ಹಸಿರು ಪ್ರಣಾಳಿಕೆಗೆ ಆದ್ಯತೆ ಸಿಗುವುದು ಯಾವಾಗ?

ಹಾಲಿ ಲೋಕಸಭೆ ಚುನಾವಣೆ ಕಡು ಬೇಸಿಗೆಯಲ್ಲಿ 2 ತಿಂಗಳು ಕಾಲ ನಡೆಯುತ್ತಿದೆ. ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಪ್ರಕಾರ, ಮಾರ್ಚ್‌ನಿಂದ ಜೂನ್‌ವರೆಗೆ ಗರಿಷ್ಠ ಉಷ್ಣಾಂಶ ಮತ್ತು ಉಷ್ಣ ಅಲೆಗಳು ಇರುತ್ತವೆ. ಉಷ್ಣ ಅಲೆಯಂಥ ತೀವ್ರ ಹವಾಮಾನ ಪರಿಸ್ಥಿತಿಯು ಮನುಷ್ಯರ ಆರೋಗ್ಯ ಮತ್ತು ಜೀವಕ್ಕೆ ಧಕ್ಕೆ ತರಬಲ್ಲದು. ಉಷ್ಣ ಅಲೆ, ಭಾರೀ ಮಳೆ, ಅಕಾಲಿಕ ಹಿಮಪಾತ, ಚಂಡಮಾರುತ ಇವೆಲ್ಲವೂ ಹವಾಮಾನ ಬದಲಾವಣೆಗೆ ಸಂಬಂಧಿಸಿವೆ. ಹೀಗಿದ್ದರೂ, ಹವಾಮಾನ ಬದಲಾವಣೆ ಎನ್ನುವುದು ಚುನಾವಣೆ ಕಾರ್ಯಸೂಚಿಯಲ್ಲಿ ನಾಪತ್ತೆಯಾಗಿದೆ.

Update: 2024-05-03 05:44 GMT
Editor : Thouheed | Byline : ಋತ
ಹಸಿರು ಪ್ರಣಾಳಿಕೆಗೆ ಆದ್ಯತೆ ಸಿಗುವುದು ಯಾವಾಗ?
  • whatsapp icon

ಬೆಂಗಳೂರು ಮಾತ್ರವಲ್ಲದೆ ರಾಜ್ಯವಿಡೀ ಧಗಧಗ ಬಿಸಿಲು ಮತ್ತು ನೀರಿನ ಕೊರತೆಯಿಂದ ಹೈರಾಣಾಗಿದೆ. ನೀರಿನ ಕೊರತೆ ಫೆಬ್ರವರಿಯಿಂದಲೇ ಆರಂಭವಾಗಿತ್ತು. ಎಪ್ರಿಲ್‌ನಲ್ಲಿ ಯುಗಾದಿ ಹಬ್ಬದ ಬಳಿಕ ಆಗಬೇಕಿದ್ದ ವಾಡಿಕೆ ಮಳೆ ಕೈಕೊಟ್ಟಿತು. ರಣಬಿಸಿಲು-ನೀರಿನ ಕೊರತೆ ಸಮಸ್ಯೆಗಳು ಭೂಮಿಯ ಬಳಕೆಯಲ್ಲಿ ಬದಲಾವಣೆ, ಪರಿಸರ ನಾಶ, ಹವಾಮಾನ ಬದಲಾವಣೆ, ಲಾ ನಿನಾ ಇತ್ಯಾದಿ ಬಗ್ಗೆ ಚರ್ಚೆಗೆ ಕಾರಣವಾದವು. ಸರಕಾರ ಬೆಂಗಳೂರಿನಲ್ಲಿ ಖಾಸಗಿ ಟ್ಯಾಂಕರ್‌ಗಳನ್ನು ವಶಪಡಿಸಿಕೊಂಡಿದ್ದಲ್ಲದೆ, ಸಂಸ್ಕರಿಸಿದ ನೀರಿನ ಬಳಕೆಗೆ ನಿಯಮ ರೂಪಿಸಿತು. ನೀರಿನ ಸಮಸ್ಯೆ ಬಗೆಹರಿಸಲು ದೀರ್ಘಕಾಲೀನ ಪರಿಹಾರ ಕಂಡುಕೊಳ್ಳಬೇಕು ಎಂದು ನಾಗರಿಕ ಗುಂಪುಗಳು-ವಿಜ್ಞಾನಿಗಳು ಸದ್ದು ಮಾಡತೊಡಗಿದರು. ಆದರೆ, ಮಾರ್ಚ್ 16ರಂದು ಚುನಾವಣೆ ಘೋಷಣೆಯಾದ ಬಳಿಕ ನೀರಿನ ಸಮಸ್ಯೆ ನೇಪಥ್ಯಕ್ಕೆ ಸರಿಯಿತು.

ದೇಶದ ಇನ್ನೊಂದು ಬದಿಯಲ್ಲಿರುವ ಲಡಾಖ್‌ನಲ್ಲಿ ಸೋನಂ ವಾಂಗ್ಚುಕ್, ಲಡಾಖ್-ಕಾರ್ಗಿಲ್‌ನ್ನು 8ನೇ ಪರಿಶಿಷ್ಟಕ್ಕೆ ಸೇರಿಸಿ, ವಿಶೇಷ ಸ್ಥಾನಮಾನ ಕಲ್ಪಿಸಬೇಕು; ಈ ಪ್ರದೇಶದಲ್ಲಿ ಪರಿಸರಸ್ನೇಹಿ ಅಭಿವೃದ್ಧಿಗೆ ಮಾತ್ರ ಅವಕಾಶ ನೀಡಬೇಕು ಎಂದು 21 ದಿನ ನಿರಶನ ನಡೆಸಿದರು. ಸಕಾರಾತ್ಮಕ ಪ್ರತಿಕ್ರಿಯೆ ಬಾರದ ಕಾರಣ ಪ್ರತಿಭಟನೆ ನಿಲ್ಲಿಸಿದರು. ಸರಕಾರ ನಿಷೇಧಾಜ್ಞೆ ವಿಧಿಸಿದ್ದರಿಂದ, ಉದ್ದೇಶಿತ ಪಾದಯಾತ್ರೆಯನ್ನು ಕೈಗೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ.

ದೇಶದೆಲ್ಲೆಡೆ ಚುನಾವಣೆ ಪ್ರಚಾರದ ಬಿರುಸಿನ ಜೊತೆಗೆ ಗದ್ದಲವೂ ಹೆಚ್ಚಿದೆ. ಪಕ್ಷಗಳ ಪ್ರಣಾಳಿಕೆಯಲ್ಲಿ ಪರಿಸರ ಮತ್ತು ಹವಾಮಾನ ಬದಲಾವಣೆಯಂಥ ವಿಷಯಗಳು ಎಲ್ಲೋ ಕೊನೆಯಲ್ಲಿ ಇರುತ್ತವೆ. ಪ್ರಚಾರದ ವೇಳೆ ಯಾರೂ ಈ ಬಗ್ಗೆ ಮಾತಾಡುವುದಿಲ್ಲ. ‘ಜನರಿಗೆ ಹವಾಮಾನ ಬದಲಾವಣೆಯ ಪರಿಣಾಮದಿಂದ ರಕ್ಷಣೆ ಪಡೆಯುವ ಹಕ್ಕು ಇದೆ,’ ಎಂಬ ಸುಪ್ರೀಂ ಕೋರ್ಟಿನ ಮಾರ್ಚ್‌21ರ ಅಭೂತಪೂರ್ವ ತೀರ್ಪಿನ ಬಳಿಕವೂ ರಾಜಕಾರಣಿಗಳು ನಿಶ್ಚಲರಾಗಿದ್ದಾರೆ.

ಕೇಂದ್ರ ಸರಕಾರದ ವರದಿ(ಇಂಡಿಯಾಸ್ ಕ್ಲೈಮೇಟ್‌ವರ್ನರಬಿಲಿಟಿ) ಪ್ರಕಾರ, 29 ರಾಜ್ಯಗಳು ಹವಾಮಾನ ಸಂಬಂಧಿ ಸಂಕಷ್ಟವನ್ನು ಎದುರಿಸುತ್ತಿವೆ. ಲ್ಯಾನ್ಸೆಟ್‌ನ ‘ಕೌಂಟ್‌ಡೌನ್ ಆನ್ ಹೆಲ್ತ್ ಆ್ಯಂಡ್‌ಕ್ಲೈಮೇಟ್‌ಚೇಂಜ್’ 2023ರ ವರದಿ, 1997-2022ರ ಅವಧಿಯಲ್ಲಿ ಉಷ್ಣಾಂಶ ಸಂಬಂಧಿತ ಸಾವುಗಳ ಪ್ರಮಾಣ ಶೇ.85ರಷ್ಟು ಹೆಚ್ಚಿದ್ದು, 2025ರಲ್ಲಿ ಶೇ.370ಕ್ಕೆ ಅಧಿಕಗೊಳ್ಳಲಿದೆ ಎಂದು ಹೇಳಿದೆ. ಆದರೆ, ಇಂತಹ ಎಚ್ಚರಿಕೆಗಳು ರಾಜಕೀಯ ಚರ್ಚೆಗೆ ಕಾರಣವಾಗುವುದಿಲ್ಲ ಇಲ್ಲವೇ ಚುನಾವಣೆಯಲ್ಲಿ ಪರಿಸರ ಸಂರಕ್ಷಣೆ-ಹವಾಮಾನ ಬದಲಾವಣೆ ಮುಖ್ಯ ವಿಷಯ ಆಗುವುದಿಲ್ಲ.

ಪರಿಸರ ಸಮಸ್ಯೆಗಳು ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ. ಅರುಣಾಚಲ ಪ್ರದೇಶದ ಸೂಕ್ಷ್ಮ ಪರಿಸರದ ಮೇಲೆ ಜಲವಿದ್ಯುತ್ ಯೋಜನೆಗಳ ವಿಪರಿಣಾಮ, ಅಸ್ಸಾಮಿನ ವಾರ್ಷಿಕ ಪ್ರವಾಹ ಅಥವಾ ಚಂಡಮಾರುತ, ಎಡೆಬಿಡದೆ ಸುರಿಯುವ ಮಳೆಯಿಂದ ನಷ್ಟ ಅನುಭವಿಸುವ ರೈತರು ಮತ್ತು ಗುಜರಾತಿನ ಉಪ್ಪು ತಯಾರಕರು, ಛತ್ತೀಸ್‌ಗಡದಲ್ಲಿ ಗಣಿಗಾರಿಕೆಯ ಉಪಟಳ, ಮಧ್ಯಪ್ರದೇಶದಲ್ಲಿ ಅನಿಯಂತ್ರಿತ ಗಣಿಗಾರಿಕೆಯಿಂದ ಮಾಲಿನ್ಯ ಹೆಚ್ಚಳ ಮತ್ತು ಅಕ್ರಮ ಮರಳು ಸಾಗಣೆ, ಗುಜರಾತಿನಲ್ಲಿ ಚಂಡಮಾರುತ, ಸುದೀರ್ಘ ಕಾಲ ಮಳೆ, ಅರೇಬಿಯನ್ ಸಮುದ್ರದ ಮಟ್ಟ ಹೆಚ್ಚಳದಿಂದ ಕರಾವಳಿಯ ಹಳ್ಳಿಗಳ ಮುಳುಗಡೆಯ ಆತಂಕ, ಮಹಾರಾಷ್ಟ್ರದಲ್ಲಿ ಜೌಗು ಪ್ರದೇಶ, ಮ್ಯಾಂಗ್ರೋವ್ ಕಾಡುಗಳು ಮತ್ತು ಹುಲ್ಲುಗಾವಲುಗಳ ನಾಶ, ಕರ್ನಾಟಕದಲ್ಲಿ ಮನುಷ್ಯ-ವನ್ಯಜೀವಿ ಸಂಘರ್ಷ, ಉತ್ತರಾಖಂಡದಲ್ಲಿ ಚಾರ್‌ಧಾಮ್ ಯೋಜನೆ, ಅರುಣಾಚಲ ಪ್ರದೇಶದಲ್ಲಿ ಭಾರೀ ಅಣೆಕಟ್ಟು ಮತ್ತು ಜಲವಿದ್ಯುತ್ ಯೋಜನೆಗಳು, ಪಶ್ಚಿಮ ಬಂಗಾಳದಲ್ಲಿ ಕಲ್ಲಿದ್ದಲು ಗಣಿಗಾರಿಕೆ, ಸುಂದರವನದ ನಾಶ ಸೇರಿದಂತೆ ಪರಿಸರ ಸಂಕಷ್ಟಗಳು ಪ್ರತೀ ಚುನಾವಣೆಯಲ್ಲೂ ಹಿಂದೆ ಉಳಿದುಕೊಳ್ಳುತ್ತವೆ. ಇದಕ್ಕೆ ಈ ಚುನಾವಣೆಯೂ ಹೊರತಾಗಿಲ್ಲ.

ದೇಶದ ಹೆಚ್ಚಿನ ಪ್ರದೇಶಗಳಲ್ಲಿ ಉಷ್ಣತೆ ಗಗನ ಮುಟ್ಟಿರುವ ಬಗ್ಗೆ ಮಾತನ್ನಾಡಲು ರಾಜಕೀಯ ಪಕ್ಷಗಳು ಸಿದ್ಧವಿಲ್ಲ. ಕೇರಳದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್, ಎಡ ಪಕ್ಷದ ಸರಕಾರದ ಭ್ರಷ್ಟಾಚಾರ ಕುರಿತು ಮಾತ್ರ ಉಲ್ಲೇಖಿಸುತ್ತಿವೆ; ಕರಾವಳಿ ಪ್ರದೇಶದ ಜನರ ಗೋಳು, ಜಲಕಾಯಗಳ ಒತ್ತುವರಿ, ಅಷ್ಟೇಕೆ, ಅಕ್ರಮ ಗಣಿಗಾರಿಕೆ ವಿರುದ್ಧ 1,040 ದಿನಗಳ ನಿರಂತರ ಪ್ರತಿಭಟನೆ ಕೂಡ ಚುನಾವಣೆಯಲ್ಲಿ ಮುಖ್ಯ ವಿಷಯವಾಗಿಲ್ಲ. ಕರ್ನಾಟಕದಲ್ಲಿ ಪೆನ್‌ಡ್ರೈವ್, ಮಂಗಳಸೂತ್ರದ್ದೇ ಮಾತು. ಪ್ರಣಾಳಿಕೆಯಲ್ಲಿ ಏನಿದೆ?: ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ತಮ್ಮ ಪ್ರಣಾಳಿಕೆಯ ಕೊನೆಯ ಅಧ್ಯಾಯಗಳಲ್ಲಿ ಹವಾಮಾನ ಬದಲಾವಣೆ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ವಿಷಯಗಳನ್ನು ಉಲ್ಲೇಖಿಸಿವೆ. 1952ರಿಂದ 2022ರವರೆಗಿನ ಚುನಾವಣೆ ಪ್ರಣಾಳಿಕೆಗಳ ಅಧ್ಯಯನ ನಡೆಸಿರುವ ಸೆಂಟರ್‌ಫಾರ್ ಪಾಲಿಸಿ ರಿಸರ್ಚ್ ಪ್ರಕಾರ, ರಾಜಕೀಯ ಪಕ್ಷಗಳು ಜನಸಂಖ್ಯೆಯ ಹೆಚ್ಚಿನವರ ಸಾಮಾಜಿಕೋಆರ್ಥಿಕ ಹಿಂದುಳಿದಿರುವಿಕೆಯನ್ನು ಗಮನದಲ್ಲಿರಿಸಿಕೊಂಡು, ಜನ ಕಲ್ಯಾಣ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡುತ್ತವೆ. ಕಾಲಕ್ರಮೇಣ ಪರಿಸರ ಸಂಬಂಧಿ ವಿಷಯಗಳು ಮುನ್ನೆಲೆಗೆ ಬಂದಿದ್ದರೂ, ಪರಿಸರ ಹಾಗೂ ಆಹಾರ ಸುರಕ್ಷೆ, ಆರೋಗ್ಯ ರಕ್ಷಣೆ, ಜೀವನಾಧಾರ, ಜೀವನದ ಗುಣಮಟ್ಟ ನಡುವಿನ ಸಂಬಂಧ ಕುರಿತು ಚರ್ಚೆ ನಡೆದಿಲ್ಲ. ಪರಿಸರ ನಾಶ ಮತ್ತು ಪ್ರಕೃತಿಯ ಗುಣಮಟ್ಟ ಕುಸಿತದಿಂದ ತಮ್ಮ ಮೇಲೆಯೂ ಪರಿಣಾಮವುಂಟಾಗಲಿದೆ ಎಂಬ ವಾಸ್ತವಾಂಶದಿಂದ ರಾಜಕೀಯ ಮುಖಂಡರು ಓಡಿ ಹೋಗುವುದು ಸಾಧ್ಯವಿಲ್ಲ. ಪರಿಸರ ನಾಶಕ್ಕೆ ಸ್ಥಳೀಯ ಜನಪ್ರತಿನಿಧಿಗಳನ್ನು ಉತ್ತರದಾಯಿ ಮಾಡಬೇಕಾಗುತ್ತದೆ. ಆದರೆ, ಇದನ್ನು ಸಾಧಿಸಲು ರಾಷ್ಟ್ರೀಯ ಹಸಿರು ಪಕ್ಷ ಇಲ್ಲವೇ ರಾಜಕೀಯ ಸಂಘಟನೆಯೊಂದು ಇಲ್ಲವಾಗಿದೆ.

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹಲವು ಮುಖ್ಯ ಅಂಶಗಳನ್ನು ಪ್ರಸ್ತಾಪಿಸಿದೆ. ಅವೆಂದರೆ, *ಪರಿಸರ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಗೆ ಸ್ವಾಯತ್ತ ಪ್ರಾಧಿಕಾರ *ಪುನರ್‌ಬಳಕೆ ಇಂಧನ, ಸುಸ್ಥಿರ ಮೂಲಸೌಲಭ್ಯ ಮತ್ತು ಹಸಿರು ಉದ್ಯೋಗ ಸೃಷ್ಟಿಯನ್ನು ಗುರಿಯಾಗುಳ್ಳ ನವೀನ ಹಸಿರು ಹೂಡಿಕೆ ಕಾರ್ಯಕ್ರಮ *ವಾಯುಮಾಲಿನ್ಯವನ್ನು ಎದುರಿಸಲು ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮದ ಬಲವರ್ಧನೆ *ನದಿಗಳಿಗೆ ತ್ಯಾಜ್ಯ ತುಂಬುವಿಕೆ ನಿಲ್ಲಿಸುವುದು *ಪರ್ವತಗಳಿರುವ ಜಿಲ್ಲೆಗಳಲ್ಲಿ ಭೂಕುಸಿತ ತಡೆ ಕುರಿತ ಅಧ್ಯಯನಕ್ಕೆ ಉನ್ನತ ಮಟ್ಟದ ಸಮಿತಿ * ಮೀನುಗಾರರ ಜೀವನಾಧಾರಕ್ಕೆ ತೊಂದರೆಯಾಗದಂತೆ ಕರಾವಳಿ ಜಿಲ್ಲೆಗಳ ಸಂರಕ್ಷಣೆ *ಅರಣ್ಯ ಪ್ರದೇಶದ ಹೆಚ್ಚಳ-ಮರುಅರಣ್ಯೀಕರಣದಲ್ಲಿ ಸ್ಥಳೀಯ ಸಮುದಾಯಗಳ ಒಳಗೊಳ್ಳುವಿಕೆ; ‘ಅರಣ್ಯ’ ಮತ್ತು ‘ಅರಣ್ಯ ಮುಚ್ಚಿಗೆ’ ಎಂಬ ಪದದ ಮರುವ್ಯಾಖ್ಯಾನ *ದೇಶದ ಎಲ್ಲ ಕುಟುಂಬಗಳಿಗೆ ಕೈಗೆಟಕುವ ದರದಲ್ಲಿ ಅಡುಗೆ ಅನಿಲ ಸಿಲಿಂಡರ್ ಪೂರೈಕೆ *ಹಸಿರು ಸ್ಥಿತ್ಯಂತರ ನಿಧಿ ಸ್ಥಾಪನೆ *ರಾಷ್ಟ್ರೀಯ ಅನುಗೊಳಿಸುವಿಕೆ ನಿಧಿಗೆ ಹೆಚ್ಚು ಅನುದಾನ *2008ರ ರಾಷ್ಟ್ರೀಯ ಹವಾಮಾನ ಬದಲಾವಣೆ ಯೋಜನೆಯನ್ನು ರಾಷ್ಟ್ರೀಯ ಹವಾಮಾನ ಪುನಶ್ಚೇತನ ಮಿಷನ್ ಆಗಿ ಪರಿವರ್ತನೆ *ಮಾನವ-ವನ್ಯಜೀವಿ ಸಂಘರ್ಷಕ್ಕೆ ಪ್ರದೇಶ ನಿರ್ದಿಷ್ಟ ಪರಿಹಾರ ಕಂಡುಕೊಳ್ಳುವುದು.

ಬಿಜೆಪಿ ಪ್ರಣಾಳಿಕೆಯಲ್ಲಿ *ಪಳೆಯುಳಿಕೆಯಲ್ಲದ ಇಂಧನ ಸಾಮರ್ಥ್ಯ ಹೆಚ್ಚಳ *ರಾಷ್ಟ್ರೀಯ ನದಿ ಸಂರಕ್ಷಣೆ ಯೋಜನೆಯಲ್ಲಿ ಅಮೃತ ಸರೋವರ, ಸಣ್ಣ ಕಟ್ಟೆಗಳು ಹಾಗೂ ನದಿಗಳ ಜಲಾನಯನ ನಿರ್ಮಾಣವನ್ನು ಏಕತ್ರಗೊಳಿಸುವುದು *ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮದಡಿ 2029ರೊಳಗೆ 60 ನಗರಗಳಲ್ಲಿ ಶುದ್ಧ ವಾಯು ಗುಣಮಟ್ಟವನ್ನು ಖಾತ್ರಿಗೊಳಿಸುವುದು *ಮರಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ‘ಇಂಗಾಲದ ಸಿಂಕ್’ ಗುರಿಯನ್ನು ಮುಟ್ಟುವುದು * ಹಸಿರು ಅರಾವಳಿ ಯೋಜನೆಗೆ ಚಾಲನೆ *ಹಿಮಾಲಯದ ರಾಜ್ಯಗಳಲ್ಲಿ ಅವಘಡ ಪುನಶ್ಚೇತನ ಸಾಮರ್ಥ್ಯ ಹೆಚ್ಚಳ *ಕರಾವಳಿ ಹವಾಮಾನ ಪುನಶ್ಚೇತನದ ಅಭಿವೃದ್ಧಿ *ಹಸಿರು ಕ್ರೆಡಿಟ್ ಕಾರ್ಯಕ್ರಮದ ವಿಸ್ತರಣೆ * ಸುಸ್ಥಿರ ಜೀವನವನ್ನು ಉತ್ತೇಜಿಸಲು ಮಿಷನ್‌ಲೈಫ್ ಉಪಕ್ರಮದ ಬಲವರ್ಧನೆ * ಮನುಷ್ಯ-ವನ್ಯಜೀವಿ ಸಂಘರ್ಷದ ನಿರ್ವಹಣೆ.

ಸರಿ. ಇದರ ಅನುಷ್ಠಾನ ಯಾವಾಗ?

ಪರಿಸರ ಚುನಾವಣೆ ವಿಷಯ ಆಗುವುದಿಲ್ಲವೇಕೆ?

ಹಾಲಿ ಲೋಕಸಭೆ ಚುನಾವಣೆ ಕಡು ಬೇಸಿಗೆಯಲ್ಲಿ 2 ತಿಂಗಳು ಕಾಲ ನಡೆಯುತ್ತಿದೆ. ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಪ್ರಕಾರ, ಮಾರ್ಚ್‌ನಿಂದ ಜೂನ್‌ವರೆಗೆ ಗರಿಷ್ಠ ಉಷ್ಣಾಂಶ ಮತ್ತು ಉಷ್ಣ ಅಲೆಗಳು ಇರುತ್ತವೆ. ಉಷ್ಣ ಅಲೆಯಂಥ ತೀವ್ರ ಹವಾಮಾನ ಪರಿಸ್ಥಿತಿಯು ಮನುಷ್ಯರ ಆರೋಗ್ಯ ಮತ್ತು ಜೀವಕ್ಕೆ ಧಕ್ಕೆ ತರಬಲ್ಲದು. ಉಷ್ಣ ಅಲೆ, ಭಾರೀ ಮಳೆ, ಅಕಾಲಿಕ ಹಿಮಪಾತ, ಚಂಡಮಾರುತ ಇವೆಲ್ಲವೂ ಹವಾಮಾನ ಬದಲಾವಣೆಗೆ ಸಂಬಂಧಿಸಿವೆ. ಹೀಗಿದ್ದರೂ, ಹವಾಮಾನ ಬದಲಾವಣೆ ಎನ್ನುವುದು ಚುನಾವಣೆ ಕಾರ್ಯಸೂಚಿಯಲ್ಲಿ ನಾಪತ್ತೆಯಾಗಿದೆ.

ಇದಕ್ಕೆ ಹಲವು ಕಾರಣಗಳಿವೆ. ಹವಾಮಾನ ಬದಲಾವಣೆ ಒಂದು ಸಂಕೀರ್ಣ, ಕ್ಲಿಷ್ಟ ವಿಷಯ. ಹೆಚ್ಚಿನ ರಾಜಕಾರಣಿಗಳಿಗೆ ಅರ್ಥವಾಗುವುದಿಲ್ಲ ಮತ್ತು ಅವರು ಅರ್ಥ ಮಾಡಿಕೊಂಡು ಮತದಾರರಿಗೆ ವಿವರಿಸುವುದು ಮತ್ತಷ್ಟು ಕಷ್ಟ. ಹವಾಮಾನ ಬದಲಾವಣೆಯ ನಿರ್ವಹಣೆಗೆ ದೀರ್ಘಕಾಲೀನ ಕಾರ್ಯನೀತಿ ಬೇಕಾಗುತ್ತದೆ. ಆದರೆ, ಚುನಾವಣೆ ಎನ್ನುವುದು 5 ವರ್ಷಕ್ಕೊಮ್ಮೆ ನಡೆಯುವ ವಿದ್ಯಮಾನ. ಹವಾಮಾನ ಬದಲಾವಣೆಯಿಂದ ನಗರ ಪ್ರದೇಶಗಳಲ್ಲಿ ಪ್ರವಾಹ, ಪರ್ವತ ಪ್ರದೇಶದಲ್ಲಿ ಭೂಕುಸಿತ, ಅರಣ್ಯ ನಾಶ, ಅಂತರ್ಜಲ ಕುಸಿತ ಇಲ್ಲವೇ ಬೆಳೆ ನಾಶ ಆಗುತ್ತದೆ. ಆದರೆ, ಅದು ಚುನಾವಣೆ ವಿಷಯ ಆಗುವುದಿಲ್ಲ. ಕರಾವಳಿ ಇಲ್ಲವೇ ಪರ್ವತ ಪ್ರದೇಶದಲ್ಲಿ ನೆಲೆಸಿರುವವರು ಹವಾಮಾನ ಬದಲಾವಣೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕುತ್ತಾರಾದರೂ, ಇದಕ್ಕೆ ಮನುಷ್ಯರ ಚಟುವಟಿಕೆಗಳು ಕಾರಣವೇ ಇಲ್ಲವೇ ತಪ್ಪು ಕಾರ್ಯನೀತಿಗಳು ಕಾರಣವೇ ಎನ್ನುವುದು ಸ್ಪಷ್ಟವಿಲ್ಲ. ಪರಿಸರ ಸಂರಕ್ಷಣೆ-ಹವಾಮಾನ ಬದಲಾವಣೆ ವಿಷಯವನ್ನು ಸಾರ್ವಜನಿಕ ಸಂವಾದ, ನಾಗರಿಕ ಸಂಸ್ಥೆಗಳ ಕ್ರಿಯಾಶೀಲತೆ ಮತ್ತು ಮಾಧ್ಯಮಗಳ ನೆರವಿನಿಂದ ಚರ್ಚೆಯ ಕೇಂದ್ರ ಸ್ಥಾನಕ್ಕೆ ತರಬಹುದು. ಆದರೆ, ಹವಾಮಾನ ಬದಲಾವಣೆ ಬಗ್ಗೆ ಜಾಗೃತಿ ಕಡಿಮೆಯಿದೆ. ಸುಸ್ಥಿರ-ಹಸಿರು ತಂತ್ರಜ್ಞಾನಕ್ಕೆ ವಾಹನ ಮತ್ತು ಪಳೆಯುಳಿಕೆ ಇಂಧನ ಉದ್ಯಮ ಅಡೆತಡೆ ಒಡ್ಡುತ್ತಿವೆ. ಹಸಿರು ಇಂಧನ ಮತ್ತು ಇ-ವಾಹನ ಕ್ಷೇತ್ರದಲ್ಲಿ ಒಂದಿಷ್ಟು ಪ್ರಗತಿ ಆಗಿದೆ. ಮುಖ್ಯವಾಹಿನಿ ಮಾಧ್ಯಮಗಳು ಕೂಡ ಹವಾಮಾನ ಬದಲಾವಣೆಯನ್ನು ಒಂದು ಗಂಭೀರ ಸಮಸ್ಯೆ ಎಂದು ಪರಿಗಣಿಸಿಲ್ಲ. ಇದೆಲ್ಲ ಕಾರಣದಿಂದಾಗಿ, ಚುನಾವಣೆಗಳಲ್ಲೂ ಬದಿಗೆ ಸರಿದಿದೆ.

ಹಸಿರು ಕಾರ್ಯನೀತಿ ಅಗತ್ಯ

ಅಮೆರಿಕದಲ್ಲಿ ಅಲ್‌ಗೋರ್ ತಮ್ಮ ಸಾಕ್ಷ್ಯಚಿತ್ರ ‘ದ ಇನ್‌ಕನ್ವಿನಿಯಂಟ್ ಟ್ರೂಥ್’ ಮೂಲಕ ಹವಾಮಾನ ಬದಲಾವಣೆಯನ್ನು ಒಂದು ರಾಜಕೀಯ ವಿಷಯವನ್ನಾಗಿಸಿದರು. ಆದರೆ, ಡೊನಾಲ್ಡ್ ಟ್ರಂಪ್ ಆಳ್ವಿಕೆಯಲ್ಲಿ ಈ ಎಲ್ಲ ಸಾಧನೆಗಳಿಗೆ ತುಕ್ಕು ಹಿಡಿಯಿತು. ಕ್ಯೋಟೋ ಒಪ್ಪಂದದಿಂದ ಆಸ್ಟ್ರೇಲಿಯದ ಪ್ರಧಾನಿ ಜಾನ್‌ಹೋವರ್ಡ್ ಹೊರಗೆ ಬಂದಿದ್ದು ತೀವ್ರ ಚರ್ಚೆಗೆ ಕಾರಣವಾಯಿತು. ಜರ್ಮನಿಯ ಗ್ರೀನ್‌ಪಾರ್ಟಿ 2 ವರ್ಷದ ಹಿಂದೆ ಆಡಳಿತಾರೂಢ ‘ಟ್ರಾಫಿಕ್ ಸಿಗ್ನಲ್‌ಕೊಯಲಿಷನ್’ ಭಾಗವಾಗಿದ್ದು, ಬದಲಾವಣೆಗಳಿಗೆ ಕಾರಣವಾಗುತ್ತಿದೆ. ಹವಾಮಾನ ಬದಲಾವಣೆ ಎನ್ನುವುದು ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ರಾಜಕೀಯ ವಿಷಯ. ಹವಾಮಾನ ವಿಜ್ಞಾನ, ಸಂಧಾನಗಳು, ಒಪ್ಪಂದ ಮತ್ತು ಉಪಶಮನ ಕ್ರಿಯೆಗಳನ್ನು ಹಾಗೂ ಪಳೆಯುಳಿಕೆ ಇಂಧನರಹಿತ ಜಗತ್ತಿಗೆ ಸ್ಥಿತ್ಯಂತರವನ್ನು ತೈಲ ಕಂಪೆನಿಗಳು, ವಾಹನ ಉತ್ಪಾದಕ ಕಂಪೆನಿಗಳು ಸೇರಿದಂತೆ ಹಲವು ಪ್ರಬಲ ಶಕ್ತಿಗಳು ತಡೆಯುತ್ತಿವೆ. ಹವಾಮಾನ ಬದಲಾವಣೆ ಜನರ ಜವಾಬ್ದಾರಿ ಎನ್ನುವ ರಾಜಕೀಯ ಪಕ್ಷಗಳು/ರಾಜಕಾರಣಿಗಳು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಹವಾಮಾನ ಬದಲಾವಣೆ ಚುನಾವಣೆ ವಿಷಯ ಆಗಬೇಕಿದ್ದರೆ, ಮತದಾರರಿಗೆ ಸಮಸ್ಯೆಯ ಅರಿವು ಇರಬೇಕಾಗುತ್ತದೆ. ಪ್ರವಾಹ, ಭೂಕಂಪ, ಚಂಡಮಾರುತ, ಕಾಡ್ಗಿಚ್ಚು ಸೇರಿದಂತೆ ಪರಿಸರ ಅವಘಡಗಳು ಹೆಚ್ಚುತ್ತಿವೆ. ಇದೆಲ್ಲದರ ನಷ್ಟವನ್ನು ಜನ ಭರಿಸಬೇಕಾಗುತ್ತದೆ. ವಾಯುಮಾಲಿನ್ಯವನ್ನು ‘ನಿಶ್ಶಬ್ದ ಕೊಲೆಗಾರ’ ಎನ್ನುತ್ತಾರೆ. ವಿಶ್ವಬ್ಯಾಂಕ್ ಪ್ರಕಾರ, ಭಾರತದಲ್ಲಿ 2019ರಲ್ಲಿ ವಾಯುಮಾಲಿನ್ಯದಿಂದ ಆದ ಆರ್ಥಿಕ ನಷ್ಟ ಒಟ್ಟು ದೇಶಿ ಉತ್ಪಾದನೆ(ಜಿಡಿಪಿ)ಯ ಶೇ.1.4(ಅಂದರೆ, 36.8 ಶತಕೋಟಿ ಡಾಲರ್)!

ಪರಿಸರ ಸಂಬಂಧಿ ವಿಷಯಗಳು ಸಂಕೀರ್ಣವಾದವು. ಪರಿಸರಸ್ನೇಹಿ ಕಾರ್ಯ ಯೋಜನೆ-ಕಾರ್ಯನೀತಿ ರೂಪಿಸಲು ಹಲವು ಪಾಲುದಾರರನ್ನು ಒಟ್ಟುಗೂಡಿಸಬೇಕಾಗುತ್ತದೆ ಮತ್ತು ಫಲಿತಾಂಶ ದೃಗ್ಗೋಚರವಾಗಲು ಹೆಚ್ಚು ಕಾಲ ಹಿಡಿಯುತ್ತದೆ. ಹೀಗಾಗಿ, ಅಧಿಕಾರಿಗಳು-ಜನಪ್ರತಿನಿಧಿಗಳು ಆಸಕ್ತಿ ಕಳೆದುಕೊಳ್ಳುತ್ತಾರೆ. ‘ಇಕಾಲಜಿ ಎನ್ನುವುದು ಶಾಶ್ವತ ಆರ್ಥಿಕತೆ’ ಎಂದು ಸುಂದರಲಾಲ್ ಬಹುಗುಣ ಹೇಳುತ್ತಾರೆ. ಇಂತಹ ಶಾಶ್ವತ ಆರ್ಥಿಕತೆಯನ್ನು ಹಾಗೂ ಹಸಿರು ಕಾರ್ಯನೀತಿಯನ್ನು ಮುಂದೊತ್ತುವ ಪಕ್ಷ ಇಲ್ಲವೇ ಸಂಘಟನೆ ಅಗತ್ಯವಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಋತ

contributor

Similar News