ಉತ್ತರ ಕನ್ನಡದಲ್ಲಿ ಬತ್ತುತ್ತಿವೆ ಕುಡಿಯುವ ನೀರಿನ ಮೂಲಗಳು

Update: 2025-03-17 10:00 IST
ಉತ್ತರ ಕನ್ನಡದಲ್ಲಿ ಬತ್ತುತ್ತಿವೆ ಕುಡಿಯುವ ನೀರಿನ ಮೂಲಗಳು
  • whatsapp icon

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಸಿಲ ಝಳ ಒಂದೇ ಸಮನೆ ಏರಿಕೆಯಾಗಿದ್ದರಿಂದ ವಿವಿಧ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಗ್ರಾಮೀಣ ಭಾಗದಲ್ಲೂ ಈಗಾಗಲೇ ನೀರಿನ ಪ್ರಮಾಣದಲ್ಲಿ ಸಾಕಷ್ಟು ಇಳಿಕೆಯಾಗಿದ್ದು ಪಂಚಾಯತ್‌ನಿಂದ ಪೂರೈಕೆಯಾಗುವ ನೀರೇ ಆಸರೆಯಾಗಿದೆ.

ಜಿಲ್ಲೆಯಲ್ಲಿ ಬೇಸಿಗೆ ಬಂತೆಂದರೆ ನೀರಿನ ಸಮಸ್ಯೆ ಕಂಡು ಬರುತ್ತದೆ. ಆದರೆ ಈ ಬಾರಿ ಬಿಸಿಲ ತಾಪಮಾನ ಹೆಚ್ಚಳವಾಗಿದ್ದರಿಂದ ಅವಧಿಗೂ ಮುನ್ನವೇ ನೀರಿನ ಕೊರತೆ ಕಂಡು ಬಂದಿದೆ. ಅಲ್ಲದೆ ಎಪ್ರಿಲ್ ಅಂತ್ಯ ಮೇ ತಿಂಗಳಿನಲ್ಲಿ ನೀರಿನ ಸಮಸ್ಯೆ ಗಂಭೀರವಾಗುವ ಸಾಧ್ಯತೆ ಹೆಚ್ಚಿದೆ.

ಕಾರವಾರ ತಾಲೂಕಿನ ಸೀಬರ್ಡ್ ನೌಕಾ ಯೋಜನೆಗೆ ಭೂಮಿಯನ್ನು ಕಳೆದುಕೊಂಡ ನಿರಾಶ್ರಿತರ ಕೇಂದ್ರ ಅಮದಳ್ಳಿ ಗ್ರಾಪಂ ತೋಡೂರು ಕಾಲನಿಯಲ್ಲಿ ಕುಡಿಯುವ ನೀರಿಗೆ ಹೆಚ್ಚಿನ ಸಮಸ್ಯೆ ಉಂಟಾಗಿದೆ. ಇಲ್ಲಿ 320ಕ್ಕೂ ಹೆಚ್ಚು ಕುಟುಂಬಗಳಿವೆ. 20ಕ್ಕೂ ಹೆಚ್ಚು ಬಾವಿಗಳಿವೆ. ಆದರೆ ಈ ಎಲ್ಲ ಬಾವಿಗಳಲ್ಲಿ ನೀರು ತಳಕಾಣುವಂತಾಗಿದೆ. ತೋಡೂರಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಬಾವಿಗಳು ಸಂಪೂರ್ಣವಾಗಿ ಬತ್ತುವ ಹಂತಕ್ಕೆ ತಲುಪಿದೆ. ಇದರಿಂದ ಸ್ಥಳೀಯರು ತೊಂದರೆ ಪಡುವಂತಾಗಿದೆ. ಕಿನ್ನರ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ನಡುವೆಯೇ ಉಪ್ಪು ನೀರಿನ ತೊಂದರೆಯೂ ಸೃಷ್ಟಿಯಾಗಿದ್ದರಿಂದ ಜನರು ಕುಡಿಯುವ ನೀರಿಗೂ ತೊಂದರೆ ಅನುಭವಿಸುತ್ತಿದ್ದಾರೆ.

ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಪಂಚಾಯತ್, ಗ್ರಾಪಂಗಳಿಂದ ನೀರು ಪೂರೈಕೆಯಾಗುತ್ತಿದೆ. ಸದ್ಯ ಈ ನೀರೇ ಜನರಿಗೆ ಆಸರೆಯಾಗಿದೆ. ಕಾರವಾರ ತಾಲೂಕಿನ ನಗರ ಪ್ರದೇಶದಲ್ಲಿ ಈ ಬಾರಿ ಬಾವಿಯ ನೀರು ತಳ ಮಟ್ಟಕ್ಕೆ ತಲುಪಿದೆ. ನಗರ ಸಭೆಯಿಂದ ಶುದ್ಧ ಕುಡಿಯುವ ನೀರಿನ ಘಟಕ ಅಲ್ಲಲ್ಲಿ ನಿರ್ಮಾಣ ಮಾಡಿದ್ದರಿಂದ ಹೆಚ್ಚಿನ ಜನರು ನೀರು ಪಡೆಯುತ್ತಿದ್ದಾರೆ. ಅಲ್ಲದೆ ನಳದ ಮೂಲಕ ಮೂರ್ನಾಲ್ಕು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ.

ಕಾರವಾರ ನಗರಸಭೆ ವ್ಯಾಪ್ತಿಯಲ್ಲಿನ ಅಮೃತ 2.0 ಯೋಜನೆ ಅಡಿಯಲ್ಲಿ ನೀರಿನ ಸಮಸ್ಯೆ ಬಗೆಹರಿಸಲು 32 ಕೋಟಿ ರೂ. ಸರಕಾರದಿಂದ ಮಂಜೂರಾಗಿದೆ. ಬಿಣಗಾದಲ್ಲಿ ಈಗಾಗಲೇ ನೀರು ಪೂರೈಕೆಗೆ 150 ಎಚ್‌ಪಿ ಮೋಟರ್ ಇದೆ. ಅದನ್ನು 180 ಎಚ್‌ಪಿಗೆ ಹೆಚ್ಚಿಸಲಾಗುತ್ತಿದೆ. ಅಮೃತ ಯೋಜನೆ ಅಡಿಯಲ್ಲಿ ಈಗಾಗಲೇ 1,180 ಮನೆಗೆ ನೀರಿನ ಸಂಪರ್ಕ ನೀಡಲಾಗಿದೆ.

ಅಂಕೋಲಾ ತಾಲೂಕಿನ ಗಂಗಾವಳಿ ನದಿ ನೀರು 13 ಗ್ರಾಮ, ಸೀಬರ್ಡ್, ಗ್ರಾಸಿಂ ಹಾಗೂ ಕಾರವಾರ ನಗರಕ್ಕೆ ಪೂರೈಕೆ ಆಗುತ್ತಿದೆ. 13.2 ಎಂಎಲ್‌ಡಿ ನೀರಿನ ಬೇಡಿಕೆ ಇದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಸೃಷ್ಟಿಯಾಗುತ್ತದೆ. ನೀರು ಸಂಗ್ರಹ ಮಾಡಲು ಸ್ಯಾಂಡ್ ಬ್ಯಾರೇಜ್ ನಿರ್ಮಿಸಿ ಕ್ರಮಕೈಗೊಳ್ಳಲಾಗುತ್ತಿದೆ. ಏಳು ಮೀಟರ್ ವರೆಗೆ ಮುಂದಿನ ದಿನದಲ್ಲಿ ನೀರು ಸಂಗ್ರಹ ಮಾಡುವ ಯೋಜನೆ ಇದೆ. ಬಿಣಗಾ ಬಳಿ ಈಗಾಗಲೇ 40 ಲಕ್ಷ ಲೀಟರ್ ನೀರಿನ ಟ್ಯಾಂಕ್ ಈ ಹಿಂದೆ ನಿರ್ಮಾಣ ಮಾಡಲಾಗಿದ್ದು ಹೆಚ್ಚುವರಿಯಾಗಿ 10 ಲಕ್ಷ ಲೀಟರ್ ಟ್ಯಾಂಕರ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.

ಕಡವಾಡ ಗ್ರಾಮ ಪಂಚಾಯತ್, ಶಿರವಾಡ ಗ್ರಾಪಂ, ಕಿನ್ನರ ಗ್ರಾಪಂ ಮತ್ತು ಹಣಕೋಣಗಳಲ್ಲಿ ಈಗಲೇ ನೀರಿನ ಸಮಸ್ಯೆ ನಿಧಾನವಾಗಿ ಕಾಣುವಂತಾಗಿದೆ. ಅಂಕೋಲಾ ತಾಲೂಕಿನ ಸಕಲಬೇಣ, ಉಳುವರೆ, ಕಾಮಗೆ, ಹೊಸಗದ್ದೆ, ಪೂಜಗೇರಿ, ಸಿಂಗನಮಕ್ಕಿ, ಹಾರವಾಡ, ಬೆಳಂಬಾರ ಗ್ರಾಮಗಳಲ್ಲಿ ಅಲ್ಲಲ್ಲಿ ನಿಧಾನವಾಗಿ ನೀರಿನ ಸಮಸ್ಯೆ ಕಂಡುಬರುತ್ತಿದೆ.

ಕುಮಟಾ ತಾಲೂಕಿನ ಮಾದನಗೇರಿ, ಹೊಲನಗದ್ದೆ, ಚಿತ್ರಗಿ, ಹೆಗಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಈಗಾಗಲೇ ಉಂಟಾಗಿದೆ. ಹೊನ್ನಾವರ ತಾಲೂಕಿನ ಮಂಕಿ, ಚಂದಾವರ, ಖುರ್ವಾ ಗ್ರಾಮಗಳಲ್ಲೂ ಸಮಸ್ಯೆ ಕಂಡು ಬಂದಿದೆ. ಆದರೆ ಇಲ್ಲಿ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದ್ದು ಭಟ್ಕಳ ತಾಲೂಕಿನ ವಿವಿಧ ಗ್ರಾಮಗಳಲ್ಲೂ ಇದೇ ಸಮಸ್ಯೆ ಇದೆ. ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳಾದ ಮುಂಡಗೋಡ ತಾಲೂಕಿನ ಚವಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತೇಗಿನಕೊಪ್ಪ ಗ್ರಾಮದಲ್ಲಿ ಇರುವ ಕೆರೆಗಳೂ ಬೇಸಿಗೆಯಾದ್ದರಿಂದ ಬತ್ತಿ ಹೋಗಿವೆ. ಹಾಗಾಗಿ ಇಲ್ಲಿನ ಜಾನುವಾರುಗಳಿಗೂ ಕುಡಿಯಲು ಸಮರ್ಪಕ ನೀರು ಸಿಗುತ್ತಿಲ್ಲ. ತಾಲೂಕಿನ ಸನವಳ್ಳಿ, ಅರಶಿನಗೆರಿ, ಬಾಚಣಕಿ, ಅತ್ತಿವೇರಿಯಲ್ಲಿ ಜನ ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ. ಅಂತರ್ಜಲಮಟ್ಟ ದಿನೇ ದಿನೇ ಇಲ್ಲಿ ಕುಸಿಯತೊಡಗಿದೆ. ಯಲ್ಲಾಪುರ ತಾಲೂಕಿನ ಕಿರವತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಮಟ್ಟ ಕೆಳಗಿಳಿಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ಶ್ರೀನಿವಾಸ್ ಬಾಡ್ಕರ್

contributor

Similar News