ಅಮೆರಿಕಾ ವೀಸಾ - ಗೊಂದಲಮಯ ಹೇಳಿಕೆಗಳು, ಕ್ರಮಗಳು

Update: 2025-03-15 14:08 IST
ಅಮೆರಿಕಾ ವೀಸಾ - ಗೊಂದಲಮಯ ಹೇಳಿಕೆಗಳು, ಕ್ರಮಗಳು

ಡೊನಾಲ್ಡ್ ಟ್ರಂಪ್‌ (Photo: PTI)

  • whatsapp icon

ಡೊನಾಲ್ಡ್ ಟ್ರಂಪ್ ಸರಕಾರ ಆಡಳಿತ ಚುಕ್ಕಾಣಿ ಹಿಡಿದ ದಿನದಿಂದಲೂ ಪ್ರತಿ ದಿನ ಒಂದಿಲ್ಲೊಂದು ಹೇಳಿಕೆಗಳು ಹಾಗೂ ನಿರ್ಧಾರಗಳ ಮೂಲಕ ಸುದ್ದಿಯಲ್ಲಿದೆ. ಅದರಲ್ಲಿಯೂ ವೀಸಾ ವಿಷಯದಲ್ಲಿ ಅಮೆರಿಕಾದ ಶಾಶ್ವತ ನಿವಾಸಿಗಳಲ್ಲಿ (permanent residents/green card holders) ಹಾಗೂ ವಿದ್ಯಾರ್ಥಿ ವೀಸಾದಲ್ಲಿ (student visa) ಇರುವವರಿಗೆ ಆತಂಕ ತಂದಿದೆ. ಇನ್ನು ಕೆಲಸದ H1B ವೀಸಾದಲ್ಲಿರುವವರಿಗೆ ಗ್ರೀನ್ ಕಾರ್ಡ್ ದೊರೆಯಲು ದಶಕಗಳೇ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಫೆಲಸ್ತೀನ್ ಮೂಲದ ಕೊಲಂಬಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಮಹಮೂದ್ ಖಲೀಲ್ ಅಮೆರಿಕಾದ ಗ್ರೀನ್ ಕಾರ್ಡ್ ಹೊಂದಿದ್ದರೂ ಇಸ್ರೇಲ್ ವಿರುದ್ಧ ಪ್ರತಿಭಟನೆ ಆಯೋಜಿಸಿದ ಆರೋಪದ ಮೇಲೆ ಮಾರ್ಚ್ 8ರ ರಾತ್ರಿ ನ್ಯೂಯಾರ್ಕ್ ನಲ್ಲಿ ಅವರನ್ನು ಬಂಧಿಸಿ ವಾಪಸು ಫೆಲಸ್ತೀನ್ ಗೆ ಗಡಿಪಾರು ಮಾಡಲು 1,300 ಮೈಲಿ ದೂರವಿರುವ ಲೂಯಿಸಾನ ರಾಜ್ಯಕ್ಕೆ ರಾತ್ರೊರಾತ್ರಿ ಸಾಗಿಸಲಾಯಿತು.

ಅಮೆರಿಕನ್ ಪ್ರಜೆಯಾದ ತನ್ನ 8 ತಿಂಗಳು ಗರ್ಭಿಣಿ ಪತ್ನಿಯೊಂದಿಗೆ ತನ್ನ ಕಾಲೇಜಿನ ಅಪಾರ್ಟ್ಮೆಂಟ್ ಒಳಗೆ ಖಲೀಲ್ ಹೋಗುವಾಗ ಪೊಲೀಸರು ಅವರನ್ನು ಬಂಧಿಸಲು ಪ್ರಯತ್ನಿಸಿದರು. ಖಲೀಲ್ ಪತ್ನಿ ತಕ್ಷಣ ಮನೆಯೊಳಗೆ ಹೋಗಿ ಅವರ ಗ್ರೀನ್ ಕಾರ್ಡ್ ತಂದು ತೋರಿಸಿದರೂ ಅವರನ್ನು ಬಂಧಿಸಲಾಯಿತು.

ತಕ್ಷಣ ಖಲೀಲ್ ನ ವಕೀಲರು ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ನ್ಯೂಯಾರ್ಕ್ ನಗರದ ಫೆಡೆರಲ್ ಕೋರ್ಟ್ ನಲ್ಲಿ ಸಲ್ಲಿಸಿದರು. ಮಾರ್ಚ್ 10ರಂದು ನ್ಯಾಯಾಲಯವು ಮಹಮೂದ್ ಖಲೀಲ್ ನನ್ನು ಅಮೆರಿಕಾದಿಂದ ವಾಪಸು ಫೆಲೆಸ್ತೀನ್ ಗೆ ಕಳುಹಿಸಬಾರದೆಂದು ತಡೆಯಾಜ್ಞೆ ನೀಡಿದೆ. ಆದರೂ ಖಲೀಲ್ ರನ್ನು ಬಂಧನದಿಂದ ಮುಕ್ತಿ ಮಾಡಬೇಕೊ ಇಲ್ಲವೊ ಎಂಬುದರ ಬಗ್ಗೆ ನ್ಯಾಯಾಧೀಶರು ಇನ್ನೂ ತೀರ್ಮಾನ ನೀಡಿಲ್ಲದ ಕಾರಣ ಖಲೀಲ್ ಬಂಧನದಲ್ಲೇ ಮುಂದುವರೆದಿದ್ದಾನೆ.

ಈ ಬೆಳವಣಿಗೆಯ ನಂತರ ಅಮೆರಿಕಾದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಹೇಳಿಕೆ ನೀಡಿ ಅಮೆರಿಕಾದ ಗ್ರೀನ್ ಕಾರ್ಡ್(ಶಾಶ್ವತ ನಿವಾಸ) ಹೊಂದಿದ್ದರೂ ಇನ್ನು ಮುಂದೆ ಟ್ರಂಪ್ ಸರಕಾರದಲ್ಲಿ ದೇಶದ ಭದ್ರತೆಯ ಆಧಾರದ ಮೇಲೆ ಯಾರನ್ನು ಬೇಕಾದರೂ ವಾಪಸು ಅವರ ಮೂಲ ದೇಶಕ್ಕೆ ಗಡಿಪಾರು ಮಾಡುತ್ತೇವೆಂದಿದ್ದಾರೆ. ಗ್ರೀನ್ ಕಾರ್ಡ್ ಇದ್ದರೂ ಅವರಿಗೆ ಯಾವುದೇ ರೀತಿಯ ಸಂರಕ್ಷಣೆಯ ಹಕ್ಕು ಇಲ್ಲವೆಂದಿದ್ದಾರೆ. ಇಲ್ಲಿಯವರೆಗೂ ಇದ್ದ ಗ್ರೀನ್ ಕಾರ್ಡ್ ಸುರಕ್ಷತೆ ಇನ್ನು ಅಮೆರಿಕಾದಲ್ಲಿ ಅಪಾಯದಲ್ಲಿದೆ.

ಹಲವಾರು ತಜ್ಞರು ಹಾಗೂ ರಾಜಕೀಯ ಪಂಡಿತರು ಈ ನೀತಿಯು ಹೀಗೇ ಮುಂದುವರೆದರೆ ಬೇರೆ ರಾಷ್ಟ್ರಗಳಿಂದ ವಲಸೆ ಬಂದು, ಹಲವಾರು ವರ್ಷ ನೆಲೆಸಿ ಅಮೆರಿಕಾ ಪ್ರಜೆಗಳಾಗಿ ಟ್ರಂಪ್ ನೀತಿಗಳನ್ನು ವಿರೋಧಿಸುವವರ ಮೇಲೂ ಕ್ರಮ ಕೈಗೊಳ್ಳಬಹುದೆಂಬ ಆತಂಕ ವ್ಯಕ್ತಪಡಿಸಿದ್ದಾರೆ.

ವಿದೇಶಾಂಗ ಸಚಿವ ಮಾರ್ಕೊ ರೂಬಿಯೊ ಮತ್ತೊಂದು ಹೇಳಿಕೆ ನೀಡಿ, ವಿದ್ಯಾರ್ಥಿ ವೀಸಾ ಮೇಲಿರುವ ವಿದ್ಯಾರ್ಥಿಗಳು ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸಿದರೆ ಅವರನ್ನು ವಾಪಸು ಅವರ ಮೂಲ ರಾಷ್ಟ್ರಕ್ಕೆ ಕಳುಹಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಬರುವ ದಿನಗಳಲ್ಲಿ ಇಂತಹವರ ಸಂಖ್ಯೆ ಇನ್ನೂ ಹೆಚ್ಚಲಿದೆ ಎಂದು ಹೇಳಿದ್ದಾರೆ.

ಟ್ರಂಪ್ ಅಧಿಕಾರ ವಹಿಸಿದ ನಂತರ ಭಾರತೀಯರ ಸಹಿತ ಸಾವಿರಾರು ಅಕ್ರಮ ವಲಸಿಗರಿಗೆ ಕಬ್ಬಿಣದ ಸಂಕೋಲೆಗಳನ್ನು ತೊಡಿಸಿ ಮಿಲಿಟರಿ ವಿಮಾನಗಳಲ್ಲಿ ಅವರ ದೇಶಕ್ಕೆ ಹಿಂದಿರುಗಿಸಿದ್ದು ಇಲ್ಲಿ ನೆನಪಿಸಿಕೊಳ್ಳಬಹುದು.

ಇಷ್ಟೇ ಅಲ್ಲದೆ ಅಮೇರಿಕಾಗೆ ತಮ್ಮ ಕಾರ್ಯಕ್ರಮ ನೀಡಲು ಬರುವ ಅಂತರಾಷ್ಟ್ರೀಯ ಕಲಾವಿದರ ವೀಸಾ ದರವನ್ನು ಹೆಚ್ಚಿಸಿರುವುದರಿಂದ ಅಮೆರಿಕಕ್ಕೆ ಬರುವ ಕಲಾವಿದರ ಸಂಖ್ಯೆ ಕೂಡ ಕಡಿಮೆಯಾಗುತ್ತಿದೆ. ಅಲ್ಲದೆ, ಕಲಾವಿದರಿಗೆ ವೀಸಾ ನೀಡುವ ಸಮಯವೂ ವಿಳಂಬವಾಗುತ್ತಿದೆ. ಸಂಗೀತಗಾರರ ವೀಸಾ ದರ $460 ರಿಂದ $1615 ಕ್ಕೆ ಏರಿಸಲಾಗಿದೆ. ಹೆಚ್ಚಿದ ಈ ಹಣ ಪಾವತಿಸಿದರೂ ಸಹ ಸಮಯಕ್ಕೆ ಸರಿಯಾಗಿ ಸಂಗೀತಗಾರರಿಗೆ ವೀಸಾ ಸಿಗುತ್ತಿಲ್ಲ. ಈ ವೀಸಾ ಪ್ರಕ್ರಿಯೆ ಏನಾದರೂ ವೇಗವಾಗಿಸಬೇಕೆಂದರೆ, $1615 ರ ಮೇಲೆ ಮತ್ತೆ $2,800 ಪಾವತಿಸಬೇಕಾಗುತ್ತದೆ! ಇಷ್ಟು ಹಣ ಪಾವತಿಸಿ ಸಣ್ಣ ಹಾಗೂ ಮಧ್ಯಮ ಸ್ಥರದ ಕಲಾವಿದರು ಅಮೆರಿಕಾ ಪ್ರವಾಸ ಮಾಡಲು ಇನ್ನು ಮಂದೆ ಸಾಧ್ಯವಾಗುವುದಿಲ್ಲ.

ಇದಲ್ಲದೆ, ಟ್ರಂಪ್ ಅಧಿಕಾರ ಸ್ವೀಕರಿಸಿದ ದಿನ ಇನ್ನು ಮಂದೆ ಅಮೆರಿಕಾದಲ್ಲಿ ಎರಡೇ ಲಿಂಗಗಳನ್ನು - ಗಂಡು, ಹೆಣ್ಣು - ಗುರುತಿಸಲಾಗುವುದೆಂದು ಆಜ್ಞೆ ಮಾಡಿದರು. ಇದರಿಂದ, ತಮ್ಮನ್ನು ತೃತೀಯ ಲಿಂಗವೆಂದು ಗುರಿತಿಸಿ ಪಾಸ್ ಪೋರ್ಟ್ ನಲ್ಲಿ ಬರೆಸಿಕೊಂಡವರು ಇನ್ನು ಮುಂದೆ ಅಮೆರಿಕಾದ ಒಳಗೆ ಬರುವುದಾಗಲಿ ಅಥವಾ ಹೊರಗೆ ಹೋಗುವುದಾಗಲಿ ಸಮಸ್ಯೆ ಸೃಷ್ಟಿಸಲಿದೆ.

ಇದೆಲ್ಲವನ್ನೂ ನೋಡುವಾಗ ಟ್ರಂಪ್ ಹಾಗೂ ಅವರ ಬಲಪಂಥೀಯ ಭಟ್ಟಂಗಿಗಳ ಹೇಳಿಕೆಗಳು ಹಾಗೂ ತಿಕ್ಕಲು ಕ್ರಮಗಳು ಅನಿವಾಸಿಗಳಲ್ಲಿ ಆತಂಕ ಹಾಗೂ ಗಾಬರಿಯನ್ನು ಸೃಷ್ಟಿಸುತ್ತಿದೆ.

ಅಮೆರಿಕಾದಲ್ಲಿ ಸುಮಾರು 7 ಲಕ್ಷ 25 ಸಾವಿರ ಅಕ್ರಮ ಭಾರತೀಯ ವಲಸೆಗಾರರು ಹಾಗೂ ಅತಿ ಹೆಚ್ಚು H1B ಕೆಲಸದ ವೀಸಾ ಹೊಂದಿರುವ ಭಾರತೀಯ ಟೆಕ್ಕಿಗಳು ಮತ್ತು ಸುಮಾರು 4 ಲಕ್ಷ ಭಾರತೀಯ ಮೂಲದ ವಿದ್ಯಾರ್ಥಿಗಳ ಮೇಲೆ ಟ್ರಂಪ್ ಸರಕಾರದ ಈ ಕ್ರಮಗಳು ಹಾಗೂ ಹೇಳಿಕೆಗಳು ಏನು ಪರಿಣಾಮ ಬೀರಬಹುದೆಂದು ಕಾದು ನೋಡಬೇಕಾಗಿದೆ. ಈ ಎಲ್ಲಾ ಪರಿಣಾಮಗಳನ್ನು ಪರಿಗಣಿಸಿ ಭಾರತ ಸರಕಾರದ ವಿದೇಶಾಂಗ ಸಚಿವಾಲಯ ಯಾವ ರೀತಿಯ ಮುಂಜಾಗ್ರತಾ ನೀತಿಗಳನ್ನು ರೂಪಿಸುತ್ತದೆಂದು ಮುಂದಿನ ದಿನಗಳಲ್ಲಿ ಕಾಯ್ದು ನೋಡಬೇಕು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ಕೆ. ಆರ್. ಶ್ರೀನಾಥ್, ಅಟ್ಲಾಂಟ

contributor

Similar News