ಇನ್ಸೆಲ್ ಸಂಸ್ಕೃತಿ, ಯುವಜನತೆ ಮತ್ತು ಮಹಿಳಾ ಸಮಾನತೆ
ಒಂದೆಡೆ ಸಂಕಷ್ಟಕ್ಕೆ ಸಿಲುಕಿರುವ ಯುವಜನರು-ಪೋಷಕರು ಮತ್ತು ಇನ್ನೊಂದೆಡೆ ತಾರತಮ್ಯವನ್ನೇ ಹೊದ್ದು ಮಲಗಿರುವ ವ್ಯವಸ್ಥೆ- ಈ ಕಂದರವನ್ನು ಭರ್ತಿ ಮಾಡಲು ಒಬ್ಬರಿಗೆ ಸಾಧ್ಯವಿಲ್ಲ; ಇಡೀ ಸಮುದಾಯ ಹಾಗೂ ವ್ಯವಸ್ಥೆ ಕೈಜೋಡಿಸಬೇಕಾಗುತ್ತದೆ. ಹೈರಾಣಾದವರಿಗೆ ಮಾನಸಿಕ ಆರೋಗ್ಯ ಬೆಂಬಲ ಸೇವೆ ವ್ಯವಸ್ಥೆಯನ್ನು ಬಲಪಡಿಸಬೇಕಿದೆ. ‘ವಿಶ್ವಗುರು’ ಆಗುವ ಭ್ರಮೆಯಿಂದ ಹೊರಬಂದು, ಹದಿಹರೆಯದವರ ಮಾನಸಿಕ, ಸಾಮಾಜಿಕ ಲೋಕ ಛಿದ್ರಗೊಳ್ಳುತ್ತಿರುವುದರ ಬಗ್ಗೆ ತಿಳಿದುಕೊಳ್ಳಬೇಕಿದೆ.;

ನೆಟ್‌ಫ್ಲಿಕ್ಸ್ ಧಾರಾವಾಹಿ ‘ಅಡಾಲೆಸೆನ್ಸ್’ ವೀಕ್ಷಕರನ್ನು ಸೆಳೆದಿದ್ದು, ಆನ್‌ಲೈನ್‌ನಲ್ಲಿ ಅಭಿಪ್ರಾಯ/ವಿಶ್ಲೇಷಣೆಗಳು ತುಂಬುತುಳುಕುತ್ತಿವೆ. ಹದಿಹರೆಯದವರಲ್ಲಿ ಹಿಂಸೆ, ಲೈಂಗಿಕ ತಳಮಳ ಹಾಗೂ ವ್ಯವಸ್ಥೆಯ ಅಸಮರ್ಪಕ ಪ್ರತಿಕ್ರಿಯಿಸುವಿಕೆಗೆ ಸಂಬಂಧಿಸಿದ ಈ ಧಾರಾವಾಹಿಯು ಮಕ್ಕಳನ್ನು ಅರ್ಥಮಾಡಿಕೊಳ್ಳುವಲ್ಲಿ ಪೋಷಕರು, ಶಾಲಾವ್ಯವಸ್ಥೆ ಹಾಗೂ ಸಮಾಜ ವಿಫಲವಾಗಿವೆ ಎನ್ನುತ್ತದೆ. ಆನ್‌ಲೈನ್ ಪೀಡಿಸುವಿಕೆ, ಆಂಡ್ರ್ಯೂ ಟೇಟ್, ಪುರುಷಗೋಳ(ಮ್ಯಾನೋಸ್ಪಿಯರ್), ಉಪೇಕ್ಷಿಸುವ ಶಿಕ್ಷಕರು ಮತ್ತು ಕಪಟದ ಅರಿವಿಲ್ಲದ ಪೋಷಕರ ಸ್ಥಿತಿಯನ್ನು ಅನಾವರಣಗೊಳಿಸುತ್ತದೆ. ಆದರೆ, ಬಲಿಪಶುವನ್ನು ಅದೃಶ್ಯಗೊಳಿಸಿ, ನಗಣ್ಯವಾಗಿಸಲಾಗಿದೆ ಎಂದು ಮಹಿಳೆಯರಿಂದ ಟೀಕೆಗೊಳಗಾಗಿದೆ.
ಕೇಟಿ ಎಂಬ ಬಾಲಕಿಯ ಕೊಲೆಗೆ ಸಂಬಂಧಿಸಿದಂತೆ ಜೆಮಿ(13) ಬಂಧನಕ್ಕೊಳಗಾಗುತ್ತಾನೆ. ತನಿಖೆ ಆರಂಭವಾಗುತ್ತದೆ. ಜೆಮಿಯ ಸಹಪಾಠಿ ತನಿಖೆ ನಡೆಸುತ್ತಿದ್ದ ತನ್ನ ತಂದೆಗೆ ‘ಜೆಮಿ ಆನ್‌ಲೈನ್ ಪೀಡನೆಗೆ ಒಳಗಾಗಿದ್ದ’ ಎಂದು ಇನ್ಸೆಲ್ ಸಂಸ್ಕೃತಿಯ ವಿವರ ಕೊಡುತ್ತಾನೆ. ‘ಶೇ.80ರಷ್ಟು ಸ್ತ್ರೀಯರು ಶೇ.20ರಷ್ಟು ಪುರುಷರಿಂದ ಆಕರ್ಷಿತರಾಗಿರುತ್ತಾರೆ’ ಎಂಬ ಆಂಡ್ರ್ಯೂ ಟೇಟ್ ಹೇಳಿಕೆ ಉಲ್ಲೇಖವಾಗುತ್ತದೆ. ಆಂಡ್ರ್ಯೂ ಟೇಟ್ ಎಂಬವನು ಅಮೆರಿಕ ಮೂಲದ ಸಾಮಾಜಿಕ ಮಾಧ್ಯಮದ ಇನ್‌ಫ್ಲುಯನ್ಸರ್, ಉದ್ಯಮಿ ಮತ್ತು ವೃತ್ತಿಪರ ಕಿಕ್ ಬಾಕ್ಸರ್. ಮ್ಯಾನೋಸ್ಪಿಯರ್‌ಗೆ ಸಂಬಂಧಿಸಿದ ಹೇಳಿಕೆಗಳಿಂದ ಕುಖ್ಯಾತನಾಗಿರುವ ಈತನಿಗೆ ‘ಎಕ್ಸ್’ನಲ್ಲಿ 9.9 ದಶಲಕ್ಷ ಹಿಂಬಾಲಕರಿದ್ದಾರೆ. ಬಲಪಂಥೀಯ ಮತ್ತು ಸ್ತ್ರೀದ್ವೇಷಿ; ರೊಮಾನಿಯಾ, ಅಮೆರಿಕ ಹಾಗೂ ಇಂಗ್ಲೆಂಡಿನಲ್ಲಿ ಅತ್ಯಾಚಾರ ಹಾಗೂ ಮಾನವ ಕಳ್ಳಸಾಗಣೆ ಸೇರಿದಂತೆ ಆರು ಪ್ರಕರಣ ದಾಖಲಾಗಿದೆ. ಶ್ರೀಮಂತರಾಗುವುದು ಹಾಗೂ ಮಹಿಳೆಯರನ್ನು ಆಕರ್ಷಿಸುವುದು ಹೇಗೆ ಎಂದು ಕಲಿಸುವುದಾಗಿ ಟೇಟ್ ಹೇಳಿಕೊಳ್ಳುವುದರಿಂದ, ಯವಜನರ ದಂಡು ಆತನನ್ನು ಹಿಂಬಾಲಿಸುತ್ತದೆ. ಅವನ ಪ್ರಖ್ಯಾತ ಹೇಳಿಕೆಗಳಲ್ಲಿ ಒಂದು, ‘ಶೇ.80ರಷ್ಟು ಸ್ತ್ರೀಯರು ಶೇ.20ರಷ್ಟು ಪುರುಷರಿಂದ ಆಕರ್ಷಿತರಾಗಿರುತ್ತಾರೆ. ನೀವು ಆ ಶೇ.20ರಲ್ಲಿ ಒಬ್ಬರಾಗಲು ಸಾಧ್ಯವಿದೆ. ಹದಿಹರೆಯದ ಎಲ್ಲ ಅಡೆತಡೆಗಳನ್ನು, ಸಹಪಾಠಿಗಳ ಒತ್ತಡ, ದೇಹ ಸೌಂದರ್ಯ ಮತ್ತು ಲೈಂಗಿಕ ಅಭದ್ರತೆಯನ್ನು ದಾಟಬಹುದು’ ಎಂದು ಭರವಸೆ ಕೊಡುತ್ತಾನೆ.
ಟೇಟ್ ಅಂಥ ವಿಚ್ಛಿದ್ರಕಾರಿ ಇನ್‌ಫ್ಲುಯನ್ಸರ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ತುಂಬಿತುಳುಕುತ್ತಿದ್ದಾರೆ. ಪುರುಷರ ಸಾಂಪ್ರದಾಯಿಕ ಲಕ್ಷಣಗಳನ್ನು ಬೆಂಬಲಿಸುವ ಮೂಲಕ ಆಧುನಿಕತೆಯನ್ನು ತಿರಸ್ಕರಿಸುತ್ತಾರೆ. ಇನ್ಸೆಲ್ ಸಂಸ್ಕೃತಿ ಅಂದರೆ ಅನೈಚ್ಛಿಕ ಬ್ರಹ್ಮಚರ್ಯ; ಮಹಿಳೆಯರನ್ನು ಆಕರ್ಷಿಸಲು ಅಸಮರ್ಥರೆಂದು ಪರಿಗಣಿಸಲಾದ, ಲೈಂಗಿಕ ಸಂಬಂಧಕ್ಕೆ ಹಾತೊರೆದರೂ ಪಡೆಯುವಲ್ಲಿ ವಿಫಲವಾದ ಪುರುಷ ಸಮುದಾಯವನ್ನು ಪ್ರೋತ್ಸಾಹಿಸುತ್ತಾರೆ. ಒಂಟಿತನ ಮತ್ತು ಡೇಟಿಂಗ್ ಕುರಿತ ಇನ್ಸೆಲ್, ಈಗ ಉಪಸಂಸ್ಕೃತಿ ಎಂಬಂತೆ ಆಗಿಬಿಟ್ಟಿದೆ. ‘ವೀರ್ಯ ನಾಶವೇ ಮರಣ’ ಎಂದವರಿಗಿಂತ ಇವರು ಭಿನ್ನ; ಇದು ಹೊಸ ಪೀಳಿಗೆಯ ತಾಜಾ ಸಮಸ್ಯೆ.
ಮಹಿಳಾವಾದಕ್ಕೆ ವಿರೋಧ
ಹದಿಹರೆಯದವರು ಈಗಾಗಲೇ ಹಲವು ಒತ್ತಡಗಳ ನಕಾರಾತ್ಮಕ ಪರಿಣಾಮ ಅನುಭವಿಸುತ್ತಿದ್ದು, ಕೋವಿಡ್ ನಂತರ ಅವರ ಮಾನಸಿಕ ಸಮಸ್ಯೆಗಳು ಅಧಿಕಗೊಂಡಿವೆ. ಈ ಹಿಂದೆಯೂ ಹೆಚ್ಚು ಅಂಕ ಪಡೆಯ ಬೇಕೆಂಬ, ಹುಡುಗಿಯರನ್ನು ಆಕರ್ಷಿಸಬೇಕೆಂಬ ಒತ್ತಡ ಹಾಗೂ ಹಿರಿಯ ವಿದ್ಯಾರ್ಥಿಗಳು/ದಾಂಡಿಗರು ಕಿರಿಯ/ದುರ್ಬಲ ವಿದ್ಯಾರ್ಥಿಗಳನ್ನು ಗೋಳು ಹೊಯ್ದುಕೊಳ್ಳುವುದು ಇದ್ದಿತ್ತು. ಆದರೆ, ಈಗ ಆನ್‌ಲೈನ್ ಪೀಡಿಸುವಿಕೆ, ಅವಮಾನಿಸುವುದು ಮತ್ತು ಸ್ವನಿಂದನೆ ಹೆಚ್ಚಿದೆ. ಸಾಮಾಜಿಕ ಮಾಧ್ಯಮದಲ್ಲಿ ಯಾರೋ ಮಾಡಿದ ಕಮೆಂಟನ್ನು ತೆಗೆದುಹಾಕಿದ ಬಳಿಕವೂ ಅದು ಕ್ಲೌಡ್‌ನಲ್ಲಿ ಉಳಿದುಕೊಳ್ಳುತ್ತದೆ; ಕೆಟ್ಟ-ಅವಮಾನಿಸುವ ಹೇಳಿಕೆಗಳು ಮರುಹಂಚಿಕೆಯಾಗುತ್ತವೆ.
ಮಾರುಕಟ್ಟೆಯು ಸೌಂದರ್ಯ ಕುರಿತು ತನ್ನದೇ ವ್ಯಾಖ್ಯಾನವನ್ನು ಹುಟ್ಟುಹಾಕಿದೆ ಮತ್ತು ಸಮರೂಪತೆಯನ್ನು ಹೇರಿದೆ. ‘ಸೌಂದರ್ಯ ಎನ್ನುವುದು ನೋಡುವ ಕಣ್ಣುಗಳಲ್ಲಿ ಇದೆ’ ಎನ್ನುತ್ತಲೇ ಪದಾರ್ಥ ಮಾರು ಕಟ್ಟೆಯು ಸೌಂದರ್ಯ ಕುರಿತ ಪಡಿಯಚ್ಚುಗಳನ್ನು ಹೇರುತ್ತದೆ. ‘ನಿನ್ನ ತೂಕ ಕಮ್ಮಿಯಾಗಿದೆ; ಅವಳು ಸುಂದರಿ; ಅವಳು/ನು ಹಾಟ್ ಇದ್ದಾನೆ/ಳೆ’ ಎಂಬ ಮಾತುಗಳ ಅರ್ಥ ಸರಳವಾಗಿರುವುದಿಲ್ಲ. ಸುಂದರವಾಗಿರುವುದು ತಪ್ಪಲ್ಲ; ಆದರೆ, ‘ತೂಕ ಕಡಿಮೆಯಾಗಿದೆ’, ‘ಕಪ್ಪು ಇಲ್ಲವೇ ದಪ್ಪ ಇರುವ ಹುಡುಗಿಯರನ್ನು ಹುಡುಗರು ಇಷ್ಟ ಪಡುವುದಿಲ್ಲ’ ಎನ್ನುವ ಹೇಳಿಕೆಗಳು ಆತ್ಮವಿಶ್ವಾಸವನ್ನು ನಾಶ ಮಾಡುತ್ತವೆ. ಆತ್ಮವಿಶ್ವಾಸ ಕಳೆದುಕೊಂಡ ಮತ್ತು ಇಂಥ ವಿಷಯ ಕುರಿತು ಮಾರ್ಗದರ್ಶನ ಮಾಡುವ ಹಿರಿಯರು ಇಲ್ಲದೆ ಇದ್ದಾಗ ಎಳೆ ವಯಸ್ಸಿನ ಹುಡುಗ/ಹುಡುಗಿಯರು ವಿಧಿಯಿಲ್ಲದೆ ಸಮವಯಸ್ಕರು/ಸಾಮಾಜಿಕ ಮಾಧ್ಯಮದಲ್ಲಿ ಸಮಾಧಾನ ಪಡೆದುಕೊಳ್ಳಲು ಯತ್ನಿಸುತ್ತಾರೆ. ಆಗ, ಟೇಟ್ ಅಂಥವರು ಸಿಗುತ್ತಾರೆ; ದಾರಿ ತಪ್ಪಿಸುತ್ತಾರೆ. ಅಂತರ್ಜಾಲದಲ್ಲಿ ಇಂಥ ಪ್ರಶ್ನಾರ್ಹ ವ್ಯಕ್ತಿಗಳು-ಮಾಹಿತಿಗಳು ತುಂಬಿತುಳುಕುತ್ತಿವೆ.
ವಿಷಮಯ ಪರಿಹಾರ
ಆಂಡ್ರ್ಯೂ ಟೇಟ್ ಅಂಥವರು ನೀಡುವ ಪರಿಹಾರ ಸರಳ; ಆದರೆ, ವಿಷಮಯ. ‘ಮಹಿಳಾ ಸಮಾನತೆ ಎನ್ನುವುದು ಪುರುಷರ ಅವಕಾಶಗಳನ್ನು ಕಸಿಯುವ ಪ್ರಯತ್ನ. ಪುರುಷರು ಮತ್ತೆ ಮೇಲುಗೈ ಪಡೆದುಕೊಳ್ಳಬೇಕು’ ಎಂದು ಟೇಟ್ ಹೇಳುತ್ತಾರೆ. ‘ಅಡಾಲೆಸೆನ್ಸ್’ ಲಿಂಗ ಸಂಬಂಧಗಳು ಮತ್ತು ಮಹಿಳೆಯರ ಮೇಲಿನ ಹಿಂಸೆಯನ್ನು, ಸಮಾಜ ಹಾಗೂ ವ್ಯವಸ್ಥೆಗಳು ಹೇಗೆ ಛಿದ್ರಗೊಂಡಿವೆ ಮತ್ತು ಕ್ಷುದ್ರಗೊಂಡಿವೆ ಎಂಬುದನ್ನು ತೋರಿಸುತ್ತದೆ. ಈ ಹಿಂದೆ ಇದ್ದುದು ಆದರ್ಶ ರಾಜ್ಯವೇನಲ್ಲ; ಆದರೆ, ಆಗ ವ್ಯಕ್ತಿಯ ಸಾಮರ್ಥ್ಯ ಹೊರಹೊಮ್ಮಲು ಸಾಮೂಹಿಕ ಬೆಂಬಲ ಅಗತ್ಯವಿದೆ ಎಂಬ ಅರಿವು ಇದ್ದಿತ್ತು. ಆದರೆ, ಈಗ ನಾವು ವಿಸ್ತೃತವಾದ ಮಾಲ್ ಒಂದರಲ್ಲಿದ್ದೇವೆ. ಗೇಟೆಡ್ ಸಮುದಾಯದಲ್ಲಿ ವಾಸಿಸುವ ಇಲ್ಲವೇ ಖಾಸಗಿ ಶಿಕ್ಷಣ ಮತ್ತಿತರ ಸಂಸ್ಥೆಗಳಿಗೆ ಪ್ರವೇಶಾವಕಾಶ ಪಡೆಯುವ ಆರ್ಥಿಕ ಸಾಮರ್ಥ್ಯ ಹೊಂದಿಲ್ಲದವರು, ಮಾರುಕಟ್ಟೆಯ ಗುರಿ ಆಗುತ್ತಾರೆ. ಅವರ ಮೇಲೆ ‘ಹೊಂದಲೇಬೇಕು’ ಎಂಬ ಒತ್ತಡ ಹೇರಲಾಗುತ್ತದೆ. ಮಾರುಕಟ್ಟೆಯು ಸುಳ್ಳುಗಳ ಮೂಲಕ ಭ್ರಾಮಕ ಜಗತ್ತನ್ನು ಸೃಷ್ಟಿಸಿ, ಸೆಳೆಯುತ್ತದೆ.
‘ಅಡಾಲೆಸೆನ್ಸ್’ನ ಕೇಂದ್ರದಲ್ಲಿ ಇರುವುದು-ಬಡತನ ಮತ್ತು ನಿರ್ಗತಿಕತೆ. ಹಣಕಾಸಿನ ಕೊರತೆ ಮಾತ್ರವಲ್ಲ; ಸಾಮಾಜಿಕ ಜೀವನದಲ್ಲಿ ಅರ್ಥಪೂರ್ಣ ಪಾಲ್ಗೊಳ್ಳುವಿಕೆಗೆ ಅವಕಾಶ ಇಲ್ಲದವರು ಮತ್ತು ಸಾಮೂಹಿಕ ಸಂಪನ್ಮೂಲಗಳಿಂದ ಹೊರತಾದವರು ಎದುರಿಸುವ ದಾರಿದ್ರ್ಯ ಅದು. ಶಿಕ್ಷಣ, ಆರೋಗ್ಯ ರಕ್ಷಣೆ, ಉದ್ಯೋಗ, ಸಾರಿಗೆ ಮತ್ತು ಹಂಚಿಕೊಂಡ ಸಾರ್ವಜನಿಕ ತಾಣಗಳು ಜನರ ಭಾಗವಹಿಸುವಿಕೆ ಮತ್ತು ಸಹಭಾಗಿತ್ವಕ್ಕೆ ಅವಕಾಶ ಕಲ್ಪಿಸುತ್ತವೆ. ಈ ವ್ಯವಸ್ಥೆಗಳು ನಶಿಸಿದಾಗ ಇಲ್ಲವೇ ಕೈಗೆ ಎಟುಕದೆ ಇದ್ದಾಗ, ಸಾಮಾಜಿಕ ಸಂಬಂಧಗಳು ದುರ್ಬಲವಾಗುತ್ತವೆ. ಜಗತ್ತು ಮುಚ್ಚುತ್ತ ಬಂದಂತೆ, ಅಂತರ್ಜಾಲ ಆವರಿಸಿಕೊಳ್ಳುತ್ತದೆ. ಮಕ್ಕಳು ಆಟ ಆಧರಿತ ಮುಖಾಮುಖಿಯಿಂದ ಫೋನ್ ಆಧರಿತ ಬಾಲ್ಯಕ್ಕೆ ಸ್ಥಿತ್ಯಂತರಗೊಂಡಿದ್ದಾರೆ. ಗಲ್ಲಿಗಳು, ಮೈದಾನಗಳಲ್ಲಿ ಆಟೋಟ ಹಾಗೂ ಜಾತ್ರೆ-ಮೇಳಗಳಲ್ಲಿ ಪಾಲ್ಗೊಂಡು ಸಂಪರ್ಕ ಸಾಧಿಸುವ ಬದಲು ಡಿಜಿಟಲ್ ವೇದಿಕೆಯನ್ನು ಅವಲಂಬಿಸಿದ್ದಾರೆ. ಸಾಮಾಜಿಕ ಒಗ್ಗೂಡುವಿಕೆಗಳು ಮಕ್ಕಳು ಹೇಗೆ ಕಲಿಯುತ್ತಾರೆ, ಶೋಧಿಸುತ್ತಾರೆ ಮತ್ತು ಸಾಮಾಜಿಕ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂಬುದನ್ನು ಹಾಗೂ ಅವರ ಸ್ವಾಯತ್ತೆ, ಸೃಜನಶೀಲತೆ ಮತ್ತು ವಿವಿಧ ಸಂಕೀರ್ಣ ಪರಿಸ್ಥಿತಿಯನ್ನು ನಿರ್ವಹಿಸುವ ಸಾಮರ್ಥ್ಯವನ್ನು ಗಟ್ಟಿಗೊಳಿಸುತ್ತವೆ. ಭಾವನಾತ್ಮಕ ಸಂಘರ್ಷದಲ್ಲಿರುವ ಎಳೆಯರು ಫೇಸ್‌ಬುಕ್/ಇನ್‌ಸ್ಟಾಗ್ರಾಂ ಇತ್ಯಾದಿ ಸಾಮಾಜಿಕ ವೇದಿಕೆಯಲ್ಲಿ ಹಾಕುವ ಸಂದೇಶಗಳನ್ನು ಜಾಹೀರಾತುಗಳ ಮೂಲವಾಗಿ ಬಳಸಿಕೊಳ್ಳಲಾಗುತ್ತದೆ. ‘ಅನರ್ಹ’, ‘ಅಭದ್ರತೆ’, ’ಒತ್ತಡ’, ‘ಸೋಲು’, ‘ಆತಂಕ’, ‘ನಿರುಪಯುಕ್ತ’ ಮತ್ತಿತರ ಪದಗಳನ್ನು ಬಳಸಿದಾಗ, ಅಲ್ಗರಿದಂಗಳು ಸಂಬಂಧಿಸಿದ ಉತ್ಪನ್ನಗಳ ಜಾಹೀರಾತುಗಳನ್ನು ಮುಂದೊತ್ತುತ್ತವೆ. ಪೋಸ್ಟ್ ಮಾಡಿದ ಸೆಲ್ಫಿಯನ್ನು ತೆಗೆದುಹಾಕಿದರೂ, ಜಾಹೀರಾತುಗಳು ನಿಲ್ಲುವುದಿಲ್ಲ. ಸಾಮಾಜಿಕ ಮಾಧ್ಯಮಗಳು ಮನುಷ್ಯರ ಅನುಭವಗಳು ಹಾಗೂ ಪ್ರಜ್ಞೆಯನ್ನು ಮಾರಾಟ ಮಾಡಬಹುದಾದ ದತ್ತಾಂಶ ಎಂದು ಪರಿಗಣಿಸುತ್ತವೆ. ಎಳೆಯರ ಬೆಳವಣಿಗೆಯ ಸಂಕೀರ್ಣ ಅನುಭವಗಳನ್ನು ಕುಗ್ಗಿಸುತ್ತವೆ; ಇದು ಸಿನಿಕ ಪರಾಧೀನತೆಗೆ ದಾರಿ ಮಾಡಿಕೊಡುತ್ತದೆ. ಇಂಥ ಬಾಲ್ಯದಿಂದ ಎಂತಹ ಪ್ರಬುದ್ಧರು ಹೊರಹೊಮ್ಮುತ್ತಾರೆ?
ಪಡಿಯಚ್ಚುಗಳ ಯುಗ
ಶತಶತಮಾನಗಳಿಂದ ಪುರುಷರು ಹೀಗೆಯೇ ಇರಬೇಕೆಂದು ಸಮಾಜ ನಿರ್ಧರಿಸಿಬಿಟ್ಟಿದೆ; ಅಳಬಾರದು, ಕುಟುಂಬದ ಜವಾಬ್ದಾರಿ ತೆಗೆದುಕೊಳ್ಳಬೇಕು, ಎಲ್ಲರಿಗೂ ಹೆಗಲು ನೀಡಬೇಕು ಇತ್ಯಾದಿ. ವ್ಯಾಯಾಮದಿಂದ ಹುರಿಗಟ್ಟಿದ ದೇಹ(6 ಅಥವಾ 8 ಪ್ಯಾಕ್), ಫುಟ್‌ಬಾಲ್ ಆಟವನ್ನು ಇಷ್ಟಪಡುವಿಕೆ, ಕಲೆ/ಸಾಹಿತ್ಯ/ಸಂಗೀತ ಕುರಿತು ತಿರಸ್ಕಾರ, ಐಶ್ವರ್ಯ-ಹಣ ಸಂಪಾದನೆಗೆ ಪ್ರಾಮುಖ್ಯತೆ, ಭಾವನೆಯನ್ನು ವ್ಯಕ್ತಪಡಿಸದೆ ಇರುವುದು, ಮಾತು-ಕೃತಿಯಲ್ಲಿ ಹಿಂಸೆ... ಇವೆಲ್ಲವೂ ಗಂಡುತನ (ಮ್ಯಾಸ್ಕುಲೈನಿಟಿ)ದ ಸಾರ್ವಜನಿಕ ಅಭಿವ್ಯಕ್ತಿಗಳು. ಬದಲಾದ ಕಾಲಘಟ್ಟದಲ್ಲಿ ಮಹಿಳೆಯರು ಶಿಕ್ಷಣ ಪಡೆದು, ಉದ್ಯೋಗ ಕ್ಷೇತ್ರದಲ್ಲಿ ಪೈಪೋಟಿ ನೀಡುತ್ತಿದ್ದಾರೆ; ನಾಯಕತ್ವ ವಹಿಸಿಕೊಳ್ಳುತ್ತಿದ್ದಾರೆ. ಒಂದೇ ಸಂಬಳವನ್ನು ಆಧರಿಸಿದ ಕುಟುಂಬಗಳು ಕಡಿಮೆಯಾಗುತ್ತಿವೆ. ಪುರುಷತನದ ಸಾಂಪ್ರದಾಯಿಕ ಪಡಿಯಚ್ಚಿನಲ್ಲಿ ಬೆಳೆದವರು, ‘ನಾನು ಯಾರು?’ ಎಂಬ ಅಸ್ಮಿತೆಯ ಪ್ರಶ್ನೆ ಎದುರಿಸುತ್ತಿದ್ದಾರೆ. ಕೆಲವರು ಆರೋಗ್ಯಕರ ಉತ್ತರ ಕಂಡುಕೊಂಡಿದ್ದಾರೆ. ಉಳಿದವರು ಆಂಡ್ರ್ಯೂ ಟೇಟ್ ಅಂಥವರ ಮಾತು ಕೇಳಿಕೊಂಡು, ಮಹಿಳೆಯರು ಸಮಾನತೆಯ ಹೆಸರಿನಲ್ಲಿ ಪುರುಷರ ಅವಕಾಶಗಳನ್ನು ಕಸಿಯುತ್ತಿದ್ದಾರೆ ಎಂದು ದೂಷಿಸುತ್ತ ಕುಳಿತಿದ್ದಾರೆ. ಉದ್ಯೋಗಾವಕಾಶ ಏಕೆ ಕಡಿಮೆಯಾಗುತ್ತಿದೆ? ಶಿಕ್ಷಣ, ಸಾಮಾಜಿಕ ಸುರಕ್ಷತೆ-ಆರೋಗ್ಯ ಸೇವೆ ವ್ಯವಸ್ಥೆ ಏಕೆ ಖಾಸಗೀಕರಣಗೊಳ್ಳುತ್ತಿದೆ? ಮತ್ತು ವಸತಿ ಏಕೆ ಕೈಗೆ ಎಟುಕದಂತೆ ಆಗುತ್ತಿದೆ ಎಂಬ ಪ್ರಶ್ನೆ ಕೇಳದಂತೆ ಗಮನ ಬೇರೆಡೆ ಸೆಳೆಯಲಾಗುತ್ತಿದೆ; ಧರ್ಮ, ಕೋಮು, ಜಾತಿ ಇತ್ಯಾದಿ ವಿಭೇದಗಳ ಬಗ್ಗೆ ಆಲೋಚಿಸಲು ಉತ್ತೇಜಿಸಲಾಗುತ್ತಿದೆ.
ಸಮಸ್ಯೆ ಏನೆಂದರೆ, ಅಸ್ಮಿತೆ ಮತ್ತು ಮೌಲ್ಯಗಳ ಕುರಿತು ಚರ್ಚಿಸುತ್ತ ಆರ್ಥಿಕ ಸವಾಲುಗಳನ್ನು ಮರೆತಿದ್ದೇವೆ; ಇದರಿಂದ ಅಸಮಾನತೆ, ಜನಾಂಗೀಯ-ಲೈಂಗಿಕವಾದದ ವಿರುದ್ಧ ಹೋರಾಟ ಹಾಗೂ ಸಂಪನ್ಮೂಲಗಳು, ಐಶ್ವರ್ಯ ಮತ್ತು ಅವಕಾಶಗಳು ಹೇಗೆ ಹಂಚಲ್ಪಡುತ್ತವೆ ಎಂಬ ಕುರಿತ ಮರುಹಂಚಿಕೆ ರಾಜಕೀಯದ ಚರ್ಚೆ ಬದಿಗೆ ಸರಿದಿದೆ. ಮುಖ್ಯವಾಹಿನಿ ಲಿಂಗತ್ವ ಸಂವಾದಗಳು ವಿಭೇದದ ಬಗ್ಗೆ ಇರುವುದರಿಂದ, ಸಾಮಾಜಿಕ ಮಾಧ್ಯಮಗಳು ಅದರ ಲಾಭವನ್ನು ಪಡೆದುಕೊಳ್ಳುತ್ತಿವೆ. ಇದರಿಂದ ರಾಚನಿಕ ಅಸಮಾನತೆ ಬಗ್ಗೆ ಪ್ರಾಮಾಣಿಕ ಚರ್ಚೆ ನಡೆಯುತ್ತಿಲ್ಲ. ಜನರನ್ನು ಬಳಸಿ ಎಸೆಯಬಹುದು ಎಂದುಕೊಂಡಿರುವ ಆರ್ಥಿಕ ವ್ಯವಸ್ಥೆಯಿಂದ ಬೆರಳೆಣಿಕೆ ಜನರ ಬೊಕ್ಕಸ ತುಂಬುತ್ತಿದೆ.
ಹದಿಹರೆಯದವರ ಆತಂಕಗಳ ನಿವಾರಣೆ ಮತ್ತು ಲಿಂಗಸಮಾನತೆ-ಈ ಎರಡೂ ಅಗತ್ಯ. ಮಹಿಳಾ ಆಂದೋಲನಗಳು ಲಿಂಗ ಸಮಾನತೆ ಬಗ್ಗೆ ಜಾಗೃತಿ ಮೂಡಿಸಿವೆ. ಮಿಟೂ ಚಳವಳಿಯು ಅಧಿಕಾರದ ದುರ್ಬಳಕೆ ಬಗ್ಗೆ ತಿಳಿಸಿದೆ. ಪುರುಷ ವಿ/ಎಸ್ ಸ್ತ್ರೀ, ಯುವಜನ ವಿ/ಎಸ್ ಹಿರಿಯ ನಾಗರಿಕರು ಇತ್ಯಾದಿ ಪರಸ್ಪರ ಎತ್ತಿ ಕಟ್ಟುವ ಬೈನರಿಗಳಲ್ಲಿ ಸಮಸ್ಯೆಯಿದೆ. 2 ವರ್ಷದ ಮಗುವಿಗೆ ಆಟವಾಡಲು ಮೊಬೈಲ್ ಕೊಡುವ ಪೋಷಕರಿಗೆ ಮಕ್ಕಳ ಪಾಲನೆ ಕುರಿತ ಅಜ್ಞಾನ, ಸೋಮಾರಿತನ ಇಲ್ಲವೇ ನೋಡಿಕೊಳ್ಳಲು ಸಮಯ ಇಲ್ಲದೆ ಇರುವುದು ಕಾರಣ ಆಗಿರಬಹುದು. ಆದರೆ, ಮಧ್ಯಮ-ಸಾಮಾನ್ಯ ವರ್ಗದ ಪೋಷಕರು ಎದುರಿಸುವ ಸವಾಲುಗಳು ಒಂದೆರಡಲ್ಲ. ಈ ಸವಾಲುಗಳನ್ನು ಸ್ಮಾರ್ಟ್‌ಫೋನ್ ಎಸೆದು ಇಲ್ಲವೇ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಿ ಪರಿಹರಿಸಲು ಆಗುವುದಿಲ್ಲ.
ಒಂದೆಡೆ ಸಂಕಷ್ಟಕ್ಕೆ ಸಿಲುಕಿರುವ ಯುವಜನರು-ಪೋಷಕರು ಮತ್ತು ಇನ್ನೊಂದೆಡೆ ತಾರತಮ್ಯವನ್ನೇ ಹೊದ್ದು ಮಲಗಿರುವ ವ್ಯವಸ್ಥೆ- ಈ ಕಂದರವನ್ನು ಭರ್ತಿ ಮಾಡಲು ಒಬ್ಬರಿಗೆ ಸಾಧ್ಯವಿಲ್ಲ; ಇಡೀ ಸಮುದಾಯ ಹಾಗೂ ವ್ಯವಸ್ಥೆ ಕೈಜೋಡಿಸಬೇಕಾಗುತ್ತದೆ. ಹೈರಾಣಾದವರಿಗೆ ಮಾನಸಿಕ ಆರೋಗ್ಯ ಬೆಂಬಲ ಸೇವೆ ವ್ಯವಸ್ಥೆಯನ್ನು ಬಲಪಡಿಸಬೇಕಿದೆ. ‘ವಿಶ್ವಗುರು’ ಆಗುವ ಭ್ರಮೆಯಿಂದ ಹೊರಬಂದು, ಹದಿಹರೆಯದವರ ಮಾನಸಿಕ, ಸಾಮಾಜಿಕ ಲೋಕ ಛಿದ್ರಗೊಳ್ಳುತ್ತಿರುವುದರ ಬಗ್ಗೆ ತಿಳಿದುಕೊಳ್ಳಬೇಕಿದೆ.
(ಮಾನಸಿಕ ಸಂಕಷ್ಟ ಎದುರಿಸುತ್ತಿರುವವರು ಆಪ್ತ ಸಲಹೆಗಾಗಿ ಸಂಪರ್ಕಿಸಬಹುದು: Telemanas 14416/1800 89 14416. ಏiಡಿಚಿಟಿ 1800 599 0019. Nimhans 080 46110007)