ಕ್ಷೇತ್ರ ಪುನರ್ವಿಂಗಡಣೆ ಚರ್ಚೆಯನ್ನು ಒಕ್ಕೂಟ ವ್ಯವಸ್ಥೆಯ ರಾಷ್ಟ್ರೀಯ ಹೋರಾಟವಾಗಿ ಬದಲಿಸಿದ್ದಾರೆಯೇ ಎಂ.ಕೆ. ಸ್ಟಾಲಿನ್?

Update: 2025-03-16 09:49 IST
ಕ್ಷೇತ್ರ ಪುನರ್ವಿಂಗಡಣೆ ಚರ್ಚೆಯನ್ನು ಒಕ್ಕೂಟ ವ್ಯವಸ್ಥೆಯ ರಾಷ್ಟ್ರೀಯ ಹೋರಾಟವಾಗಿ ಬದಲಿಸಿದ್ದಾರೆಯೇ ಎಂ.ಕೆ. ಸ್ಟಾಲಿನ್?
  • whatsapp icon

ಕ್ಷೇತ್ರ ಪುನರ್ವಿಂಗಡಣೆ ವಿರುದ್ಧದ ಸಮ್ಮೇಳನಕ್ಕೆ ಈಗಾಗಲೇ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಪ್ರಮುಖ ವಿರೋಧ ಪಕ್ಷಗಳ ನಾಯಕರು ಚೆನ್ನೈ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.

ಅದರಿಂದಾಗಿ, ಈ ಸಮ್ಮೇಳನ ಭಾರತದ ಒಕ್ಕೂಟ ರಚನೆಗಾಗಿ ನಡೆಯುತ್ತಿರುವ ದೊಡ್ಡ ರಾಷ್ಟ್ರೀಯ ಆಂದೋಲನವಾಗಿ ಗಮನ ಸೆಳೆಯಲಿದೆ ಎಂಬುದು ಸ್ಪಷ್ಟವಾಗುತ್ತಿದೆ.

ಈ ವಿಷಯದಲ್ಲಿ ಸ್ಟಾಲಿನ್ ಅವರ ಬದ್ಧತೆ, ಖಡಕ್ ನಿಲುವು ಹಾಗೂ ಅದಕ್ಕೆ ವ್ಯಕ್ತವಾಗುತ್ತಿರುವ ವ್ಯಾಪಕ ಬೆಂಬಲ ಬಿಜೆಪಿಗೆ ಮುಂದೊಂದು ದಿನ ರಾಜಕೀಯವಾಗಿಯೂ ತಲೆನೋವಾಗುವ ಸಾಧ್ಯತೆ ಇಲ್ಲದಿಲ್ಲ

ಕ್ಷೇತ್ರ ಪುನರ್ವಿಂಗಡಣೆಯ ವಿರುದ್ಧ ಮಾರ್ಚ್ 22ರಂದು ಚೆನ್ನೈನಲ್ಲಿ ಸಭೆ ನಡೆಯುತ್ತಿದೆ.

ಸಭೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಏಳು ರಾಜ್ಯಗಳ ನಾಯಕರನ್ನು ಆಹ್ವಾನಿಸಿದ್ದಾರೆ. ಇದರೊಂದಿಗೆ ಅವರು ಮತ್ತೊಮ್ಮೆ ರಾಷ್ಟ್ರ ರಾಜಕಾರಣದಲ್ಲಿ ಗಮನ ಸೆಳೆಯುತ್ತಿದ್ದಾರೆ.

ಈಗಾಗಲೇ ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತೆಲಂಗಾಣ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಪಂಜಾಬ್ ಮುಖ್ಯಮಂತ್ರಿಗಳು ಮತ್ತು ರಾಜಕೀಯ ನಾಯಕರನ್ನು ಸ್ಟಾಲಿನ್ ಸಂಪರ್ಕಿಸಿದ್ದಾರೆ.

ಕ್ಷೇತ್ರ ಪುನರ್ವಿಂಗಡಣೆಯಿಂದ ಲೋಕಸಭೆಯಲ್ಲಿ ದಕ್ಷಿಣ ರಾಜ್ಯಗಳ ಪ್ರಾತಿನಿಧ್ಯಕ್ಕೆ ಇರುವ ಸಂಭಾವ್ಯ ಬೆದರಿಕೆಯ ಬಗ್ಗೆ ಅವರು ಒತ್ತಿ ಹೇಳಿದ್ದಾರೆ.

ಸಂಸತ್ತಿನಲ್ಲಿ ಈ ವಿಷಯ ಪ್ರಸ್ತಾವಿಸಲು ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಮತ್ತಿತರ ಸಮಾನ ಮನಸ್ಕ ಸಂಸದರೊಂದಿಗೆ ಜೊತೆಯಾಗುವುದಕ್ಕೆ ಕೂಡ ಇತ್ತೀಚಿನ ಸಭೆಯಲ್ಲಿ ಡಿಎಂಕೆ ಸಂಸದರು ನಿರ್ಧರಿಸಿದ್ದಾರೆ.

ಜನಸಂಖ್ಯೆ ಆಧರಿತ ಕ್ಷೇತ್ರ ಪುನರ್ವಿಂಗಡಣೆ ತಮಿಳುನಾಡು ಮತ್ತಿತರ ದಕ್ಷಿಣ ರಾಜ್ಯಗಳ ಮೇಲೆ ಏನು ಪರಿಣಾಮ ಬೀರಲಿದೆ ಎಂಬುದು ಪ್ರಶ್ನೆಯಾಗಿದೆ. ಈ ಕುರಿತು ಚರ್ಚಿಸಲು ಮಾರ್ಚ್ 5ರಂದು ಸ್ಟಾಲಿನ್ ಸರ್ವಪಕ್ಷ ಸಭೆ ಕರೆದಿದ್ದರು. ಅದಾದ ಬಳಿಕ ಕ್ಷೇತ್ರ ಪುನರ್ವಿಂಗಡಣೆ ವಿರುದ್ಧ ಪ್ರತಿಭಟನೆಗಳನ್ನು ನಡೆಸಲು ಮತ್ತು ಜಾಗೃತಿ ಮೂಡಿಸಲು ಜಂಟಿ ಕ್ರಿಯಾ ಸಮಿತಿ ರಚಿಸಲಾಯಿತು.

2026ರ ಕ್ಷೇತ್ರ ವಿಂಗಡಣೆ ದಕ್ಷಿಣದ ರಾಜ್ಯಗಳಲ್ಲಿ, ಅದರಲ್ಲೂ ತಮಿಳುನಾಡು, ಕೇರಳ ಮತ್ತು ಕರ್ನಾಟಕದಲ್ಲಿ ಕಳವಳಕ್ಕೆ ಕಾರಣವಾಗಿದೆ.

ಈ ರಾಜ್ಯಗಳು ಜನಸಂಖ್ಯಾ ನಿಯಂತ್ರಣ ನೀತಿಯಲ್ಲಿ ಯಶಸ್ಸು ಸಾಧಿಸಿವೆ. ಹಾಗಾಗಿ ಇದರ ಪರಿಣಾಮವಾಗಿ, ಸಂಸದೀಯ ಪ್ರಾತಿನಿಧ್ಯ ನಷ್ಟವಾಗಬಹುದೆಂಬ ಆತಂಕ ತಲೆದೋರಿದೆ.

ಆದರೆ ಉತ್ತರದ ರಾಜ್ಯಗಳ ಸನ್ನಿವೇಶ ಇದಕ್ಕೆ ತದ್ವಿರುದ್ಧ.

ಜನಸಂಖ್ಯೆ ಹೆಚ್ಚಿರುವ ಉತ್ತರದ ರಾಜ್ಯಗಳು ಹೆಚ್ಚುವರಿ ಸಂಸತ್ ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ. ಹಾಗಾದಾಗ, ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂಬುದು ಸ್ಟಾಲಿನ್ ವಾದ.

ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಯೋಜನೆಯಲ್ಲಿ ಸಾಧನೆ ಮಾಡಿರುವ ಈ ರಾಜ್ಯಗಳಿಗೆ ಇದು ಶಿಕ್ಷೆಯಂತಾಗಲಿದೆ ಎಂಬುದು ನಿಜ. ಆದರೆ ಜನಸಂಖ್ಯಾ ಬೆಳವಣಿಗೆ ತಡೆಯುವಲ್ಲಿ ವಿಫಲವಾದ ರಾಜ್ಯಗಳಿಗೆ ರಾಜಕೀಯ ಲಾಭ ಸಿಗಲಿದೆ.

ಕ್ಷೇತ್ರ ಪುನರ್ವಿಂಗಡಣೆಗೆ ಮುಂದಾಗಿರುವ ಬಿಜೆಪಿ, ಅದನ್ನು ಸಾಂವಿಧಾನಿಕ ಅವಶ್ಯಕತೆ ಎಂದು ಸಮರ್ಥಿಸಿಕೊಂಡಿದೆ. ಮಾತ್ರವಲ್ಲ, ಅದರಿಂದ ಯಾವುದೇ ಸ್ಥಾನ ನಷ್ಟವಾಗುವುದಿಲ್ಲ ಎಂತಲೂ ಹೇಳುತ್ತಿದೆ.

ಆದರೆ, ತನಗೆ ಬೇಕಾದಂತೆ ರಾಜಕೀಯ ಸನ್ನಿವೇಶವನ್ನು ಬದಲಿಸಿಕೊಳ್ಳಲು ಬಿಜೆಪಿ ಈ ಕ್ಷೇತ್ರ ಪುನರ್ವಿಂಗಡಣೆಯನ್ನು ಬಳಸಿಕೊಳ್ಳುತ್ತಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಜನಗಣತಿ ಆಧಾರದ ಮೇಲೆ ಮುಂದಿನ ವರ್ಷ ನಡೆಯಲಿರುವ ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣ ಭಾರತದಲ್ಲಿ ಒಂದೇ ಒಂದು ಲೋಕಸಭೆ ಸೀಟೂ ಕಡಿಮೆಯಾಗುವುದಿಲ್ಲ ಎಂಬ ಸ್ಪಷ್ಟನೆಯನ್ನು ಅಮಿತ್ ಶಾ ಕೊಟ್ಟಿದ್ದಾರೆ.

ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಒಕ್ಕೂಟ ವ್ಯವಸ್ಥೆಯನ್ನು ಎತ್ತಿ ಹಿಡಿಯಲು ಪಾರದರ್ಶಕತೆ ಹಾಗೂ ನ್ಯಾಯೋಚಿತವಾಗಿ ನಡೆಯಲಿದೆ ಎಂದೆಲ್ಲ ದೊಡ್ಡ ದೊಡ್ಡ ಪದಗಳನ್ನು ಬಳಸಿ ಅಮಿತ್ ಶಾ ಭರವಸೆ ಕೊಟ್ಟಿದ್ದಾರೆ.

ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಕ್ಷೇತ್ರ ಮರುವಿಂಗಡಣೆ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿ ಮಾತಾಡಿದ ಬೆನ್ನಲ್ಲೇ ಅಮಿತ್ ಶಾ ಸ್ಪಷ್ಟನೆ ಬಂದಿತ್ತು.

ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ಮರುವಿಂಗಡಣೆ ನಡೆಸಿದರೆ 39 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ತಮಿಳುನಾಡು 8 ಕ್ಷೇತ್ರಗಳನ್ನು ಕಳೆದುಕೊಳ್ಳಲಿದೆ ಎಂದು ಸ್ಟಾಲಿನ್ ಆತಂಕ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಈ ಸ್ಪಷ್ಟನೆ ನೀಡಿದ್ದಾರೆ. ಆದರೆ, ತಮಿಳುನಾಡು ಇದನ್ನೆಲ್ಲ ನಂಬಿಕೊಂಡು ಕೂರುವುದಿಲ್ಲ.

ಇದೇ ವೇಳೆ, ಕ್ಷೇತ್ರ ವಿಂಗಡಣೆ ಆಯೋಗದಲ್ಲಿ ಹೆಚ್ಚಿನ ಸದಸ್ಯರು ಬಿಜೆಪಿಯ ಬೆಂಬಲಿಗರಾಗಿರುತ್ತಾರೆ ಎಂದು ಸ್ಪಷ್ಟವಾಗಿ ಊಹಿಸಬಹುದು. ಅಂಥವರು ಎಂಥ ಶಿಫಾರಸುಗಳನ್ನು ಮಾಡಬಲ್ಲರು ಎಂದು ಗ್ರಹಿಸುವುದು ಕೂಡ ಕಷ್ಟವಲ್ಲ.

ತಮಿಳುನಾಡು ಪ್ರಸಕ್ತ 39 ಲೋಕಸಭಾ ಸ್ಥಾನಗಳನ್ನು ಹೊಂದಿದೆ. ಆದರೆ ಕ್ಷೇತ್ರ ಪುನರ್ವಿಂಗಡಣೆ ಬಳಿಕ ಈ ಸಂಖ್ಯೆ ಕಡಿಮೆಯಾಗಬಹುದು ಎಂದು ತಜ್ಞರು ಹೇಳಿದ್ದಾರೆ.

ಸ್ಟಾಲಿನ್ ಇದನ್ನು ಒಕ್ಕೂಟ ವ್ಯವಸ್ಥೆಯ ಮೇಲಿನ ನೇರ ದಾಳಿ ಎಂದಿದ್ದಾರೆ. ಬಿಜೆಪಿ ಉದ್ದೇಶಿಸಿರುವ ರೀತಿಯ ಕ್ಷೇತ್ರ ಪುನರ್ವಿಂಗಡಣೆಯಿಂದ ಭಾರತದ ರಾಜಕೀಯ ಸನ್ನಿವೇಶವೇ ಪೂರ್ತಿಯಾಗಿ ಬದಲಾಗಿ ಹೋಗಬಹುದು ಎಂಬುದು ಅವರ ಆತಂಕ. ಹಾಗಾದಾಗ, ರಾಷ್ಟ್ರೀಯ ನಿರ್ಧಾರ ತೆಗೆದುಕೊಳ್ಳುವಿಕೆಯಲ್ಲಿ ದಕ್ಷಿಣ ರಾಜ್ಯಗಳ ಪ್ರಭಾವ ಕಡಿಮೆಯಾದೀತು ಎಂದು ಸ್ಟಾಲಿನ್ ಎಚ್ಚರಿಸಿದ್ದಾರೆ.

ಈ ಬಗೆಯ ಕ್ಷೇತ್ರ ಪುನರ್ವಿಂಗಡಣೆ ಎಲ್ಲ ಅಧಿಕಾರವನ್ನು ಉತ್ತರದ ರಾಜ್ಯಗಳ ಕೈಯಲ್ಲಿ ಇಟ್ಟುಬಿಡುತ್ತದೆ. ಪ್ರಮುಖ ವಿಷಯಗಳಲ್ಲಿ ದಕ್ಷಿಣದ ರಾಜ್ಯಗಳಿಗೆ ಧ್ವನಿಯೇ ಇಲ್ಲದಂತಾಗುತ್ತದೆ.

ಬಿಜೆಪಿ ಎಲ್ಲವನ್ನೂ ಯಾವ ಮುಚ್ಚು ಮರೆಯಿಲ್ಲದೆ ಹೇಳುತ್ತಿಲ್ಲ ಎಂಬುದೇ ಸಮಸ್ಯೆ.

ಕ್ಷೇತ್ರ ಪುನರ್ವಿಂಗಡಣೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದು ಸಹ ಕಷ್ಟಕರವಾಗಿರುತ್ತದೆ.

ಈಗ ತಮಿಳುನಾಡು ಈ ವಿಚಾರವಾಗಿ ರಾಷ್ಟ್ರೀಯ ಮಟ್ಟದಲ್ಲಿ ನಾಯಕರ ಬೆಂಬಲ ಪಡೆಯಲು ಸಾಧ್ಯವಾದರೆ, ಬಿಜೆಪಿ ವಿರುದ್ಧ ಗಟ್ಟಿ ಧ್ವನಿ ಸಾಧ್ಯವಾಗಬಹುದು. ಆಗ ಬಿಜೆಪಿ ಎಲ್ಲವನ್ನೂ ಸ್ಪಷ್ಟವಾಗಿ ಹೇಳುವುದು ಅನಿವಾರ್ಯವಾಗಬಹುದು.

ರಾಜ್ಯದ ಸ್ವಾಯತ್ತತೆಗೆ ಧಕ್ಕೆ ತರುವ ಯಾವುದೇ ನೀತಿಗಳನ್ನು ಡಿಎಂಕೆ ಯಾವತ್ತಿಂದಲೂ ವಿರೋಧಿಸುತ್ತಲೇ ಬಂದಿದೆ.

ಎನ್‌ಇಪಿ ವಿರುದ್ಧವೂ ತಮಿಳುನಾಡು ನಿಂತಿದೆ. ಶಿಕ್ಷಣದಲ್ಲಿ ರಾಜ್ಯದ ಹಕ್ಕುಗಳ ಮೇಲಿನ ಅತಿಕ್ರಮಣ ಅದೆಂದು ತಮಿಳುನಾಡು ಹೇಳಿದೆ. ಡಿಎಂಕೆ ಸರಕಾರ ಎನ್‌ಇಪಿ ಜಾರಿಗೆ ತರಲು ಸ್ಪಷ್ಟವಾಗಿ ನಿರಾಕರಿಸಿದೆ. ಅದು ಹಿಂದಿಯನ್ನು ಸೂಕ್ಷ್ಮವಾಗಿ ಉತ್ತೇಜಿಸುತ್ತದೆ ಮತ್ತು ಪಠ್ಯಕ್ರಮದಲ್ಲಿ ರಾಜ್ಯದ ಸ್ವಾಯತ್ತತೆಯನ್ನು ಕಸಿಯುತ್ತದೆ. ಆ ಮೂಲಕ ತಮಿಳುನಾಡಿನ ದ್ವಿಭಾಷಾ ನೀತಿಯನ್ನು ಎನ್‌ಇಪಿ ದುರ್ಬಲಗೊಳಿಸುತ್ತದೆ ಎಂದು ಸ್ಟಾಲಿನ್ ಹೇಳಿದ್ದಾರೆ.

ಅಂಥ ಯಾವುದೇ ನೀತಿಗಳನ್ನು ಸ್ಟಾಲಿನ್ ನಿರಂತರವಾಗಿ ವಿರೋಧಿಸುತ್ತಾ ಬಂದಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗಳು, ಸಾರ್ವಜನಿಕ ಆಡಳಿತ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕೇಂದ್ರ ಸರಕಾರ ಹಿಂದಿಯನ್ನು ತರುತ್ತಿರುವುದನ್ನು ಸ್ಟಾಲಿನ್ ಮತ್ತೆ ಮತ್ತೆ ಪ್ರಶ್ನಿಸುತ್ತಲೇ ಬಂದಿದ್ದಾರೆ. ಪ್ರಾದೇಶಿಕ ಭಾಷೆಗಳಿಗೆ ಹಿಂದಿ ಹೊಡೆತವಾಗುವುದನ್ನು ತಪ್ಪಿಸುವ ವಿಚಾರದಲ್ಲಿ ಅವರು ದೃಢವಾಗಿದ್ದಾರೆ.

ಇದೇ ಕಳಕಳಿಯಿಂದಲೇ ಹಲವಾರು ಬಾರಿ ಪ್ರಧಾನಿ ಮೋದಿಗೆ ಸ್ಟಾಲಿನ್ ಪತ್ರ ಬರೆದಿದ್ದಾರೆ.

ಈಗ, ತಮಿಳುನಾಡು ಸರಕಾರ ತನ್ನ ಬಜೆಟ್ ಲೋಗೋದಲ್ಲಿ ರೂಪಾಯಿ ಚಿಹ್ನೆಯ ಬದಲಿಗೆ ತಮಿಳು ಅಕ್ಷರವನ್ನು ಬಳಸಿರುವುದು ಇದರ ಮತ್ತೊಂದು ನಿದರ್ಶನ. ತನ್ನ ನಿಲುವನ್ನು ಖಚಿತಪಡಿಸಲು, ಒತ್ತಿಹೇಳಲು ಅದು ಎಲ್ಲ ಅವಕಾಶಗಳನ್ನು ಸರಿಯಾಗಿಯೇ ಬಳಸುತ್ತದೆ. ರೂಪಾಯಿ ಚಿಹ್ನೆ ಬದಲಿಗೆ ತಮಿಳು ಅಕ್ಷರ ಬದಲಿಸಿರುವುದು ಕೂಡ, ಹಿಂದಿ ಹೇರಿಕೆ ಮತ್ತು ತ್ರಿಭಾಷಾ ನೀತಿಯ ಸಾಂಕೇತಿಕ ನಿರಾಕರಣೆ ಎಂದು ಅದು ಸ್ಪಷ್ಟವಾಗಿ ಹೇಳಿದೆ.

ಎನ್‌ಇಪಿ ಜಾರಿಗೆ ತರಲು ತಮಿಳುನಾಡು ನಿರಾಕರಿಸಿದೆ ಎಂಬ ಕಾರಣದಿಂದಲೇ, ಕೇಂದ್ರ ಸರಕಾರ ಸಮಗ್ರ ಶಿಕ್ಷಾ ನಿಧಿಯಲ್ಲಿ ತಮಿಳುನಾಡಿನ ಪಾಲನ್ನು ತಡೆಹಿಡಿಯಿತು. ಆದರೆ ತಮಿಳುನಾಡು ಅದಕ್ಕೂ ಬಗ್ಗಲಿಲ್ಲ. ಸ್ವತಃ ತನ್ನ ಖಜಾನೆಯಿಂದಲೇ ಸಮಗ್ರ ಶಿಕ್ಷಾ ಯೋಜನೆಗೆ ಕೇಂದ್ರ ಸರಕಾರ ತಡೆ ಹಿಡಿದ ರೂ. 2,152 ಕೋಟಿ ಬಿಡುಗಡೆ ಮಾಡಲು ಸಿದ್ಧವಾಗಿದೆ.

ತ್ರಿಭಾಷಾ ನೀತಿಯಂತಹ ವಿಷಯಗಳಲ್ಲಿನ ಹೋರಾಟ ತಮಿಳುನಾಡಿಗೆ ಒಂದು ಆಯ್ಕೆಯಲ್ಲ. ಬದಲಿಗೆ ಅದು ತಮಿಳುನಾಡಿನ ಅವಶ್ಯಕತೆಯಾಗಿದೆ ಎಂಬುದು ತಮಿಳುನಾಡು ಸರಕಾರದ ನಿಲುವು.

ಅಂತಿಮವಾಗಿ ಅದು ಫಲ ನೀಡುತ್ತದೋ, ಇಲ್ಲವೋ ಬೇರೆ ಮಾತು. ಆದರೆ ಡಿಎಂಕೆ ಬಿಜೆಪಿಯ ಆಕ್ರಮಣವನ್ನು ವಿರೋಧಿಸಲು ಇಂತಹ ಹೋರಾಟವನ್ನು ಮಾಡದೇ ಇರುವುದಿಲ್ಲ.ಈಗ ಅದು ರಾಷ್ಟ್ರೀಯ ನಾಯಕರನ್ನು ಕ್ಷೇತ್ರ ಪುನರ್ವಿಂಗಡಣೆ ವಿರುದ್ಧದ ಹೋರಾಟದಲ್ಲಿ ಜೊತೆಗೂಡಿಸಿಕೊಳ್ಳಲು ನೋಡುತ್ತಿದೆ.

ಕ್ಷೇತ್ರ ಪುನರ್ವಿಂಗಡಣೆ ವಿರುದ್ಧ ಚೆನ್ನೈನಲ್ಲಿ ನಡೆಯುವ ಸಮ್ಮೇಳನ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಬಿಹಾರ, ಜಾರ್ಖಂಡ್ ಮತ್ತು ತೆಲಂಗಾಣದ ವಿಪಕ್ಷ ನಾಯಕರು ಸೇರಿದಂತೆ ಎಲ್ಲಾ ಪ್ರಮುಖ ನಾಯಕರನ್ನು ಒಟ್ಟುಗೂಡಿಸುವ ಸಾಧ್ಯತೆಯಿದೆ.

ರಾಜ್ಯಗಳ ಸ್ವಾಯತ್ತತೆ ಕಸಿಯುವ ಬಿಜೆಪಿ ತಂತ್ರದ ವಿರುದ್ಧ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಸ್ಟಾಲಿನ್ ಅವರ ಪ್ರಯತ್ನಗಳ ಮುಂದುವರಿಕೆಯಾಗಿ ಕೂಡ ಈ ಸಮ್ಮೇಳನ ಮುಖ್ಯವಾಗುತ್ತಿದೆ.

ಈ ಸಮ್ಮೇಳನ ದಕ್ಷಿಣದ ರಾಜ್ಯಗಳು ಮತ್ತು ಜನರ ಹಿತಾಸಕ್ತಿಗಳನ್ನು ರಕ್ಷಿಸುವ ನಿಟ್ಟಿನ ಪ್ರಮುಖ ಹೆಜ್ಜೆಯಾಗಲಿದೆ ಎಂಬ ನಿರೀಕ್ಷೆಗಳಿವೆ.

2021ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಸ್ಟಾಲಿನ್ ಬಿಜೆಪಿಯ ಕೇಂದ್ರೀಕೃತ ಅಜೆಂಡಾವನ್ನು ತೀವ್ರವಾಗಿ ವಿರೋಧಿಸುತ್ತಲೇ ಬಂದವರು. ಒಕ್ಕೂಟ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಕೈಗೊಳ್ಳುವ ಮೂಲಕ ತಮಿಳುನಾಡಿನಾಚೆಗೂ ಅವರು ಪ್ರಭಾವಿಯಾಗಿದ್ದಾರೆ.

2022ರಲ್ಲಿ ಪ್ರಾರಂಭವಾದ ಆಲ್-ಇಂಡಿಯಾ ಫೆಡರೇಶನ್ ಫಾರ್ ಸೋಶಿಯಲ್ ಜಸ್ಟಿಸ್, ರಾಷ್ಟ್ರವ್ಯಾಪಿ ಜಾತಿ ಜನಗಣತಿಗೆ ಒತ್ತಾಯಿಸುವ ಗುರಿಯನ್ನು ಹೊಂದಿದೆ. ಜಾರ್ಖಂಡ್, ಬಿಹಾರ ಮತ್ತು ಪಶ್ಚಿಮ ಬಂಗಾಳದ ನಾಯಕರು ಅದನ್ನು ಬೆಂಬಲಿಸಿದ್ದಾರೆ.

ರಾಷ್ಟ್ರದಾದ್ಯಂತ ವಿರೋಧ ಪಕ್ಷಗಳ ಒಕ್ಕೂಟ ನಿರ್ಮಿಸುವ ಅವರ ಪ್ರಯತ್ನಗಳು ಇಷ್ಟು ವರ್ಷಗಳಲ್ಲಿ ದೊಡ್ಡ ಮಟ್ಟದಲ್ಲಿಯೇ ಜನಪ್ರಿಯತೆ ಗಳಿಸಿವೆ.

2024ರ ಲೋಕಸಭಾ ಚುನಾವಣೆಗೆ ಮೊದಲು ಕೂಡ, ವಿವಿಧ ನಾಯಕರೊಂದಿಗೆ ಚರ್ಚೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಅವರು ಬಿಜೆಪಿಯೇತರ ಶಕ್ತಿಗಳನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈಗ ಕ್ಷೇತ್ರ ಪುನರ್ವಿಂಗಡಣೆ ಸಮ್ಮೇಳನ ಕೂಡ ಅವರ ಅಂತಹ ಪ್ರಯತ್ನಗಳ ವಿಶಾಲ ರೂಪದಂತೆ ಕಾಣಿಸುತ್ತಿದೆ.

ಕ್ಷೇತ್ರ ಪುನರ್ವಿಂಗಡನೆ ಕುರಿತ ಚರ್ಚೆಯನ್ನು ಒಕ್ಕೂಟ ವ್ಯವಸ್ಥೆ ಕುರಿತ ವಿಷಯವಾಗಿ ರೂಪಿಸುವ ಮೂಲಕ ಸ್ಟಾಲಿನ್ ಇಟ್ಟಿರುವ ಹೆಜ್ಜೆ ದೊಡ್ಡದು.

ಲೋಕಸಭಾ ಕ್ಷೇತ್ರಗಳ ನಷ್ಟವೆನ್ನುವುದು ಕೇವಲ ರಾಜಕೀಯ ಸಂಖ್ಯೆಗಳಿಗೆ ಮಾತ್ರ ಸೀಮಿತವಲ್ಲ. ಅದು ಆರ್ಥಿಕ ಸಂಪನ್ಮೂಲ ಹಂಚಿಕೆ ಮತ್ತು ರಾಷ್ಟ್ರೀಯ ನಿರ್ಧಾರ ತೆಗೆದುಕೊಳ್ಳುವಿಕೆಯಲ್ಲಿ ದಕ್ಷಿಣದ ಪ್ರಾತಿನಿಧ್ಯ ಕುಸಿಯುವ ಬಗ್ಗೆಯೂ ಇರುವ ಕಳಕಳಿಯಾಗಿದೆ.

ಕ್ಷೇತ್ರ ಪುನರ್ವಿಂಗಡಣೆ ವಿರುದ್ಧದ ಸಮ್ಮೇಳನಕ್ಕೆ ಈಗಾಗಲೇ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಪ್ರಮುಖ ವಿರೋಧ ಪಕ್ಷಗಳ ನಾಯಕರು ಚೆನ್ನೈ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.

ಅದರಿಂದಾಗಿ, ಈ ಸಮ್ಮೇಳನ ಭಾರತದ ಒಕ್ಕೂಟ ರಚನೆಗಾಗಿ ನಡೆಯುತ್ತಿರುವ ದೊಡ್ಡ ರಾಷ್ಟ್ರೀಯ ಆಂದೋಲನವಾಗಿ ಗಮನ ಸೆಳೆಯಲಿದೆ ಎಂಬುದು ಸ್ಪಷ್ಟವಾಗುತ್ತಿದೆ.

ಈ ವಿಷಯದಲ್ಲಿ ಸ್ಟಾಲಿನ್ ಅವರ ಬದ್ಧತೆ, ಖಡಕ್ ನಿಲುವು ಹಾಗೂ ಅದಕ್ಕೆ ವ್ಯಕ್ತವಾಗುತ್ತಿರುವ ವ್ಯಾಪಕ ಬೆಂಬಲ ಬಿಜೆಪಿಗೆ ಮುಂದೊಂದು ದಿನ ದೊಡ್ಡ ತಲೆನೋವಾಗುವ ಸಾಧ್ಯತೆ ಇಲ್ಲದಿಲ್ಲ

‘ಇಂಡಿಯಾ’ ಒಕ್ಕೂಟ ದುರ್ಬಲವಾಗಿದೆ, ಕಾಂಗ್ರೆಸ್ ನಾಯಕತ್ವದ ಬಗ್ಗೆ ಪ್ರಶ್ನೆಗಳಿವೆ. ಇಂತಹ ಸಂದರ್ಭದಲ್ಲೇ ಸ್ಟಾಲಿನ್ ಕ್ಷೇತ್ರ ಪುನರ್ವಿಂಗಡಣೆ ಬಗ್ಗೆ ದೊಡ್ಡದೊಂದು ಹೋರಾಟಕ್ಕೆ ಸಜ್ಜಾಗಿದ್ದಾರೆ.

ಮೊದಲು ದಕ್ಷಿಣದ ರಾಜ್ಯಗಳು ಮಾತ್ರ ಒಟ್ಟಾಗುತ್ತವೆ ಎಂಬಂತಿದ್ದ ಈ ಹೋರಾಟಕ್ಕೆ ಈಗ ರಾಷ್ಟ್ರೀಯ ರೂಪ ಬರುತ್ತಿದೆ. ಪಂಜಾಬ್, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತಿತರ ರಾಜ್ಯಗಳ ಆಡಳಿತಾರೂಢ ಪಕ್ಷಗಳು ಸ್ಟಾಲಿನ್‌ಗೆ ಬೆಂಬಲ ಸೂಚಿಸುತ್ತಿವೆ.

ಅದರ ಜೊತೆಗೆ ಉತ್ತರದ ಇತರ ರಾಜ್ಯಗಳಲ್ಲಿ ಅಧಿಕಾರ ಇಲ್ಲದಿದ್ದರೂ ಪ್ರಬಲವಾಗಿರುವ ಸಮಾಜವಾದಿ ಪಕ್ಷ ತಮಿಳುನಾಡಿನ ಹೋರಾಟಕ್ಕೆ ಬೆಂಬಲ ಸೂಚಿಸಿದರೆ ರಾಜಕೀಯವಾಗಿ ಅದು ಬಿಜೆಪಿಗೆ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇಲ್ಲದಿಲ್ಲ.

ಮೋದಿ ಸರಕಾರದ ಕೇಂದ್ರೀಕರಣ ನೀತಿ ವಿರುದ್ಧ ಸ್ಟಾಲಿನ್ ಸಂಘಟಿಸುತ್ತಿರುವ ಈ ಹೋರಾಟ ಮುಂದಿನ ದಿನಗಳಲ್ಲಿ ಯಾವ ಸ್ವರೂಪವನ್ನು ಪಡೆದುಕೊಳ್ಳಲಿದೆ ಎಂಬುದು ಬಹಳ ಕುತೂಹಲಕಾರಿಯಾಗಿದೆ

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ಹರೀಶ್ ಎಚ್.ಕೆ.

contributor

Similar News