ಅನಧಿಕೃತ ಹೋಂಸ್ಟೇ, ಹೊಟೇಲ್, ರೆಸಾರ್ಟ್‌ಗಳ ವಿರುದ್ಧ ಕ್ರಮಕ್ಕೆ ಡಿಸಿ ಆದೇಶ

ಕೊಪ್ಪಳ : ಜಿಲ್ಲೆಯ ಸಾಣಾಪುರ ಗ್ರಾಮದಲ್ಲಿ ವಿದೇಶಿ ಮಹಿಳೆ ಸಹಿತ ಇಬ್ಬರ ಮೇಲಿನ ಅತ್ಯಾಚಾರ ಮತ್ತು ಓರ್ವನ ಕೊಲೆಯ ಪ್ರಕರಣವು ದೇಶವನ್ನೇ ತಲ್ಲಣಗೊಳಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿರುವ ಅನಧಿಕೃತ ಹೋಂಸ್ಟೇ, ಹೊಟೇಲ್, ರೆಸಾರ್ಟ್‌ಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ಆದೇಶ ನೀಡಿದ್ದಾರೆ.
ಈ ಕುರಿತು ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರ ಸೂಚನೆಯಂತೆ ಕೊಪ್ಪಳ ಮತ್ತು ಗಂಗಾವತಿ ತಾಲೂಕುಗಳಲ್ಲಿ ಕಂಡು ಬರುವ ಅನಧಿಕೃತ ಹೋಂಸ್ಟೇ, ಹೊಟೇಲ್, ರೆಸಾರ್ಟ್‌ಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕಾಗಿರುವುದರಿಂದ ತಾಪಂ ಇಒ, ಜೆಸ್ಕಾಂನ ಸಹಾಯಕ ಕಾರ್ಯಪಾಲಕ ಅಭಿಯಂತರರು, ಅರಣ್ಯಾಧಿಕಾರಿಗಳು, ಪೊಲೀಸ್ ಆರಕ್ಷಕ ನಿರೀಕ್ಷಕರು, ಅಬಕಾರಿ ನಿರೀಕ್ಷಕರು ಸೇರಿದಂತೆ ಕೊಪ್ಪಳ ಪ್ರವಾಸೋದ್ಯಮ ಇಲಾಖೆಯ ಡಿಡಿಗಳನ್ನು ಒಳಗೊಂಡ ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ತಂಡಗಳನ್ನು ರಚಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಜಿಲ್ಲೆಗೆ ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರ ಹಾಗೂ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಈ ಮುಂಚೆ ಅನಧಿಕೃತ ರೆಸಾರ್ಟ್‌ಗಳನ್ನು ತೆರವು ಗೊಳಿಸಲು ಬಹಳ ದಿನಗಳಿಂದ ಸಾರ್ವಜನಿಕ ವಲಯದಿಂದ ಕೂಗು ಕೇಳಿಬರುತ್ತಿತ್ತು. ಆದರೆ ಯಾರು ಈ ಇದರ ಬಗ್ಗೆ ತೆಲೆ ಕೆಡಿಸಿಕೊಂಡಿರಲಿಲ್ಲ. ಅನಧಿಕೃತ ರೆಸಾರ್ಟ್‌ಗಳಲ್ಲಿ ಗಾಂಜಾದಂತಹ ಪದಾರ್ಥಗಳು ಸುಲಭವಾಗಿ ದೊರೆಯುವುದರಿಂದ ಪ್ರವಾಸಿಗರ ದಂಡು ಇಲ್ಲೆ ಬೀಡು ಬಿಟ್ಟಿರುತ್ತಿತ್ತು, ಆದರೆ ಅತ್ಯಾಚಾರ ಮತ್ತು ಕೊಲೆಯ ಪ್ರಕರಣ ನಡೆದಾಗಿನಿಂದ ಇಲ್ಲಿಗೆ ಪ್ರವಾಸಿಗರು ಬರುವುದನ್ನೇ ಬಿಟ್ಟಿದ್ದಾರೆ ಎನ್ನಲಾಗಿದೆ.
ಎಲ್ಲ ರೆಸಾರ್ಟ್‌ಗಳು ಖಾಲಿಯಾಗಿದ್ದು, ಬಹುತೇಕ ಪ್ರವಾಸಿಗರು ಇಲ್ಲಿಂದ ತೆರಳಿದ್ದು, ಕೆಲ ಪ್ರವಾಸಿಗರು ಮಾತ್ರ ಉಳಿದು ಕೊಂಡಿದ್ದಾರೆ. ಇನ್ನು ಈ ಮೊದಲು ಪ್ರವಾಸಿಗರು ತಾವು ಮಾಡಿಕೊಂಡಿದ್ದ ರೂಮ್ ಬುಕ್ಕಿಂಗ್ ಅನ್ನು ಕ್ಯಾನ್ಸಲ್ ಮಾಡಿಕೊಳ್ಳುತ್ತಿದ್ದಾರೆ.
ಸದ್ಯ ಜಿಲ್ಲಾಧಿಕಾರಿಯವರ ಈ ಆದೇಶದಿಂದ ಜಿಲ್ಲೆಯ ಜನರಲ್ಲಿ ಸಂತಸ ಮೂಡಿದೆ. ಎಷ್ಟರ ಮಟ್ಟಿಗೆ ಈ ಅನಧಿಕೃತ ಹೋಂ ಸ್ಟೇ ಮತ್ತು ಹೊಟೇಲ್, ರೆಸಾರ್ಟ್‌ಗಳ ಮೇಲೆ ದಾಳಿ ಮಾಡಿ ಕ್ರಮವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.