ಈ ದೇಶದ ರೈತರ ಸಮಸ್ಯೆ ಎಲ್ಲರ ಸಮಸ್ಯೆಯಲ್ಲವೇ? -ಪಿ. ಸಾಯಿನಾಥ್
ಕೃಷಿಯಿಂದ ಲಕ್ಷಾಂತರ ಜನರನ್ನು ಹೊರಗೆ ತರಬೇಕು ಎಂದು ನವ ಉದಾರವಾದಿ ಅರ್ಥಶಾಸ್ತ್ರಜ್ಞರು ಬೊಬ್ಬೆ ಹೊಡೆದರು. ಆದರೆ ಆ ಲಕ್ಷಾಂತರ ಜನರ ಕಥೆ ಆಮೇಲೆ ಏನಾಗಿದೆ, ಅವರಿಗೆ ಏನು ಪರ್ಯಾಯ ಕಲ್ಪಿಸಲಾಗಿದೆ ಎಂಬುದನ್ನು ನೋಡಿದ್ದಾರೆಯೇ ಎಂದು ಪ್ರಶ್ನಿಸುತ್ತಾರೆ ಪಿ. ಸಾಯಿನಾಥ್.;

1980ರ ದಶಕದಲ್ಲಿ ರೈತರ ಸ್ಥಿತಿವಂತಿಕೆ ಹೇಗಿತ್ತು ಮತ್ತು ಆಮೇಲೆ ಎಲ್ಲವೂ ಹೇಗೆ ಬದಲಾಗುತ್ತ ಬಂತು ಎಂಬುದನ್ನು ಪತ್ರಕರ್ತ ಪಿ. ಸಾಯಿನಾಥ್ ಸೊಗಸಾದ ವಿವರಗಳೊಂದಿಗೆ ಹೇಳುತ್ತಾರೆ.
1984ರಲ್ಲಿ ಯಾರದೇ ಮನೆಗಳಿಗೆ ಹೋದರೆ ಒಂದು ಲೋಟ ತಾಜಾ ಹಾಲು ಕೊಡಲಾಗುತ್ತಿತ್ತು. ಮಹಾರಾಷ್ಟ್ರದಂತಹ ರಾಜ್ಯದಲ್ಲಂತೂ ಒಂದು ಲೋಟ ಹೆಚ್ಚೇ ಕೊಡಲಾಗುತ್ತಿತ್ತು.
ಆಂಧ್ರಪ್ರದೇಶದ ಕರಾವಳಿ ಭಾಗಗಳಲ್ಲಾದರೆ ಹಾಲನ್ನು ಬೆಳ್ಳಿ ಲೋಟದಲ್ಲಿ ಕೊಡುತ್ತಿದ್ದರಂತೆ. ಅದು ಅತಿಥಿಯನ್ನು ಗೌರವಿಸುವ ಕ್ರಮವಾಗಿತ್ತು. ಅಲ್ಲದೆ, ರೈತ ಚೆನ್ನಾಗಿ ಕೆಲಸ ಮಾಡುತ್ತಿದ್ದಾನೆ ಎಂಬುದರ ಸೂಚನೆಯೂ ಆಗಿತ್ತು.
ತಮಿಳುನಾಡಿನ ಕೃಷಿ ಕುಟುಂಬಗಳಲ್ಲಿ ಹಿತ್ತಾಳೆ ಲೋಟಗಳಲ್ಲಿ ಹಾಲು ಕೊಡಲಾಗುತ್ತಿತ್ತು. ಕೆಲವೊಮ್ಮೆ ಅದೇ ಹಿತ್ತಾಳೆ ಲೋಟದ ತುಂಬ ಅದ್ಭುತ ಫಿಲ್ಟರ್ ಕಾಫಿ ಸಿಗುತ್ತಿತ್ತು.
1990ರ ದಶಕ ಬಂತು. ಬೆಳ್ಳಿ ಲೋಟಗಳು ನಿಧಾನಕ್ಕೆ ಕರಗಿದವು. ಸ್ಟೀಲ್ ಲೋಟಗಳು ಬಂದಿದ್ದವು. 1990ರ ದಶಕದ ಮಧ್ಯಭಾಗದ ಹೊತ್ತಿಗೆ, ಗ್ಲಾಸ್‌ಗಳು ಬಂದಿದ್ದವು. 2000 ಬಂದಾಗ, ಹಾಲು ಸಿಗುವುದು ಕಡಿಮೆಯಾಗಿ ಚಹ ಬಂತು.
ಮಹಾರಾಷ್ಟ್ರದ ವಿದರ್ಭ ಪ್ರದೇಶದಲ್ಲಿ, 2003-04 ರ ಹೊತ್ತಿಗೆ ಹಾಲಿಲ್ಲದ ಚಹ ಕೊಡಲಾಗುತ್ತಿತ್ತು. ಅತಿಥಿ ಸತ್ಕಾರದ ಸಂಕೇತವಾದ ಚಹಾದಲ್ಲಿನ ಸಕ್ಕರೆ ಪ್ರಮಾಣವೂ ಕಡಿಮೆಯಾಗುತ್ತಲೇ ಇತ್ತು.
ಆ ದಶಕದ ಮಧ್ಯಭಾಗದ ವೇಳೆಗೆ, ಗಾಜಿನ ಲೋಟ ಇಲ್ಲವಾಯಿತು. ಪ್ಲಾಸ್ಟಿಕ್ ಕಪ್‌ಗಳು ಬಂದುಬಿಟ್ಟಿದ್ದವು.
ಇದನ್ನು ಒಂದು ಸಂಕೇತವಾಗಿ ಸಾಯಿನಾಥ್ ನೋಡುತ್ತಾರೆ. ಲೋಟದ ಮೂಲಕ ಕಂಡ ಈ ಅವನತಿ ಕೃಷಿ ಆರ್ಥಿಕತೆಯ ಕುಸಿತದ ಸಂಕೇತವೂ ಆಗಿದೆ ಎಂದು ಅವರು ಹೇಳುತ್ತಾರೆ.
ಹಾಲೂ ಸೇರಿದಂತೆ ಎಲ್ಲಾ ಕೃಷಿ ಉತ್ಪನ್ನಗಳ ಬೆಲೆಗಳನ್ನು ಕಡಿಮೆ ಮಾಡಲು ಅವಕಾಶ ಮಾಡಿಕೊಟ್ಟ ಆರ್ಥಿಕ ನೀತಿಗಳು ಎಂತಹ ಅಧಪತನವನ್ನು ಕೃಷಿಕರ ಸಮುದಾಯದಲ್ಲಿ ತಂದವು ಎಂಬುದನ್ನು ಅವರು ಕಾಣಿಸುತ್ತಾರೆ. ಅವು ಬೇಕೆಂದೇ ರಚಿಸಲಾದ ನೀತಿಗಳಾಗಿದ್ದವು ಎನ್ನುತ್ತಾರೆ ಅವರು.
ಕೃಷಿ ಕುಟುಂಬದ ಮಕ್ಕಳು ಹಾಲನ್ನೇ ಕುಡಿಯದ ಸ್ಥಿತಿ ಬಂತು. ಯಾಕೆಂದರೆ, ಪ್ರತಿಯೊಂದು ಹನಿಯೂ ಇತರ ಅಗತ್ಯ ವಸ್ತುಗಳನ್ನು ಕೊಳ್ಳುವುದಕ್ಕೆ ಅನಿವಾರ್ಯವಾಗಿತ್ತು.
ಹತ್ತಿಯ ಉದಾಹರಣೆಯನ್ನೂ ಅವರು ಕೊಡುತ್ತಾರೆ.
1970ರ ದಶಕದ ಮಧ್ಯಭಾಗದಲ್ಲಿ ವಿದರ್ಭ ಪ್ರದೇಶದ ಒಬ್ಬ ರೈತ ಒಂದು ಅಥವಾ ಎರಡು ಕ್ವಿಂಟಾಲ್ ಹತ್ತಿ ಮಾರಿದರೆ 10-12 ಗ್ರಾಂ ಚಿನ್ನ ಖರೀದಿಸಬಹುದಿತ್ತು. ಆದರೆ ಇಂದು ರೈತ 10 ಕ್ವಿಂಟಾಲ್ ಹತ್ತಿ ಮಾರಿದರೂ 10 ಗ್ರಾಂ ಚಿನ್ನ ಖರೀದಿಸಲು ಸಾಧ್ಯವಿಲ್ಲ.
ಬಡ ವರ್ಗಗಳಿಗೆ ಸಬ್ಸಿಡಿಗಳಲ್ಲಿ ಭಾರೀ ಕಡಿತ ಮಾಡಲಾಗಿದೆ. ಆದರೆ ಅದೇ ದೊಡ್ಡ ಪ್ರಮಾಣದ ಸಬ್ಸಿಡಿಗಳನ್ನು ಇನ್ಸೆಂಟಿವ್ಸ್ ಎಂಬ ಹೆಸರಲ್ಲಿ ಶ್ರೀಮಂತರಿಗೆ ಮತ್ತು ಕಾರ್ಪೊರೇಟ್ ಗಳಿಗೆ ಧಾರಾಳವಾಗಿ ಕೊಡಲಾಗುತ್ತಿದೆ.
ಕೃಷಿಯಲ್ಲಿ ಹೂಡಿಕೆ ಕುಸಿದಿದೆ. ಸಂಪನ್ಮೂಲಗಳು ಬಡವರ ಕೈತಪ್ಪಿ ಶ್ರೀಮಂತರ ಪಾಲಾಗುತ್ತಿವೆ. ರೈತರ ಸಾಲಗಳು ಸಿಕ್ಕಾಪಟ್ಟೆ ಏರುತ್ತಿವೆ. ಅದೇ ಹೊತ್ತಲ್ಲಿ ಕಾರ್ಪೊರೇಟ್‌ಗಳು ಭಯಂಕರ ಪ್ರಬಲರಾಗುತ್ತಿದ್ದಾರೆ.
ಹೀಗೆ ವಿವರಿಸುತ್ತ, ಸಾಯಿನಾಥ್ ಅವರು ಹೇಗೆ ಬಡವರನ್ನು ಪ್ರಪಾತಕ್ಕೆ ತಳ್ಳುತ್ತ, ಶ್ರೀಮಂತರನ್ನು, ಕಾರ್ಪೊರೇಟ್‌ಗಳನ್ನು ಬೆಳೆಸಲಾಗುತ್ತಿದೆ ಎಂಬುದನ್ನು ಕಾಣಿಸುತ್ತಾರೆ. ಅಸಮಾನತೆ ತೀವ್ರವಾಗಿ ಹೆಚ್ಚುತ್ತಿರುವುದನ್ನು ಅವರು ಹೇಳುತ್ತಾರೆ.
2024ರ ಡಿಸೆಂಬರ್ 10ರ ಹೊತ್ತಿಗೆ ಫೋರ್ಬ್ಸ್ ಪ್ರಕಾರ, ಭಾರತದ 217 ಬಿಲಿಯನೇರ್‌ಗಳ ಒಟ್ಟು ಮೌಲ್ಯ 1,041 ಬಿಲಿಯನ್ ಡಾಲರ್ ಆಗಿತ್ತು ಎಂಬುದರ ಕಡೆಗೆ ಅವರು ಗಮನ ಸೆಳೆಯುತ್ತಾರೆ.
ಅದು ಭಾರತದ 17.91 ಬಿಲಿಯನ್ ಡಾಲರ್ ಗಾತ್ರದ ಕೃಷಿ ಬಜೆಟ್‌ನ ಸುಮಾರು 58 ಪಟ್ಟು ಹೆಚ್ಚು.ಅಷ್ಟೇ ಅಲ್ಲ, ನಮ್ಮ ಒಟ್ಟು ಬಜೆಟ್ ವೆಚ್ಚವಾಗಿರುವ 562 ಬಿಲಿಯನ್ ಡಾಲರ್‌ನ ಸುಮಾರು 1.8 ಪಟ್ಟು ಹೆಚ್ಚು.
217 ಬಿಲಿಯನೇರ್‌ಗಳು ಜನಸಂಖ್ಯೆಯ ಶೇ. 0.000015ರಷ್ಟು ಮಾತ್ರ. ಆದರೆ ಅವರು ಹೊಂದಿರುವ ಸಂಪತ್ತು ಮಾತ್ರ ಜಿಡಿಪಿಯ ಸರಿಸುಮಾರು ಮೂರನೇ ಒಂದು ಭಾಗಕ್ಕೆ ಸಮ.
1991ರಿಂದಲೂ ರೈತರಿಗೆ ಆಸರೆಯಂತಿದ್ದ ಎಲ್ಲವನ್ನೂ ದುರ್ಬಲಗೊಳಿಸುವುದು ನಡೆಯುತ್ತಾ ಬಂದಿದೆ ಎನ್ನುತ್ತಾರೆ ಸಾಯಿನಾಥ್.
ಸರಕಾರಿ ಮಂಡಿಗಳ ವಿಚಾರದಲ್ಲೂ ಹೀಗೇ ಆಗಿದೆ. ಇದು ಕೃಷಿ ಮತ್ತು ರೈತರ ಪಾಲಿಗೆ ತೀವ್ರ ಹಾನಿ ಉಂಟು ಮಾಡಿದೆ. ಆಹಾರ ಉತ್ಪಾದನೆ ಮತ್ತು ಲಭ್ಯತೆಯ ಮೇಲೆಯೂ ಕೆಟ್ಟ ಪರಿಣಾಮ ಬೀರಿದೆ.
ರೈತರಿಗೆ ಸಿಗಬೇಕಿದ್ದ ಸಾಲವನ್ನು ವ್ಯವಸ್ಥಿತವಾಗಿ ಬೇರೆಡೆಗೆ ತಿರುಗಿಸಲಾಯಿತು. ಇದು ಲಕ್ಷಾಂತರ ರೈತರು ಸಾಹುಕಾರರ ಎದುರು ಸಾಲಕ್ಕಾಗಿ ನಿಲ್ಲುವಂತೆ ಮಾಡಿತು.
ರೈತರ ಉತ್ಪನ್ನಗಳ ಬೆಲೆಗಳ ಕುಸಿತ ಮತ್ತೊಂದು ದೊಡ್ಡ ಹೊಡೆತ.
2003ರಿಂದ 2013ರ ಹೊತ್ತಿನಲ್ಲಿ ವಿದರ್ಭದಲ್ಲಿ ಇದ್ದ ಹತ್ತಿ ಕೃಷಿಯ ವೆಚ್ಚವನ್ನು ನೋಡಿದರೆ, ಈಗ ಒಂದು ಎಕರೆ ಹತ್ತಿಯ ಒಟ್ಟಾರೆ ಕೃಷಿ ವೆಚ್ಚ ಶೇ. 250-300ರಷ್ಟಾಗಿದೆ. ಕೆಲ ಸಂದರ್ಭಗಳಲ್ಲಿ ಇನ್ನೂ ಜಾಸ್ತಿಯೇ ಆಗಿದೆ ಎಂಬುದು ಗೊತ್ತಾಗುತ್ತದೆ.
ಆದರೆ ಅದೇ ವೇಳೆ ರೈತರ ಆದಾಯದ ಕಥೆ ಏನು?
ಕೃಷಿ ಕುಟುಂಬಗಳ ಸರಾಸರಿ ಮಾಸಿಕ ಆದಾಯ ಸುಮಾರು 10,218 ರೂ. ಎಂಬುದನ್ನು ಅಧ್ಯಯನಗಳು ಹೇಳುತ್ತವೆ. ಇದು ವೈಯಕ್ತಿಕ ಆದಾಯವಲ್ಲ, ಇಡೀ ಕುಟುಂಬದ ಆದಾಯವಾಗಿದೆ ಎಂಬುದನ್ನು ಗಮನಿಸಬೇಕು. ಸಂಘಟಿತ ವಲಯದಲ್ಲಿ ಅದಕ್ಕಿಂತ ಎರಡು ಪಟ್ಟು ಹೆಚ್ಚು ಆದಾಯವಿರುತ್ತದೆ.
2017ರಲ್ಲಿ ನರೇಂದ್ರ ಮೋದಿ ಸರಕಾರ ಐದು ವರ್ಷಗಳಲ್ಲಿ ರೈತರ ಆದಾಯ ಡಬಲ್ ಮಾಡುವ ಭರವಸೆ ನೀಡಿತ್ತು.
2012-13ರಿಂದ 2018-19ರ ಅವಧಿಯಲ್ಲಿ ಕೃಷಿಯಿಂದ ಬರುವ ಆದಾಯ ವಾಸ್ತವವಾಗಿ ಶೇ. 10ರಷ್ಟು ಕುಸಿತ ಕಂಡಿದೆ. 2024ರ ಹೊತ್ತಿಗೆ 4 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಮತ್ತು ಇದಕ್ಕೆ ಕಾರಣ ಸರಕಾರದ ಆರ್ಥಿಕ ನೀತಿಗಳಿಂದ ಉಂಟಾದ ಸಂಕಷ್ಟ ಸ್ಥಿತಿ.
ಈ ನಾಲ್ಕು ಲಕ್ಷ ಎನ್ನುವುದು ಅಧಿಕೃತ ಅಂಕಿ ಅಂಶ.
ಹಾಗಾದರೆ, ವಾಸ್ತವದಲ್ಲಿ ಈ ಪ್ರಮಾಣ ಇನ್ನೂ ಆಘಾತಕಾರಿ ಮಟ್ಟದಲ್ಲಿರುತ್ತದೆ.
ಹೇಗೆ ಕೃಷಿ ಆರ್ಥಿಕತೆ ಕುಸಿದಂತೆ ರೈತ ಕುಟುಂಬಗಳ ವಲಸೆ ಶುರುವಾಯಿತು ಎಂಬುದನ್ನು ಸಾಯಿನಾಥ್ ಹೇಳುತ್ತಾರೆ.
ರೈತರು ಮತ್ತು ಕೃಷಿ ಕಾರ್ಮಿಕರ ಮೇಲಿನ ಈ ಉದ್ದೇಶಪೂರ್ವಕ ಹೊಡೆತ ದೊಡ್ಡ ವಲಸೆಗೆ ಕಾರಣವಾಯಿತು. 2001 ಮತ್ತು 2011ರ ಜನಗಣತಿಯ ನಡುವೆ ಭಾರತದಲ್ಲಿ ಎಂದೂ ಕಂಡಿರದ ಅತಿ ದೊಡ್ಡ ವಲಸೆ ನಡೆದಿತ್ತು. ಕೃಷಿ ಮತ್ತು ಕೃಷಿ ಆರ್ಥಿಕತೆ ಕುಸಿದಂತೆ, ಲಕ್ಷಾಂತರ ಜನರು ತಮ್ಮ ಹಳ್ಳಿಗಳನ್ನು ಬಿಟ್ಟು ನಗರಗಳು ಮತ್ತು ಸಣ್ಣ ಪಟ್ಟಣಗಳಿಗೆ ಹೋದರು.
ಕೃಷಿಯಿಂದ ಲಕ್ಷಾಂತರ ಜನರನ್ನು ಹೊರಗೆ ತರಬೇಕು ಎಂದು ನವ ಉದಾರವಾದಿ ಅರ್ಥಶಾಸ್ತ್ರಜ್ಞರು ಬೊಬ್ಬೆ ಹೊಡೆದರು. ಆದರೆ ಆ ಲಕ್ಷಾಂತರ ಜನರ ಕಥೆ ಆಮೇಲೆ ಏನಾಗಿದೆ, ಅವರಿಗೆ ಏನು ಪರ್ಯಾಯ ಕಲ್ಪಿಸಲಾಗಿದೆ ಎಂಬುದನ್ನು ನೋಡಿದ್ದಾರೆಯೇ ಎಂದು ಪ್ರಶ್ನಿಸುತ್ತಾರೆ ಪಿ. ಸಾಯಿನಾಥ್.
ಕೃಷಿ ಉತ್ಪಾದಕತೆಯಲ್ಲಿ ಸುಧಾರಣೆ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಉತ್ತಮ ಗುಣಮಟ್ಟದ ಮತ್ತು ಯೋಗ್ಯ ಉದ್ಯೋಗ ಸೃಷ್ಟಿ, ಕೌಶಲ್ಯಪೂರ್ಣ, ಆರೋಗ್ಯಕರ ಕಾರ್ಮಿಕರು ಅಭಿವೃದ್ಧಿ ಹೊಂದಲು ಎಲ್ಲರಿಗೂ ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸೇವೆ ಇವಿಷ್ಟನ್ನೂ ಪೂರೈಸಿದಾಗ ಅದರ ಬಗ್ಗೆ ಯೋಚಿಸಬಹುದು ಎಂದು ಅಭಿವೃದ್ಧಿ ಅರ್ಥಶಾಸ್ತ್ರಜ್ಞರು ಹೇಳುವುದನ್ನು ಸಾಯಿನಾಥ್ ಉಲ್ಲೇಖಿಸುತ್ತಾರೆ. ಆದರೆ, ನಿಜವಾಗಿಯೂ ಹಾಗಾಯಿತೇ ಎಂದು ಕೇಳಿಕೊಂಡರೆ, ಇಲ್ಲ. ಎಲ್ಲವೂ ಅದಕ್ಕೆ ವಿರುದ್ಧವಾಗಿತ್ತು.
1991 ಸೇರಿದಂತೆ ಸ್ವಾತಂತ್ರ್ಯದ ನಂತರದ ಪ್ರತಿಯೊಂದು ಜನಗಣತಿಯಲ್ಲಿ ಭಾರತದಲ್ಲಿ ರೈತರ ಜನಸಂಖ್ಯೆ ಹೆಚ್ಚಾಗಿದೆ. ಬಳಿಕ ಒಂದು ಆಘಾತಕಾರಿ ಕುಸಿತ ಕಾಣಿಸುತ್ತದೆ. 2001ರ ಜನಗಣತಿಯಲ್ಲಿ ಪೂರ್ಣಾವಧಿ ರೈತರ ಸಂಖ್ಯೆಯಲ್ಲಿ 7.2 ಮಿಲಿಯನ್ ಅಂದರೆ 72 ಲಕ್ಷ ಕುಸಿತವಾಗಿತ್ತು.
2011ರ ಜನಗಣತಿಯಲ್ಲಿ ಆ ಕುಸಿತದ ಪ್ರಮಾಣ 7.7 ಮಿಲಿಯನ್‌ಗೆ ಅಂದರೆ 77 ಲಕ್ಷಕ್ಕೆ ಏರಿತ್ತು.
ಅಂದರೆ ಮತ್ತಷ್ಟು ರೈತರ ಸಂಖ್ಯೆಯಲ್ಲಿ ಕುಸಿತ.
ಪಿ. ಸಾಯಿನಾಥ್ ವಿವರಿಸುವ ಪ್ರಕಾರ, ಹೊಸ ಆರ್ಥಿಕ ನೀತಿಗಳನ್ನು ಅಳವಡಿಸಿಕೊಂಡ ನಂತರದ ಮೊದಲ 20 ವರ್ಷಗಳಲ್ಲಿ ಭಾರತದ ರೈತರ ಜನಸಂಖ್ಯೆ ಸುಮಾರು 1.5 ಕೋಟಿಯಷ್ಟು ಕಡಿಮೆಯಾಗಿದೆ.
ಅಂದರೆ, ಸರಾಸರಿ 2,000ಕ್ಕೂ ಹೆಚ್ಚು ಪೂರ್ಣಾವಧಿ ರೈತರು ಪ್ರತೀ 24 ಗಂಟೆಗಳಿಗೊಮ್ಮೆ ಕೃಷಿಯನ್ನು ತೊರೆದಿದ್ದರು.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಡೇಟಾ) ಪ್ರಕಾರ, 2022ರಲ್ಲಿ ಒಟ್ಟು 11,290 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದರೆ ಪ್ರತಿದಿನ ಕನಿಷ್ಠ 30 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
2021ರಲ್ಲಿ 10,881, 2020ರಲ್ಲಿ 10,677 ಮತ್ತು 2019ರಲ್ಲಿ 10,281 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವೆಲ್ಲಕ್ಕೆ ಹೋಲಿಸಿದರೆ 2022ರಲ್ಲಿ ರೈತ ಆತ್ಮಹತ್ಯೆಗಳೇ ಹೆಚ್ಚು.
ಕೋವಿಡ್ ಹೊತ್ತಿನಲ್ಲಂತೂ ನಗರಗಳಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದ ಲಕ್ಷಾಂತರ ಗ್ರಾಮೀಣ ಜನರು ಕೆಲಸ ಕಳೆದುಕೊಂಡು ತಮ್ಮ ಹಳ್ಳಿಗಳಿಗೆ ಹಿಂದಿರುಗಿದರು.
2020ರ ಮೇ ತಿಂಗಳಲ್ಲಿ ಕೇವಲ 25 ದಿನಗಳಲ್ಲಿ, ಶ್ರಮಿಕ್ ರೈಲುಗಳಲ್ಲಿ ಹಳ್ಳಿಗಳಿಗೆ ಮರಳಿದ್ದ ಕಾರ್ಮಿಕರ ಸಂಖ್ಯೆಯೇ 91 ಲಕ್ಷ ಎಂಬ ವರದಿಯಿದೆ.
ಹಾಗೆ ನಗರಗಳಿಂದ ಅಷ್ಟು ದೊಡ್ಡ ಪ್ರಮಾಣದಲ್ಲಿ ಹಳ್ಳಿಗಳಿಗೆ ಜನರು ವಲಸೆ ಬಂದಾಗ ನರೇಗಾ ಮೇಲೆ ಭಾರೀ ಒತ್ತಡ ಬಿತ್ತು. ಸರಕಾರ ಅದಕ್ಕಾಗಿ ಹೆಚ್ಚಿನ ಹಣ ಖರ್ಚು ಮಾಡಬೇಕಾಯಿತು. ಆದರೆ ಈ ಯೋಜನೆಯನ್ನು ಮತ್ತೆ ಆರ್ಥಿಕವಾಗಿ ದುರ್ಬಲಗೊಳಿಸಲಾಗುತ್ತಿದೆ.
ಸಂಕಷ್ಟ ತೀವ್ರವಾದಾಗೆಲ್ಲ ಪ್ರಮುಖ ರೈತ ಪ್ರತಿಭಟನೆಗಳು ನಡೆದವೆಂಬುದನ್ನು ಸಾಯಿನಾಥ್ ಹೇಳುತ್ತಾರೆ.
ಅವುಗಳಲ್ಲಿ ಮೊದಲನೆಯದು ಕಳೆದ ದಶಕದಲ್ಲಿ ನಡೆಯಿತು. 2018ರ ಮಾರ್ಚ್‌ನಲ್ಲಿ ನಾಸಿಕ್‌ನಿಂದ ಮುಂಬೈಗೆ 40,000 ಬಡ ರೈತರು, ಮುಖ್ಯವಾಗಿ ಆದಿವಾಸಿಗಳು, ಐತಿಹಾಸಿಕ ಮೆರವಣಿಗೆ ನಡೆಸಿದರು.
ಇತ್ತೀಚಿನದು 2020-21ರಲ್ಲಿ ದಿಲ್ಲಿಯ ಗಡಿಯಲ್ಲಿ ನಡೆದ ಕಿಸಾನ್ ಆಂದೋಲನ.
ಕಳೆದ 30 ವರ್ಷಗಳಲ್ಲಿಯೇ ಇದು ವಿಶ್ವದ ಅತಿ ದೊಡ್ಡ ಶಾಂತಿಯುತ, ಪ್ರಜಾಸತ್ತಾತ್ಮಕ ಮತ್ತು ಸಾಂವಿಧಾನಿಕ ಪ್ರತಿಭಟನೆಯಾಗಿತ್ತು. ಆದರೆ ಮುಖ್ಯವಾಹಿನಿಯ ಮಾಧ್ಯಮಗಳು ಆ ಸತ್ಯವನ್ನೆಂದೂ ಹೇಳಿಯೇ ಇಲ್ಲ.
ದಿಲ್ಲಿಯಲ್ಲಿ ರೈತರ ಪ್ರತಿಭಟನೆ 54 ವಾರಗಳ ಕಾಲ ನಡೆಯಿತು ಮತ್ತು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಿದಾಗಲೇ ಕೊನೆಗೊಂಡಿತು.
1991ರಿಂದ ಮೂರು ದಶಕಗಳಲ್ಲಿ, ಕೃಷಿ ಬಿಕ್ಕಟ್ಟು ದೊಡ್ಡ ಕೃಷಿ ಸಮಾಜದಲ್ಲಿನ ಬಿಕ್ಕಟ್ಟಿನ ನಡುವೆ ಮರೆಯಾಗಿ ಹೋಗಿದೆ.
ಉದ್ಯೋಗ ಬಿಕ್ಕಟ್ಟು, ವಲಸೆ ಬಿಕ್ಕಟ್ಟು ಮತ್ತು ನೀರು, ಆರೋಗ್ಯ ಮತ್ತು ಶಿಕ್ಷಣ ಬಿಕ್ಕಟ್ಟು ಈ ಎಲ್ಲಾ ಹೊತ್ತಲ್ಲೂ ಕೃಷಿ ಕಾರ್ಮಿಕರೂ ಸೇರಿದಂತೆ ರೈತರ ಆತ್ಮಹತ್ಯೆಗಳು ಮುಂದುವರಿದಿವೆ.
ಆತ್ಮಹತ್ಯೆಗಳು ಕೃಷಿ ಬಿಕ್ಕಟ್ಟುಗಳಲ್ಲ. ಅವು ಅದರ ಅತ್ಯಂತ ದುರಂತಮಯ ಪರಿಣಾಮ. ಆತ್ಮಹತ್ಯೆಗಳು ಕೃಷಿ ಬಿಕ್ಕಟ್ಟಿಗೆ ಕಾರಣವಲ್ಲ ಎನ್ನುತ್ತಾರೆ ಪಿ. ಸಾಯಿನಾಥ್.
ಕೃಷಿ ಬಿಕ್ಕಟ್ಟು ಎಂದರೆ, ಭಾರತೀಯ ಕೃಷಿಯನ್ನು ಕಾರ್ಪೊರೇಟ್‌ಗಳು ಹೈಜಾಕ್ ಮಾಡಿರುವುದು. ಇದರ ಪರಿಣಾಮವಾಗಿ ಆಗಿರುವುದು ನಮ್ಮ ಇತಿಹಾಸದಲ್ಲಿಯೇ, ಬಹುಶಃ ಮಾನವ ಇತಿಹಾಸದಲ್ಲಿಯೇ ಅತಿ ದೊಡ್ಡ ಸ್ಥಳಾಂತರ ಎನ್ನುತ್ತಾರೆ ಪಿ. ಸಾಯಿನಾಥ್.