ಮೈಕ್ರೋಫೈನಾನ್ಸ್ ಸಾಲದ ಶೂಲವೂ.. ಅಭಿವೃದ್ಧಿ ರಾಜಕಾರಣವೂ...

Update: 2025-03-16 09:48 IST
ಮೈಕ್ರೋಫೈನಾನ್ಸ್ ಸಾಲದ ಶೂಲವೂ.. ಅಭಿವೃದ್ಧಿ ರಾಜಕಾರಣವೂ...
  • whatsapp icon

ಕೃಷಿಯಲ್ಲಿ ಉತ್ಪಾದನೆ ಹೆಚ್ಚಳವಾದರೂ ಆದಾಯ ಕಾಣದ ಪರಿಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೆಚ್ಚು ಯಾಂತ್ರೀಕರಣದಿಂದ ಕುಸಿಯುತ್ತಿರುವ ದುಡಿಮೆ ಮತ್ತು ಉದ್ಯೋಗದ ಅವಕಾಶಗಳು ಆದಾಯದ ಮಟ್ಟದಲ್ಲಿ ಕುಸಿತಕ್ಕೆ ಕಾರಣವಾಗಿವೆ. ಆದರೆ ಬೆಲೆ ಏರಿಕೆ ಮತ್ತು ಹಣದುಬ್ಬರ ಏರುಮುಖವಾಗಿವೆ. ಶಿಕ್ಷಣ, ಆರೋಗ್ಯ, ಆಹಾರದ ಮೇಲೆ ಜನರು ಮಾಡುತ್ತಿರುವ ವೆಚ್ಚ ನಿರಂತರವಾಗಿ ಹೆಚ್ಚಳವಾಗುತ್ತಿವೆ. ಈ ಎಲ್ಲಾ ಕಾರಣಗಳು ಬಹುಜನರನ್ನು ಹೆಚ್ಚಿನ ಋಣಭಾರಕ್ಕೆ ನೂಕಿದೆ. ಇದು ಆಶ್ಚರ್ಯವೇನಲ್ಲ. ಏಕೆಂದರೆ ನಾವು ಬದುಕುತ್ತಿರುವುದು ಖಾಸಗೀಕರಣಗೊಂಡಿರುವ ಪ್ರಭುತ್ವ ವ್ಯವಸ್ಥೆಯಲ್ಲಿ. ಹೀಗಾಗಿ ಋಣಭಾರವು ಕಿರುಹಣಕಾಸಿನ ಸ್ವರೂಪದಲ್ಲಿ ಬಹುತೇಕ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳನ್ನು ಬೆನ್ನು ಬಿಡದ ಬೇತಾಳವಾಗಿ ಕಾಡುತ್ತಿದೆ.

ಕಿರು ಹಣಕಾಸು ವ್ಯವಸ್ಥೆಯು 1990ರ ನಂತರ ಹಂತ ಹಂತವಾಗಿ ಪ್ರಾಬಲ್ಯ ಪಡೆಯಿತು. 1989ರಲ್ಲಿ ನಬಾರ್ಡ್ ನಡೆಸಿದ ಆ್ಯಕ್ಷನ್ ರಿಸರ್ಚ್ ಫಲವಾಗಿ ಸ್ವ-ಸಹಾಯ ಗುಂಪು(ಎಸ್‌ಎಚ್‌ಜಿ)ಗಳನ್ನು ಬ್ಯಾಂಕ್‌ಗಳಿಗೆ ಲಿಂಕ್ ಮಾಡುವ ಕಾರ್ಯಕ್ರಮ ಪ್ರಾರಂಭವಾಯಿತು. ಎಸ್‌ಎಚ್‌ಜಿಗಳನ್ನು ಔಪಚಾರಿಕ ಹಣಕಾಸು ಸಂಸ್ಥೆಗಳಿಗೆ ಸಂಯೋಜಿಸುವ ಪ್ರಾಯೋಗಿಕ ಯೋಜನೆಯನ್ನು ಅಧಿಕೃತವಾಗಿ 1992ರಲ್ಲಿ ಪ್ರಾರಂಭಿಸಲಾಯಿತು. ಭಾರತೀಯ ರಿಸರ್ವ್ ಬ್ಯಾಂಕ್ ಎಸ್‌ಎಚ್‌ಜಿಗಳಿಗೆ ಬ್ಯಾಂಕುಗಳಲ್ಲಿ ಉಳಿತಾಯ ಖಾತೆಗಳನ್ನು ತೆರೆಯಲು 1993ರಲ್ಲಿ ಅವಕಾಶ ಮಾಡಿಕೊಟ್ಟಿತು. ಸ್ವಸಹಾಯ ಸಂಘಗಳು ಗ್ರಾಮೀಣ ಭಾರತದಲ್ಲಿ ಬಡತನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಜನರು ದುಡಿದ ಹಣವನ್ನು ಉಳಿತಾಯ ಮಾಡಲು ಮತ್ತು ಸಾಲ ಪಡೆಯಲು ಅವಕಾಶ ನೀಡಿ ಸ್ವಯಂ ಉದ್ಯೋಗವನ್ನು ಪ್ರೋತ್ಸಾಹಿಸುತ್ತವೆ. ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಜನರು ಸಾಮಾಜಿಕ-ಆರ್ಥಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಜೊತೆಗೆ ಒಳಗೊಳ್ಳುವ ಪ್ರಜ್ಞೆಯನ್ನು ಸೃಷ್ಟಿಸಲು ಹೆಚ್ಚಿನ ಸಹಾಯ ಮಾಡುತ್ತವೆ. ಮಹಿಳೆಯ ಸಬಲೀಕರಣಕ್ಕೆ ಬೆಂಬಲವಾಗುತ್ತವೆ. ಹೀಗೆ ಇನ್ನೂ ಮುಂತಾದ ಆಶಯಗಳನ್ನು ಎಸ್‌ಎಚ್‌ಜಿಗಳು ತನ್ನ ಒಳಗೆ ಬಿತ್ತಿದವು. ಸ್ವಲ್ಪ ಹೆಚ್ಚು ಕಡಿಮೆ ಇದೇ ಆಶಯಗಳನ್ನು ಕಿರು ಹಣಕಾಸು/ಮೈಕ್ರೋಫೈನಾನ್ಸ್ ಹೊಂದಿದೆ.

ಆದರೆ, ಇವುಗಳ ಕಾರ್ಯ ಸ್ವರೂಪ ವಿಭಿನ್ನ. ಎಸ್‌ಎಚ್‌ಜಿ ಪರಸ್ಪರ ಸಹಾಯ, ನಂಬಿಕೆ ಮತ್ತು ನೈತಿಕ ಬದ್ಧತೆಗಾಗಿ ಹುಟ್ಟಿಕೊಂಡರೆ, ಮೈಕ್ರೋಫೈನಾನ್ಸ್‌ಗಳು ಸಾಲ-ಬಡ್ಡಿ ಆರ್ಥಿಕ ಲೆಕ್ಕಾಚಾರದೊಂದಿಗೆ ಹುಟ್ಟಿಕೊಂಡಿವೆ. ಎಸ್‌ಎಚ್‌ಜಿಗಳಲ್ಲಿ ಪಡೆಯುವ ಸಾಲವನ್ನು ಸಾಮಾನ್ಯವಾಗಿ ಸಣ್ಣ ವ್ಯಾಪಾರವನ್ನು ಪ್ರಾರಂಭಿಸಲು, ಮನೆಯ ಬಳಕೆಗಾಗಿ ವಸ್ತುಗಳನ್ನು ಖರೀದಿಸಲು ಅಥವಾ ತುರ್ತು ಸಂದರ್ಭಗಳಲ್ಲಿ ಬಳಸಬಹುದು. ಮೈಕ್ರೋಫೈನಾನ್ಸ್‌ಗಳಲ್ಲಿ ಪಡೆದ ಸಾಲವನ್ನು ಶಿಕ್ಷಣ, ಆರೋಗ್ಯ, ವಸತಿ ಮತ್ತು ಜೀವನಮಟ್ಟವನ್ನು ಸುಧಾರಿಸುವುದು ಸೇರಿದಂತೆ ವಿಶಾಲ ವ್ಯಾಪ್ತಿಯ ಉದ್ದೇಶಗಳಿಗಾಗಿ ಬಳಸಬಹುದು. ವಾಣಿಜ್ಯ ಬ್ಯಾಂಕುಗಳು, ಸಹಕಾರಿ ಸಂಸ್ಥೆಗಳು, ಹಣಕಾಸು ಕಂಪೆನಿಗಳು, ಟ್ರಸ್ಟ್‌ಗಳು, ವಿವಿಧ ಸಂಸ್ಥೆ-ಸಂಘಟನೆಗಳು ಸೇರಿದಂತೆ ಕೆಲವು ಲೇವಾದೇವಿ ವ್ಯವಹಾರಸ್ಥರೂ ಮೈಕ್ರೋಫೈನಾನ್ಸ್ ನಡೆಸುತ್ತಾರೆ. ಮೈಕ್ರೋಫೈನಾನ್ಸ್‌ಗಳ ವ್ಯವಹಾರದಲ್ಲಿ ಸರಕಾರಗಳ ನಿಯಂತ್ರಣ ಮತ್ತು ಬೆಂಬಲ ಬಹುತೇಕ ಇರುವುದಿಲ್ಲ. ಇದು ಹಣಕಾಸು ಬಂಡವಾಳ ವಿಸ್ತರಣೆಯ ಮತ್ತೊಂದು ರೂಪ. ಈ ಆರ್ಥಿಕತೆಯನ್ನು ನಿಯಂತ್ರಿಸುವ, ಮಧ್ಯಪ್ರವೇಶಿಸುವ ಮತ್ತು ಅದರ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನು ಸರಕಾರಗಳು ಕಳೆದುಕೊಂಡಿರುತ್ತವೆ. ಇದೇ ಪರಿಸ್ಥಿತಿಯನ್ನು ಮೈಕ್ರೋಫೈನಾನ್ಸ್ ಬಿಕ್ಕಟ್ಟುಗಳಲ್ಲಿ ನಾವು ಕಾಣಬಹುದು. ಇದಕ್ಕೆ ಸರಕಾರಗಳು ಅನುಸರಿಸುತ್ತಿರುವ ಅಭಿವೃದ್ಧಿ ನೀತಿಗಳು ಪ್ರಮುಖ ಕಾರಣವಾಗಿವೆ.

ಕಳೆದ ಎಪ್ಪತ್ತೆಂಟು ವರ್ಷಗಳ ಬಹುತೇಕ ಅಭಿವೃದ್ಧಿ ಯೋಜನೆಗಳ ಸಮರ್ಥನೆಗಳು ಮತ್ತು ತರ್ಕಗಳು ಆರ್ಥಿಕ ಬೆಳವಣಿಗೆಗೆ ಹೆಚ್ಚು ಆದ್ಯತೆ ನೀಡಿವೆ. ಇವು ಗ್ರಾಮ ಸಮಾಜದ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚು ಬಂಡವಾಳ ಆಧಾರಿತ ಹಾಗೂ ಮಾರುಕಟ್ಟೆ ಕೇಂದ್ರಿತ ದೃಷ್ಟಿಕೋನಕ್ಕೆ ಬದಲಾಯಿಸಿವೆ. ಆದರೂ, ಸ್ವತಂತ್ರವಾದಂದಿನಿಂದ ಈ ದಿನದವರೆಗೆ ರೂಪಿತವಾದ ಎಲ್ಲಾ ಅಭಿವೃದ್ಧಿ ನೀತಿಗಳು, ಗ್ರಾಮ ಭಾರತದ ರಚನಾತ್ಮಕ ಕೊರತೆಗಳನ್ನು ಸರಿಪಡಿಸುವ ಆಶಯವನ್ನು ಪ್ರತಿಪಾದಿಸುತ್ತಲೇ ಇವೆ. ಇವು ಕೃಷಿ ಉತ್ಪಾದನೆಯ ಸ್ವರೂಪ, ಸಂಪನ್ಮೂಲಗಳು, ಜಾತಿ ಆಧಾರಿತ ಸಾಮಾಜಿಕ ರಚನೆ, ಜೀವನ ಮತ್ತು ಜೀವನೋಪಾಯದ ಅವಕಾಶಗಳ ಸುತ್ತಮುತ್ತ ಪ್ರತಿಬಿಂಬಿತವಾಗಿವೆ. ಇದರ ಪರಿಣಾಮವಾಗಿ ಹಲವು ಬದಲಾವಣೆಗಳು ಉಂಟಾಗಿವೆ. ಕೃಷಿಯಲ್ಲಿ ಉತ್ಪಾದನೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಬಹು ಆಯಾಮಗಳ ನೆಲೆಯಲ್ಲಿ ಮೇಲುಸ್ತುವಾರಿಯನ್ನು ಸರಕಾರ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಹಾಗೂ ಕಂಪೆನಿಗಳು ವಿವಿಧ ರೂಪದಲ್ಲಿ ನಿರಂತರವಾಗಿ ಮಾಡುತ್ತಾ ಬಂದಿವೆ. ಇದರ ಪರಿಣಾಮವಾಗಿ ಕೃಷಿ ಸಮಾಜದ ಜನರ ಜೀವನ ಮತ್ತು ಜೀವನೋಪಾಯವು ಪ್ರಭುತ್ವ-ಮಾರುಕಟ್ಟೆ-ಬಂಡವಾಳದ ದೊಡ್ಡ ಸಂಪರ್ಕಕ್ಕೆ ತಂದಿದೆ. ಇದರ ಪ್ರಮುಖ ಗುರಿ ಆರ್ಥಿಕ ಬೆಳವಣಿಗೆ. ಉತ್ಪಾದಕತೆಯನ್ನು ನಿರಂತರ ಹೆಚ್ಚಿಸಲು ಒತ್ತು ನೀಡುವುದು.

ಇದರ ಪರಿಣಾಮವಾಗಿ ಕೃಷಿಯನ್ನು ಉತ್ಪಾದನಾ ಮಾನದಂಡಗಳಿಂದ ವ್ಯಾಖ್ಯಾನಿಸಲಾಯಿತು. ಕೃಷಿ ಉತ್ಪಾದಕತೆಯಲ್ಲಿ ಪ್ರಬಲ ಬಂಡವಾಳ ಮತ್ತು ತಂತ್ರಜ್ಞಾನ ಕೇಂದ್ರಿತ ಮಾದರಿಗಳನ್ನು ನಿರಂತರವಾಗಿ ಉತ್ತೇಜಿಸಲಾಯಿತು. ಇದು ಚಾರಿತ್ರಿಕವಾಗಿ ಸಾಮಾಜಿಕ ರಚನೆಯೇ ಪುನರುತ್ಪಾದಿಸಿದ ಸಾಮಾಜಿಕ ಅಸಮಾನತೆಯ ಸ್ವರೂಪಗಳನ್ನು ಸರಿಪಡಿಸುವ ಮಾರ್ಗಗಳನ್ನು ಕಡೆಗಣಿಸಿತು. ಯಾಂತ್ರಿಕತೆ, ತಂತ್ರಜ್ಞಾನ ಹಾಗೂ ಮಾರುಕಟ್ಟೆ ಮಧ್ಯಸ್ಥಿಕೆಗಳಿಂದ ನಿರ್ದೇಶಿಸಲ್ಪಟಿತು. ಈ ಪ್ರಕ್ರಿಯೆಗಳು ಗ್ರಾಮ ಸಮಾಜದ ಸಾಮಾಜಿಕ ರಚನೆಯಲ್ಲಿ ಅಂತರ್ಗತವಾಗಿರುವ ಸಾಮಾಜಿಕ ಅಸಮಾನತೆ, ಸಂಪನ್ಮೂಲ ಬಳಕೆಯ ಮತ್ತು ಹಂಚಿಕೆಯ ಅನೈತಿಕ ಸ್ವರೂಪವನ್ನು ಗುರುತಿಸಲು ವಿಫಲವಾಯಿತು. ಇದರ ಪರಿಣಾಮವಾಗಿ ಜಾತಿ-ಲಿಂಗದ ಆಧಾರದಲ್ಲಿ ರೂಪಿತವಾಗಿರುವ ಸಾಮಾಜಿಕ ಅಸಮಾನತೆಗಳ ಸ್ವರೂಪಗಳು ಮತ್ತಷ್ಟು ಮರು ಉತ್ಪಾದನೆಗೊಂಡವು. ಜೊತೆಯಲ್ಲಿಯೇ ಬಂಡವಾಳ, ತಂತ್ರಜ್ಞಾನ ಮತ್ತು ಮಾರುಕಟ್ಟೆ ಸೃಷ್ಟಿಸಿದ ಅಪಾಯಗಳು, ಗ್ರಾಮೀಣ ಸಾಮಾಜಿಕ ಮತ್ತು ಸಾಂಸ್ಕೃತಿಕ ಸನ್ನಿವೇಶದಲ್ಲಿ ಈಗಾಗಲೇ ವಿಸ್ತಾರವಾಗಿದ್ದ ಆರ್ಥಿಕ ಅಸಮಾನತೆಗಳ ಅಂತರಗಳನ್ನು ಮತ್ತಷ್ಟು ಮರು ಉತ್ಪಾದಿಸಿತು. ಇಂತಹ ಅಭಿವೃದ್ಧಿ ಮಾದರಿಯನ್ನು ಉತ್ತೇಜಿಸುವಾಗ ಹಣಕಾಸು ಮಾರುಕಟ್ಟೆಯ ಆರ್ಥಿಕ ಹಿತಾಸಕ್ತಿಗಳು ಭದ್ರವಾಗಿವೆ.

ಈ ದಿಕ್ಕಿನಲ್ಲಿ ಬಹುತೇಕ ಎಲ್ಲಾ ಪ್ರಮುಖ ಅಭಿವೃದ್ಧಿ ನೀತಿಗಳ ಕೇಂದ್ರ ಬಿಂದು ‘ಉತ್ಪಾದಕ-ಆರ್ಥಿಕತೆ ಬೆಳವಣಿಗೆ-ಉನ್ನತ ತಂತ್ರಜ್ಞಾನ’(productivity-economic growth-high technology) ಘೋಷಣೆಯ ಪ್ರಾಬಲ್ಯವು ಬಹುಜನರ ದುಡಿಯುವ ಕಾರ್ಯಸಾಧ್ಯತೆಗೆ ಗಂಭೀರ ಪರಿಣಾಮಗಳನ್ನು ಉಂಟುಮಾಡಿದೆ. ಇವು ಬಹುಜನರ ಅಗತ್ಯಗಳು ಮತ್ತು ಅವಶ್ಯಕತೆಗಳನ್ನು ಗಮನಿಸಿ ಪರಿಗಣಿಸುವಲ್ಲಿ ವಿಫಲವಾಗಿವೆ. ಇದರ ಪರಿಣಾಮಗಳು ಸಣ್ಣ ಮತ್ತು ಅತಿ ಸಣ್ಣ ಕೃಷಿಕರು ಬಂಡವಾಳ, ತಂತ್ರಜ್ಞಾನ, ಮಾರುಕಟ್ಟೆಗಳಿಗೆ, ಹೊಸ ಜ್ಞಾನ ಮತ್ತು ನೆಟ್‌ವರ್ಕ್‌ಗಳಿಗೆ ಪ್ರವೇಶ ಮಾಡಲಾಗದ, ವ್ಯವಹರಿಸಲಾಗದ ಸ್ಥಿತಿಗೆ ದಬ್ಬಿವೆ. ಈ ಎಲ್ಲಾ ಅಂಶದೊಂದಿಗೆ ರಾಜಕೀಯ ಆಯಾಮಗಳ ಮತ್ತು ಹವಾಮಾನ ವೈಪರೀತ್ಯಗಳ ಪರಿಣಾಮಗಳು ಸೇರಿಕೊಂಡು ಕೃಷಿ ಚಟುವಟಿಕೆಯನ್ನು, ಅಲ್ಲಿನ ಉತ್ಪಾದನೆಯ ಸ್ವರೂಪವನ್ನು ಅಪಾಯಗಳ ಜಾಲಕ್ಕೆ ನೂಕಿದೆ. ಹೀಗಾಗಿ ಕೃಷಿ ಸಮಾಜದಲ್ಲಿ ಬಹುತೇಕರು ಈಗ ‘ಸಾಲ-ಬಡ್ಡಿ-ಕಡಿಮೆ ಬೆಲೆ-ನಷ್ಟ’ ಸರ್ಕ್ಯೂಟ್‌ನಲ್ಲಿ ಸಿಕ್ಕಿಕೊಂಡಿದ್ದಾರೆ. ಈ ಎಲ್ಲಾ ಅಂಶಗಳು ಕಿರು ಹಣಕಾಸು ಸಂಕಷ್ಟಗಳಿಗೆ ಮೂಲವಾಗಿವೆ.

ಕೃಷಿಯಲ್ಲಿ ಉತ್ಪಾದನೆ ಹೆಚ್ಚಳವಾದರೂ ಆದಾಯ ಕಾಣದ ಪರಿಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೆಚ್ಚು ಯಾಂತ್ರೀಕರಣದಿಂದ ಕುಸಿಯುತ್ತಿರುವ ದುಡಿಮೆ ಮತ್ತು ಉದ್ಯೋಗದ ಅವಕಾಶಗಳು ಆದಾಯದ ಮಟ್ಟದಲ್ಲಿ ಕುಸಿತಕ್ಕೆ ಕಾರಣವಾಗಿವೆ. ಆದರೆ ಬೆಲೆ ಏರಿಕೆ ಮತ್ತು ಹಣದುಬ್ಬರ ಏರುಮುಖವಾಗಿವೆ. ಶಿಕ್ಷಣ, ಆರೋಗ್ಯ, ಆಹಾರದ ಮೇಲೆ ಜನರು ಮಾಡುತ್ತಿರುವ ವೆಚ್ಚ ನಿರಂತರವಾಗಿ ಹೆಚ್ಚಳವಾಗುತ್ತಿವೆ. ಈ ಎಲ್ಲಾ ಕಾರಣಗಳು ಬಹುಜನರನ್ನು ಹೆಚ್ಚಿನ ಋಣಭಾರಕ್ಕೆ ನೂಕಿದೆ. ಇದು ಆಶ್ಚರ್ಯವೇನಲ್ಲ. ಏಕೆಂದರೆ ನಾವು ಬದುಕುತ್ತಿರುವುದು ಖಾಸಗೀಕರಣಗೊಂಡಿರುವ ಪ್ರಭುತ್ವ ವ್ಯವಸ್ಥೆಯಲ್ಲಿ. ಹೀಗಾಗಿ ಋಣಭಾರವು ಕಿರುಹಣಕಾಸಿನ ಸ್ವರೂಪದಲ್ಲಿ ಬಹುತೇಕ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳನ್ನು ಬೆನ್ನು ಬಿಡದ ಬೇತಾಳವಾಗಿ ಕಾಡುತ್ತಿದೆ.

ಇದರ ಜೊತೆ ಗ್ರಾಮೀಣ ಪ್ರದೇಶದ ಹೂಡಿಕೆ ಮತ್ತು ಆಡಳಿತ ಪ್ರಕ್ರಿಯೆಗಳಲ್ಲಿನ ಸಮಸ್ಯೆಗಳು ಸೇರಿವೆ. ಕಳೆದ ಎರಡು ದಶಕಗಳಲ್ಲಿ ಕೃಷಿಗೆ ಹೂಡಿಕೆಗಳು ಕಡಿಮೆಯಾಗಿಲ್ಲ. ಕೃಷಿ ಹೂಡಿಕೆಯ ಒಟ್ಟು ಪ್ರಮಾಣವು ವಾಸ್ತವವಾಗಿ ದೊಡ್ಡದಾಗಿ ಬೆಳೆಯುತ್ತಿದೆ. ಆದರೆ ಈ ಹೂಡಿಕೆಗಳ ಕಾರ್ಯನಿರ್ವಹಣೆ ಸಾಧನೆಗಳಲ್ಲಿ ಕೊರತೆಗಳಿವೆ. ಮೂಲಸೌಕರ್ಯದಲ್ಲಿ ಸರಕಾರಗಳ ಹೂಡಿಕೆಗಳು, ಹನಿ ನೀರಾವರಿ, ತಂತ್ರಜ್ಞಾನ ಸಹಾಯಧನ, ಸಂವಹನ ಮತ್ತು ಸಾಲಗಳು, ಹೆಚ್ಚಾಗಿ ಕೃಷಿ-ವ್ಯಾಪಾರ, ಮಾರುಕಟ್ಟೆ ಏಜೆನ್ಸಿಗಳು ಮತ್ತು ದೊಡ್ಡ ಕೃಷಿಕರಿಗೆ ಲಾಭದಾಯಕವಾಗಿವೆ. ವಾಣಿಜ್ಯ ಕೃಷಿಯನ್ನು ಮತ್ತು ದೊಡ್ಡ ಪ್ರಮಾಣದ ತೋಟಗಾರಿಕೆ ಬೆಳೆಗಳನ್ನು ಬೆಂಬಲಿಸುವ ಸಬ್ಸಿಡಿ, ಸಾಲಗಳು ವಾಣಿಜ್ಯ ಬೆಳೆಗಳಿಗೆ ಮಹತ್ವ ನೀಡಿವೆ. ತೋಟಗಾರಿಕೆ ಮತ್ತು ಪುಷ್ಪೋದ್ಯಮಕ್ಕೆ ಹೆಚ್ಚಿನ ತೆರಿಗೆ ವಿನಾಯಿತಿ, ಸಹಾಯಧನ ಮತ್ತು ಪ್ರೋತ್ಸಾಹ ನೀಡುವುದು ಆದ್ಯತೆಯಾಗಿದೆ. ಸಣ್ಣ ಮತ್ತು ಅತಿ ಸಣ್ಣ ಕೃಷಿಕರ ಅವಶ್ಯಕತೆಗಳು, ಅಗತ್ಯಗಳನ್ನು ಪೂರೈಸುವುದು ಸರಕಾರಗಳ ಆದ್ಯತೆಯಾಗಿಲ್ಲ. ಒಣ ಬೇಸಾಯಕ್ಕೆ ಹೆಚ್ಚಿನ ಮಹತ್ವ ಮತ್ತು ಆದ್ಯತೆ ದೊರೆತಿಲ್ಲ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬೆಲೆ ನಿಗದಿ ಸೇರಿದಂತೆ ಯಾವುದೇ ಚಟುವಟಿಕೆಗಳು ಪಾರದರ್ಶಕವಾಗಿ ನಡೆಯುವುದೇ ಇಲ್ಲ.

ಹೊಸ ಹೊಸ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ನಿರಂತರವಾಗಿ ಉನ್ನತ ತಂತ್ರಜ್ಞಾನ-ವಿಜ್ಞಾನ ಸೇರಿದಂತೆ ಕೃತಕ ಬುದ್ಧಿಮತ್ತೆಯನ್ನು ಎಲ್ಲಾ ರಂಗಗಳಲ್ಲಿ ಉತ್ತೇಜಿಸಿ ಬೆಂಬಲಿಸಲಾಗುತ್ತಿದೆ. ಇದು ಮತ್ತಷ್ಟು ಪರಿಸರ ಅವನತಿಗೆ ಮತ್ತು ಆರ್ಥಿಕ ಅವಲಂಬನೆಗೆ ಕಾರಣವಾಗುತ್ತಿದೆ. ಆ ಮೂಲಕ ಗ್ರಾಮ/ಕೃಷಿ ಸಮಾಜಗಳನ್ನು ರಾಷ್ಟ್ರೀಯ, ಅಂತರ್‌ರಾಷ್ಟ್ರೀಯ ಅಭಿವೃದ್ಧಿ ಗ್ರಿಡ್‌ಗೆ ಮತ್ತು ಜಾಗತಿಕ ಮಾರುಕಟ್ಟೆಗೆ ಸಂಯೋಜಿಸಲಾಗುತ್ತಿದೆ. ಇದರಿಂದ ಬಾಹ್ಯ-ಹಣಕಾಸು; ಬಾಹ್ಯ-ಜ್ಞಾನ- ತಂತ್ರಜ್ಞಾನ ಮತ್ತು ಬಾಹ್ಯ ಮಾರುಕಟ್ಟೆ ಪ್ರಾಬಲ್ಯತೆ ನಿರಂತರವಾಗಿ ಹೆಚ್ಚುತ್ತಿದೆ. ಇಲ್ಲಿಯೂ ದುಡಿಯುವ ಜನರ ಆರ್ಥಿಕತೆಯನ್ನು ಅಭಿವೃದ್ಧಿ ನೀತಿಗಳು ನಿರ್ಲಕ್ಷ್ಯ ಮಾಡಿರುವುದು ತಿಳಿಯುತ್ತದೆ. ಜನರ ಆರ್ಥಿಕ, ಸಾಮಾಜಿಕ ಮತ್ತು ಪರಿಸರಾತ್ಮಕ ಅಗತ್ಯಗಳನ್ನು ಪರಸ್ಪರ ಜೋಡಿಸಿ ಸಮಗ್ರ ಅಭಿವೃದ್ಧಿ ನೀತಿಗಳನ್ನು ರೂಪಿಸಿ ಒದಗಿಸಲು ಸರಕಾರಗಳು ವಿಫಲವಾಗಿವೆ. ಇದನ್ನು ವ್ಯಾಪಕವಾಗುತ್ತಿರುವ ಹಸಿವು-ಅಪೌಷ್ಟಿಕತೆ ಸೇರಿದಂತೆ ಸಾಮಾಜಿಕ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಕಳಪೆ ಸಾಧನೆಯು ಎತ್ತಿ ತೋರಿಸುತ್ತದೆ.

ಆದರೂ ಕೃಷಿ ಸಮಾಜದ ಯಾವ ಸಮಸ್ಯೆಗಳೂ ಇಂದು ರಾಜಕಾರಣ ವಿಷಯವೇ ಆಗಿಲ್ಲ. ಈ ಎಲ್ಲಾ ಅಂಶಗಳು ಕೃಷಿ ಸಮಾಜವನ್ನು ಎಲ್ಲಾ ದೃಷ್ಟಿಯಿಂದ ನಿರ್ಲಕ್ಷ್ಯ ಮಾಡಿರುವುದನ್ನು ಎತ್ತಿ ತೋರಿಸುತ್ತವೆ. ರೈತರು ಆರ್ಥಿಕತೆಯ ಬೆನ್ನೆಲುಬು ಅಥವಾ ಹಳ್ಳಿಗಳೆಂದರೆ ಒಂದು ಪುಟ್ಟ ಭಾರತ ಎಂಬ ಮಾತು ಮೂಲೆಗೆ ಸರಿದಿದೆ. ಕೃಷಿ ಸಮಾಜದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂರ್ಪೂಣವಾಗಿ ವಿಫಲವಾಗಿವೆ. ಇದಕ್ಕೆ ಎರಡು ಪುರಾವೆಗಳನ್ನು ನೀಡಬಹುದು. 1. ರಾಷ್ಟ್ರದ ರಾಜಧಾನಿಯಲ್ಲಿ ಒಂದು ವರ್ಷಕ್ಕೂ ಹೆಚ್ಚಿನ ಸಮಯ ರೈತ ಸಮುದಾಯ ನಡೆಸಿದ ಹೋರಾಟವನ್ನು ಮತ್ತು ಅವರ ಸಮಸ್ಯೆಯನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಲಿಲ್ಲ. 2. ಕರ್ನಾಟಕ ಸರಕಾರ ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ನಿಲ್ಲಿಸಲಿಲ್ಲ. ಇದು ರಾಜಕೀಯ ಪಕ್ಷಗಳು ಕೃಷಿಕರ ಬಗ್ಗೆ ಹೊಂದಿರುವ ನಿಲುವುಗಳು ಒಂದೇ ಎನ್ನುವುದಕ್ಕೆ ಸಾಕ್ಷಿ. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ(ಬಲವಂತದ ಕ್ರಮಗಳ ಪ್ರತಿಬಂಧಕ) ಕುರಿತು ಹೊರಡಿಸಿರುವ ಅಧಿಸೂಚನೆಯು ಜನಸಾಮಾನ್ಯರ ಋಣಭಾರವನ್ನು ಕಡಿಮೆ ಮಾಡುತ್ತದೆ ಎನ್ನುವುದು ಆಳುವ ವರ್ಗದ ಕುಯುಕ್ತಿಯಾಗಿದೆ. ಬಹುಶಃ ಇದಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ‘‘ಹಕ್ಕುಗಳನ್ನು ಕಾನೂನಿನಿಂದ ರಕ್ಷಿಸಲಾಗುವುದಿಲ್ಲ, ಬದಲಾಗಿ ಸಾಮಾಜಿಕ ಮತ್ತು ನೈತಿಕ ಆತ್ಮಸಾಕ್ಷಿಯಿಂದ’’ ಎಂದು ಹೇಳಿರುವುದು.

ಇಂತಹ ಪ್ರತಿಬಂಧಕ ಕ್ರಮಗಳ ಮೂಲಕ ನಿರ್ಲಕ್ಷ್ಯಕ್ಕೆ ಒಳಗಾದ ಜನರನ್ನು ಆರ್ಥಿಕ ಸಮಸ್ಯೆಗಳಿಂದ ದೂರ ಮಾಡುತ್ತೇವೆ ಎನ್ನುವುದು ಅಧಿಕಾರ ರಾಜಕಾರಣದ ಮತ್ತೊಂದು ಸ್ವರೂಪ ಅಷ್ಟೇ. ಇದು ಸ್ಪರ್ಧಾತ್ಮಕ ಚುನಾವಣಾ ಪ್ರಜಾಪ್ರಭುತ್ವದಲ್ಲಿ ಜನರನ್ನು ಅದರಲ್ಲಿಯೂ ಬಡಜನರನ್ನು ನಿಭಾಯಿಸುವ ರಾಜಕೀಯ ವ್ಯವಸ್ಥೆಯ ಪ್ರಮುಖ ಮಾರ್ಗವಾಗಿದೆ. ಜನರ ದುಸ್ಥಿತಿ ಮತ್ತು ಅವರು ಎದುರಿಸುತ್ತಿರುವ ಆರ್ಥಿಕ-ಸಾಮಾಜಿಕ ಬಿಕ್ಕಟ್ಟುಗಳನ್ನು ಪರಿಹರಿಸುವ ನೀತಿಗಳನ್ನು ರೂಪಿಸುವ ಮತ್ತು ಅನುಷ್ಠಾನಗೊಳಿಸುವ ಬದಲು, ರಾಜಕೀಯ ವ್ಯವಸ್ಥೆಯು ಆಗಾಗ ಎದುರಾಗುವ ಬಿಕ್ಕಟ್ಟುಗಳನ್ನು ಪರಿಹರಿಸಲು ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಪ್ರಭುತ್ವ ಟಾಪ್‌ಅಪ್ ನೆಲೆಯಲ್ಲಿ ಜಾರಿಗೆ ತರುತ್ತದೆ. ವಾಸ್ತವದಲ್ಲಿ ಇವು ಸಮಾಜದಲ್ಲಿ ಇರುವ ರಚನಾತ್ಮಕ ಕೊರತೆಗಳನ್ನು ಅರ್ಥಮಾಡಿಕೊಂಡು ರೂಪಿತವಾಗುವುದಿಲ್ಲ. ಬದಲಾಗಿ, ಚುನಾವಣಾ ಭರವಸೆಗಳ ಭಾಗವಾಗಿ ಅಥವಾ ಸಾಮೂಹಿಕ ಸಾರ್ವಜನಿಕ ಅಭಿಪ್ರಾಯ ಮೂಡಿಸುವ ಮತ್ತು ಭಿನ್ನಾಭಿಪ್ರಾಯವನ್ನು ತಡೆಗಟ್ಟಲು ರೂಪಿಸಲಾದ ಕಾರ್ಯಕ್ರಮಗಳಾಗಿವೆ. ಇದನ್ನು 2025-26ನೇ ಸಾಲಿನಲ್ಲಿ ಮಂಡಿಸಿರುವ ಕೇಂದ್ರ ಮತ್ತು ರಾಜ್ಯ ಸರಕಾರದ ಆಯವ್ಯಯದಲ್ಲಿಯೂ ಕಾಣಬಹುದು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ಡಾ. ಎಚ್.ಡಿ. ಪ್ರಶಾಂತ್

contributor

Similar News