ಮುಜದ್ದಿದಿ ಹೇಳಿದ್ದಾರೆ.

ಜಾತ್ಯತೀತ ಪಕ್ಷಗಳು ಮುಸ್ಲಿಮ್ ಸಮುದಾಯದ ತೀವ್ರ ಆಕ್ರೋಶದ ಬೆನ್ನಿಗೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆಯೇ? ಇಲ್ಲವೇ, ಸಮುದಾಯದ ಕಳಕಳಿಗಳನ್ನು ನಿರ್ಲಕ್ಷಿಸಿ ರಾಜಕೀಯ ಲೆಕ್ಕಾಚಾರಗಳನ್ನಷ್ಟೇ ಗಮನಿಸುತ್ತವೆಯೇ?

ಮುಂದಿನ ಚುನಾವಣೆಗಳಲ್ಲಿ ಈ ಮಸೂದೆಗೆ ಬೆಂಬಲ ಕೊಟ್ಟ ಪಕ್ಷಗಳಿಗೆ ಮುಸ್ಲಿಮ್ ಮತದಾರರಿಂದ ತೀವ್ರ ಪ್ರತಿಕ್ರಿಯೆ ಬರಬಹುದೇ?

ಜಾತ್ಯತೀತ ಮತ್ತು ನ್ಯಾಯ ಪರ ಎಂದು ಹೇಳಿಕೊಳ್ಳುವ ಎನ್‌ಡಿಎ ಮಿತ್ರ ಪಕ್ಷಗಳು ಸಹ ಗಣನೀಯ ಮುಸ್ಲಿಮ್ ಮತಗಳನ್ನು ಪಡೆದಿದ್ದರೂ ಬಿಜೆಪಿಯ ಕೋಮುವಾದಿ ಕಾರ್ಯಸೂಚಿಯನ್ನು ಬೆಂಬಲಿಸುತ್ತಿರುವುದು ತೀವ್ರ ವಿಷಾದಕರ.

ಮುಸ್ಲಿಮ್ ಸಮುದಾಯ ಈ ವಕ್ಫ್ ತಿದ್ದುಪಡಿ ಮಸೂದೆಯನ್ನು ಸಮುದಾಯದ ಮೇಲಿನ ನೇರ ದಾಳಿ ಎಂದು ಪರಿಗಣಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ದೇಶಾದ್ಯಂತದ ಎಲ್ಲಾ ಧಾರ್ಮಿಕ ಮತ್ತು ಸಮುದಾಯ ಆಧರಿತ ಸಂಘಟನೆಗಳು ಮತ್ತು ನ್ಯಾಯ ಪ್ರಿಯ ನಾಗರಿಕರೊಂದಿಗೆ ಎಐಎಂಪಿಎಲ್‌ಬಿ ಮಾರ್ಚ್ 17ರಂದು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವ ಮೂಲಕ ತಮ್ಮ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಹಕ್ಕುಗಳನ್ನು ಚಲಾಯಿಸಲಿದೆ ಎಂದು ಅದು ಹೇಳಿದೆ.

ಆದರೆ ಅದರ ಈ ನಿರ್ಧಾರದ ಬೆನ್ನಲ್ಲೆ ಬರುತ್ತಿರುವ ಬೆದರಿಕೆಗಳು ಮಾತ್ರ ಆಘಾತಕಾರಿಯಾಗಿವೆ. ಈ ಪ್ರತಿಭಟನೆ ಜಲಿಯಾನ್ ವಾಲಾಬಾಗ್‌ನಂತಹ ಪರಿಸ್ಥಿತಿಗೆ ಕಾರಣವಾಗಬಹುದು ಎಂದು ಶಿವಸೇನಾ ನಾಯಕ ಸಂಜಯ್ ನಿರುಪಮ್ ಎಚ್ಚರಿಸಿದ್ದಾರೆ.

ಕೆಲ ಗುಂಪುಗಳು ಮತ್ತೊಂದು ಶಾಹೀನ್ ಬಾಗ್ ಮಾದರಿ ಚಳವಳಿಯ ಮಾತಾಡಿವೆ. ಆ ಮೂಲಕ ನಿರ್ದಿಷ್ಟ ಲಾಭಗಳನ್ನು ಹುಡುಕುತ್ತಿದ್ದರೆ, ಅದು ಜಲಿಯನ್ ವಾಲಾ ಬಾಗ್‌ನಂತಹ ಪರಿಸ್ಥಿತಿಗೆ ಕಾರಣವಾಗಬಹುದು ಎಂದು ಅವರಿಗೆ ಎಚ್ಚರಿಸಬೇಕಾಗಿದೆ ಎಂದು ಸಂಜಯ್ ನಿರುಪಮ್ ಹೇಳಿದ್ದಾರೆ.

ಅವರ ಈ ಹೇಳಿಕೆಯೇ ಒಂದು ಬೆದರಿಕೆಯಂತಿದೆ ಎಂಬುದನ್ನು ಗಮನಿಸಬೇಕು.

ಇಂತಹ ಕೋಮುವಾದಿ ರಾಜಕಾರಣಿಗಳು ಪ್ರತಿಭಟನಾಕಾರರನ್ನು ಬೆದರಿಸುವ ಉದ್ದೇಶದಿಂದ ಹಳೆಯ ಹಿಂಸಾತ್ಮಕ ಘಟನೆಗಳನ್ನು ಉಲ್ಲೇಖಿಸುತ್ತಿದ್ದಾರೆ.

ಆದರೆ, ಇದಕ್ಕೆ ಯಾವುದೇ ಆಧಾರವಿಲ್ಲ.

ಇದೇ ಸಂಜಯ್ ನಿರುಪಮ್ ಕೆಲವೇ ಸಮಯದ ಹಿಂದೆ ಕಾಂಗ್ರೆಸ್‌ನಲ್ಲಿದ್ದರು. ಈಗ ಮತ್ತೆ ಶಿವಸೇನೆಗೆ ಮರಳಿರುವ ನಿರುಪಮ್ ತಮ್ಮ ನಿಜವಾದ ಬಣ್ಣ ತೋರಿಸಿದ್ದಾರೆ.

ಶಾಹೀನ್‌ಬಾಗ್‌ನಂತಹ ಹೋರಾಟಗಳು ಸಂಪೂರ್ಣ ಶಾಂತಿಯುತವಾಗಿದ್ದರೂ, ಅವುಗಳನ್ನು ಕಾನೂನು ಮತ್ತು ಸುವ್ಯವಸ್ಥೆಗೆ ಅಪಾಯವೆಂದು ತೋರಿಸಲು ಸರಕಾರ ಯತ್ನಿಸಿತ್ತು. ಅದೇ ತಂತ್ರವನ್ನು ಈಗಲೂ ಬಳಸಲಾಗುತ್ತಿದೆ. ಇದು, ದೇಶದಲ್ಲಿ ಸಾಂವಿಧಾನಿಕ ಹಕ್ಕುಗಳ ದಮನಕ್ಕೆ ಇನ್ನೊಂದು ಉದಾಹರಣೆಯಾಗಿದೆ.

ಪ್ರತಿಭಟನೆಗಳನ್ನು ಅಪಾಯಕಾರಿ ಎಂದು ಚಿತ್ರಿಸುವ ಪ್ರಚಾರದ ಹಿಂದಿನ ಉದ್ದೇಶ, ಮಸೂದೆಯ ವಿರೋಧಿಗಳಿಗೆ ಭಯದ ವಾತಾವರಣ ಸೃಷ್ಟಿಸುವುದಾಗಿದೆ.

ಶಾಂತಿಯುತ ಹೋರಾಟಗಾರರನ್ನು ಅಪಾಯ ಎಂಬಂತೆ ಬಿಂಬಿಸುವ ಮೂಲಕ, ಸರಕಾರ ಮತ್ತು ಮಡಿಲ ಮಾಧ್ಯಮಗಳು ಪ್ರತಿಭಟನೆ ಮಾಡುವುದೇ ಅಪರಾಧ ಎಂಬಂತೆ ನರೇಟಿವ್ ಕಟ್ಟುತ್ತಿವೆ. ಇದನ್ನು ನಾವು ಸಿಎಎ ವಿರೋಧಿ ಪ್ರತಿಭಟನೆಗಳಿಂದಲೂ ನೋಡಿದ್ದೇವೆ. ಅಲ್ಲಿ ಪ್ರತಿಭಟನಾಕಾರರನ್ನು ದೇಶದ್ರೋಹಿಗಳೆಂದು ಬಿಂಬಿಸಲು ಇನ್ನಿಲ್ಲದಂತೆ ಪ್ರಯತ್ನಿಸಲಾಗಿತ್ತು.

ಪ್ರತಿಭಟನೆಗಳು ಸರಕಾರದ ಪ್ರಗತಿಗೆ ಅಡ್ಡಿಯಾಗು ತ್ತವೆ ಎಂಬ ನಿಲುವು, ಜನಾಂಗೀಯ ಅಥವಾ ಧಾರ್ಮಿಕ ಅಸಮಾನತೆಯನ್ನು ಮುಚ್ಚಿಡುವ ತಂತ್ರವಾಗಿದೆ.

ಹಿಂಸಾತ್ಮಕ ಪ್ರತಿಭಟನೆಗಳ ವಿರುದ್ಧ ಎಚ್ಚರಿಕೆ ನೀಡುವುದು ಸರಿ, ಆದರೆ ಶಾಂತಿಯುತ ಹೋರಾಟವನ್ನು ಕೂಡಾ ಅಪಾಯವೆಂದು ಬಿಂಬಿಸುವ ಈ ಹೊಸ ಕುತಂತ್ರವನ್ನು ಜನತೆ ಗುರುತಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆಜಿತ್ ಕೆ.ಸಿ.

contributor

Similar News