ಮುಳಿಮನೆಯ ಜಗಲಿ ಮತ್ತು ಅಲ್ಲಿ ಕೂತ ಅಜ್ಜ!

ಹಾಗೆ ನೋಡಿದರೆ ಆ ಮಹಾಮನೆಯ ಜಗಲಿ ಆ ಮನಸ್ಸಿಗೆ ಕೊಡುವಷ್ಟು ಖುಷಿ ಬೇರೆ ಯಾವುದೂ ಕೊಡಲಾರದು. ನೀವು ನಿಮ್ಮ ಮನೆಯ ಬೇರೆ ಯಾವುದೇ ಭಾಗದಲ್ಲಿ ಕೂತು ನೋಡಿ. ಅಲ್ಲಿಗೆ ಎಲ್ಲವೂ ಕಾಣಿಸದು. ಆದರೆ ಜಗಲಿ ಏಕಕಾಲದಲ್ಲಿ ಮನೆಯ ಒಳಗಡೆಯೂ ಹೊರಗೆಯೂ ಕಾಣಿಸುವ ಒಂದು ಸಂಧಿ ಜಾಗ. ಅಜ್ಜನಿಗೆ ಹೊಸ ತಲೆಮಾರಿನ ಮನೆಯೊಳಗಡೆಯ ಕೃತಕ ಕುಹಕ ಸಿನಿಕತನಗಳಿಗಿಂತ ಅಂಗಳದ ನೈಜ ರೈತ ನಡಿಗೆಗಳು ಯಾವಾಗಲೂ ಇಷ್ಟವೇ.
ನಿವೃತ್ತಿಯ ನಂತರ ಮನೆ ರಿಪೇರಿ, ಸುಣ್ಣಬಣ್ಣ ಎಲ್ಲ ಮುಗಿ ಸುವ ಉದ್ದೇಶದಿಂದ ತೊಡಗಿ ಆ ನಡುವೆ ಮನೆಯೊಳಗಡೆ ಇದ್ದ ಬೇಡದ್ದನ್ನು ವಿಲೇವಾರಿ ಮಾಡುವುದೇ ಒಂದು ದೊಡ್ಡ ಕೆಲಸವಾಯಿತು. ಇನ್ಯಾಕೆ ಈ ಸದೆ ಸಂಪತ್ತು? ಅಂಕಪಟ್ಟಿಗಳನ್ನುಳಿದು ಉಳಿದವುಗಳನ್ನು ವಿಸರ್ಜಿಸುವುದೆಂದು ಜಗಲಿ ನಡುವೆಗುಡ್ಡೆ ಹಾಕಿದ್ದೆ. ಕೆಲವನ್ನು ಭೂಮಿಯೊಳಗಡೆ ಸೇರಿಸುವುದು, ಒಂದಷ್ಟನ್ನು ತೆಂಗಿನ ಬುಡಕ್ಕೆ ಸುರಿಯುವುದು. ಹೀಗೆಲ್ಲ ನನ್ನ ಲೆಕ್ಕವಿತ್ತು. ಆದರೆ ಇವುಗಳನ್ನೆಲ್ಲ ಬಗೆಯುವಾಗ ಯಾವುದು ಬೇಕು? ಯಾವುದು ಬೇಡದ್ದು ಎಂಬುವುದೇ ಬಹಳ ದೊಡ್ಡ ಪ್ರಶ್ನೆಯಾಯಿತು.
ನನ್ನ ವಯಸ್ಸಿನ, ನನಗಿಂತ ಹಿರಿಯರ ಒಂದು ಮನಸ್ಥಿತಿ ಇದು. ನಮಗೆ ಈ ಜಗತ್ತಿನಲ್ಲಿ ಇದು ಬೇಡವೇ ಬೇಡ ಎಂದು ತೀರ್ಮಾನಿಸುವುದೇ ಕಷ್ಟ. ಅದರಲ್ಲೂ ಈ ದೇಶದ ರೈತಮನಸ್ಸು ತ್ಯಜಿಸುವ, ನಾಶಪಡಿಸುವ, ಇಲ್ಲವಾಗಿಸುವ, ಬಿಸಾಕುವ ದೃಢತೆಯನ್ನು ಹೊಂದಿರುವುದೇ ಇಲ್ಲ. ನಿಮ್ಮೂರ ಸನಿಹದ ಒಂದಷ್ಟು ರೈತರ ಮನೆಗೆ ಒಂದು ಸುತ್ತು ಬನ್ನಿ. ಬೇರೆ ಬಿಡಿ, ಬರೀ ಅವರ ಮನೆಯ ಕಿಟಕಿಯೇ ಎಷ್ಟೋ ಬಾರಿ ಒಂದು ಮ್ಯೂಸಿಯಂ ತರ ಕಾಣಿಸುತ್ತದೆ. ಯಾವುದೋ ನಾರು ಬೇರುಗಳು, ಕಾಡಿನಿಂದ ಹೆಕ್ಕಿ ತಂದ ಬೀಜಗಳು, ಉಪಯೋಗಕ್ಕೆ ಬಾರದ ಕತ್ತಿ ಮುಟ್ಟಾಳೆ, ಚಡ್ಡಿ ವಗೈರೆ ಅಲ್ಲಿ ವಟ್ರಾಶಿ ನೇತು ಬಿದ್ದಿರುತ್ತವೆ. ವ್ಯವಸ್ಥಿತವಾಗಿ ಜೋಡಣೆಗೊಳ್ಳದ ಆ ಪಳೆಯುಳಿಕೆಗಳು ಆ ಮನೆಯ ಮಾಲಕನ ಮನಸ್ಥಿತಿಯ ಹಾಗೆಯೇ ಇರುತ್ತವೆ.
ಇನ್ನು ಸುತ್ತಲಿನ ಜಗಲಿಯನ್ನೊಮ್ಮೆ, ಮನೆಯ ಅಟ್ಟವನ್ನೊಮ್ಮೆ ನೋಡಿ ಬನ್ನಿ. ಅಲ್ಲಿ ಇಡೀ ಕೃಷಿ ಪರಂಪರೆಯ ಜ್ಞಾನಶಕ್ತಿಯ ವಿವಿಧ ವಸ್ತುಗಳು, ಉಪಕರಣಗಳು ಅಡ್ಡಾದಿಡ್ಡಿ ಬಿದ್ದಿರುತ್ತವೆ. ಅಪ್ಪ, ಅವನಪ್ಪ, ಅವನಪ್ಪನ ಅಪ್ಪ ಕೈ ಹಿಡಿದಿದ್ದ ನೊಗ ನೇಗಿಲು, ಸುಣ್ಣದ ಮಡಿಕೆ, ಅಡಿಕೆ, ಭತ್ತ ತುಂಬಿಸುವ ಕದಿಕೆ, ಬೆತ್ತದ ನಾರುಬೂರಿನ ಒಣಕಲು ಕುಡಿಕೆಗಳು, ಬುಟ್ಟಿಗಳು, ಕತ್ತಿ, ಕೊಟ್ಟು-ಪಿಕ್ಕಾಸು, ಮುಟ್ಟಾಳೆ, ಮದೆಪ್ಪು, ನೆಸಲೆ, ಬಿಸಲೆ, ಮೀನು ಹಿಡಿಯುವ ಕೂರಿ ಇನ್ನೇನೋ....ಎಲ್ಲವನ್ನು ಆ ಮನೆಯ ಯಜಮಾನಿ ನಾಶಪಡಿಸದೆ ಅಲ್ಲಿ ಪೇರಿಸಿಟ್ಟಿರುತ್ತಾರೆ. ಮುಂದೆ ಅವು ಒಂದಲ್ಲ ಒಂದು ದಿನಬಳಕೆಗೆ ಬಂದೇ ಬರುತ್ತವೆ, ತಮಗಲ್ಲದಿದ್ದರೂ ತಮ್ಮ ಆನಂತರದ ತಲೆಮಾರಿಗೆ ಬೇಕಾಗಬಹುದೆಂಬ ನಂಬಿಕೆ ಅವರದ್ದು.
ಈ ಹಿಂದಿನ ಬದುಕಿಗೆ ನೆರವಾಗಿದ್ದವು ಎಂಬ ಋಣಕ್ಕೆ ಅವುಗಳನ್ನು ಬಳಸಿದ ಮೇಲೆ ರೈತರ ಬೆವರು, ರಕ್ತ, ಕಣ್ಣೀರು ಮುಟ್ಟಿರಬಹುದು. ಅನಿವಾರ್ಯಕ್ಕೆಲ್ಲ ಅವು ಪಕ್ಕದ ಮನೆಗೆ, ನೆರೆಯ ಊರಿಗೆ ತಲುಪಿರಬಹುದು. ಅವುಗಳ ಮೇಲೆಲ್ಲಾ ತನ್ನದೇ ಹಟ್ಟಿಯ ಸೆಗಣಿ, ಹದವಾದ ಮಣ್ಣಿನ ನವಿರು ನುಣುಪು ಹೂರಣ ಇರಬಹುದು. ತಾನೇ ಬರೆದ ಹಸೆ ರಂಗೋಲಿಗಳಿರಬಹುದು. ಕೈಯಾರೆ ಕೊಟ್ಟ ಸುಣ್ಣ, ಗೇರು ಎಣ್ಣೆಯ ರಕ್ಷಣೆಯ ಕವಚವಿರಬಹುದು. ಆ ಕಾರಣಕ್ಕೇ ಗೆದ್ದಲು ಮೆದ್ದದೆ ಅವೆಲ್ಲವೂ ಇನ್ನೂ ಸುರಕ್ಷಿತವಾಗಿಯೇ ಅಟ್ಟದ ಮೇಲೆ ಅಡ್ಡಾದಿಡ್ಡಿ ಮಲಗಿ ಹಳೆಯ ಕಥೆ ಹೇಳುತ್ತದೆ.
ಮನೆ ಅಂಗಳದ ಮೂಲೆಯಲ್ಲಿ ಬಿದ್ದು ಅರ್ಧ ಮಣ್ಣೊಳಗೆ ಮಲಗಿದ ಬೀಸುವ ಕಲ್ಲು, ಮಸಾಲೆ ರುಬ್ಬುಕಲ್ಲು ಇವೆಲ್ಲವುಗಳಿಗೆ ಇವತ್ತಿನ ನಾಜೂಕಿನ ಮಿಕ್ಸಿ ಗ್ರೈಂಡರ್ ಮುಂದೆ ಯಾವ ನಾಚಿಕೆ ಸಂಕೋಚವೂ ಇಲ್ಲ. ಒಂದಲ್ಲ ಒಂದು ದಿವಸ ಮುಂದೆ ಅವು ಬಳಕೆಗೆ ಬೇಕು ಅನ್ನೋದಕ್ಕಿಂತ ಅವುಗಳನ್ನು ಹಿಂದೆ ನಾವು ಬಳಸಿದ್ದೇವೆ, ಅವು ತಮ್ಮ ಬದುಕಿಗೆ ಸಹಕರಿಸಿದ್ದಾವೆ ಎನ್ನುವ ಪ್ರೀತಿ ಅವುಗಳ ಮೇಲೆ ಹಿರಿಯರಿಗೆ, ನಾಟಿ ಜೀವಗಳಿಗೆ.
ಅದೇ ಮನೆಯ ಬಿರುಕು ಬಿಟ್ಟ ಗೋಡೆಗಳನ್ನೊಮ್ಮೆ ನೋಡಿ. ಅವುಗಳ ಸಂಧಿಯಲ್ಲಿ ಹಳೆಯ ಚಪ್ಪಲಿಗಳು, ಕುಡುಪು ತರಂಬುಚ್ಚಿಗಳು, ಕೈಲು, ಸೌಟುಗಳು ಇನ್ನೇನೋ ಕಣ್ಣು ಮಿಟುಕಿಸಿ ದೂರದಿಂದಲೇ ನೋಡುತ್ತವೆ. ಮತ್ತೆ ಬಳಸುವುದಿಲ್ಲವೇ ಎಂದು ಅಣಕಿಸುತ್ತದೆ. ಕೊಳ್ಳುಬಾಕ ಸಂಸ್ಕೃತಿಯಲ್ಲಿ ಇವು ಯಾವುದಕ್ಕೂ ಪ್ರವೇಶವಿಲ್ಲ. ಮನೆಯ ಒಳಗಡೆ ಬಿಡಿ ಮನಸ್ಸಿನೊಳಗಡೆಯೇ ಅವಕಾಶವಿಲ್ಲದ ಮೇಲೆ ಅವುಗಳಿಗೆ ಜಾಗವೆಲ್ಲಿ? ಇವತ್ತಿನ ತೊಳೆದಿಟ್ಟ ಗಿಲೀಟು ನೀಳ ಮನಸ್ಥಿತಿ ಅಂತಹ ಯಾವ ಹಳೆಯದ್ದನ್ನು ಒಳಗಡೆ ಸೇರಿಸಿಕೊಳ್ಳುವುದಿಲ್ಲ.
ಪ್ರಯೋಜನಕ್ಕೆ ಬಾರದ ವಸ್ತುಗಳು ಬದಿಗಿರಲಿ, ನಮ್ಮ ಮನೆಯಲ್ಲಿರುವ ಸೊಂಟ ಮಂಡಿ ನೋವೆಂದು ಜಗಲಿಯ ಮೂಲೆಯಲ್ಲಿ ಕುಕ್ಕುರುಕಾಲಲ್ಲಿ ಕೂತ ವಯಸ್ಸಾದ ಅಜ್ಜ-ಅಜ್ಜಿ, ಅಪ್ಪ-ಅಮ್ಮ ಎಲ್ಲರೂ ಕಿರಿಯ ತಲೆಮಾರಿಗೆ ಅನಗತ್ಯ, ಅನವಶ್ಯಕ ಎಂದು ಗೋಚರಿಸುವ ಮನಸ್ಥಿತಿಯ ಸಂದರ್ಭದಲ್ಲಿ ನಾವಿದ್ದೇವೆ. ನಿರ್ಲಕ್ಷಿತ ರೈತ ಅಜ್ಜನೊಬ್ಬ ತನ್ನ ತಲೆಯ ಮೇಲಿನ ಮಾಡಿಗೆ ನೇತು ಬಿದ್ದ ಹಳೆಯ ಪಳೆಯುಳಿಕೆಗಳನ್ನು ನೋಡುತ್ತಾ ನೋಡುತ್ತಾ ಭೂತದ ಬದುಕಿನೊಂದಿಗೆ ಮಿಳಿತಗೊಂಡು ಕರಾಳ ವರ್ತಮಾನಕ್ಕೆ ಶಪಿಸುವಂತಾಗಿದೆ.
ಜಗಲಿಯ ಒಂದು ಬದಿಯಲ್ಲಿ ಮುದಿ ನಾಯಿ, ಇನ್ನೊಂದು ಬದಿಯಲ್ಲಿ ಅಜ್ಜ, ವಯಸ್ಸಾದ ಅಪ್ಪ-ಅಮ್ಮ ಎಷ್ಟೋ ಸಲ ಪರಸ್ಪರ ಅವರೇ ಮಾತನಾಡುತ್ತಾ, ಕೆಲವೊಮ್ಮೆ ಏಕಾಂಗಿಯಾಗಿ ಸ್ವಗತಿಸುತ್ತಾ, ಕೆಲವೊಮ್ಮೆ ಆ ನಾಯಿಯೊಂದಿಗೆ, ತಪ್ಪಿದರೆ ಜಗಲಿಯೊಳಗಡೆಯಿಂದ ಕಾಣಿಸುವ ಅಷ್ಟೋ ವಸ್ತುಗಳೊಂದಿಗೆ ಆತ ಭಾವುಕವಾಗಿ ವ್ಯವಹರಿಸಬಲ್ಲ. ಕೆಲವೊಮ್ಮೆ ತಾಂಬೂಲ ಕುಟ್ಟುವ ಆ ಎರಡು ಕಲ್ಲುಗಳೇ ಸಾಕು, ಅಡಿಕೆ ಹೆರೆಯುವ ಚೂರಿ, ಕವಳದ ಸಂಚಿ ಎಲ್ಲವೂ ಅವನ ಅಂಗೈಯ ಒಳಗಡೆ ನಿಂತಾಗ ಹಗುರವಾಗುವುದಕ್ಕೆ ದಾರಿಗಳಾಗುತ್ತವೆ. ಈ ಕಾರಣಕ್ಕಾಗಿಯೇ ಇರಬೇಕು, ಅದೇ ವಯಸ್ಸಿನ, ಅದೇ ಮನಸ್ಸಿನ ಪಕ್ಕದ ಮನೆ ಅಜ್ಜ ದಿನಾ ನಮ್ಮನೆಯ ಜಗಲಿಗೆ ಬಂದಾಗ ಅವರಾಗ ಮಾತನಾಡುವ ಮಾತುಗಳಿಗೆ ಕಿವಿಯಾಗಿ. ಹೊಸತಿಲ್ಲ, ಅಲ್ಲಿ ಪರಸ್ಪರ ಹಂಚಿಕೆಯಾಗುವುದು ನಿನ್ನೆ ಮೊನ್ನೆ ಕಳೆದು ಹೋದ ಕಥೆಗಳೇ. ಮತ್ತೆ ನಾಳೆ ಅವರು ಅದೇ ಹೊತ್ತಿಗೆ ಬಂದು ಜಗಲಿ ಮೇಲೆ ಅಡಿಕೆ ಗುದ್ದುತ್ತಾರೆ, ವೀಳ್ಯದೆಲೆಯ ಮೇಲೆ ಸುಣ್ಣ ಹಚ್ಚುತ್ತಾರೆ, ಅವೆಲ್ಲವನ್ನು ಬಾಯಿಗೇರಿಸಿ ಮತ್ತೆ ಅದೇ ಕಥೆಯನ್ನು ಪಚ್ಚಗುಟ್ಟುತ್ತಾರೆ. ಮತ್ತೆ ಹೇಳುತ್ತಿದ್ದೇನೆ. ಆ ಮನೆಯ ಒಳಗಡೆಯ ಕಿರಿಯ ಮನಸ್ಸುಗಳೊಮ್ಮೆ ಆ ವಯಸ್ಸಾದವರ ಕಥೆಗೆ ಕಿವಿಯಾಗಬೇಕು. ಯಾಕೆಂದರೆ ಆ ಕಥೆಯ ಒಳಗಡೆ ನೋವು ನುಂಗುವ ಅವರ ಶಕ್ತಿ, ತಾಳ್ಮೆ, ಸಹನೆಗಾಗಿ.
ಹಾಗೆ ನೋಡಿದರೆ ಆ ಮಹಾಮನೆಯ ಜಗಲಿ ಆ ಮನಸ್ಸಿಗೆ ಕೊಡುವಷ್ಟು ಖುಷಿ ಬೇರೆ ಯಾವುದೂ ಕೊಡಲಾರದು. ನೀವು ನಿಮ್ಮ ಮನೆಯ ಬೇರೆ ಯಾವುದೇ ಭಾಗದಲ್ಲಿ ಕೂತು ನೋಡಿ. ಅಲ್ಲಿಗೆ ಎಲ್ಲವೂ ಕಾಣಿಸದು. ಆದರೆ ಜಗಲಿ ಏಕಕಾಲದಲ್ಲಿ ಮನೆಯ ಒಳಗಡೆಯೂ ಹೊರಗೆಯೂ ಕಾಣಿಸುವ ಒಂದು ಸಂಧಿ ಜಾಗ. ಅಜ್ಜನಿಗೆ ಹೊಸ ತಲೆಮಾರಿನ ಮನೆಯೊಳಗಡೆಯ ಕೃತಕ ಕುಹಕ ಸಿನಿಕತನಗಳಿಗಿಂತ ಅಂಗಳದ ನೈಜ ರೈತ ನಡಿಗೆಗಳು ಯಾವಾಗಲೂ ಇಷ್ಟವೇ.
ಸರಿ ಬಿಡಿ, ನಾನೀಗ ನನ್ನ ಹಳೆಯ ಕಡತಗಳನ್ನು ವಿಲೇವಾರಿ ಮಾಡುವ ಉದ್ದೇಶದಿಂದ ದಿನಾ ಅವುಗಳ ನಡುವೆ ಒಂದಷ್ಟು ಹೊತ್ತು ಕೂರುತ್ತೇನೆ. ಯಾವುದೋ ಪತ್ರಿಕೆಯಲ್ಲಿ ೪೦ ವರ್ಷಗಳ ಹಿಂದೆ ಮುದ್ರಿತವಾದ ನನ್ನ ಮೊದಲ ಕವನ, ಪ್ರಬಂಧ, ಲೇಖನಗಳು... ಅದನ್ನು ಮೆಚ್ಚಿ ಬರೆದ ಯಾರದೋ ಪತ್ರ, ಅರ್ಧದಲ್ಲಿ ಬರೆದುಬಿಟ್ಟ ಪದ್ಯಗಳು, ಇವುಗಳನ್ನೆಲ್ಲ ನಾನು ಬೆಂಕಿಗೆ ಸುರಿದು ನಾಶಪಡಿಸುವುದಾದರೂ ಹೇಗೆ? ಎಸೆಸೆಲ್ಸಿಯ ಬ್ಯಾಚು ಸ್ಕೂಲ್ ಬಿಡುವಾಗ ಮುಸುಕು ಕ್ಯಾಮರಾದಿಂದ ತೆಗೆದ ಕಪ್ಪು ಬಿಳುಪು ಫೋಟೊ. ಅದರಲ್ಲೀಗ ಅಸ್ಪಷ್ಟವಾಗಿ ಕಾಣಿಸುವ ಮಾಡಾವಿನ ಮಮ್ಮದೆ, ಕುಂಬ್ರದ ಕಮಲ, ನಾಗೇಶ್ ಮೇಷ್ಟ್ರು ಛೆ ಇವರನ್ನೆಲ್ಲಾ ಬೆಂಕಿಗಿಟ್ಟು ಸುಡುವ ನನ್ನ ಭಾವಕ್ಕೆ ಧಿಕ್ಕಾರವಿರಲಿ.
ಸಾಧ್ಯವೇ ಇಲ್ಲ, ಹಿಂದೊಮ್ಮೆ ನಾನು ಜಾವಗಲ್ಲಿನಿಂದ ಊರಿಗೆ ವರ್ಗಾವಣೆಗೊಂಡು ಹೊರಡುವ ಅವಸರದ ಹೊತ್ತದು. ನಾವು ಗಂಡ ಹೆಂಡತಿ ಮನೆಯ ವಸ್ತುಗಳನ್ನೆಲ್ಲ ಪ್ಯಾಕ್ ಮಾಡುವ ಹೊತ್ತು, ನನ್ನ ಪುಟ್ಟ ಮಗಳದೊಂದು ವಿಚಿತ್ರ ಹಠ. ಆ ಬಾಡಿಗೆ ಮನೆಯ ಗೋಡೆಯ ಮೇಲೆ ಆಕೆ ಪೆನ್ಸಿಲಲ್ಲಿ ಗೀಚಿದ ಅಕ್ಷರಗಳನ್ನು ತಮ್ಮ ಜೊತೆಯಲ್ಲಿ ದೇರ್ಲಕ್ಕೆ ಒಯ್ಯಬೇಕೆನ್ನುವ ಬೊಬ್ಬೆ. ಒಯ್ಯುವುದಾದರೂ ಹೇಗೆ? ಬಾಡಿಗೆ ಮನೆಯ ಗೋಡೆಯನ್ನು ಕಳಚಿ ಗಾಡಿಗೆ ಇರಿಸುವುದಾದರೂ ಹೇಗೆ? ಮಕ್ಕಳ ಮನಸ್ಥಿತಿಯಲ್ಲೂ ನಮಗಿಂತ ಹೆಚ್ಚು ಕಾಪಿಡುವ, ತನ್ನದೆನ್ನುವ ಆಸೆಗಳಿರುತ್ತವೆ, ಆದರೆ ಎಷ್ಟೋ ಆಸೆಗಳು ಕಳಚಲಾರದೆ ಸ್ಥಾವರ ಸ್ಥಿತಿಯಲ್ಲಿ ಮಡುಗಟ್ಟಿರುತ್ತವೆ.
ಹಾಕ್ಕೊಳ್ಳಿ, ನಾನು ಹುಡುಕುತ್ತಿರುವಾಗಲೇ ಯಾರೋ ಬರೆದ ಒಂದು ಪತ್ರ ಕೈಗೆ ಸಿಕ್ಕಿ ಕಟ್ಟಿ ಹಾಕುತ್ತದೆ. ಅದು ಬರೀ ಪತ್ರವಾಗುವುದಿಲ್ಲ. ೩೦-೪೦ ವರ್ಷಗಳ ಹಿಂದಿನ ಕಥೆಯಾಗಿರುತ್ತದೆ. ಆ ಪತ್ರದ ಒಳಗಡೆಯ ಅಕ್ಷರಗಳು ಅಭಿಪ್ರಾಯವಾಗಿರದೆ ಸಂಬಂಧವಾಗಿ ಬೆಸೆಯುತ್ತಾ ಕಾಲಗರ್ಭದೊಳಗೆ ಹುದುಗಿಸುತ್ತದೆ, ಬರೆದವರು ಈಗ ಇಲ್ಲದಿದ್ದರೆ ಅದು ಅವರ ಸಾವಿನೊಂದಿಗೆ ಸೇರಿಸಿಕೊಂಡು ಇಡೀ ಬದುಕನ್ನೇ ಶೋಧಿಸುತ್ತದೆ. ಮತ್ತೆ ಮತ್ತೆ ಊರೊಳಗಡೆ ಅವರ ಮಕ್ಕಳು ಮೊಮ್ಮಕ್ಕಳು ಎದುರಾದಾಗ ಆ ಪತ್ರ ಮತ್ತೊಮ್ಮೆ ತೆರೆದುಕೊಳ್ಳುತ್ತದೆ. ಯಾವುದೋ ಹಳೆಯ ಫೋಟೊ, ಇನ್ಯಾವುದೋ ಹಳೆಯ ಪುಸ್ತಕ, ನಾವೇ ಪದವಿಗೆ ಬರೆದ ನೋಟ್ಸ್ ಅದರ ಮೂಲೆ ಮೂಲೆಯಲ್ಲಿ ಬರೆದ ಕೈ ಬರಹದ ಸಂಕೇತಗಳು, ಆಗ ಪಾಠ ಮಾಡಿದ ಮೇಷ್ಟ್ರು, ಅಕ್ಕಪಕ್ಕದಲ್ಲಿ ಕೂತ ಗೆಳೆಯ ಗೆಳತಿಯರು, ಬರೀ ಅಷ್ಟೇ ಅಲ್ಲ, ಕೂತು ಓದಿದ ತರಗತಿ, ಆ ಕಟ್ಟಡ, ಶಾಲೆಯ ಮೈದಾನ, ಅಲ್ಲಿಯ ಮಾವಿನ ಮರ, ಗೇರು ಮರ, ಅದ್ರಮನ ಅಂಗಡಿ, ಅಲ್ಲಿಯ ಅಕ್ರೋಟು, ಬಸ್ಸಿಗೆ ನೇತು ಬಿದ್ದು ಶಾಲೆ ಕಾಲೇಜಿಗೆ ಹೋದದ್ದು, ಹರಿದ ಚಪ್ಪಲಿ, ಪ್ಯಾಂಟು ಶರ್ಟು ಹೀಗೆ ಅನ್ನದ ಸಮಸ್ಯೆಯ ನಡುವೆ ಅಂದಿನ ಬಡತನದ ನೆಮ್ಮದಿಯ ನೂರಾರು ಭಾವಭಂಗಿಗಳು ಮನಸ್ಸಿಗೆ ಬಂದು ಮುತ್ತುತ್ತವೆ.
ಜಗಲಿ ಮಧ್ಯೆ ಈ ರಾಶಿ ಕಡತಗಳ ನಡುವೆ ಇವುಗಳನ್ನೆಲ್ಲ ನೋಡುತ್ತಾ ತಡಕುತ್ತ ಧ್ಯಾನಸ್ಥನಾದ ನನಗೆ ಇಲ್ಲಿ ಬೇಡದೆನ್ನುವುದು, ಸುಟ್ಟು ಬಿಡಬೇಕೆನ್ನುವುದು, ಗಿಡ-ಗಿಡಗಳ ಬುಡಕ್ಕೆ ಸೇರಿಸಿ ಗೊಬ್ಬರ ಮಾಡಬೇಕೆನ್ನುವುದು ಯಾವುದು ಇದೆ ಹೇಳಿ? ಎಲ್ಲವೂ ಬೇಕಾದವುಗಳೇ.!