ಕರಿಮೆಣಸು ಕೊಯ್ಲು: ಜೀವಕ್ಕೆ ಆಪತ್ತು ತಂದೊಡ್ಡುತ್ತಿರುವ ಅಲ್ಯೂ ಮಿನಿಯಂ ಏಣಿ

Update: 2025-03-14 11:55 IST
ಕರಿಮೆಣಸು ಕೊಯ್ಲು: ಜೀವಕ್ಕೆ ಆಪತ್ತು ತಂದೊಡ್ಡುತ್ತಿರುವ ಅಲ್ಯೂ ಮಿನಿಯಂ ಏಣಿ
  • whatsapp icon

ಮಡಿಕೇರಿ: ಕೊಡಗು ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಕಾಫಿ ಕೊಯ್ಲು ಪೂರ್ಣಗೊಂಡಿದ್ದು, ಇದೀಗ ಬೆಳೆಗಾರರು ಕರಿಮೆಣಸು ಕೊಯ್ಲಿನತ್ತ ಮುಖ ಮಾಡಿದ್ದಾರೆ. ಜಿಲ್ಲೆಯಲ್ಲಿ ಮಾರ್ಚ್‌ನಿಂದ ಮೇವರೆಗೆ ಸಾಮಾನ್ಯವಾಗಿ ಕರಿಮೆಣಸು ಕೊಯ್ಲು ನಡೆಯುತ್ತಿರುತ್ತದೆ. ಏತನ್ಮಧ್ಯೆ ಕರಿಮೆಣಸು ಕೊಯ್ಲು ಮಾಡಲು ಬಳಸುವ ಅಲ್ಯೂಮಿನಿಯಂ ಏಣಿ ವಿದ್ಯುತ್ ತಂತಿಗೆ ಸ್ಪರ್ಶಿಸಿ ವರ್ಷಂಪ್ರತಿ ಕಾರ್ಮಿಕರು ಸಾವನ್ನಪ್ಪುತ್ತಿದ್ದಾರೆ.

ಕೊಡಗಿನಲ್ಲಿ ಕಳೆದ ಆರು ವರ್ಷಗಳಲ್ಲಿ ಕರಿಮೆಣಸು ಮತ್ತು ಇನ್ನಿತರ ಮರ ಕೆಲಸಗಳಿಗೆ ಅಲ್ಯೂಮಿನಿಯಂ ಏಣಿ ಬಳಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ಸ್ಪರ್ಶಿಸಿ 36ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಬಲಿಯಾಗಿದ್ದಾರೆ.

ಕರಿಮೆಣಸು ಕೊಯ್ಲು ಅವಧಿಯಲ್ಲಿ ಅಲ್ಯೂಮಿನಿಯಂ ಏಣಿ ಬಳಸುವಾಗ ಹಲವು ಬಾರಿ ಜಿಲ್ಲಾಡಳಿತ ಬೆಳೆಗಾರರಿಗೆ ಎಚ್ಚರಿಕೆ ನೀಡುತ್ತಾ ಬಂದಿದೆ. ಅಲ್ಲದೆ, ಜಿಲ್ಲೆಯಲ್ಲಿ ಅಲ್ಯೂಮಿನಿಯಂ ಏಣಿ ನಿಷೇಧ ಮಾಡಬೇಕೆಂಬ ಕೂಗು ಹಲವು ಬಾರಿ ಕೇಳಿ ಬಂದಿದೆ. ಆದರೂ ಅಲ್ಯೂಮಿನಿಯಂ ಏಣಿ ಬಳಕೆ ನಿಂತಿಲ್ಲ.

ತೋಟಗಳಿಂದ ಮಾಯವಾದ ಬಿದಿರಿನ ಏಣಿ: ಕೊಡಗು ಜಿಲ್ಲೆಯಲ್ಲಿ ಈ ಹಿಂದೆ ಸಾಮಾನ್ಯವಾಗಿ ಮರಗಳಲ್ಲಿ ಹಬ್ಬಿರುವ ಕರಿಮೆಣಸು ಫಸಲನ್ನು ಕೊಯ್ಲು ಮಾಡಲು ಬಿದಿರಿನ ಏಣಿಗಳನ್ನು ಬಳಸಿ ಕರಿಮೆಣಸು ಕೊಯ್ಲು ಮಾಡುತ್ತಿದ್ದರು. ಆದರೆ, ಕಳೆದ ಒಂದು ದಶಕಗಳಿಂದ ಜಿಲ್ಲೆಯ ಬಹುತೇಕ ಕಾಫಿ ತೋಟಗಳಲ್ಲಿ ಬಿದಿರಿನ ಏಣಿಗಳು ಸಂಪೂರ್ಣ ದೂರವಾಗುತ್ತಿದೆ.

ಅತೀ ಕಡಿಮೆ ತೂಕದ ಅಲ್ಯೂಮಿನಿಯಂ ಏಣಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟ ದಿನಗಳಿಂದ ಜಿಲ್ಲೆಯಲ್ಲಿ ಬಿದಿರಿನ ಏಣಿಗಳ ಬಳಕೆ ಕಡಿಮೆಯಾಗುತ್ತಾ ಬಂದಿದೆ. ವಿಶೇಷವಾಗಿ ಕಳೆದ ಐದು ವರ್ಷಗಳಿಂದ ಕರಿಮೆಣಸು ಕೊಯ್ಲು ಮಾಡಲು ಯಥೇಚ್ಛವಾಗಿ ಅಲ್ಯೂಮಿನಿಯಂ ಏಣಿಯನ್ನೇ ಬೆಳೆಗಾರರು ಬಳಸುತ್ತಿದ್ದಾರೆ. ಮತ್ತೊಂದೆಡೆ ಬಿದಿರಿನ ನಾಶದಿಂದ ಬಿದಿರಿನ ಏಣಿಗಳೂ ಸಿಗದೆ ಅನಿವಾರ್ಯವಾಗಿ ಬೆಳೆಗಾರರು ಅಲ್ಯೂಮಿನಿಯಂ ಏಣಿಗಳತ್ತ ಮುಖ ಮಾಡಿದ್ದಾರೆ. ಅಲ್ಯೂಮಿನಿಯಂ ಏಣಿಗಳನ್ನು ಇತ್ತೀಚಿನ ದಿನಗಳಲ್ಲಿ ಮರ ಕಪಾತ್ ಮಾಡಲೂ ಬಳಸುತ್ತಿದ್ದಾರೆ.

ಬಿದಿರಿನ ಏಣಿಗಳು ಹೆಚ್ಚಿನ ತೂಕ ಇರುವುದರಿಂದ ಕರಿಮೆಣಸು ಕೊಯ್ಲು ಸಂದರ್ಭದಲ್ಲಿ ಒಂದು ಬಳ್ಳಿಯಿಂದ ಮತ್ತೊಂದು ಕರಿಮೆಣಸು ಬಳ್ಳಿಗೆ ಸುಲಭದಲ್ಲಿ ಎತ್ತಿಕೊಂಡು ಹೋಗಲು ಕಷ್ಟಸಾಧ್ಯ. ಇದರ ನಡುವೆ ಮಾರುಕಟ್ಟೆಗೆ ಅಲ್ಯೂಮಿನಿಯಂ ಏಣಿಗಳು ಲಗ್ಗೆಯಿಟ್ಟ ದಿನಗಳಿಂದ ಬೆಳೆಗಾರರು ಕರಿಮೆಣಸು ಕೊಯ್ಲು ಮಾಡಲು ಅಲ್ಯೂಮಿನಿಯಂ ಏಣಿಗಳನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ.

ಅಮಾಯಕ ಕಾರ್ಮಿಕರು ಬಲಿ: ಕೊಡಗಿನ ಬಹುತೇಕ ತೋಟಗಳ ಮಧ್ಯದಲ್ಲಿ ವಿದ್ಯುತ್ ತಂತಿ ಹಾದು ಹೋಗಿದ್ದು, ಕರಿಮೆಣಸು, ಮರದ ಕೊಂಬೆಗಳನ್ನು ಕಡಿಯಲು ಅಲ್ಯೂಮಿನಿಯಂ ಏಣಿಗಳನ್ನು ಬಳಸುವಾಗ ವಿದ್ಯುತ್ ತಂತಿಗೆ ತಗಲಿ ಅಮಾಯಕ ಕಾರ್ಮಿಕರು ಬಲಿಯಾಗಿದ್ದಾರೆ. ಕೊಡಗಿನಲ್ಲಿ ಕಳೆದ ಆರು ವರ್ಷಗಳಲ್ಲಿ ಅಲ್ಯೂಮಿನಿಯಂ ಏಣಿ ಬಳಸುವಾಗ ವಿದ್ಯುತ್ ತಂತಿ ಸ್ಪರ್ಶಿಸಿ 36ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಬಲಿಯಾಗಿದ್ದಾರೆ. ಇದರಲ್ಲಿ ಹೊರ ಜಿಲ್ಲೆ ಮತ್ತು ಹೊರ ರಾಜ್ಯದ ಕಾರ್ಮಿಕರೂ ಮೃತಪಟ್ಟಿದ್ದಾರೆ.

ವಿದ್ಯುತ್ ತಂತಿ ಹಾದು ಗೋಗಿರುವ ಕಾಫಿ ತೋಟಗಳಲ್ಲಿ ಕರಿಮೆಣಸು ಕೊಯ್ಲು ಮಾಡುವ ಸಮಯದಲ್ಲಿ ಕಾರ್ಮಿಕರು ಎಚ್ಚರ ವಹಿಸದಿದ್ದರೆ ಜೀವಕ್ಕೆ ಆಪತ್ತು ಗ್ಯಾರಂಟಿಯಾಗಿದೆ. ಕಾಫಿತೋಟಗಳಲ್ಲಿ ಕರಿಮೆಣಸು, ಮರದ ಕೊಂಬೆಗಳನ್ನು ಕಡಿಯಲು ಅಲ್ಯೂಮಿನಿಯಂ ಏಣಿಗಳನ್ನು ಮತ್ತು ತೋಟಗಳಿಗೆ ನೀರು ಹಾಯಿಸಲು ಅಲ್ಯೂಮಿನಿಯಂ ಸ್ಪಿಂಕ್ಲರ್‌ಗಳನ್ನು ಬಳಸದೆ ಇದಕ್ಕೆ ಬದಲಾಗಿ ಫೈಬರ್ ಏಣಿಗಳನ್ನು ಮತ್ತು ಫೈಬರ್ ಪೈಪ್‌ಗಳನ್ನು ಬಳಸುವ ಅಗತ್ಯ ಎದುರಾಗಿದೆ. ಇಲ್ಲದಿದ್ದರೆ ವರ್ಷಪ್ರಂತೀ ಅಲ್ಯೂಮಿನಿಯಂ ಏಣಿ ಬಳಕೆಯಿಂದ ಜೀವ ಹಾನಿಯಾಗುವ ಸಾಧ್ಯತೆ ಇದೆ.

ತೋಟಗಳಲ್ಲಿ ವಿದ್ಯುತ್ ಲೈನ್‌ಗಳಿದ್ದು, ಅಲ್ಯೂಮಿನಿಯಂ ಏಣಿ ಬಳಸುವಾಗ ಎಚ್ಚರಿಕೆಯಿಂದ ಕರಿಮೆಣಸು ಕೊಯ್ಲು ಮಾಡುತ್ತಿದ್ದೇವೆ. ರಸ್ತೆ ಬದಿಗಳಲ್ಲಿ ವಿದ್ಯುತ್ ಲೈನ್ ಕಂಬಗಳು ಇರುವುದರಿಂದ ಅಲ್ಲಿಯೂ ಕರಿಮೆಣಸು ಕೊಯ್ಲು ಮಾಡುವಾಗ ಅತೀ ಎಚ್ಚರಿಕೆಯಿಂದ ಇರುತ್ತೇವೆ. ಹಿಂದೆ ಬಿದಿರಿನ ಏಣಿಗಳನ್ನು ಬಳಸಿ ನಾವು ಕಾಳುಮೆಣಸು ಕೊಯ್ಲು ಮಾಡುತ್ತಿದ್ದೆವು. ಆದರೆ, ಅಲ್ಯೂಮಿನಿಯಂ ಏಣಿಗಳು ಹಗುರವಾಗಿರುವುದರಿಂದ ಕರಿಮೆಣಸು ಕೊಯ್ಲು ಮಾಡುವಾಗ ಒಂದು ಬಳ್ಳಿಯಿಂದ ಮತ್ತೊಂದು ಬಳ್ಳಿಗೆ ಏಣಿ ಎತ್ತಿಕೊಂಡು ಹೋಗಲು ಸುಲಭವಾಗುತ್ತದೆ.

ಸರ್ದಾರ್, ಕರಿಮೆಣಸು ಕೊಯ್ಲು ಕಾರ್ಮಿಕ, ಅಸ್ಸಾಂ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಕೆ.ಎಂ. ಇಸ್ಮಾಯಿಲ್ ಕಂಡಕರೆ

contributor

Similar News