‘ಒಂದು ದೇಶ-ಒಂದು ಚುನಾವಣೆ’ ರಾಜಕೀಯ ಉತ್ತರದಾಯಿತ್ವಕ್ಕೆ ಹಿನ್ನಡೆ

‘ಒಂದೇ ಒಂದು’ ಪರಿಕಲ್ಪನೆಯ ಅಸ್ತಿಭಾರವೇ ದೋಷಪೂರಿತವಾಗಿದ್ದು, ಅದು ರಾಷ್ಟ್ರೀಯ ಪಕ್ಷಗಳ ಸಮಸ್ಯೆಯನ್ನು ದೇಶದ ಸಮಸ್ಯೆ ಎಂದು ಪರಿಗಣಿಸುತ್ತದೆ. ಒಮ್ಮೆಲೇ ಚುನಾವಣೆ ನಡೆಸುವುದರಿಂದ ಹಣ, ಸಮಯ ಮತ್ತು ಶ್ರಮ ಉಳಿಯುತ್ತದೆ ಎಂಬುದು ಒಂದು ದುರ್ಬಲ ವಾದ. ಹಣ ಉಳಿಸಲು ಒಕ್ಕೂಟ ತತ್ವದ ನಾಶ ಹಾಗೂ ಸಂವಿಧಾನದ ತಿದ್ದುಪಡಿಯನ್ನು ಸಮರ್ಥಿಸಿಕೊಳ್ಳಲು ಆಗುವುದಿಲ್ಲ. ಬಿಜೆಪಿಯ ಕೇಂದ್ರೀಕರಣದ ಸುತ್ತಿಗೆಗೆ ಎಲ್ಲವೂ ಮೊಳೆಯಂತೆ ಕಾಣಿಸುತ್ತದೆ. ಜನರ ಗಮನ ಸದಾ ಬೇರೆಡೆ ಸೆಳೆಯುವ ಮೂಲಕ ತನ್ನ ಕಾರ್ಯಸೂಚಿಯನ್ನು ಮುಂದೊತ್ತುವುದು ಬಿಜೆಪಿಯ ಸಾಮಾನ್ಯ ಕಾರ್ಯತಂತ್ರ. ಇದು ಕೂಡ ಅಂಥ ತಂತ್ರ.

Update: 2024-10-11 06:30 GMT

‘ಒಂದು ದೇಶ-ಒಂದು ಚುನಾವಣೆ (ಒಂದೇ ಒಂದು)’ ಕಾರ್ಯನೀತಿಯ ಅನುಷ್ಠಾನಕ್ಕೆ ಮೂರು ಕಾಯ್ದೆಗಳ ತಿದ್ದುಪಡಿಗೆ ಒಕ್ಕೂಟ ಸರಕಾರ ಮುಂದಾಗಿದೆ. ಮಸೂದೆಗೆ ಕನಿಷ್ಠ ಅರ್ಧದಷ್ಟು ರಾಜ್ಯಗಳ ಅನುಮತಿ ಅಗತ್ಯವಿದೆ.

ಇದು 1983ರಿಂದ ಚರ್ಚೆಯಲ್ಲಿರುವ ಪರಿಕಲ್ಪನೆ. ಆಗ ಕಾನೂನು ಆಯೋಗ ತನ್ನ ವರದಿಯಲ್ಲಿ ’ಏಕಕಾಲದಲ್ಲಿ ಚುನಾವಣೆಯಿಂದ ವೆಚ್ಚ ಇಳಿಕೆ ಆಗಲಿದೆ. ಚುನಾವಣೆಗೆ ಸರಕಾರಿ ನೌಕರರ ನಿಯೋಜನೆ ಕಡಿಮೆಯಾಗುವುದರಿಂದ, ಉತ್ಪಾದಕತೆ ಹೆಚ್ಚಲಿದೆ. ರಾಜಕೀಯ ಪಕ್ಷಗಳು ಆಡಳಿತದತ್ತ ಗಮನ ನೀಡಲು ಸಾಧ್ಯವಾಗುತ್ತದೆ’ ಎಂದು ಹೇಳಿತ್ತು. ಆನಂತರ 1999ರಲ್ಲಿ ಕಾನೂನು ಆಯೋಗ ತನ್ನ 177ನೇ ವರದಿಯಲ್ಲಿ ವಿಷಯವನ್ನು ಮತ್ತೆ ಪ್ರಸ್ತಾಪಿಸಿತ್ತು. 2002ರ ವರದಿಯಲ್ಲೂ ಕಾಣಿಸಿಕೊಂಡಿತ್ತು. 2015ರ ವರದಿಯು ಇದರ ತೊಡಕುಗಳ ಬಗ್ಗೆ ಹೇಳಿತ್ತು. 2018(ಕರಡು)ರ ವರದಿ ಈ ಆಲೋಚನೆಯನ್ನು ಮುಂದೊತ್ತಿತ್ತು. ಸಂಸದೀಯ ಸ್ಥಾಯಿ ಸಮಿತಿ ಕೂಡ ‘ಏಕಕಾಲದಲ್ಲಿ ಚುನಾವಣೆ’ ವರದಿ ಸಿದ್ಧಪಡಿಸಿತ್ತು.

ಕಳೆದ 20 ವರ್ಷದಿಂದ ಸುಳಿದಾಡುತ್ತಿರುವ ಈ ಪರಿಕಲ್ಪನೆಯು ಬಿಜೆಪಿಯ ಕಾರ್ಯನೀತಿಯ ಪ್ರಮುಖ ಅಂಶಗಳಲ್ಲಿ ಒಂದು. ಈ ಪ್ರಸ್ತಾವವನ್ನು ಅಧಿಕೃತಗೊಳಿಸಲು ಸರಕಾರವು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದಲ್ಲಿ ಗೃಹ ಸಚಿವ ಅಮಿತ್ ಶಾ, ರಾಜ್ಯಸಭೆ ಮಾಜಿ ನಾಯಕ ಗುಲಾಂ ನಬಿ ಆಝಾದ್, 15ನೇ ಹಣಕಾಸು ಆಯೋಗದ ಆಯುಕ್ತ ಎಸ್.ಕೆ.ಸಿಂಗ್, ಲೋಕಸಭೆಯ ನಿವೃತ್ತ ಮಹಾ ಕಾರ್ಯದರ್ಶಿ ಸುಭಾಷ್ ಕಶ್ಯಪ್, ಹಿರಿಯ ವಕೀಲ ಹರೀಶ್ ಸಾಳ್ವೆ ಮತ್ತು ವಿಚಕ್ಷಣ ಆಯೋಗದ ಮಾಜಿ ಆಯುಕ್ತ ಸಂಜಯ್ ಕೊಠಾರಿ ಸದಸ್ಯರಾಗಿದ್ದ ಹಾಗೂ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ವಿಶೇಷ ಆಹ್ವಾನಿತರಾಗಿದ್ದ ಸಮಿತಿಯನ್ನು ರಚಿಸಿತು. ಸಮಿತಿ ಅಲ್ಪಾವಧಿಯಲ್ಲಿ ಇಂತಹ ಪ್ರಮುಖ ವಿಷಯದ ಬಗ್ಗೆ 18,626 ಪುಟಗಳ ವರದಿ ಸಿದ್ಧಗೊಳಿಸಿ, ರಾಷ್ಟ್ರಪತಿ ಅವರಿಗೆ ಮಾರ್ಚ್ 2024ರಲ್ಲಿ ಸಲ್ಲಿಸಿತು. ಸಮಿತಿಯು 18 ಸಾಂವಿಧಾನಿಕ ತಿದ್ದುಪಡಿಗಳನ್ನು ಸೂಚಿಸಿದೆ. ‘ಒಂದು ದೇಶ-ಒಂದು ಚುನಾವಣೆ’ ಬಿಜೆಪಿಯ ಚುನಾವಣೆ ಪ್ರಣಾಳಿಕೆಯಲ್ಲಿದ್ದ ಪ್ರಮುಖ ಅಂಶ. ಒಂದುವೇಳೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಕ್ಕಿದ್ದಲ್ಲಿ, ಪ್ರಸ್ತಾವಕ್ಕೆ ಜನಾದೇಶ ಸಿಕ್ಕಿದೆ ಎಂದು ಹೇಳಿಕೊಳ್ಳುತ್ತಿತ್ತು. ಆದರೆ, ಬಹುಮತ ಸಿಕ್ಕಲಿಲ್ಲ. ಶಿಫಾರಸುಗಳಿಗೆ ವಿಶ್ವಾಸಾರ್ಹತೆ ತಂದುಕೊಡಲು ಮಾಜಿ ರಾಷ್ಟ್ರಪತಿ ಅವರನ್ನು ಬಳಸಿಕೊಳ್ಳಲಾಗಿದೆ ಎಂಬ ಆರೋಪವಿದೆ. ಸಮಿತಿ ಪ್ರತಿಕ್ರಿಯೆ ಕೇಳಿದ 62 ರಾಜಕೀಯ ಪಕ್ಷಗಳಲ್ಲಿ, 47 ಪ್ರತಿಕ್ರಿಯಿಸಿದ್ದವು; 32ರಿಂದ ಬೆಂಬಲ, 15 ರಿಂದ ವಿರೋಧ ಹಾಗೂ 15 ಪಕ್ಷಗಳು ಪ್ರತಿಕ್ರಿಯಿಸಿರಲಿಲ್ಲ. ಸಮಾಜವಾದಿ ಪಕ್ಷ, ಕಾಂಗ್ರೆಸ್, ಡಿಎಂಕೆ, ಟಿಎಂಸಿ, ಆಪ್ ಮತ್ತು ಸಿಪಿಎಂ ವಿರೋಧಿಸಿದ್ದರೆ, ಬಿಜೆಪಿ ಮತ್ತು ರಾಷ್ಟ್ರೀಯ ಪೀಪಲ್ಸ್ ಪಾರ್ಟಿ(ಕಾನ್ರಾಡ್ ಸಂಗ್ಮಾ ನಾಯಕತ್ವ, ಮೇಘಾಲಯ) ಬೆಂಬಲಿಸಿವೆ. ಕೇಂದ್ರ ಸಂಪುಟವು ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸಿದೆ.

ಸಮಿತಿಯು ದೇಶಕ್ಕೊಂದೇ ಚುನಾವಣೆ ಏಕೆ ಎನ್ನಲು ನೀಡಿದ ಕಾರಣಗಳೆಂದರೆ, ► ಹಣ ಉಳಿತಾಯ-5 ವರ್ಷಕ್ಕೊಮ್ಮೆ ಎಲ್ಲ ಚುನಾವಣೆ ನಡೆಸಿದರೆ, ಅಪಾರ ಮೊತ್ತದ ಹಣ ಉಳಿಯುತ್ತದೆ ಮತ್ತು ► ನಿರಂತರ ಚುನಾವಣೆಯಿಂದ ರಾಜಕೀಯ ಪಕ್ಷಗಳು ಯಾವಾಗಲೂ ಪ್ರಚಾರದಲ್ಲಿ ತೊಡಗಿಕೊಳ್ಳುತ್ತಿದ್ದು, ಆಡಳಿತ ನಿರ್ವಹಣೆ ಹಾಗೂ ಶಾಸನಾತ್ಮಕ ಕೆಲಸದ ಮೇಲೆ ವಿಪರಿಣಾಮವುಂಟಾಗಲಿದೆ. ಮಾದರಿ ನೀತಿ ಸಂಹಿತೆಯಿಂದ ಆಡಳಿತ ಯಂತ್ರ ಸ್ಥಗಿತಗೊಂಡು, ಅಭಿವೃದ್ಧಿ ಯೋಜನೆಗಳಿಗೆ ಭಂಗ ಬರುತ್ತದೆ.

ಈ ಮಸೂದೆಯನ್ನು ಅಳವಡಿಸಿಕೊಳ್ಳಲು ಲೋಕಸಭೆಯ ಅವಧಿಯನ್ನು ನಿಗದಿಪಡಿಸುವ ವಿಧಿ 83 ಹಾಗೂ ಲೋಕಸಭೆಯ ವಿಸರ್ಜನೆ ಕುರಿತ 85ನೇ ವಿಧಿ, ವಿಧಾನಸಭೆಯ ಅವಧಿ ನಿಗದಿ ಮತ್ತು ವಿಸರ್ಜನೆ ಕುರಿತ ವಿಧಿ 172/174 ಹಾಗೂ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಅವಕಾಶ ಮಾಡಿಕೊಡುವ ವಿಧಿ 356ಕ್ಕೆ ತಿದ್ದುಪಡಿ ತರಬೇಕಾಗುತ್ತದೆ. ಜೊತೆಗೆ, ಚುನಾವಣೆ ಕ್ಯಾಲೆಂಡರ್ ಬದಲಾವಣೆ ಮಾಡಬೇಕಾಗುತ್ತದೆ. ಈಗ ವಿಧಾನಸಭೆ ಅವಧಿ 5 ವರ್ಷ. 2024ರಲ್ಲಿ ಚುನಾವಣೆ ಆದ ರಾಜ್ಯದ ಅಧಿಕಾರಾವಧಿ 2029ರವರೆಗೆ ಇರಲಿದೆ. ಒಂದುವೇಳೆ, 2028ರಲ್ಲಿ ಸರಕಾರ ಬಿದ್ದುಹೋಗಿ, ವಿಧಾನಸಭೆ ಅವಧಿ 6 ತಿಂಗಳಿಗಿಂತ ಕಡಿಮೆ ಇದ್ದರೆ, ರಾಷ್ಟ್ರಪತಿ ಆಡಳಿತ ಹೇರಲಾಗುತ್ತದೆ; ಅವಧಿ 6 ತಿಂಗಳಿಗಿಂತ ಹೆಚ್ಚು ಇದ್ದರೆ, ಚುನಾವಣೆ ನಡೆಯುತ್ತದೆ. ಆಗ, ಸರಕಾರದ ಅವಧಿ 2033ರವರೆಗೆ ಇರುವುದಿಲ್ಲ; ಬದಲಾಗಿ, 2029ಕ್ಕೆ ಮುಗಿಯುತ್ತದೆ. ಮೊದಲ ಹಂತದಲ್ಲಿ ಲೋಕಸಭೆ ಹಾಗೂ ವಿಧಾನಸಭೆಗೆ ಒಮ್ಮೆಲೇ ಚುನಾವಣೆ ನಡೆಸಿ, ಆನಂತರ 100 ದಿನಗಳೊಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಬೇಕಾಗುತ್ತದೆ.

ತಿದ್ದುಪಡಿಗಳೇನು?:

ಕಾಯ್ದೆಯ ಅನುಷ್ಠಾನಕ್ಕೆ ಅನುವು ಮಾಡಿಕೊಡಲು, ಮೂರು ತಿದ್ದುಪಡಿಗೆ ಕೇಂದ್ರ ಮುಂದಾಗಿದೆ. ಅವೆಂದರೆ,one nation one election

► 82ನೇ ಎ ವಿಧಿಗೆ ಉಪ ಕಲಂ 1 ಸೇರ್ಪಡೆ: ಉಪ ಕಲಂ 1 ಲೋಕಸಭೆ-ವಿಧಾನಸಭೆ ಅವಧಿ ಯಾವಾಗ ಆರಂಭಗೊಂಡಿದೆ ಎಂಬುದನ್ನು ಹಾಗೂ ಉಪಕಲಂ 2 ಅವಧಿ ಯಾವಾಗ ಅಂತ್ಯಗೊಳ್ಳಲಿದೆ ಎಂಬುದನ್ನು ತಿಳಿಸಲಿದೆ. ಇವನ್ನು ಸೇರಿಸಬೇಕೆಂದು ಉನ್ನತ ಸಮಿತಿ ಶಿಫಾರಸು ಮಾಡಿತ್ತು. ವಿಧಿ 83(2)ಕ್ಕೆ ತಿದ್ದುಪಡಿ ತಂದು, ಉಪ ಕಲಂ 3 ಮತ್ತು 4ನ್ನು ಸೇರಿಸಬೇಕಾಗುತ್ತದೆ. ಜೊತೆಗೆ ‘ಏಕಕಾಲಿಕ ಚುನಾವಣೆ’ ಎಂಬ ಪದ ಸೇರ್ಪಡೆಗೊಳಿಸಲು, ವಿಧಿ 327ಕ್ಕೆ ತಿದ್ದುಪಡಿ ತರಬೇಕಿದೆ. ಇದಕ್ಕೆ ಶೇ. 50ರಷ್ಟು ರಾಜ್ಯಗಳ ಒಪ್ಪಿಗೆ ಅಗತ್ಯವಿಲ್ಲ ಎಂದು ಸಮಿತಿ ಹೇಳಿದೆ.

► ಪುದುಚೇರಿ, ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಅವಧಿಯನ್ನು ಲೋಕಸಭೆ ಹಾಗೂ ಬೇರೆಲ್ಲ ರಾಜ್ಯಗಳ ವಿಧಾನಸಭೆ ಅವಧಿಗೆ ಸಮಗೊಳಿಸಲು, ರಾಷ್ಟ್ರ ರಾಜಧಾನಿ ದಿಲ್ಲಿ ಪ್ರದೇಶ ಸರಕಾರ ಕಾಯ್ದೆ 1991, ಕೇಂದ್ರಾಡಳಿತ ಪ್ರದೇಶಗಳ ಸರಕಾರ ಕಾಯ್ದೆ 1963 ಮತ್ತು ಜಮ್ಮು-ಕಾಶ್ಮೀರ ಪುನಾರಚನೆ ಕಾಯ್ದೆ 2019ಕ್ಕೆ ತಿದ್ದುಪಡಿ ತರಬೇಕಾಗುತ್ತದೆ. ಇದು ಸಾಮಾನ್ಯ ಮಸೂದೆಯಾಗಿದ್ದು, ಸಂವಿಧಾನ ತಿದ್ದುಪಡಿ ಇಲ್ಲವೇ ರಾಜ್ಯಗಳ ಒಪ್ಪಿಗೆ ಬೇಡ.

► ಕೇಂದ್ರ ಚುನಾವಣೆ ಆಯೋಗ(ಸಿಇಸಿ) ಹಾಗೂ ರಾಜ್ಯ ಚುನಾವಣೆ ಆಯೋಗ(ಎಸ್‌ಇಸಿ)ಗಳು ಒಂದೇ ಮತದಾರರ ಪಟ್ಟಿ ಮತ್ತು ಗುರುತಿನ ಚೀಟಿ ಸಿದ್ಧಪಡಿಸಬೇಕಾಗುತ್ತದೆ. ಇವೆರಡೂ ಸಂವಿಧಾನದ ಪ್ರಕಾರ, ಪ್ರತ್ಯೇಕ ಸಂಸ್ಥೆಗಳು. ಸಿಇಸಿ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಲೋಕಸಭೆ, ರಾಜ್ಯಸಭೆ ಹಾಗೂ ವಿಧಾನಸಭೆಗೆ ಚುನಾವಣೆ ನಡೆಸುತ್ತದೆ. ಎಸ್‌ಇಸಿ ಮುನ್ಸಿಪಾಲಿಟಿ, ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುತ್ತದೆ. 2ನೇ ತಿದ್ದುಪಡಿಯು ಲೋಕಸಭೆ-ವಿಧಾನಸಭೆಯೊಟ್ಟಿಗೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿದೆ. ಇದಕ್ಕೆ ವಿಧಿ 324(ಎ) ಸೇರ್ಪಡೆ ಮಾಡಬೇಕಿದೆ.

ವೈವಿಧ್ಯವೇ ಬಲ:

16 ರಾಜ್ಯಗಳಲ್ಲಿ ದೇಶದ ಒಟ್ಟು ಜನಸಂಖ್ಯೆಯ ಶೇ.90 ರಷ್ಟು ಮಂದಿ ಇದ್ದು, ಅವು ಜಿಡಿಪಿಯಲ್ಲಿ ಶೇ.80 ಪಾಲು ಹಾಗೂ ಶೇ.90ರಷ್ಟು ಸಂಸತ್ ಸ್ಥಾನಗಳನ್ನು ಹೊಂದಿವೆ. ಆ ರಾಜ್ಯಗಳಾದ ಪಶ್ಚಿಮ ಬಂಗಾಳ-ಟಿಎಂಸಿ, ಉತ್ತರ ಪ್ರದೇಶ-ಬಿಜೆಪಿ, ಮಹಾರಾಷ್ಟ್ರ-ಮಹಾಯುತಿ, ಬಿಹಾರ-ಬಿಜೆಪಿ, ತಮಿಳುನಾಡು-ಡಿಎಂಕೆ, ಕರ್ನಾಟಕ-ಕಾಂಗ್ರೆಸ್, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ-ಬಿಜೆಪಿ, ಆಂಧ್ರಪ್ರದೇಶ-ತೆಲುಗುದೇಶಂ, ಒಡಿಶಾ-ಬಿಜೆಪಿ, ಕೇರಳ-ಸಿಪಿಎಂ, ತೆಲಂಗಾಣ-ಕಾಂಗ್ರೆಸ್, ಅಸ್ಸಾಂ-ಬಿಜೆಪಿ, ಜಾರ್ಖಂಡ್-ಜೆಎಂಎಂ, ಪಂಜಾಬ್‌ನಲ್ಲಿ ಆಮ್ ಆದ್ಮಿ ಆಡಳಿತ ನಡೆಸುತ್ತಿದ್ದು, ಇವುಗಳ ನಡುವೆ ಸೈದ್ಧಾಂತಿಕ ಸಾಮ್ಯತೆ ಇಲ್ಲ. ಕಾಂಗ್ರೆಸ್-ಬಿಜೆಪಿ ದೇಶಾದ್ಯಂತ ಹರಡಿಕೊಂಡಿದ್ದರೂ, ಎರಡೂ ಪಕ್ಷಗಳಿಗೆ ಪ್ರಾದೇಶಿಕ ಪಕ್ಷಗಳ ಬೆಂಬಲ ಅಗತ್ಯವಿದೆ. ದೇಶದಲ್ಲಿ ರಾಜ್ಯ ನಿರ್ದಿಷ್ಟ ಪಕ್ಷಗಳು ಹೆಚ್ಚು ಇವೆ. ಇಷ್ಟೊಂದು ಪಕ್ಷ ವೈವಿಧ್ಯವನ್ನು ನೀವು ಜಗತ್ತಿನಲ್ಲಿ ಎಲ್ಲಿಯೂ ಕಾಣಲಾರಿರಿ. ದೇಶದ ವೈವಿಧ್ಯ ಮತ್ತು ಒಕ್ಕೂಟ ವ್ಯವಸ್ಥೆ ವಿಶಿಷ್ಟವಾದುದು. ಬಿಜೆಪಿಗೆ ಅದು ಇನ್ನೂ ಅರ್ಥವಾದಂತಿಲ್ಲ.

‘ಕಳೆದ 37 ವರ್ಷದಿಂದ ದೇಶದ ಒಂದಲ್ಲ ಒಂದು ಭಾಗದಲ್ಲಿ ಚುನಾವಣೆ ನಡೆಯುತ್ತಿದೆ; ಇದರಿಂದ ದೇಶ/ರಾಜಕೀಯ ಪಕ್ಷಗಳ ಸಂಪನ್ಮೂಲ(ಆರ್ಥಿಕ-ಮಾನವ), ಸಮಯ ಹಾಗೂ ಶ್ರಮ ವ್ಯರ್ಥವಾಗುತ್ತಿದೆ. ಇದನ್ನು ದೇಶದ ಅಭಿವೃದ್ಧಿಗೆ ಬಳಸಬಹುದು. ನೀತಿ ಸಂಹಿತೆಯಿಂದಾಗಿ ಆಡಳಿತ ನಿರ್ವಹಣೆ ಹಾಗೂ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತದೆ’ ಎಂದು ಬಿಜೆಪಿ ವಾದಿಸುತ್ತದೆ. ಆದರೆ, ರಾಜ್ಯವೊಂದರ ಚುನಾವಣೆ ಆ ರಾಜ್ಯಕ್ಕೆ ಸೀಮಿತವಾಗಿರುತ್ತದೆ; ದೇಶಕ್ಕಲ್ಲ. ಹೈಕಮಾಂಡ್ ಸಂಸ್ಕೃತಿ ಇರುವ ಕಾಂಗ್ರೆಸ್-ಬಿಜೆಪಿ ಮೇಲೆ ನಿರಂತರ ಚುನಾವಣೆಯಿಂದ ಒತ್ತಡ ಬೀಳಬಹುದು. ಏಕೆಂದರೆ, ಚುನಾವಣೆ ಯಾವುದೇ ಇರಲಿ, ಈ ಪಕ್ಷಗಳ ಕೇಂದ್ರ ನಾಯಕತ್ವ ಪಾಲ್ಗೊಳ್ಳುತ್ತದೆ. ಆದ್ದರಿಂದ ಈ ಪಕ್ಷಗಳು ಸದಾ ಚುನಾವಣೆ ಸನ್ನದ್ಧವಾಗಿರುತ್ತವೆ. ಇದು ದೇಶ ಇಲ್ಲವೇ ರಾಜ್ಯಗಳ ಸಮಸ್ಯೆಯಲ್ಲ; ಬದಲಾಗಿ, ರಾಜಕೀಯ ಪಕ್ಷಗಳ ಸಮಸ್ಯೆ. ನರೇಂದ್ರ ಮೋದಿ ಇಲ್ಲವೇ ರಾಹುಲ್ ಗಾಂಧಿ ಅವರು ಎಲ್ಲ ಚುನಾವಣೆಗಳಲ್ಲಿ ಪ್ರಸಾರ ನಡೆಸಬೇಕಾದ ಅನಿವಾರ್ಯ ಇದ್ದಲ್ಲಿ, ಅದು ಅವರಿಬ್ಬರ ಸಮಸ್ಯೆ; ದೇಶದ ಸಮಸ್ಯೆಯಲ್ಲ. ಇದರರ್ಥ- ಈ ಪಕ್ಷಗಳು ಸ್ಥಳೀಯ ನಾಯಕತ್ವವನ್ನು ಬೆಳೆಸಿಲ್ಲ ಅಥವಾ ಚುನಾವಣೆ ಯಾವುದೇ ಇರಲಿ, ರಾಷ್ಟ್ರೀಯ ನಾಯಕತ್ವ ಪ್ರಚಾರದಲ್ಲಿ ತೊಡಗಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಸಿಕೊಂಡಿವೆ; ಟಿಎಂಸಿ ಇಲ್ಲವೇ ಡಿಎಂಕೆ ತಮ್ಮ ರಾಜ್ಯ ಹೊರತುಪಡಿಸಿ, ಬೇರೆಡೆಯ ಚುನಾವಣೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯ ಇರುವುದಿಲ್ಲ. ಆದ್ದರಿಂದ, ಪ್ರತಿಯೊಂದು ರಾಜ್ಯದಲ್ಲೂ ಪ್ರತ್ಯೇಕ ಚುನಾವಣೆ ನಡೆಸುವುದರಲ್ಲಿ ಸಮಸ್ಯೆ ಏನಿದೆ? ಚುನಾವಣೆ ಒಮ್ಮೆಯೇ ನಡೆಯಲಿ ಇಲ್ಲವೇ ಹಲವು ಹಂತಗಳಲ್ಲಿ ನಡೆಯಲಿ, ಜಾತಿ ಮತ್ತು ಹಣದ ವೆಚ್ಚ- ಪ್ರಭಾವ ಕಡಿಮೆ ಆಗುವುದಿಲ್ಲ.

‘ಒಂದೇ ಒಂದು’ ಪರಿಕಲ್ಪನೆಯ ಅಸ್ತಿಭಾರವೇ ದೋಷಪೂರಿತವಾಗಿದ್ದು, ಅದು ರಾಷ್ಟ್ರೀಯ ಪಕ್ಷಗಳ ಸಮಸ್ಯೆಯನ್ನು ದೇಶದ ಸಮಸ್ಯೆ ಎಂದು ಪರಿಗಣಿಸುತ್ತದೆ. ಒಮ್ಮೆಲೇ ಚುನಾವಣೆ ನಡೆಸುವುದರಿಂದ ಹಣ, ಸಮಯ ಮತ್ತು ಶ್ರಮ ಉಳಿಯುತ್ತದೆ ಎಂಬುದು ಒಂದು ದುರ್ಬಲ ವಾದ. ಹಣ ಉಳಿಸಲು ಒಕ್ಕೂಟ ತತ್ವದ ನಾಶ ಹಾಗೂ ಸಂವಿಧಾನದ ತಿದ್ದುಪಡಿಯನ್ನು ಸಮರ್ಥಿಸಿಕೊಳ್ಳಲು ಆಗುವುದಿಲ್ಲ. ಬಿಜೆಪಿಯ ಕೇಂದ್ರೀಕರಣದ ಸುತ್ತಿಗೆಗೆ ಎಲ್ಲವೂ ಮೊಳೆಯಂತೆ ಕಾಣಿಸುತ್ತದೆ. ಜನರ ಗಮನ ಸದಾ ಬೇರೆಡೆ ಸೆಳೆಯುವ ಮೂಲಕ ತನ್ನ ಕಾರ್ಯಸೂಚಿಯನ್ನು ಮುಂದೊತ್ತುವುದು ಬಿಜೆಪಿಯ ಸಾಮಾನ್ಯ ಕಾರ್ಯತಂತ್ರ. ಇದು ಕೂಡ ಅಂಥ ತಂತ್ರ.

ಕಾರ್ಯಸಾಧುವೇ?:

18ನೇ ಲೋಕಸಭೆಯಲ್ಲಿ ಈ ಮಸೂದೆ ಮಂಡನೆ ಆಗಲಿದೆ ಎಂದುಕೊಳ್ಳೋಣ. ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆ ನಡೆದು, 2/3 ರಷ್ಟು ಸದಸ್ಯರು ಸಮ್ಮತಿ ನೀಡಬೇಕಾಗುತ್ತದೆ(543 ಸದಸ್ಯರಲ್ಲಿ 362). ಎನ್‌ಡಿಎ ಒಕ್ಕೂಟದಲ್ಲಿ 293 ಸದಸ್ಯರಿದ್ದಾರೆ. ಅಂದರೆ, 69 ಸದಸ್ಯರ ಕೊರತೆಯಿದೆ. ಪ್ರತಿಪಕ್ಷಗಳು ಕಾಯ್ದೆಯನ್ನು ವಿರೋಧಿಸುತ್ತಿರುವುದರಿಂದ, ಆರಂಭಿಕ ಹಂತದಲ್ಲೇ ಮುಗ್ಗರಿಸುವ ಸಾಧ್ಯತೆಯಿದೆ. ಈಗಿರುವ ಸ್ಥಿತಿಯಲ್ಲಿ ಎನ್‌ಡಿಎ ಸಂವಿಧಾನಕ್ಕೆ ಯಾವುದೇ ತಿದ್ದುಪಡಿ ತರುವುದು ಸಾಧ್ಯವಿಲ್ಲ.

ಕೇಂದ್ರ ಸರಕಾರವು ಆಯವ್ಯಯದಲ್ಲಿ ಚುನಾವಣೆ ಆಯೋಗಕ್ಕೆ ವಿಧಿ 324ರಡಿ ಅನುದಾನ ನೀಡುತ್ತದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ 2023-24ರಲ್ಲಿ ಆಯೋಗಕ್ಕೆ 466 ಕೋಟಿ ರೂ. ನೀಡಿತ್ತು. ಆದರೆ, 2022-23ರಲ್ಲಿ ನೀಡಿದ್ದು 320 ಕೋಟಿ ರೂ. ಮಾತ್ರ; ಕೇಂದ್ರ ಸರಕಾರದ ಆರ್ಥಿಕ ವರ್ಷ 2024-25ರ ಒಟ್ಟು ವೆಚ್ಚ 48,20,512 ಕೋಟಿ ರೂ.ಗೆ ಹೋಲಿಸಿದರೆ, ಇದು ನಗಣ್ಯ. ರಾಜ್ಯ ಸರಕಾರಗಳು ಕೂಡ ಸ್ಥಳೀಯ ಚುನಾವಣೆಗೆ ವೆಚ್ಚ ಮಾಡುತ್ತವೆ. ಕೇಂದ್ರ ಚುನಾವಣೆ ಆಯೋಗವು ವಿಧಿ 324(6) ಅನ್ವಯ ರಾಜ್ಯಗಳಿಗೆ ಸಿಬ್ಬಂದಿಯನ್ನು ನಿಯೋಜಿಸಬೇಕಾಗುತ್ತದೆ. ಜನಪ್ರತಿನಿಧಿಗಳ ಕಾಯ್ದೆ 1951ರ ಪ್ರಕಾರ, ವಾಹನ ಹಾಗೂ ಮತಗಟ್ಟೆ ವ್ಯವಸ್ಥೆಯನ್ನೂ ಕೇಳಬಹುದು. ಈ ಎಲ್ಲ ವೆಚ್ಚ ಪರಿಗಣಿಸಿದರೂ, ಕೇಂದ್ರ-ರಾಜ್ಯಗಳು ಚುನಾವಣೆ ನಡೆಸಲು ಮಾಡುವ ವೆಚ್ಚವನ್ನು ಹೆಚ್ಚು ಎನ್ನಲು ಆಗುವುದಿಲ್ಲ.

ಆದರೆ, ನಿಜವಾಗಿ ನಿಯಂತ್ರಿಸಬೇಕಿರುವುದು ರಾಜಕೀಯ ಪಕ್ಷಗಳು ಚುನಾವಣೆಗೆ ಖರ್ಚು ಮಾಡುವ ವೆಚ್ಚವನ್ನು. ಒಮ್ಮೆಲೇ ಚುನಾವಣೆ ನಡೆದರೆ ಈ ಹಣ ಉಳಿಯುತ್ತದೆ ಎಂದುಕೊಳ್ಳಬಹುದೇ? ಹೌದು ಎಂದಾದಲ್ಲಿ, ಪಕ್ಷಗಳು ಇದನ್ನು ರಸ್ತೆ, ಆಸ್ಪತ್ರೆ ಇಲ್ಲವೇ ಸೇತುವೆ ನಿರ್ಮಾಣಕ್ಕೆ ಬಳಸುತ್ತವೆಯೇ? 1951-52ರಿಂದ 1967ರವರೆಗೆ ಒಮ್ಮೆಲೇ ಚುನಾವಣೆ ನಡೆದಿದೆ. ಆಗ ಉಳಿದ ಹಣದಿಂದ ರಾಜಕೀಯ ಪಕ್ಷಗಳು ಎಷ್ಟು-ಎಲ್ಲಿ-ಯಾವ ಮೂಲಸೌಲಭ್ಯ ನಿರ್ಮಿಸಿವೆ?

ವಿಧಾನಸಭೆಗಳ ಅವಧಿಯನ್ನು ಮೊಟಕುಗೊಳಿಸುವುದು ಒಕ್ಕೂಟ ತತ್ವಕ್ಕೆ ವಿರುದ್ಧವಾದುದು. ಸಂವಿಧಾನದ ಪ್ರಕಾರ, ವಿಧಾನಸಭೆಗಳು ಶಾಸನ ರೂಪಿಸುವ ಸ್ವಾಯತ್ತ ಸಂಸ್ಥೆಯಾಗಿದ್ದು, ಸಂಸತ್ತಿನಂತೆಯೇ ಪ್ರತ್ಯೇಕ ಅಸ್ತಿತ್ವ ಹೊಂದಿವೆ. ಒಕ್ಕೂಟ ತತ್ವದ ಮುಖ್ಯ ಅಂಶವೆಂದರೆ, ರಾಜ್ಯಗಳ ನಿಗದಿತ ಆಡಳಿತಾವಧಿ. ಕೇಶವಾನಂದ ಭಾರತಿ ಪ್ರಕರಣದ ತೀರ್ಪಿನ ಪ್ರಕಾರ, ಸಂವಿಧಾನದ ಮೂಲಭೂತ ಸಂರಚನೆಯನ್ನು ಬದಲಿಸುವ ಅಧಿಕಾರ ಸಂಸತ್ತಿಗೆ ಇಲ್ಲ. ಉದ್ದೇಶಿತ ಕಾಯ್ದೆಯು ವಿಧಾನಸಭೆಗಳ ಅವಧಿಯನ್ನು ಮೊಟಕುಗೊಳಿಸುವ ಮೂಲಕ ಸಂವಿಧಾನದ ಮೂಲಭೂತ ಸಂರಚನೆಯನ್ನು ಬದಲಿಸುತ್ತದೆ. ಇದಕ್ಕೆ ರಾಜ್ಯ ಸರಕಾರಗಳು ಸಮ್ಮತಿಸುತ್ತವೆಯೇ ಎನ್ನುವುದು ನಂತರದ ಪ್ರಶ್ನೆ. ಮಸೂದೆಯು ಕೆಲವು ವಿಧಾನಸಭೆಗಳ ಅವಧಿಯನ್ನು 3 ವರ್ಷಕ್ಕೆ ಇಳಿಸಲಿದೆ. ಇನ್ನು ಕೆಲವು 2 ವರ್ಷಕ್ಕೇ ವಜಾಗೊಳ್ಳಲಿವೆ.

ಆಗಾಗ ಚುನಾವಣೆಯಿಂದ ಹಲವು ಪ್ರಯೋಜನಗಳಿವೆ. ಮೊದಲಿಗೆ, ಜನಪ್ರತಿನಿಧಿಗಳ ಉತ್ತರದಾಯಿತ್ವ ಹೆಚ್ಚುತ್ತದೆ. ಮತಯಾಚನೆಗೆ ಜನರ ಬಳಿ ಹೋಗಬೇಕಿರುವುದರಿಂದ ಮತಕ್ಷೇತ್ರದೊಂದಿಗೆ ಸಂಪರ್ಕ ಇರಿಸಿಕೊಳ್ಳುವುದು ಅನಿವಾರ್ಯ ಆಗಲಿದೆ. ಆಗಾಗ ಚುನಾವಣೆ ನಡೆದಲ್ಲಿ, ಪಕ್ಷಗಳಿಗೆ ಗಾಳಿ ಎತ್ತ ಬೀಸುತ್ತಿದೆ ಎಂಬುದು ಅರಿವಾಗಿ, ತಮ್ಮ ಕಾರ್ಯನೀತಿಯನ್ನು ಬದಲಿಸಿಕೊಳ್ಳುವ ಸಾಧ್ಯತೆ ಇದೆ. ಆಡಳಿತದ ವಿವಿಧ ಹಂತಗಳಲ್ಲಿ ಅಧಿಕಾರ ಹಂಚಿಕೆ ಆಗುವುದರಿಂದ, ಪಕ್ಷ, ಅಭ್ಯರ್ಥಿಯ ಬಲ, ಸೈದ್ಧಾಂತಿಕ ನಿಲುವು ಹಾಗೂ ಸಾಮಾಜಿಕೋಆರ್ಥಿಕ ಅಂಶಗಳನ್ನು ಆಧರಿಸಿ, ಮತದಾರ ತನ್ನ ಆಯ್ಕೆಯನ್ನು ನಿರ್ಧರಿಸಬಹುದು. ಪ್ರತಿಯೊಂದು ಹಂತವೂ (ಲೋಕಸಭೆ, ವಿಧಾನಸಭೆ, ಜಿಪಂ/ತಾಪಂ/ಗ್ರಾಪಂ, ನಗರಪಾಲಿಕೆ/ಮುನ್ಸಿಪಾಲಿಟಿ) ತಮ್ಮದೇ ಪ್ರಾಮುಖ್ಯ ಹೊಂದಿವೆ. ಬಹು ಹಂತದ ಚುನಾವಣೆಗಳನ್ನು ಒಮ್ಮೆಲೇ ನಡೆಸುವುದರಿಂದ, ವಿಧಾನಸಭೆ ಹಾಗೂ ಜಿಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಪ್ರಾಮುಖ್ಯತೆ ತಗ್ಗುತ್ತದೆ. ಆದ್ದರಿಂದ, ಅದು ಒಕ್ಕೂಟ ತತ್ವಕ್ಕೆ ವಿರೋಧಿ.

ದಿಲ್ಲಿ ಹೈಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಎ.ಪಿ.ಶಾ ಅವರು, ‘‘ನಿಶ್ಚಿತ ಅವಧಿಗಳು ಜನಪ್ರತಿನಿಧಿಗಳ ಸಾಧನೆಯನ್ನು ಲೆಕ್ಕಿಸದೆ ಅನಗತ್ಯ ಸ್ಥಿರತೆಯನ್ನು ಕೊಡುವುದರಿಂದ, ರಾಜಕೀಯ ಉತ್ತರದಾಯಿತ್ವಕ್ಕೆ ಹಿನ್ನಡೆ ತರುತ್ತವೆ’’ ಎಂದು ಹೇಳಿದ್ದರು. ‘ಒಂದು ದೇಶ-ಒಂದು ಚುನಾವಣೆ’ ಬಿಜೆಪಿಯ ನಿರಂಕುಶಾಧಿಕಾರ ಕಾರ್ಯಸೂಚಿಗೆ ಅನುಗುಣವಾಗಿದೆಯಷ್ಟೇ; ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ. ಇದು ಸಂಸತ್ತು-ಮೇಲ್ಮನೆಯಲ್ಲಿ ಅಂಗೀಕಾರವಾಗದಂತೆ ಪ್ರತಿಪಕ್ಷಗಳು ನೋಡಿಕೊಳ್ಳಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಮಾಧವ ಐತಾಳ್

contributor

Similar News