ಆಪ್ ಅಪಜಯ ಮತ್ತು ಮೈತ್ರಿಕೂಟದ ಭವಿಷ್ಯ

ಆಪ್‌ಗೆ ರಾಜಕೀಯವಾಗಿ ವಿಸ್ತರಿಸಿಕೊಳ್ಳುವ ಎಲ್ಲ ಹಕ್ಕು ಇದೆ. ಆದರೆ, ವಿಸ್ತರಣೆಯಿಂದ ಯಾರಿಗೆ ಲಾಭ ಮತ್ತು ಯಾರಿಗೆ ನಷ್ಟವಾಗುತ್ತದೆ ಎಂಬುದನ್ನು ನೋಡಬೇಕು. 2013ರಲ್ಲಿ ಪಕ್ಷ ಸೋತಿದ್ದರೂ, ಕೇಜ್ರಿವಾಲ್ ಅವರನ್ನು ಕಾಂಗ್ರೆಸ್ ಬೆಂಬಲಿಸಿತು. 2024ರ ಲೋಕಸಭೆ ಚುನಾವಣೆಯಲ್ಲಿ ಎಎಪಿ ಮತ್ತು ಕಾಂಗ್ರೆಸ್ ಒಟ್ಟಾಗಿದ್ದವು. ಆದರೆ, 2025ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಜೊತೆ ಮೈತ್ರಿ ನಿರಾಕರಿಸಿದ ಕೇಜ್ರಿವಾಲ್, ಪಕ್ಷದ 70 ಅಭ್ಯರ್ಥಿಗಳನ್ನು ಘೋಷಿಸಿದ್ದರು.;

Update: 2025-02-14 10:25 IST
Editor : Thouheed | Byline : ಮಾಧವ ಐತಾಳ್
ಆಪ್ ಅಪಜಯ ಮತ್ತು ಮೈತ್ರಿಕೂಟದ ಭವಿಷ್ಯ
  • whatsapp icon

ಕಂಪ್ಟ್ರೋಲರ್ ಆ್ಯಂಡ್ ಆಡಿಟರ್ ಜನರಲ್ ಆಗಿದ್ದ ವಿನೋದ್ ರೈ ಅವರು ಯುಪಿಎ-2 ಸರಕಾರ ತರಂಗಾಂತರ ಹಂಚಿಕೆಯಲ್ಲಿ 1.76 ಲಕ್ಷ ಕೋಟಿ ರೂ. ಭ್ರಷ್ಟಾಚಾರ ನಡೆಸಿದೆ ಎಂದು ವರದಿ ನೀಡಿದ್ದರು. ವರದಿಯನ್ನು ಮುಂದಿಟ್ಟು ಕೊಂಡು ಅಣ್ಣಾ ಹಝಾರೆ, ಕಿರಣ್ ಬೇಡಿ, ಅರವಿಂದ ಕೇಜ್ರಿವಾಲ್, ಬಾಬಾ ರಾಮ್‌ದೇವ್ ಹೋರಾಟ ಆರಂಭಿಸಿದರು; ಸುಬ್ರಮಣಿಯನ್ ಸ್ವಾಮಿ ಪ್ರಕರಣವನ್ನು ನ್ಯಾಯಾಂಗಕ್ಕೆ ಕೊಂಡೊಯ್ದರು. ಡಿಸೆಂಬರ್ 2017ರಲ್ಲಿ ‘ಇದೊಂದು ಕಲ್ಪಿತ ಪ್ರಕರಣ’ ಎಂದ ಸಿಬಿಐ ವಿಶೇಷ ನ್ಯಾಯಾಲಯ, ಅರ್ಜಿಯನ್ನು ವಜಾಗೊಳಿಸಿತು. ಅಷ್ಟರೊಳಗೆ, ಕೇಜ್ರಿವಾಲ್ ದಿಲ್ಲಿ ಮುಖ್ಯಮಂತ್ರಿ ಆಗಿದ್ದರು; ಕಿರಣ್ ಬೇಡಿ ಗೋವಾದ ಲೆಫ್ಟಿನೆಂಟ್ ಜನರಲ್, ಸುಬ್ರಮಣಿಯನ್ ಸ್ವಾಮಿ ಸಂಸದ, ಬಾಬಾ ರಾಮದೇವ್ 10,000 ಕೋಟಿ ರೂ.(2024ರಲ್ಲಿ 27,500 ಕೋಟಿ ರೂ.) ಮೌಲ್ಯದ ಪತಂಜಲಿ ಸಾಮ್ರಾಜ್ಯ ಸ್ಥಾಪನೆ ಮಾಡಿದ್ದರು; ವಿನೋದ್ ರೈ ಅವರಿಗೆ ಪದ್ಮಭೂಷಣ, ಅಣ್ಣಾ ಹಝಾರೆಗೆ ಜಡ್ + ರಕ್ಷಣೆಯೊಟ್ಟಿಗೆ ಸಕಲ ಸವಲತ್ತು ಸಿಕ್ಕಿತು; ಹಾಗೂ, ಆಂದೋಲನವನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡಿದ ನರೇಂದ್ರ ಮೋದಿ ಅವರಿಗೆ ಪ್ರಧಾನಿ ಪಟ್ಟ ಪ್ರಾಪ್ತವಾಯಿತು! ಒಬ್ಬ ವ್ಯಕ್ತಿಯ ಲೋಪದ ಫಲವನ್ನು ದೇಶ ಅನುಭವಿಸಬೇಕಾಗಿ ಬಂದಿತು.

ಬಳಿಕ ಬಿಜೆಪಿಯ ಗೆಲುವಿನ ಸರಣಿ ಮುಂದುವರಿದು, 2024ರಲ್ಲಿ ಮೂರನೇ ಬಾರಿ ಅಧಿಕಾರ ಹಿಡಿಯಿತು; ‘ಇಂಡಿಯಾ’ ಒಕ್ಕೂಟ ಛಿದ್ರವಾಗುತ್ತ ನಡೆದಿದ್ದು, ಬಿಜೆಪಿ ಎಂಬ ಸರ್ವ ಸನ್ನದ್ಧ ಚುನಾವಣೆ ಯಂತ್ರಕ್ಕೆ ಎದುರಾಳಿಗಳೇ ಇಲ್ಲವಾಗುತ್ತಿದೆ; ರಾಜಕೀಯ ಮುಖಂಡರ ಸ್ವಪ್ರತಿಷ್ಠೆಯಿಂದ ವಿವೇಕಕ್ಕೆ ಮಂಕು ಕವಿದಿದೆ.

ಆಪ್ ಕಥನ

2013ರಲ್ಲಿ ದಿಲ್ಲಿಯಲ್ಲಿ ಆರಂಭ; 28 ಸ್ಥಾನ ಗಳಿಸಿದ ಪಕ್ಷ, ಕಾಂಗ್ರೆಸ್‌ನ ಬಾಹ್ಯ ಬೆಂಬಲದಿಂದ ಅಧಿಕಾರಕ್ಕೇರಿತು. ಆದರೆ, ಕೇಜ್ರಿವಾಲ್ 49 ದಿನಗಳ ನಂತರ ರಾಜೀನಾಮೆ ನೀಡಿದರು. 2015ರಲ್ಲಿ ಆಪ್ 70ರಲ್ಲಿ 67 ಸ್ಥಾನ ಗೆದ್ದುಕೊಂಡಿತು; ಬಿಜೆಪಿ ಕೇವಲ 3 ಸ್ಥಾನ ಹಾಗೂ ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿದವು. ಆಪ್ 2020ರಲ್ಲಿ 62 ಸ್ಥಾನ ಗೆದ್ದು ಮತ್ತೊಮ್ಮೆ ಸರಕಾರ ರಚಿಸಿತು. ಆದರೆ, 2025ರಲ್ಲಿ ಕೇಜ್ರಿವಾಲ್ ಅವರನ್ನು ಹಿಂದಕ್ಕೆ ತಳ್ಳಿದ ಬಿಜೆಪಿ, 27 ವರ್ಷಗಳ ಬಳಿಕ ಗದ್ದುಗೆ ಹಿಡಿದಿದೆ. ಆಪ್ 22 ಸ್ಥಾನ ಹಾಗೂ ಕಾಂಗ್ರೆಸ್ ಮೂರನೇ ಬಾರಿ ಶೂನ್ಯ ಸಂಪಾದನೆ ಮಾಡಿದೆ.

2008ರಲ್ಲಿ ಕಾಂಗ್ರೆಸ್ ಮತಪ್ರಮಾಣ ಶೇ. 40ಕ್ಕಿಂತ ಹೆಚ್ಚಿತ್ತು. ಆದರೆ, ಈಗ ಎರಡಂಕಿಯನ್ನು ದಾಟಿಲ್ಲ. 2013ರಲ್ಲಿ ಬಿಜೆಪಿಯ ಮತಗಳಿಕೆ ಶೇ.33ಕ್ಕಿಂತ ಹೆಚ್ಚಿತ್ತು. ಆದರೆ, ಕಡಿಮೆ ಸೀಟು ಗಳಿಸಿತು. 2015ರಲ್ಲಿ ಮೂರನೇ ಒಂದರಷ್ಟು ಮತಗಳು ಬಿಜೆಪಿ ಪಾಲಾಗಿದ್ದವು. ಗೆದ್ದಿದ್ದು ಮೂರು ಸ್ಥಾನ ಮಾತ್ರ. ಆನಂತರ ಬಿಜೆಪಿಯ ಮತಗಳಿಕೆ ಪ್ರಮಾಣ ನಿರಂತರವಾಗಿ ಹೆಚ್ಚಿದೆ. ದಿಲ್ಲಿಯಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿಗೆ ಇದು ಸಂಭ್ರಮದ ಕ್ಷಣ. 2013ರಲ್ಲಿ ದಿಲ್ಲಿಯಲ್ಲಿ ‘ಡಬಲ್ ಇಂಜಿನ್’ ಸರಕಾರ ಇದ್ದಿತ್ತು. ಈಗ ಮತ್ತೊಮ್ಮೆ ಒಂದೇ ಪಕ್ಷದ ಸರಕಾರ ಬಂದಿದೆ.

ಮೋದಿ ಅಲೆ ಇದ್ದಾಗಲೂ 2015ರ ವಿಧಾನಸಭೆ ಚುನಾವಣೆಯಲ್ಲಿ ದಿಲ್ಲಿಗರು ಬಿಜೆಪಿಯನ್ನು ಆಯ್ಕೆ ಮಾಡಲಿಲ್ಲ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅತ್ಯುತ್ತಮ ಸಾಧನೆ ಮಾಡಿದರೂ, 2020ರ ವಿಧಾನಸಭೆ ಚುನಾವಣೆಯಲ್ಲಿ ದಿಲ್ಲಿ ಜನರು ಆಪ್ ಕೈ ಹಿಡಿದರು. ಆದರೆ, ಬಿಜೆಪಿಯ ಮತಗಳ ಪ್ರಮಾಣ ಶೇ.38 ದಾಟಿ, ಎಂಟು ಸ್ಥಾನ ಗೆದ್ದಿತು. 2020ಕ್ಕೆ ಹೋಲಿಸಿದರೆ 2025ರಲ್ಲಿ ಬಿಜೆಪಿಯ ಮತ ಪ್ರಮಾಣ ಶೇ.7 ಹೆಚ್ಚಿದೆ ಮತ್ತು ಆಪ್ ಮತ ಗಳಿಕೆ ಶೇ.10ರಷ್ಟು ಕಡಿಮೆಯಾಗಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಅಥವಾ ಬಿಜೆಪಿ ದುರ್ಬಲಗೊಂಡಿದ್ದರೂ, ಆಪ್ ಈ ಚುನಾವಣೆಯಲ್ಲಿ ಸೋತಿದೆ ಎಂಬುದು ಗಮನಾರ್ಹ.

ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ಅವರನ್ನು ಸೋಲಿಸುವ ಮೂಲಕ ಸಂಚಲನ ಮೂಡಿಸಿದ್ದ ಕೇಜ್ರಿವಾಲ್, ಹೊಸದಿಲ್ಲಿ ಕ್ಷೇತ್ರದಲ್ಲಿ ಬಿಜೆಪಿಯ ಪರ್ವೇಶ್ ವರ್ಮಾ ವಿರುದ್ಧ ಸೋತಿದ್ದಾರೆ; ಕಾಂಗ್ರೆಸ್‌ನ ಸಂದೀಪ್ ದೀಕ್ಷಿತ್ ಕೇವಲ 4,500 ಮತ ಪಡೆದಿದ್ದಾರೆ. ಆಪ್‌ನ ಸೌರಭ್ ಭಾರದ್ವಾಜ್, ಸತ್ಯೇಂದ್ರ ಜೈನ್ ಮತ್ತು ಮನೀಶ್ ಸಿಸೋಡಿಯಾ ಕೂಡ ಸೋತಿದ್ದಾರೆ. ಆದರೆ, ಆತಿಶಿ ಮರ್ಲೇನಾ ಗೆದ್ದಿದ್ದಾರೆ.

ಸೋಲು ಅನಿರೀಕ್ಷಿತವೇ?

ಆಪ್ ಸೋಲನ್ನು ನಿರೀಕ್ಷಿಸಿತ್ತೇ? ಕೇಜ್ರಿವಾಲ್ ಜೈಲಿನಿಂದ ಹೊರಬಂದ ತಕ್ಷಣ ರಾಜೀನಾಮೆ ನೀಡಿ, ಆತಿಶಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿದರು. ಅವರ ರಾಜೀನಾಮೆ ಹಾಗೂ ಆತಿಶಿ ಅವರ ಆಯ್ಕೆ ಸಮರ್ಪಕ ನಿರ್ಧಾರ ಆಗಿರಲಿಲ್ಲ. 20ಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಯಿತು. ಹಾಲಿ ಶಾಸಕ-ಸಂಸದರಿಗೆ ಟಿಕೆಟ್ ನಿರಾಕರಿಸಿ, ಹೊಸಬರಿಗೆ ಟಿಕೆಟ್ ನೀಡುವ ಬಿಜೆಪಿ ತಂತ್ರವು ಆಪ್ ವಿಷಯದಲ್ಲಿ ಸೋಲುಂಡಿತು.

ಎಎಪಿ ಸೋಲಿಗೆ ಸರಕಾರದ ಕೆಲಸದ ಬಗ್ಗೆ ಅತೃಪ್ತಿ ಮಾತ್ರ ಕಾರಣವೇ? ಸೈದ್ಧಾಂತಿಕ ಕಾರಣ ಇದೆಯೇ? ಎಎಪಿ ಏಕೆ ಸೋತಿತು ಎನ್ನುವ ಬದಲು ಹೇಗೆ ಸೋತಿತು ಎಂಬುದೇ ಮುಖ್ಯ ಪ್ರಶ್ನೆ. ಬಿಜೆಪಿ ಜನರ ಮನವೊಲಿಕೆ, ಆಮಿಷ, ಹಣ ಬಲ ಮತ್ತು ವಿಭಜನೆಯನ್ನು ಬಳಸಿತು. ಚುನಾವಣೆ ಆಯೋಗ ಸಾಥ್ ನೀಡಿತು.

ಮತದಾರರ ಪಟ್ಟಿಗೆ ಸೇರ್ಪಡೆಗೆ ಸಂಬಂಧಿಸಿದಂತೆ ಆಪ್ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. 2020ರ ವಿಧಾನಸಭೆ ಮತ್ತು 2024ರ ಲೋಕಸಭೆ ಚುನಾವಣೆ ನಡುವೆ ದಿಲ್ಲಿಯಲ್ಲಿ ನಾಲ್ಕು ಲಕ್ಷ ಮತದಾರರು ಹೆಚ್ಚಾಗಿದ್ದರು. ಆದರೆ, 2025ರ ಚುನಾವಣೆಗೆ ಏಳು ತಿಂಗಳ ಮೊದಲು ನಾಲ್ಕು ಲಕ್ಷ ಹೊಸ ಮತದಾರರು ಸೇರ್ಪಡೆ ಯಾಗಿದ್ದಾರೆ. ಕೇಜ್ರಿವಾಲ್ ಅವರ ಹೊಸದಿಲ್ಲಿ ಮತಕ್ಷೇತ್ರ (ಹಿಂದಿನ ಹೆಸರು ಗೋಲೆ ಮಾರ್ಕೆಟ್ ಕ್ಷೇತ್ರ)ದಲ್ಲಿ ಕಳೆದ ಐದು ವರ್ಷಗಳಲ್ಲಿ ಶೇ. 27ರಷ್ಟು ಮತಗಳು ಕಡಿಮೆಯಾಗಿವೆ. 2020ರಲ್ಲಿ ಕೇಜ್ರಿವಾಲ್ 21,000 ಮತಗಳಿಂದ ಜಯ ಸಾಧಿಸಿದ್ದರು. ಕ್ಷೇತ್ರದ 37,000ಕ್ಕೂ ಹೆಚ್ಚು ಮತದಾರರು ಎಲ್ಲಿಗೆ ಹೋದರು? ಇಲ್ಲಿ ಮತದಾರರ ಸಂಖ್ಯೆಯಲ್ಲಿನ ಇಳಿಕೆಯು 2020ರಲ್ಲಿ ಕೇಜ್ರಿವಾಲ್ ಗೆಲುವಿನ ಅಂತರಕ್ಕಿಂತ ಹೆಚ್ಚು ಇದೆ ಎಂದು ‘ದಿ ಕ್ವಿಂಟ್’ ವರದಿ ಮಾಡಿದೆ.

ರಾಹುಲ್ ಗಾಂಧಿ ಫೆಬ್ರವರಿ 7ರಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಇಂಥದ್ದೇ ಆರೋಪ ಮಾಡಿದರು. ಮಹಾರಾಷ್ಟ್ರದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳ ನಡುವಿನ ಐದು ತಿಂಗಳಲ್ಲಿ 40 ಲಕ್ಷ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. ಈ ಹಿಂದೆ ಇಷ್ಟು ಮತದಾರರು ಸೇರಲು ಐದು ವರ್ಷ ಬೇಕಾಗುತ್ತಿತ್ತು ಎಂದು ದೂರಿದ್ದರು.

ಇದಕ್ಕೆ ಉತ್ತರ ನೀಡಬೇಕಿರುವ ಚುನಾವಣೆ ಆಯೋಗ ಉಸಿರೆತ್ತಿಲ್ಲ. ಎನ್‌ಡಿಎ ಆಡಳಿತದಲ್ಲಿ ನಿಶ್ಶಕ್ತವಾಗಿರುವ ಸಾಂವಿಧಾನಿಕ ಸಂಸ್ಥೆಗಳಲ್ಲಿ ಚುನಾವಣೆ ಆಯೋಗವೂ ಒಂದು.

ಆಪ್ ಪ್ರತಿದಿನ ಕೇಂದ್ರ ಸರಕಾರದ ವಿರುದ್ಧ ಸೆಣೆಸಬೇಕಿತ್ತು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಹಲವು ನಾಯಕರು ಜೈಲಿಗೆ ಹೋದರು. ಶಾಸಕರ ಮೇಲೆ ಕೇಸು ದಾಖಲಿಸಲಾಯಿತು; ಅವರ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಯಿತು. ಇದರಿಂದ ಅನೇಕರು ಪಕ್ಷ ತೊರೆದು ‘ವಾಷಿಂಗ್ ಮಶಿನ್’ ಬಿಜೆಪಿಯನ್ನು ಸೇರಿದರು.

ಸೈದ್ಧಾಂತಿಕ ಸಂದಿಗ್ಧತೆ ಮತ್ತು ಆರೆಸ್ಸೆಸ್

ಆಪ್‌ನ ಸೈದ್ಧಾಂತಿಕತೆ ಏನು? ಈ ಸಂಬಂಧ ಭಾರೀ ಪ್ರಮಾಣದ ಮತದಾರರ ಮನಸ್ಸಿನಲ್ಲಿ ಅನುಮಾನ ಇದೆ. ಆಪ್ ಆರಂಭದಲ್ಲಿ ದೇಶದ ಹೊಸ ರಾಜಕೀಯ ಧಾರೆ ಎನ್ನಿಸಿಕೊಂಡಿತ್ತು. ಆದರೆ, 2014ರ ಬಳಿಕ ದೇಶದ ರಾಜಕೀಯದಲ್ಲಿ ಆರೆಸ್ಸೆಸ್ ಪ್ರಶ್ನೆ ಹೆಚ್ಚು ಸ್ಪಷ್ಟವಾಗಿದೆ. ರಾಹುಲ್ ಗಾಂಧಿ ಭಾರತ ಜೋಡೊ ಯಾತ್ರೆ ಸಮಯದಲ್ಲಿ ಮತ್ತು ಆನಂತರ ಆರೆಸ್ಸೆಸ್ ಮೇಲೆ ನೇರವಾಗಿ ದಾಳಿ ಮಾಡಲು ಪ್ರಾರಂಭಿಸಿದರು. ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ದಾಳಿ ಕೇವಲ ಆಡಳಿತಾತ್ಮಕವಲ್ಲ; ಸೈದ್ಧಾಂತಿಕ ಮತ್ತು ರಾಚನಿಕ ಎಂದು ರಾಹುಲ್ ಹೇಳಿದರು. ಆದರೆ, ಆರೆಸ್ಸೆಸ್‌ನ ಅತಿ ದೊಡ್ಡ ವಿಸ್ತರಣೆ ಕಾಂಗ್ರೆಸ್ ಅವಧಿಯಲ್ಲಿ ನಡೆಯಿತು. ಕಾಂಗ್ರೆಸ್‌ನ ಅನೇಕ ನಾಯಕರು ಹಿಂದುತ್ವದ ವಿರುದ್ಧ ಧ್ವನಿಯೆತ್ತಲು ಸಿದ್ಧವಿಲ್ಲ ಎನ್ನುವುದು ರಾಹುಲ್‌ಗೆ ಗೊತ್ತಿದೆ. ಆದರೆ, ಅಣ್ಣಾ ಚಳವಳಿಯಲ್ಲಿ ಆರೆಸ್ಸೆಸ್ ಮತ್ತು ವಿವೇಕಾನಂದ ಫೌಂಡೇಶನ್‌ನ ಪಾತ್ರವೇನು ಎಂಬುದು ಸ್ಪಷ್ಟ ವಾಗಬೇಕಿದೆ.

ಕೋವಿಡ್ ಸಮಯದಲ್ಲಿ ತಬ್ಲೀಗ್ ಜಮಾಅತ್ ಬಗ್ಗೆ ಅಪ ಪ್ರಚಾರ ನಡೆಯಿತು. ಆಗ ಆಪ್ ಮೌನ ವಹಿಸಿತು. ಮರ್ಕಝ್ ಎಂದು ಕರೆಯಲ್ಪಡುವ ತಬ್ಲೀಗ್ ಜಮಾಅತ್ ಕೇಂದ್ರ ಇರುವ ಜಂಗ್‌ಪುರದಿಂದ ಮನೀಶ್ ಸಿಸೋಡಿಯಾ ಸೋಲುಂಡಿದ್ದಾರೆ. ದಿಲ್ಲಿ ಗಲಭೆ ಸಂದರ್ಭದಲ್ಲಿ ಆಪ್ ವಹಿಸಿದ ಮೌನವು ಪಕ್ಷಕ್ಕೆ ದುಬಾರಿಯಾಗಿ ಪರಿಣಮಿಸಿದೆ. ಇದರಿಂದ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್‌ಗಿಂತ ಆಪ್ ಸೂಕ್ತ ಎಂದು ಪರಿಗಣಿಸಿದ್ದ ಸಮುದಾಯ ಪಕ್ಷದಿಂದ ದೂರವಾಯಿತು.

ಮೃದು ಹಿಂದುತ್ವ?

ಕೇಜ್ರಿವಾಲ್ ಹಿಂದೂ ಮತದಾರರನ್ನು ತಲುಪಲು ಬಿಜೆಪಿಯ ಸಿದ್ಧ ಮಾದರಿಯನ್ನೇ ಬಳಸಿದರು. ಅವರ ಭಾಷೆ ಬದಲಾಯಿತು; ತೀರ್ಥಯಾತ್ರೆಗಳನ್ನು ಆಯೋಜಿಸಲು ಆರಂಭಿಸಿದರು; ಬಜರಂಗಬಲಿ ಯನ್ನು ಪಕ್ಷದ ಪ್ರಧಾನ ದೇವತೆಯನ್ನಾಗಿ ಮಾಡಿದರು; ಹನುಮಾನ್ ಚಾಲೀಸಾ ಪಠಣವಲ್ಲದೆ, ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಪ್ರತೀ ವಿಧಾನಸಭೆ ಕ್ಷೇತ್ರದಲ್ಲಿ ಸುಂದರ ಕಾಂಡದ ಪಠಣವನ್ನು ಆಯೋಜಿಸಲಾಗುತ್ತದೆ ಎಂದರು. ಇದರ ಫಲಿತಾಂಶವೆಂದರೆ, ಮತದಾರರಿಗೆ ಎಎಪಿ ಮತ್ತು ಬಿಜೆಪಿ ನಡುವಿನ ವ್ಯತ್ಯಾಸವೇನು ಎಂಬುದು ಸ್ಪಷ್ಟವಾಗಲಿಲ್ಲ.

ರಾಹುಲ್ ಗಾಂಧಿ ಕೂಡ ಕೇದಾರನಾಥ ದೇವಸ್ಥಾನಕ್ಕೆ ಹೋದರು; ಲೋಕಸಭೆಯಲ್ಲಿ ಶಿವನ ಚಿತ್ರವನ್ನು ಪ್ರದರ್ಶಿಸಿದರು; ಬಿಜೆಪಿಯು ಯಾವಾಗ ‘ಕೊನೆ ಕ್ಷಣದಲ್ಲಿ ಹಿಂದೂ ಆಗುವ ಅವಕಾಶವಾದಿ’ ಎಂದು ದಾಳಿ ಆರಂಭಿಸಿತೋ, ರಾಹುಲ್ ತಮ್ಮ ಕಾರ್ಯವಿಧಾನ ಬದಲಿಸಿಕೊಂಡರು. ಆದರೆ, ಕೇಜ್ರಿವಾಲ್ ಹಿಂದಿನ ಜಾಡು ತೊರೆಯಲಿಲ್ಲ.

ಅಣ್ಣಾ ಚಳವಳಿ ಆರಂಭಗೊಂಡ ರಾಮಲೀಲಾ ಮೈದಾನದಲ್ಲಿ ಕೇಜ್ರಿವಾಲ್ ಬಂಧನದ ನಂತರ ‘ಇಂಡಿಯಾ’ ಒಕ್ಕೂಟ ಹಮ್ಮಿಕೊಂಡಿದ್ದ ಸಭೆಯ ವೇದಿಕೆಯಲ್ಲಿ ಎರಡು ಕುರ್ಚಿಗಳನ್ನು ಖಾಲಿ ಬಿಡಲಾಗಿತ್ತು; ಅವು ಸೆರೆಮನೆಯಲ್ಲಿದ್ದ ಕೇಜ್ರಿವಾಲ್ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್‌ಗೆ ಮೀಸಲಾಗಿದ್ದವು. ಕೇಜ್ರಿವಾಲ್ ಬಂಧನ ಖಂಡಿಸಿ ರಾಹುಲ್ ಮಾತನಾಡಿದರು: ಆದರೆ, ಕೇಜ್ರಿವಾಲ್ ಪ್ರತಿಸ್ಪಂದಿಸಲಿಲ್ಲ.

ಆಪ್‌ಗೆ ರಾಜಕೀಯವಾಗಿ ವಿಸ್ತರಿಸಿಕೊಳ್ಳುವ ಎಲ್ಲ ಹಕ್ಕು ಇದೆ. ಆದರೆ, ವಿಸ್ತರಣೆಯಿಂದ ಯಾರಿಗೆ ಲಾಭ ಮತ್ತು ಯಾರಿಗೆ ನಷ್ಟವಾಗುತ್ತದೆ ಎಂಬುದನ್ನು ನೋಡಬೇಕು. 2013ರಲ್ಲಿ ಪಕ್ಷ ಸೋತಿದ್ದರೂ, ಕೇಜ್ರಿವಾಲ್ ಅವರನ್ನು ಕಾಂಗ್ರೆಸ್ ಬೆಂಬಲಿಸಿತು. 2024ರ ಲೋಕಸಭೆ ಚುನಾವಣೆಯಲ್ಲಿ ಎಎಪಿ ಮತ್ತು ಕಾಂಗ್ರೆಸ್ ಒಟ್ಟಾಗಿದ್ದವು. ಆದರೆ, 2025ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಜೊತೆ ಮೈತ್ರಿ ನಿರಾಕರಿಸಿದ ಕೇಜ್ರಿವಾಲ್, ಪಕ್ಷದ 70 ಅಭ್ಯರ್ಥಿಗಳನ್ನು ಘೋಷಿಸಿದ್ದರು.

ಹಲವು ತಪ್ಪು ನಡೆಗಳು

ಕೇಜ್ರಿವಾಲ್ ಅವರ ತಪ್ಪುಗಳಿಂದ ಬಿಜೆಪಿಗೆ ಲಾಭವಾಯಿತು. ಯಮುನಾ ನದಿಗೆ ವಿಷ ಬೆರೆಸಲಾಗಿದೆ ಎಂಬ ಅವರ ಕ್ಷುಲ್ಲಕ ಹೇಳಿಕೆಯ ಲಾಭವನ್ನು ಬಿಜೆಪಿ ಪಡೆದುಕೊಂಡಿತು. ಜೊತೆಗೆ, ಎಂಟನೇ ವೇತನ ಆಯೋಗದ ಘೋಷಣೆ ಮಾಡಿತು; ಮಹಿಳೆಯರ ಖಾತೆಗಳಿಗೆ 2,500 ರೂ. ಹಾಕುವುದಾಗಿ ಹೇಳಿತು; ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ತೆರಿಗೆ ರಿಯಾಯಿತಿಯ ಆಮಿಷವೊಡ್ಡಿತು (ಅಂದಾಜಿನ ಪ್ರಕಾರ, ದಿಲ್ಲಿಯ 1.55 ಕೋಟಿ ಮತದಾರರ ಪೈಕಿ ಶೇ.60 ಮಂದಿ ಮಧ್ಯಮ ವರ್ಗಕ್ಕೆ ಸೇರಿದವರು).

ದಿಲ್ಲಿಯ ಜನರು ಆಪ್ ಎಂಬ ನವೀನ ಪ್ರಯೋಗಕ್ಕೆ ಹತ್ತು ವರ್ಷ ಅವಕಾಶ ನೀಡಿದರು. ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್(ಎಂಸಿಡಿ)ನಲ್ಲೂ ಅಧಿಕಾರ ಕೊಟ್ಟರು. ಆದರೆ, ನಗರದ ಸ್ವಚ್ಛತೆ ಸ್ಥಿತಿ ಸುಧಾರಿಸಲಿಲ್ಲ. ಆಡಳಿತವನ್ನು ಲೆಫ್ಟಿನೆಂಟ್ ಗವರ್ನರ್ ನಡೆಸುತ್ತಿದ್ದರು; ಆಪ್ ಸರಕಾರ ವಿಫಲವಾಗುವುದನ್ನು ಖಚಿತಪಡಿಸಿಕೊಳ್ಳಲು ಬಿಜೆಪಿ ತನ್ನ ಎಲ್ಲಾ ಶಕ್ತಿಯನ್ನು ಬಳಸಿತು. ಕೇಜ್ರಿವಾಲ್ ಅವರ ‘ಶೀಶ್ ಮಹಲ್ (ಗಾಜಿನ ಅರಮನೆ)’ ಅನ್ನು ಬಿಜೆಪಿ ವಿವಾದವನ್ನಾಗಿ ಮಾಡಿತು. ಸಂಸತ್ತಿನಲ್ಲೂ ಪ್ರಧಾನಿ ‘ಶೀಶ್ ಮಹಲ್’ ಬಗ್ಗೆ ಮಾತನಾಡಿದರು.

‘ಇಂಡಿಯಾ’ ಒಕ್ಕೂಟ ಕೇವಲ ಪಕ್ಷಗಳ ಮೈತ್ರಿಕೂಟವಲ್ಲ; ಮೈತ್ರಿಯ ತಳಹದಿಯಲ್ಲಿ ಸಿದ್ಧಾಂತದ ಪ್ರಶ್ನೆಯಿದೆ ಮತ್ತು ಅದು ಆರೆಸ್ಸೆಸ್-ಬಿಜೆಪಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಕೇಜ್ರಿವಾಲ್ ಸೈದ್ಧಾಂತಿಕ ನೆಲೆಯನ್ನು ರೂಪಿಸಲಿಲ್ಲ. ದಿಲ್ಲಿಯಲ್ಲಿ ಬಿಜೆಪಿ 1993ರ ನಂತರ ಹಲವು ಚುನಾವಣೆಗಳಲ್ಲಿ ಸೋತಿದೆ. ಶೀಲಾ ದೀಕ್ಷಿತ್ ಅವರನ್ನು ಮೂರು ಬಾರಿ ಎದುರಿಸಿ ವಿಫಲವಾಗಿದೆ ಹಾಗೂ 2015ರಲ್ಲಿ ಆಪ್ ವಿರುದ್ಧ ಸೋಲುಂಡಿದೆ.

ಇದು ಆಪ್ ಅಂತ್ಯವೇ?

ಸೋಲಿನ ನಂತರವೂ ಆಪ್ ಪ್ರಮುಖ ವಿರೋಧ ಪಕ್ಷವಾಗಿದೆ. ರಾಜಕೀಯದಲ್ಲಿ ಅಂತ್ಯ ಎನ್ನುವುದನ್ನು ಊಹಿಸಲು ಆಗದು. ಆಪ್ ಸೋಲು ತನ್ನ ಹಾದಿಯನ್ನು ಸುಲಭಗೊಳಿಸುತ್ತದೆ ಎಂದು ಕಾಂಗ್ರೆಸ್ ಭಾವಿಸಬಾರದು. ಪಕ್ಷವೊಂದರ ಹಣೆಬರಹವನ್ನು ಒಂದು ಅಥವಾ ಎರಡು ಚುನಾವಣೆಗಳಿಂದ ನಿರ್ಧರಿಸಲು ಆಗುವುದಿಲ್ಲ. ಆದರೆ, ಮತ ವಿಭಜನೆ ಪ್ರತಿಪಕ್ಷಗಳ ಸೋಲಿಗೆ ಕಾರಣ ಎಂಬುದನ್ನು ಎಲ್ಲ ನಾಯಕರು ಅರ್ಥಮಾಡಿಕೊಳ್ಳಬೇಕು. ಆಪ್‌ನ ಪ್ರಮುಖ ನಾಯಕರು ಕಾಂಗ್ರೆಸ್ ಅಭ್ಯರ್ಥಿಗಳು ಪಡೆದ ಮತಗಳಷ್ಟೇ ಅಂತರದಿಂದ ಸೋತಿದ್ದಾರೆ. ಎಎಪಿ ಹೋಳಾಗುವ ಸಾಧ್ಯತೆಯೂ ಇದೆ. ಬಿಜೆಪಿಯ ಸಾಮ-ದಾನ-ಭೇದ ಮತ್ತು ದಂಡದ ಭೀತಿಯಿಂದ ಶಾಸಕರು ಪಕ್ಷ ತೊರೆಯಲೂಬಹುದು.

ಕೇಜ್ರಿವಾಲ್ ಪಂಜಾಬಿನ ಸರಕಾರ ಉಳಿಸಿಕೊಳ್ಳಲು ಶ್ರಮಿಸಬೇಕಾಗುತ್ತದೆ. ಏತನ್ಮಧ್ಯೆ, ಆರೆಸ್ಸೆಸ್ ಕಾರ್ಯಕರ್ತರು ಬಿಹಾರದ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಅವರ ಮುಂದಿನ ಗುರಿ-ನಿತಿಶ್ ಕುಮಾರ್!ಕೇಜ್ರಿವಾಲ್ ಪಂಜಾಬಿನ ಸರಕಾರ ಉಳಿಸಿಕೊಳ್ಳಲು ಶ್ರಮಿಸಬೇಕಾಗುತ್ತದೆ. ಏತನ್ಮಧ್ಯೆ, ಆರೆಸ್ಸೆಸ್ ಕಾರ್ಯಕರ್ತರು ಬಿಹಾರದ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಅವರ ಮುಂದಿನ ಗುರಿ-ನಿತಿಶ್ ಕುಮಾರ್!

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಮಾಧವ ಐತಾಳ್

contributor

Similar News