ಮಾನ್ಯವರ್ ಕಾನ್ಶಿರಾಮ್: ಭಾರತದ ರಾಜಕಾರಣದಲ್ಲಿ ಬುದ್ಧ

Update: 2025-03-15 11:13 IST
ಮಾನ್ಯವರ್ ಕಾನ್ಶಿರಾಮ್: ಭಾರತದ ರಾಜಕಾರಣದಲ್ಲಿ ಬುದ್ಧ
  • whatsapp icon

1995 ರಲ್ಲಿ, ಮಾನ್ಯವಾರ್ ಕಾನ್ಶಿರಾಮರ ನೇತೃತ್ವದ ಬಹುಜನ ಸಮಾಜ ಪಾರ್ಟಿಯು ಭಾರತೀಯ ಜನತಾ ಪಾರ್ಟಿಯೊಂದಿಗೆ ಮೈತ್ರಿ ಮಾಡಿಕೊಂಡು ಮಾಯಾವತಿಯವರನ್ನು ಮುಖ್ಯಮಂತ್ರಿಯನ್ನಾಗಿಸಿ ಉತ್ತರ ಪ್ರದೇಶ ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರ ರಚಿಸಿತು. ಆ ಕೂಡಲೆ, ಹಲವು ದಲಿತ ನಾಯಕರು ಮತ್ತು ಪ್ರಗತಿಪರರು, "ಅಯ್ಯಯ್ಯೋ ಇದೊಂದು ಅಪವಿತ್ರ ಮೈತ್ರಿ", ಬಿ.ಎಸ್.ಪಿ. ತರದ ಅಂಬೇಡ್ಕರವಾದಿ ಪಕ್ಷವು ಒಂದು ಕೋಮುವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದೆಂದರೆ ಇದಕ್ಕಿಂತ ಅವಕಾಶವಾದಿ ರಾಜಕಾರಣ ಮತ್ತೊಂದಿಲ್ಲ?" ಎಂದು ಮಾತಾಡಡತೊಡಗಿದರು. ಆಗ ಒಬ್ಬ ಪ್ರಮುಖ ಪತ್ರಕರ್ತರು ಕಾನ್ಶಿರಾಮ್ ರನ್ನು ಕುರಿತು, "ನೀವೇಕೆ ಇಂತಹ ಸಂವಿಧಾನ-ವಿರೋಧಿ ಪಕ್ಷದ ಜತೆ ಸರ್ಕಾರ ರಚಿಸಿದಿರಿ?" ಎಂದು ಕೇಳಿದರು. ಅದಕ್ಕೆ ಸಾಹೇಬರು ಉತ್ತರಿಸಿದರು, "ಏನು ಮಾಡಲಿ, ನಾನು ಲಕ್ನೋಗೆ ಕುದುರೆ ಹತ್ತಿ ಹೋಗಬೇಕೆಂತಲೇ ಬಯಸಿದ್ದೆ. ಆದರೆ, ನನ್ನ ತುರ್ತಿಗೆ ಕುದುರೆ ಸಿಗಲಿಲ್ಲ, ಈ ಕತ್ತೆ ಸಿಕ್ಕಿತು. ಆದ್ದರಿಂದ ಇದನ್ನೇ ಹತ್ತಿ ಲಕ್ನೋಗೆ ಹೊರಟು ಬಂದೆ. ಮುಂದೆ ದಿಲ್ಲಿಗೆ ಹೋಗಬೆಂದಿರುವೆನು. ಆಗ ಒಳ್ಳೆಯ ಕುದುರೆ ಸಿಗಬಹುದೇನೋ ನೋಡೋಣ" ಎಂದರಂತೆ. ಮುಂದೆ, ಮಾಯಾವತಿಯವರ ನಾಯಕತ್ವದಲ್ಲಿ, 1997 ಮತ್ತು 2002 ರಲ್ಲೂ ಬಿ. ಎಸ್. ಪಿ. ಮತ್ತು ಬಿಜೆಪಿ ಪಕ್ಷಗಳ ಮೈತ್ರಿ ಸರ್ಕಾರವು ರಚಿಸಲ್ಪಟ್ಟಿತು. ಆದರೆ, ಈ ಯಾವುದೇ ಸಂದರ್ಭದಲ್ಲೂ, ಬಹುಜನ ಸಮಾಜ ಪಾರ್ಟಿಯ ಬದ್ಧತೆಯ ಬಗ್ಗೆ ಯಾರೂ ಆಕ್ಷೇಪವೆತ್ತಲಿಲ್ಲ; ಬಿಎಸ್ಪಿಯು ಬಿಜೆಪಿಗೆ ಶರಣಾಯಿತು ಎಂದು ಆರೋಪಿಸಲಿಲ್ಲ. ಆದರೆ, ಇಂದು, ಬಿಎಸ್ಪಿಯು ಬಿಜೆಪಿ - ಕಾಂಗ್ರೆಸ್ ಪಕ್ಷಗಳೆರಡರಿಂದಲೋ ಸಮನಾಂತರ ಕಾಯ್ದುಕೊಂಡಿರುವುದಾಗಿ ಹೇಳಲಾಗುತ್ತಿದೆ. ಆದರೂ, ಮಾಯಾವತಿಯವರು ಬಿಜೆಪಿಗೆ ಶರಣಾಗಿದ್ದಾರೆ ಮತ್ತು ಬಿಎಸ್ಪಿಯು ಬಿಜೆಪಿಯ 'ಬಿ' ಟೀಮ್ ಆಗಿಬಿಟ್ಟಿದೆ ಎಂಬ ಆರೋಪಗಳು ಕೇಳಿಬರುತ್ತಿವೆ! ಏಕೆ ಹೀಗಾಯಿತು? ದಲಿತ ನಾಯಕತ್ವದ ಮೂರನೇ ರಾಷ್ಟ್ರೀಯ ಪಕ್ಷವೊಂದು ಲೋಕಸಭೆ ಯಲ್ಲಿ ಶೂನ್ಯವಾಗಿ, ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಕೇವಲ ಒಂದು ಸ್ಥಾನ ಪಡೆಯುವಂತಾದ್ದು ಹೇಗೆ?

ಇಂದು ದೇಶದಾದ್ಯಂತ ಮಾನ್ಯವಾರ್ ಕಾನ್ಶಿರಾಮ್ ಸಾಹೇಬರ 91ನೆ ಜಯಂತಿಯ ಸಂದರ್ಭದಲ್ಲಿ, ಅವರ ಅನುಯಾಯಿಗಳು, ಅಭಿಮಾನಿಗಳು ಮತ್ತು ಶಿಷ್ಯರು ಪಕ್ಷದ ಈ ಕಳಪೆ ಸಾಧನೆಯ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ.

"ಮಾಯಾವತಿಯವರ ತಪ್ಪಾದ ರಾಜಕೀಯ ನಿಲುವುಗಳು, ಸರ್ವಾಧಿಕಾರಿ ಧೋರಣೆ ಮತ್ತು ಜನರಿಂದ ದೂರವಾಗಿ ಉಳಿದಿದ್ದರ ಪರಿಣಾಮವಾಗಿ ಈ ಅವನತಿ ಉಂಟಾಯಿತು" ಎಂಬ ಅಭಿಪ್ರಾಯಗಳನ್ನು ಅನೇಕರು ಹೇಳುತ್ತಾರೆ. ಈ ಅಭಿಪ್ರಾಯಗಳು ಸರಿ ಎನ್ನಿಸಬಹುದು. ಆದರೆ, ಇಂತಹ ಅಭಿಪ್ರಾಯಗಳನ್ನು ಹಿಂದೆ ಹಲವರು ಕಾನ್ಶಿರಾಮ್ ಸಾಹೇಬರ ವಿರುದ್ಧವೂ ಹೇಳುತ್ತಿದ್ದರು. ಆದರೆ, ಅವರ ಸಾಮಾಜಿಕ ಕಾಳಜಿ ಮತ್ತು ಬದ್ಧತೆಯ ಬಗ್ಗೆ ಯಾರೂ ಪ್ರಶಿಸಲಾಗಲಿಲ್ಲ. ಕಾರಣವೇನೆಂದರೆ, ಅವರ ನೇತೃತ್ವದಲ್ಲಿ ಬಹುಜನ ಚಳುವಳಿಯು ಅದ್ಭುತ ಮುನ್ನಡೆ ಸಾಧಿಸುತ್ತಾ ಚುನಾವಣೆಯಿಂದ ಚುನಾವಣೆಗೆ ಯಶಸ್ಸಿನ ಮೆಟ್ಟಿಲೇರುತ್ತಾ ಹೋಯಿತು. ಆರಂಭದಲ್ಲಿ ಕೇವಲ ಚಮ್ಮಾರರ ಪಕ್ಷವೆಂದು ಮೂದಲಿಸಲ್ಪಟ್ಟ ಬಿ.ಎಸ್. ಪಿ. ಯು, ಕೇವಲ 12 ವರ್ಷದಲ್ಲಿ, 600ಕ್ಕೂ ಹೆಚ್ಚಿನ ದಮನಿತ ಜಾತಿಗಳ ಪಕ್ಷವಾಗಿ ರಾಷ್ಟ್ರೀಯ ಪಕ್ಷವೆಂಬ ಮಾನ್ಯತೆ ಪಡೆಯಿತು. ಅಲ್ಲದೆ, ಉತ್ತರ ಪ್ರದೇಶದಂತಹ ರಾಜ್ಯದಲ್ಲಿ ನಾಲ್ಕು ಬಾರಿ ಸರ್ಕಾರ ರಚಿಸುವಂತಯಿತು.

ಕಾನ್ಶಿರಾಮ್ ಸಾಹೇಬರ ಈ ಅಪೂರ್ವ ಯಶಸ್ಸಿನ ಗುಟ್ಟು ಅವರು ತಮ್ಮ ವೈಯಕ್ತಿಕ ಬದುಕಿನಲ್ಲಿ ಪಾಲಿಸಿಕೊಂಡು ಬಂದ ನಿಸ್ವಾರ್ಥತೆ, ಸರಳತೆ, ಶೀಲ, ಶಿಸ್ತು, ಚಾರಿತ್ರ್ಯ ಮತ್ತು ತ್ಯಾಗದ ಫಲಿತಾಂಶವಾಗಿತ್ತು ಎಂಬುದನ್ನು ನಾವು ಮರೆಯಬಾರದು. ಶೋಷಿತ ಜನರ ವಿಮೋಚನೆಗೆ ತಮ್ಮನ್ನು ಅರ್ಪಿಸಿಕೊಂಡವರು ಸನ್ಮಾನಕ್ಕೆ ಆಸೆಪಡದೆ, ಅವಮಾನಕ್ಕೆ ಅಂಜದೆ, ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ,ಉನ್ನತ ಆದರ್ಶಗಳನ್ನು ತಮ್ಮ ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಳ್ಳಲೇ ಬೇಕಾದದ್ದು ಅನಿವಾರ್ಯ. ಕಾನ್ಶಿರಾಮ್ ಜಿ ಯವರ ರಾಜಕೀಯ ತಂತ್ರಗಳಿಗೆ ಬಲಿಯಾಗಿ ಬೆರಗಾದವರು, "ಆತ ಮೋಸಗಾರ, ತಂತ್ರಗಾರ, ಎರಡು ನಾಲಿಗೆಯುಳ್ಳ ವಂಚಕ" ಎಂದೆಲ್ಲ ಸಿಟ್ಟಿನಲ್ಲಿ ಹೇಳುತ್ತಿದ್ದರು. ಆದರೆ ಅವರು ಸ್ವಾರ್ಥ ರಾಜಕಾರಣಿ ಆಗಿರಲಿಲ್ಲ ಎಂಬುದನ್ನು ಅವರ ಕಡು ವಿರೋಧಿಗಳೂ ಒಪ್ಪಿಕೊಳ್ಳುತ್ತಿದ್ದರು. ಬಹುಜನ ಸಮಾಜವನ್ನು ಆಳುವ ಸಮಾಜವನ್ನಾಗಿ ಮಾಡಲು ಅವರು ಯಾವುದೇ ರೀತಿಯ ತಂತ್ರಗಾರಿಕೆ ಮಾಡಲು ಹಿಂಜರಿದವರಲ್ಲ.

ನೆಲ್ಸನ್ ಮಂಡೇಲಾ ರವರನ್ನು ಬಿಳಿಯರ ಸರ್ಕಾರವು 27 ವರ್ಷ ಕಾಲ ಸೆರೆಮನೆಯಲ್ಲಿ ಇಟ್ಟು, ದಂಡಿಸಿತು. ಆದರೆ, ಕಾನ್ಶಿರಾಮ್ ಸಾಹೇಬರು ತಾವೇ ತಮ್ಮ ಸುತ್ತ ಸೆರೆಮನೆಯೊಂದನ್ನು ಕಟ್ಟಿಕೊಂಡು ತಮ್ಮೆಲ್ಲ ಬಂಧು ಬಳಗದಿಂದ ಜೀವನಪರ್ಯಂತ ದೂರವುಳಿದರು; ಬಾಬಾಸಾಹೇಬರ ಸ್ವಪ್ನ ಸಾಕಾರವಾಗುವ ತನಕ ತನ್ನ ಹಳ್ಳಿಗೆ ಹೋಗಲಾರೆ ಮತ್ತು ಕುಟುಂಬದವರನ್ನು ಭೇಟಿ ಆಗಲಾರೆ ಎಂದು ಶಪಥ ಕೈಕೊಂಡರು. ಇಡೀ ಬಹುಜನ ಸಮಾಜವೇ ತಮ್ಮ ಕುಟುಂಬವೆಂದು ಭಾವಿಸಿದರು. ತಮ್ಮ ಹೆಸರಿನಲ್ಲಿ, ಆಸ್ತಿ ಪಾಸ್ತಿ ಮಾಡಲಿಲ್ಲ. ಕನಿಷ್ಠ ಒಂದು ಬ್ಯಾಂಕ್ ಖಾತೆಯನ್ನೂ ಹೊಂದಲಿಲ್ಲ! ಆದ್ದರಿಂದಲೇ, ಅವರ ಅನುಯಾಯಿಯೊಬ್ಬರು ಅವರ ಪರಿನಿಬ್ಬಾನದ ಸಂದರ್ಭದಲ್ಲಿ, "ಅವರೊಬ್ಬ ರಾಜಕಾರಣದ ಬುದ್ಧ" ಎಂದು ಬಣ್ಣಸಿ ಲೇಖನ ಬರೆದರು. ಎಲ್ಲಾ ಬಗೆಯ ವೈಯಕ್ತಿಕ ಆಸೆ ಮತ್ತು ಬಯಕೆಗಳನ್ನು ತೊರೆದ ಸನ್ಯಾಸಿಯಾಗಿ ಏಕಚಿತ್ತದಿಂದ ತಮ್ಮ ಧ್ಯೇಯ ಸಾಧನೆ ಮಾಡಿದವರು ಮಾನ್ಯವಾರ್ ಕಾನ್ಶಿರಾಮ್.

ನಮ್ಮನ್ನು ಆಳುತ್ತಿರುವ ಬಹುತೇಕ ವೃತ್ತಿಪರ ರಾಜಕಾರಿಣಿಗಳು ತಮ್ಮ ವೈಯುಕ್ತಿಕ ಜೀವನದಲ್ಲಿ ಕನಿಷ್ಠ ಶಿಸ್ತು, ಪ್ರಾಮಾಣಿಕತೆ, ಚಾರಿತ್ರ್ಯ, ನೈತಿಕತೆ ಮತ್ತು ನಿಸ್ವಾರ್ಥತೆಯನ್ನು ಉಳಿಸಿಕೊಳ್ಳದೆ ಇರುವುದರಿಂದಾಗಿಯೇ ಇಂದು ದೇಶವು ಭ್ರಷ್ಟಾಚಾರದ ಕೂಪವಾಗಿದೆ. ಕಾನ್ಶಿರಾಮ್ ಸಾಹೇಬರ ವಿರುದ್ಧವೂ ಸಹ, " ಅವರೊಬ್ಬ ಸಿಐಎ ಏಜೆಂಟ್, ಕ್ರಿಶ್ಚಿಯನ್-ಅರಬ್ ದೇಶಗಳ ಏಜೆಂಟ್, ಎನ್ಜಿಒಗಳ ಕೈಕೂಲಿ" ಎಂಬೆಲ್ಲ ಅನೇಕನೇಕ ಆರೋಪಗಳನ್ನು ಮಾಡಲಾಗಿತ್ತು. ಆದರೆ ಅದಾವುದೂ ಅವರನ್ನು ಸೋಕಲಿಲ್ಲ. ಏಕೆಂದರೆ, ಈ ಎಲ್ಲಾ ಆರೋಪಗಳೆಲ್ಲವೂ ಅವರ ಚಳುವಳಿಯನ್ನು ದಿಕ್ಕು ತಪ್ಪಿಸಲೆಂದೇ ಅವರ ರಾಜಕೀಯ ವಿರೋಧಿಗಳು ಮಾಡಿದ ಆಧಾರರಹಿತ ಆರೋಪಗಳಾಗಿದ್ದವು. ಭಾರತದಲ್ಲಿ ಸ್ವಜಾತಿ-ಪರಿವಾರ ರಾಜಕಾರಣವು ಸಹಜ ಎಂಬಂತೆ ಎಲ್ಲರೂ ಒಪ್ಪಿಕೊಂಡಿರುವಾಗ, ಸಮಾಜ ಪರಿವರ್ತನೆಯ ಗುರಿ ಹೊಂದಿರುವ ಪಕ್ಷಕ್ಕೆ ಆ ನಿಯಮವು ಎಂತಹ ಅಪಾಯವನ್ನು ತಂದೊಡ್ಡಬಲ್ಲದು ಎಂಬುದನ್ನು ಅವರ ಆಪ್ತ ಶಿಷ್ಯೆ ಮಾಯಾವತಿಯವರ ಕಾಲದಲ್ಲೇ ನಾವು ಇಂದು ಕಾಣುತ್ತಿದ್ದೇವೆ. ಕಾನ್ಶಿರಾಮರು ಒಂದು ವೃತ ಎಂಬಂತೆ ಪಾಲಿಸಿಕೊಂಡ ಬಂದ ನಿಯಮಗಳನ್ನು ಗಾಳಿಗೆ ತೂರಿದ ಮಾಯಾವತಿಯವರು, ಪಕ್ಷದ ಪ್ರಮುಖ ಹುದ್ದೆಗಳಿಗೆ ತಮ್ಮ ಸಹೋದರ, ಆತನ ಬೀಗ, ಆತನ ಮಗ ಮುಂತಾದವರನ್ನು ನೇಮಿಸಿದರು. ಸಮಾಜದ ಪರಿವರ್ತನೆಗಾಗಿ ರಾಜಕಾರಣ ಮಾಡಬೇಕೆಂದು ಹೇಳಿದ್ದ ತಮ್ಮ ಗುರುವಿನ ಮಾತನ್ನು ಧಿಕ್ಕರಿಸಿ, ಇತರ ವೃತ್ತಿಪರ ರಾಜಕಾರಿಣಿಗಳಂತೆ, ಹಣ ಆಸ್ತಿ ಗಳಿಸುವುದರಲ್ಲಿ ಮುಳುಗಿ, ಅಕ್ರಮ ಹಣ ಗಳಿಕೆಯ ಆರೋಪಗಳಿಗೆ ಗುರಿಯಾದರು; ಈಡಿ, ಸಿಬಿಐ ದಾಳಿಗಳಿಗೆ ತುತ್ತಾಗಿ, ಹಿಂದೆಂದೂ ಇಲ್ಲದಿದ್ದ ಸಂಕಷ್ಟಗಳನ್ನು ಮೈಮೇಲೆ ಎಳೆದುಕೊಂಡರು. ಇವುಗಳ ಜೊತೆಗೆ, ಬಿಜೆಪಿ ಗೆ ಪೂರಕವಾದ ಅವರ ನಿಲುವು ಮತ್ತು ನಿರ್ಧಾರಗಳು ಅವರಿಗಿದ್ದ 'ಉಕ್ಕಿನ ಮಹಿಳೆ' ಎಂಬ ಇಮೇಜನ್ನು ಮೊಂಡಾಗಿಸಿದವು. ತಮ್ಮ ನಂತರ, ತಮ್ಮ ಚಮ್ಮಾರ ಜಾತಿಗೆ ಸೇರಿದ ಯುವಕನನ್ನೇ ತಮ್ಮ ವಾರಸುದಾರನನ್ನಾಗಿ ಮಾಡುತ್ತೇನೆ ಎಂದು 10-12 ವರ್ಷಗಳ ಹಿಂದೆ ಘೋಷಣೆ ಮಾಡಿದ್ದ ಮಾಯಾವತಿಯವರು ತಮ್ಮ ಸೋದರ ಅಳಿಯನನ್ನೇ ತಮ್ಮ ವಾರಸುದಾರನನ್ನಾಗಿ ಮಾಡಿದ್ದು, ಅನೇಕ ಪ್ರಾಮಾಣಿಕ ಹಾಗೂ ಹಳೆಯ ನಾಯಕರು ಪಾರ್ಟಿಯಿಂದ ಹೊರ ನಡೆಯುವಂತೆ ಮಾಡಿತು. ಮಾಯಾವತಿಯವರು ಎಸ್. ಸಿ. ವರ್ಗಿಕರಣದ ವಿರುದ್ಧ ತೆಗೆದುಕೊಂಡ ನಿಲುವಿನಿಂದಾಗಿ, ಕಾನ್ಶಿರಾಮ್ ರ ಕಾಲದಲ್ಲಿ ಪಾರ್ಟಿ ಸದಸ್ಯರಾಗಿದ್ದ 600 ಕ್ಕೂ ಮಿಗಿಲಾದ ಶೋಷಿತ ಜಾತಿಗಳು ಇಂದು ಕಾಂಗ್ರೆಸ್, ಎಸ್. ಪಿ., ಬಿಜೆಪಿಯ ತೆಕ್ಕೆಗಳಿಗೆ ಜಾರಿವೆ. ಇಂದು, ಚಮ್ಮಾರ ಜಾತಿಯ (ಅವರೂ ಭಾಗಷಃ) ಹೊರತಾಗಿ ಉಳಿದೆಲ್ಲರೂ ಬೆಹನ್ ಜೀಯನ್ನು ತೊರೆದಿದ್ದಾರೆ.

ಸಾಮಾಜಿಕ ಪರಿವರ್ತನೆಯ ಲಕ್ಷ್ಯವುಳ್ಳ ಪಾರ್ಟಿಯ ಒಬ್ಬ ನಾಯಕ ಅಥವಾ ನಾಯಕಿಯು ವೈಯಕ್ತಿಕ ಸುಖ, ಸಂಪತ್ತು ಗಳಿಕೆಯಲ್ಲಿ ಮುಳುಗಿದಾಗ, ಅವರು ತಮ್ಮ ಕಾರ್ಯಕರ್ತರಿಂದ ಮತ್ತು ಸಾರ್ವಜನಿಕರಿಂದ ಅನಿವಾರ್ಯವಾಗಿ ದೂರವಾಗಿ ತಮ್ಮದೇ ಆದ ದುಷ್ಟಕೂಟದ ಸೆರೆಯಲ್ಲಿ ಬದುಕಬೇಕಾಗುತ್ತದೆ. ಆಮೂಲಕ, ಅವರ ತೀರ್ಮಾನಗಳು ಸಮಾಜ ವಿರೋಧಿ ತೀರ್ಮಾನಗಳಾಗಿ ಬದಲಾಗುವುದು ಸಹ ಅನಿವಾರ್ಯವಾಗುತ್ತದೆ. ಅಂತಿಮವಾಗಿ, ಅವರ ದುಷ್ಟಕೂಟವೇ ಅವರಿಗೆ ಮುಳುವಾಗುತ್ತದೆ. ಇಂದು, ಕಾನ್ಶಿರಾಮ್ ಸಾಹೇಬರಿಂದ ಪ್ರೇರಣೆಪಡೆದ ಪ್ರಾಮಾಣಿಕರು ಯಾರೊಬ್ಬರೂ ಬೆಹೇನ್ ಜೀಯವರ ಜೊತೆಗಿಲ್ಲ. ಅವರ ಸುತ್ತಲಿದ್ದ ಸ್ವಾರ್ಥ ಬಂಧುಗಳೇ ಅವರಿಗೆ ಕೇಡು ಉಂಟು ಮಾಡಿದ್ದಾರೆ, ಅವರ ಹೆಸರನ್ನು ಕೆಡಿಸಿದ್ದಾರೆ ಎಂಬುದು ಅವರಿಗೆ ಈಗ ಅರಿವಾಗಿ ಅವರನ್ನು ಹೊರಹಾಕಿದ್ದಾರೆ. ಆದರೆ, ಇದು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದ ಕತೆಯಾಗಿದೆ.

ಇಂದು ಮಾನ್ಯವಾರ್ ಕಾನ್ಶಿರಾಮ್ ಸಾಹೇಬರ ಕನಸನ್ನು ನನಸು ಮಾಡಲು ತುಡಿಯುತ್ತಿರುವ ಅವರ ಅನುಯಾಯಿಗಳು, ಅವರ ಸಾರ್ವಜನಿಕ ಯಶಸ್ಸಿನ ಗುಟ್ಟು ಅವರ ಸಚ್ಚಾರಿತ್ರ್ಯದಿಂದ ಕೂಡಿದ ಪರಿಶ್ರಮದ ಬದುಕಿನಲ್ಲಿ ಅಡಗಿದೆ ಎಂಬುದನ್ನು ಅರಿಯಬೇಕಿದೆ, ಅದರಂತೆ ನಡೆಯಬೇಕಿದೆ. ವೈಯುಕ್ತಿಕವಾಗಿ ಅನೈತಿಕ ಬದುಕು ನಡೆಸುವ ಯಾವ ಭ್ರಷ್ಟ ನಾಯಕನೂ ಸಾರ್ವಜನಿಕವಾಗಿ ಪ್ರಾಮಾಣಿಕ ಆಡಳಿತ ನೀಡಲಾರ ಎಂಬುದನ್ನು ಇತಿಹಾಸವು ತೋರಿಸಿದೆ. ವೈಯಕ್ತಿಕ ಜೀವನದಲ್ಲಿ ಸೋತಿರುವ ಅಂತಹ ವ್ಯಕ್ತಿಯೂ ಸಾರ್ವಜನಿಕ ಜೀವನದಲ್ಲಿ ಯಶಸ್ಸನ್ನು ಸಾಧಿಸಲಾರ. ಮಾನ್ಯವಾರ್ ಕಾನ್ಶಿರಾಮ್ ಸಾಹೇಬರ ಹಾಗೂ ಬೆಹೇನ್ ಜಿಯವರಿಬ್ಬರ ಜೀವನಗಳಿಂದಲೂ ಕಲಿಯುವುದಕ್ಕೆ ನಮಗೆ ಬೇಕಾದಷ್ಟು ಪಾಠಗಳಿವೆ. ನಾವು ಆರಿಸಿಕೊಳ್ಳುವ ಗುರಿಗೆ ಪೂರಕವಾದ ಪಾಠಗಳನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯವೂ ನಮಗಿದೆ. ಹಣ -ಅಧಿಕಾರವಿಲ್ಲದಿದ್ದರೂ, ಇತಿಹಾಸ ನಿರ್ಮಿಸಬಹುದು ಎಂಬುದಕ್ಕೆ ಕಾನ್ಶಿರಾಮ್ ಸಾಹೇಬರು ಪ್ರೇರಣೆಯಾಗಿರುವಂತೆ, ಹಣ-ಅಧಿಕಾರಗಳಿದ್ದರೂ ಇತಿಹಾಸದ ಕಸದ ಬುಟ್ಟಿಗೆ ರವಾನೆಯಗುತ್ತಾರೆ ಎಂಬುದಕ್ಕೆ ಬಹೇನ್ ಮಾಯಾವತಿ ಯವರು ಉದಾಹರಣೆಯಾಗಿದ್ದಾರೆ!

- ಎಂ. ಗೋಪಿನಾಥ್, ಬೆಂಗಳೂರು

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಎಂ. ಗೋಪಿನಾಥ್

contributor

Similar News