ಹವಾಮಾನ ಬದಲಾವಣೆಯಿಂದ ವಿದ್ಯುತ್ ಕ್ಷೇತ್ರದಲ್ಲಿ ಬಿಕ್ಕಟ್ಟು
ತೀವ್ರ ಮಳೆ, ಬಿಸಿಲು ಮತ್ತು ಗಾಳಿಯಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಹೆಚ್ಚುತ್ತಿದೆ. ನೆದರ್‌ಲ್ಯಾಂಡ್ಸ್‌ನ ಡೆಫ್ಟ್ ತಂತ್ರಜ್ಞಾನ ವಿಶ್ವವಿದ್ಯಾನಿಲಯ ದೇಶದ 370 ಸ್ಥಳಗಳಲ್ಲಿ ನಾಲ್ಕು ವರ್ಷಗಳ ಕಾಲ ನಡೆಸಿದ ಅಧ್ಯಯನದ ಪ್ರಕಾರ, ವಿದ್ಯುತ್ ಬಳಕೆ ಹೆಚ್ಚಳದೊಂದಿಗೆ ಹವಾಮಾನ ವೈಪರೀತ್ಯವೂ ಹೆಚ್ಚಲಿದೆ. ದೇಶ ಈಗಾಗಲೇ ಶಾಖದ ಅಲೆಗಳು, ಮೇಘಸ್ಫೋಟ, ಚಂಡಮಾರುತ, ಬಿರುಗಾಳಿ, ಭೂಕುಸಿತ ಮತ್ತು ಅನಾವೃಷ್ಟಿಯನ್ನು ಎದುರಿಸುತ್ತಿದೆ. ಇಂಥ ಪ್ರಾಕೃತಿಕ ಘಟನೆಗಳು ಹವಾಮಾನ ಬಿಕ್ಕಟ್ಟಿನೊಂದಿಗೆ ಹೆಚ್ಚು ತೀವ್ರವಾಗುತ್ತದೆ.;

ಫೆಬ್ರವರಿ ಮಧ್ಯ ಭಾಗದಲ್ಲೇ ಸುಡು ಬಿಸಿಲು ನೆತ್ತಿ ಸುಡುತ್ತಿದೆ; ಬೆಂಗಳೂರಿನಲ್ಲಿ ಹಿಂಬಾಗಿಲ ಮೂಲಕ ಲೋಡ್ ಶೆಡ್ಡಿಂಗ್ ಪ್ರವೇಶಿಸಿದೆ. ದಿನಕಳೆದಂತೆ ಹವಾಮಾನ ಬದಲಾವಣೆಯ ಕುರುಹುಗಳು ಸ್ಷಷ್ಟವಾಗುತ್ತಿವೆ. ಮುಂಗಾರು ಆಗಮಿಸುವ ಜೂನ್‌ವರೆಗೆ ಭೂಮಿ ಬೆಂದು ಬವಣೆಗೆ ಕಾರಣವಾಗಲಿದೆ. ಚಂಡಮಾರುತಗಳು, ಇಡೀ ವರ್ಷದ ಮಳೆ ಕೆಲವೇ ದಿನಗಳಲ್ಲಿ ಸುರಿಯುವುದು, ಮೇಘಸ್ಫೋಟ, ಭೂಕಂಪ-ಭೂಕುಸಿತ ಹೆಚ್ಚಳ, ತೀವ್ರ ಸುಡುಗಾಳಿ ಇತ್ಯಾದಿ ಸಂಭವಿಸುವಿಕೆ ಹೆಚ್ಚುತ್ತಿದೆ. ಪ್ರಾಕೃತಿಕ ಘಟನೆಗಳ ಮುನ್ಸೂಚನೆ ನೀಡುವಿಕೆ ಅಸಂಭವವಾಗುತ್ತಿದೆ. ಇತ್ತೀಚೆಗೆ ಪ್ರಕಟಗೊಂಡ ‘ಕ್ಲೈಮೇಟ್ ರಿಸ್ಕ್ ಇಂಡೆಕ್ಸ್ 2025’ ಪ್ರಕಾರ, ಕಳೆದ 30 ವರ್ಷಗಳಲ್ಲಿ ತೀವ್ರ ಹವಾಮಾನ ಘಟನೆಗಳಿಂದ ಹಾನಿಗೀಡಾದ ಮೊದಲ 10 ದೇಶಗಳ ಪಟ್ಟಿಯಲ್ಲಿ ಭಾರತ ಸ್ಥಾನ ಗಳಿಸಿದೆ. ಇದರಿಂದ 180 ಶತಕೋಟಿ ಡಾಲರ್ ನಷ್ಟ ಅನುಭವಿಸಿದೆ. ಇಂತಹ 400 ಅವಘಡ ಗಳು ಸಂಭವಿಸಿದ್ದು, ಕನಿಷ್ಠ 80,000 ಮಂದಿ ಸಾವಿಗೀಡಾಗಿದ್ದಾರೆ ಎಂದು ಪರಿಸರ ಚಿಂತನಾ ಕೋಶ ‘ಜರ್ಮನ್ ವಾಚ್’ ಹೇಳಿದೆ.
ಹವಾಮಾನ ಬದಲಾವಣೆಯು ವಿದ್ಯುತ್ ಉತ್ಪಾದಿಸುವ ಎಲ್ಲ ವ್ಯವಸ್ಥೆ(ಉಷ್ಣ ವಿದ್ಯುತ್, ಜಲ ವಿದ್ಯುತ್, ಸೌರ-ಪವನ ವಿದ್ಯುತ್) ಮೇಲೆ ವಿಪರಿಣಾಮ ಬೀರುತ್ತಿದೆ. ಅಕ್ಟೋಬರ್ 12, 2014ರಂದು ಆಂಧ್ರಪ್ರದೇಶದ ಕರಾವಳಿಯಲ್ಲಿ ಹುದುದ್ ಚಂಡಮಾರುತ ಅಟ್ಟ ಹಾಸ ಗೈದಿತು. ಏರೋಪ್ಲೇನ್ ಟೇಕಾಫ್ ಆಗುವ ವೇಗದಲ್ಲಿ (ಗಂಟೆಗೆ ಸುಮಾರು 260 ಕಿ.ಮೀ.) ಬೀಸಿದ ಚಂಡಮಾರುತ ದಾರಿಯಲ್ಲಿ ಸಿಕ್ಕ ಎಲ್ಲವನ್ನೂ ಉರುಳಿಸಿತು. 10 ದಿನ ವಿದ್ಯುತ್ ಪೂರೈಕೆ ಸ್ಥಗಿತಗೊಂಡು, ಮತ್ತೆ ಸಂಪರ್ಕ ಸಾಧ್ಯವಾಗಿದ್ದು 18 ದಿನಗಳ ನಂತರ. ಸುಮಾರು 20 ಕಿ.ಮೀ. ದೂರದಲ್ಲಿನ ಎನ್‌ಟಿಪಿಸಿಯ ಸಿಂಹಾದ್ರಿ ಸೂಪರ್ ಥರ್ಮಲ್ ಪವರ್ ಸ್ಟೇಷನ್ ನಾಲ್ಕು ದಿನ ಸ್ಥಗಿತಗೊಂಡು, 34 ಕೋಟಿ ರೂ. ನಷ್ಟ ಅನುಭವಿಸಿತು. ಹವಾಮಾನ ವೈಪರೀತ್ಯದಿಂದ ವಿದ್ಯುತ್ ಸ್ಥಗಿತಗೊಳಿಸುವಿಕೆ ಆಗಿದ್ದು ಇದೇ ಮೊದಲಲ್ಲ; ಕೊನೆಯೂ ಅಲ್ಲ.
ತೀವ್ರ ಮಳೆ, ಬಿಸಿಲು ಮತ್ತು ಗಾಳಿಯಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಹೆಚ್ಚುತ್ತಿದೆ. ನೆದರ್‌ಲ್ಯಾಂಡ್ಸ್‌ನ ಡೆಫ್ಟ್ ತಂತ್ರಜ್ಞಾನ ವಿಶ್ವವಿದ್ಯಾನಿಲಯ ದೇಶದ 370 ಸ್ಥಳಗಳಲ್ಲಿ ನಾಲ್ಕು ವರ್ಷಗಳ ಕಾಲ ನಡೆಸಿದ ಅಧ್ಯಯನದ ಪ್ರಕಾರ, ವಿದ್ಯುತ್ ಬಳಕೆ ಹೆಚ್ಚಳದೊಂದಿಗೆ ಹವಾಮಾನ ವೈಪರೀತ್ಯವೂ ಹೆಚ್ಚಲಿದೆ. ದೇಶ ಈಗಾಗಲೇ ಶಾಖದ ಅಲೆಗಳು, ಮೇಘಸ್ಫೋಟ, ಚಂಡಮಾರುತ, ಬಿರುಗಾಳಿ, ಭೂಕುಸಿತ ಮತ್ತು ಅನಾವೃಷ್ಟಿಯನ್ನು ಎದುರಿಸುತ್ತಿದೆ. ಇಂಥ ಪ್ರಾಕೃತಿಕ ಘಟನೆಗಳು ಹವಾಮಾನ ಬಿಕ್ಕಟ್ಟಿನೊಂದಿಗೆ ಹೆಚ್ಚು ತೀವ್ರವಾಗುತ್ತದೆ.
ಉಷ್ಣ ಸ್ಥಾವರಗಳಿಂದ ಹೆಚ್ಚು ಕೊಳೆಗಾಳಿ
2020ರಲ್ಲಿ ದೇಶ ವಾತಾವರಣಕ್ಕೆ ತುಂಬಿದ ಇಂಗಾಲದ ಡೈಆಕ್ಸೈಡ್‌ನಲ್ಲಿ ವಿದ್ಯುತ್ ಉತ್ಪಾದನೆ ಕ್ಷೇತ್ರದ ಪಾಲು ಶೇ.48 ಎಂದು ಇಂಟರ್ ಗವರ್ನಮೆಂಟಲ್ ಪ್ಯಾನಲ್ ಆನ್ ಕ್ಲೈಮೇಟ್ ಚೇಂಜ್ (ಐಪಿಸಿಸಿ)ವರ್ಕಿಂಗ್ ಗ್ರೂಪಿನ 6ನೇ ಮೌಲ್ಯಮಾಪನ ವರದಿ ಹೇಳಿದೆ. ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಬಳಕೆಯಾಗುವ ಇಂಧನವಾದ ಕಲ್ಲಿದ್ದಲಿನ ಗಣಿಗಾರಿಕೆ, ಜಲವಿದ್ಯುತ್ ಯೋಜನೆಗಳಿಗೆ ಕಾಡುಗಳ ನಾಶ, ಸೌರಪಾರ್ಕ್‌ಗಳು ಮತ್ತು ಗಾಳಿ ಫಾರ್ಮ್‌ಗಳಿಗೆ ನಡೆಯುವ ಭೂ ಸ್ವಾಧೀನದಿಂದ ನೈಸರ್ಗಿಕ ಸಂಪನ್ಮೂಲ ಮತ್ತು ಜೈವಿಕ ವೈವಿಧ್ಯದ ಮೇಲೆ ಪರಿಣಾಮ ಉಂಟಾಗಿದೆ.
ಜಲವಿದ್ಯುತ್ ಸ್ಥಾವರಗಳನ್ನು ಮಳೆ, ಪ್ರವಾಹ ಮತ್ತು ಉಷ್ಣಾಂಶದ ದತ್ತಾಂಶವನ್ನು ಪರಿಗಣಿಸಿ, ವಿನ್ಯಾಸಗೊಳಿಸಿರುತ್ತಾರೆ; ಆದರೆ, ಹವಾಮಾನ ಬದಲಾವಣೆಯಿಂದ ಎಲ್ಲವೂ ಬದಲಾಗುತ್ತಿದೆ. 2018ರ ಕೇರಳದ ಪ್ರವಾಹದ ವೇಳೆ ಭಾರೀ ಮಳೆಯಿಂದ ಬಂದ ಒಳಹರಿವನ್ನು ನಿರ್ವಹಿಸಲು ವಿಫಲವಾದ ಅಣೆಕಟ್ಟುಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದವು.
1983ರಿಂದ ದೇಶದ ಅಣೆಕಟ್ಟುಗಳ ‘ರೂಲ್ ಕರ್ವ್’(ಅಂದರೆ, ಪ್ರವಾಹ ನಿಯಂತ್ರಣ, ನೀರಾವರಿ, ಕೈಗಾರಿಕೆ/ಗೃಹ ಬಳಕೆಗೆ ನೀರು ಸರಬರಾಜು ಹಾಗೂ ವಿದ್ಯುತ್ ಉತ್ಪಾದನೆ ಸೇರಿದಂತೆ ವಿವಿಧ ಉದ್ದೇಶಗಳನ್ನು ಪೂರೈಸಲು ವರ್ಷದ ವಿವಿಧ ಸಮಯಗಳಲ್ಲಿ ಜಲಾಶಯದಲ್ಲಿ ಇರಬೇಕಾದ ನೀರಿನ ಮಟ್ಟ) ಲಭ್ಯವಿಲ್ಲ ಅಥವಾ ನವೀಕರಿಸಿಲ್ಲ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಅಧ್ಯಯನ ಹೇಳುತ್ತದೆ. ರೂಲ್ ಕರ್ವ್‌ನ್ನು ನೀರಿನ ಒಳಹರಿವು ಬಳಸಿಕೊಂಡು ಲೆಕ್ಕ ಹಾಕಲಾಗುತ್ತದೆ. ‘‘ಹವಾಮಾನ ಬದಲಾವಣೆ ಹಿನ್ನೆಲೆಯಲ್ಲಿ ಎಲ್ಲ ಭಾರೀ ಅಣೆಕಟ್ಟುಗಳ ರೂಲ್ ಕರ್ವ್ ನ್ನು ಬದಲಿಸಬೇಕು ಮತ್ತು ಈ ಮಾಹಿತಿ ಸಾರ್ವಜನಿಕರಿಗೆ ಲಭ್ಯವಿರ ಬೇಕು’’ ಎಂದು ಅಣೆಕಟ್ಟುಗಳು, ನದಿಗಳು ಮತ್ತು ಜನರ ದಕ್ಷಿಣ ಏಶ್ಯ ನೆಟ್‌ವರ್ಕ್(ಎಸ್‌ಎಎನ್‌ಡಿಆರ್‌ಪಿ) ಸಂಯೋಜಕ ಹಿಮಾಂಶು ಠಕ್ಕರ್ ಹೇಳುತ್ತಾರೆ.
ಪ್ರವಾಹ ಭೀತಿ
ಹಿಮಾಲಯದಲ್ಲಿ ಮೇಘಸ್ಫೋಟ, ಹಿಮನದಿಗಳಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಹಲವು ಜಲವಿದ್ಯುತ್ ಯೋಜನೆಗಳು ಹಾನಿಗೊಳಗಾಗಿವೆ. 2013ರ ಕೇದಾರನಾಥ ಪ್ರವಾಹದಿಂದ ಕನಿಷ್ಠ ಮೂರು ಜಲವಿದ್ಯುತ್ ಯೋಜನೆಗಳು, 2021ರಲ್ಲಿ ಋಷಿಗಂಗಾ ಯೋಜನೆ, 2023ರಲ್ಲಿ ಸಿಕ್ಕಿಮ್‌ನ ತೀಸ್ತಾ-3 ಅಣೆಕಟ್ಟು ಪ್ರವಾಹದಿಂದ ಹಾನಿಗೊಳಗಾದವು. 2024ರಲ್ಲಿ ಹಠಾತ್ ಪ್ರವಾಹದಿಂದ 14 ಯೋಜನೆಗಳು ಹಾನಿಗೊಳಗಾದವು ಮತ್ತು ಹಿಮಾಚಲ ಪ್ರದೇಶದಲ್ಲಿ ಕನಿಷ್ಠ ಎಂಟು ಕಾರ್ಮಿಕರು ಮೃತಪಟ್ಟರು.
‘‘ಜಲವಿದ್ಯುತ್ ಯೋಜನೆ ನಿರ್ಮಾಣಕ್ಕೆ ಮೊದಲು ವಿಪತ್ತಿನ ಸಂಭವನೀಯತೆಯ ಮೌಲ್ಯಮಾಪನ ಮಾಡಬೇಕು. ಹವಾಮಾನ ಬದಲಾವಣೆಯಿಂದ ದೇಶದಲ್ಲಿ ಮುಂಗಾರು ಮಳೆ ಹೆಚ್ಚಬಹುದು. ಇದರಿಂದ ಉತ್ತರ ಮತ್ತು ಮಧ್ಯ ಭಾರತದಲ್ಲಿ ಭಾರೀ ಪ್ರವಾಹ ಮತ್ತು ಅಣೆಕಟ್ಟುಗಳಿಗೆ ಅಪಾಯ ಹೆಚ್ಚಲಿದೆ’’ ಎಂದು 46 ದೊಡ್ಡ ಜಲವಿದ್ಯುತ್ ಅಣೆಕಟ್ಟುಗಳ ಪರಿಶೀಲನೆ ನಡೆಸಿರುವ ಗಾಂಧಿ ನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಧ್ಯಯನ ಹೇಳುತ್ತದೆ. ‘ನಂಬಿಕಾರ್ಹ ಮುನ್ನೆಚ್ಚರಿಕೆ ಮತ್ತು ಮುನ್ಸೂಚನೆ ವ್ಯವಸ್ಥೆ ಇಲ್ಲದೆ ಇರುವುದರಿಂದ, ಜಲಾಶಯಗಳಿಗೆ ಒಳಹರಿವು ಹೆಚ್ಚಿದಾಗ ತಕ್ಷಣ ನೀರು ಹೊರಬಿಡಬೇಕಾಗುತ್ತದೆ. ಇದರಿಂದ ಕೆಳಗಿನ ಜಲಾನಯನ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಲಿದೆ’ ಎಂದು ಅಧ್ಯಯನ ಹೇಳಿದೆ.
2021ರಲ್ಲಿ ಅಣೆಕಟ್ಟು ಸುರಕ್ಷತಾ ಕಾಯ್ದೆ ಜಾರಿಗೆ ಬಂದಿದ್ದರೂ, ಈವರೆಗೆ ರಾಷ್ಟ್ರೀಯ ಸಮಿತಿಯನ್ನು ರಚಿಸಿಲ್ಲ ಎಂದು ಜನವರಿ 2025ರಲ್ಲಿ ಸುಪ್ರೀಂ ಕೋರ್ಟ್ ಆಘಾತ ವ್ಯಕ್ತ ಪಡಿಸಿತ್ತು. ‘‘ಅಣೆಕಟ್ಟುಗಳಲ್ಲಿ ಪ್ರವಾಹ ಮುನ್ಸೂಚನೆ ವ್ಯವಸ್ಥೆಯಿದೆಯೇ ಎಂದು ಗೊತ್ತಿಲ್ಲ. ಸಂಬಂಧಿಸಿದ ಸರಕಾರಿ ಸಂಸ್ಥೆಗಳು ನಿದ್ರಾವಸ್ಥೆಯಲ್ಲಿವೆ. ಜಲ ವಿದ್ಯುತ್ ಯೋಜನೆಗಳಿಗೆ ವಿಮೆ ಸೌಲಭ್ಯ ಒದಗಿಸುವ ಕಂಪೆನಿಗಳು ಈ ಬಗ್ಗೆ ಧ್ವನಿಯೆತ್ತಬೇಕು; ವಿವರಗಳನ್ನು ಬಹಿರಂಗಗೊಳಿಸುವುದಲ್ಲದೆ ಅನುಸರಣೆಯನ್ನು ಖಚಿತ ಪಡಿಸಿಕೊಳ್ಳಬೇಕು’’ ಎಂದು ನ್ಯಾಯಾಲಯ ಹೇಳಿತು.
ಅಧಿಕ ಮಳೆ ಇಲ್ಲವೇ ಅನಾವೃಷ್ಟಿಯಿಂದ ದೀರ್ಘಕಾಲೀನ ಹಾನಿ ಉಂಟಾಗಲಿದೆ. ಕಳೆದ ಎರಡು ವರ್ಷಗಳಲ್ಲಿ ದಾಖಲೆ ಅಧಿಕ ತಾಪಮಾನ ಮತ್ತು ಅನಿಯಮಿತ ಮಳೆಯಿಂದ ನಾಲ್ಕು ದಶಕಗಳಲ್ಲೇ ಅತ್ಯಂತ ಕಡಿಮೆ ಜಲವಿದ್ಯುತ್ ಉತ್ಪಾದನೆ ಆಗಿದೆ.
2019ರಲ್ಲಿ ಪ್ರವಾಹದಿಂದ ಛತ್ತೀಸ್‌ಗಡದ ಕೊರ್ಬಾದಲ್ಲಿರುವ ಡಿಪ್ಕಾ ಕಲ್ಲಿದ್ದಲು ಗಣಿಯಲ್ಲಿ ಒಂದು ತಿಂಗಳು ಗಣಿಗಾರಿಕೆ ಸ್ಥಗಿತಗೊಂಡಿತು. ಪೂರ್ವ ಮತ್ತು ಮಧ್ಯ ಭಾರತದ ಉಷ್ಣ ವಿದ್ಯುತ್ ಸ್ಥಾವರಗಳು ಇಂಧನ ಕೊರತೆ ಎದುರಿಸುತ್ತಿವೆ. ಕಲ್ಲಿದ್ದಲು ಮಳೆಯಲ್ಲಿ ನೆನೆದರೆ, ದೃಢತೆಯನ್ನು ಕಳೆದುಕೊಳ್ಳುತ್ತದೆ; ವಿದ್ಯುತ್ ಉತ್ಪಾದನೆ ಕಡಿಮೆ ಆಗುತ್ತದೆ. ‘ಶಾಖದ ಅಲೆಯಿಂದ ಕಲ್ಲಿದ್ದಲು ಬಿಸಿಯಾಗಿ, ಗುಣಮಟ್ಟ ಕಡಿಮೆಯಾಗುತ್ತದೆ. ಇದರಿಂದ ಪ್ರತೀ ಕಿಲೋಗ್ರಾಂ ಕಲ್ಲಿದ್ದಲಿನಿಂದ ಸುಮಾರು 2,500 ಕಿಲೋಗ್ರಾಂ ಜೌಲ್ ಶಾಖ ನಷ್ಟವಾಗುತ್ತದೆ’ ಎಂದು ರಾಷ್ಟ್ರೀಯ ಉಷ್ಣ ವಿದ್ಯುತ್ ಮಂಡಳಿಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಅಧ್ಯಯನ ಹೇಳಿದೆ.
ಉಷ್ಣ ವಿದ್ಯುತ್ ಸ್ಥಾವರಗಳ ಬಾಯ್ಲರಿನಲ್ಲಿ ಉತ್ಪತ್ತಿಯಾಗುವ ಹೆಚ್ಚುವರಿ ಶಾಖವನ್ನು ಹೀರಿಕೊಳ್ಳಲು ತಂಪು ನೀರು ಅಗತ್ಯವಿದೆ. ಹೆಚ್ಚು ಉಷ್ಣಾಂಶ ಇರುವ ದಿನಗಳಲ್ಲಿ ನೀರು ಬೆಚ್ಚಗಾಗಿ, ಸ್ಥಾವರಗಳ ಉತ್ಪಾದನೆ ಸಾಮರ್ಥ್ಯ ಕಡಿಮೆ ಆಗುತ್ತದೆ. ದೇಶದ ಶೇ.40 ರಷ್ಟು ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳು ನೀರಿನ ಕೊರತೆ ಇರುವ ಪ್ರದೇಶಗಳಲ್ಲಿವೆ. 2013 ಮತ್ತು 2016ರ ಅವಧಿಯಲ್ಲಿ 20 ದೊಡ್ಡ ಸ್ಥಾವರಗಳಲ್ಲಿ 14ನ್ನು ನೀರಿನ ಕೊರತೆಯಿಂದ ಮುಚ್ಚಬೇಕಾಯಿತು.
ಸೌರ/ಪವನ ಶಕ್ತಿ
ಸೌರ, ಪವನ ಶಕ್ತಿ ಉತ್ಪಾದನೆಯು ವಾತಾವರಣವನ್ನು ನೇರವಾಗಿ ಅವಲಂಬಿಸಿದೆ. ವಿಪರೀತ ಶಾಖದಿಂದ ಸೌರ ಫಲಕಗಳು ಹಾಳಾಗುವುದಲ್ಲದೆ, ವಿದ್ಯುತ್ ಉತ್ಪಾದನೆ ಕಡಿಮೆಯಾಗುತ್ತದೆ. ಸೌರ ಫಲಕಗಳು ನಿರ್ದಿಷ್ಟ ತಾಪಮಾನದಲ್ಲಿ(15ಲಿಸೆ.-35ಲಿಸೆ.) ಗರಿಷ್ಠ ದಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತವೆ. ಉಷ್ಣತೆ ಹೆಚ್ಚಿದಲ್ಲಿ ಫಲಕದ ದಕ್ಷತೆ ಶೇ.10ರಿಂದ ಶೇ. 25ರಷ್ಟು ಕಡಿಮೆ ಆಗುತ್ತದೆ.
ಶಾಖದ ಅಲೆಗಳು ಪವನ ಶಕ್ತಿ ಮೇಲೆ ವಿಪರಿಣಾಮ ಬೀರುತ್ತವೆ. 40ಲಿಸೆ.ಗಿಂತ ಹೆಚ್ಚಿನ ತಾಪಮಾನದಲ್ಲಿ ಗಾಳಿಯ ವೇಗ ಕಡಿಮೆ ಆಗುತ್ತದೆ. ಕಳೆದ 40 ವರ್ಷಗಳಲ್ಲಿ (1979-2019)ಪ್ರತಿ 10 ವರ್ಷಕ್ಕೆ ಗಾಳಿ ವೇಗ ಪ್ರತೀ ಗಂಟೆಗೆ 0.88 ಕಿ.ಮೀ. ಕಡಿಮೆಯಾಗಿದೆ ಎಂದು ಇಂಧನ, ಪರಿಸರ ಮತ್ತು ಜಲ ಮಂಡಳಿ(ಕೌನ್ಸಿಲ್ ಆನ್ ಎನರ್ಜಿ, ಎನ್ವಿರಾನ್‌ಮೆಂಟ್ ಮತ್ತು ವಾಟರ್, ಸಿಇಇಡಬ್ಲ್ಯು)ಅಧ್ಯಯನ ಹೇಳಿದೆ. ‘ಹವಾಮಾನ ಬದಲಾವಣೆಯಿಂದ ಹಿಂದೂ ಮಹಾಸಾಗರದ ಗಾಳಿಯ ವೇಗ ದುರ್ಬಲಗೊಂಡಿದೆ’ ಎಂದು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಅಧ್ಯಯನ ಇದನ್ನು ಸಮರ್ಥಿಸಿದೆ. ಪವನಶಕ್ತಿ ಯೋಜನೆಗಳಲ್ಲಿ ಶೇ.47ಕ್ಕಿಂತ ಹೆಚ್ಚು ಗುಜರಾತ್, ಮಹಾರಾಷ್ಟ್ರ ಮತ್ತು ರಾಜಸ್ಥಾನದಲ್ಲಿವೆ (ಡಿಸೆಂಬರ್ 31,2024ರ ಮಾಹಿತಿ). ಮಹಾರಾಷ್ಟ್ರದ ಶೇ. 82, ರಾಜಸ್ಥಾನದ ಶೇ.85 ಹಾಗೂ ತಮಿಳುನಾಡಿನ ಶೇ. 11ರಷ್ಟು ಸೌರ ಘಟಕಗಳು ವರ್ಷವೊಂದಕ್ಕೆ ಮೂರಕ್ಕಿಂತ ಹೆಚ್ಚು ಬಾರಿ ಶಾಖದ ಅಲೆಗಳಿಗೆ ಒಡ್ಡಿಕೊಂಡಿವೆ. ಈ ಘಟಕಗಳಿಗೆ ಇರುವ ಇನ್ನೊಂದು ಕುತ್ತು-ಬಿರುಗಾಳಿ-ಚಂಡಮಾರುತ.
ಉತ್ತರಾಖಂಡದ ಕಾಡುಗಳಲ್ಲಿ ತಾಪಮಾನ ಹೆಚ್ಚಳ/ಮಿಂಚಿನಿಂದ ಆರಂಭವಾಗುವ ಕಾಡ್ಗಿಚ್ಚುಗಳಿಂದ ಹೊಮ್ಮುವ ಏರೋ ಸಾಲ್‌ಗಳು ಸೌರಶಕ್ತಿ ಉತ್ಪಾದನೆಯನ್ನು ಕಡಿಮೆಗೊಳಿಸಿರುವುದು ನೈನಿತಾಲ್ ಮೂಲದ ಆರ್ಯಭಟ ರಿಸರ್ಚ್ ಇನ್‌ಸ್ಟಿಟ್ಯೂಟಿನ ಅಧ್ಯಯನದಿಂದ ಬೆಳಕಿಗೆ ಬಂದಿತು(2022). ಏರೋಸಾಲ್‌ಗಳು ಸೂರ್ಯನ ಬೆಳಕನ್ನು ಹೀರಿಕೊಳ್ಳುವುದರಿಂದ, ಸೌರ ಫಲಕಗಳ ಮೇಲೆ ಬೀಳುವ ಕಿರಣಗಳ ತೀವ್ರತೆ ಕಡಿಮೆ ಆಗುತ್ತದೆ.
ತಾಪಮಾನ ಹೆಚ್ಚಳದಿಂದ ಉತ್ತರಾಖಂಡದ ಒಣ ಕಾಡುಗಳಲ್ಲಿ ಕಾಡಿನ ಬೆಂಕಿ ಶೇ.60 ಹೆಚ್ಚು ಮತ್ತು ಈಶಾನ್ಯ ಭಾರತದ ಆರ್ದ್ರ ಕಾಡುಗಳಲ್ಲಿ ಶೇ.40ರಷ್ಟು ಕಡಿಮೆ ಆಗಬಹುದು ಎಂದು ದಿಲ್ಲಿ ಐಐಟಿಯ ಅಧ್ಯಯನ ಹೇಳಿದೆ.
ಪ್ರಸರಣ-ವಿತರಣೆ ವೈಫಲ್ಯ
ಹವಾಮಾನ ವೈಪರೀತ್ಯವು ವಿದ್ಯುತ್ ಪ್ರಸರಣ ಮತ್ತು ವಿತರಣೆ ವ್ಯವಸ್ಥೆ ಮೇಲೆ ವಿಪರಿಣಾಮ ಬೀರಲಿದೆ. ‘ತಾಪಮಾನ ಹೆಚ್ಚಳದಿಂದ ವಿದ್ಯುತ್ತಿಗೆ ಬೇಡಿಕೆ ಹೆಚ್ಚಲಿದೆ. ನಗರ ಪ್ರದೇಶದಲ್ಲಿ ಓವರ್‌ಲೋಡ್ ಮತ್ತು ಗ್ರಾಮೀಣ ಭಾಗಗಳಲ್ಲಿ ಮಳೆಗಾಲದಲ್ಲಿ ವಿದ್ಯುತ್ ವೈಫಲ್ಯ ಹೆಚ್ಚಲಿದೆ’ ಎಂದು ಪುಣೆ ಮೂಲದ ಪ್ರಯಾಸ್ ಎನರ್ಜಿ ಗ್ರೂಪ್ ಹೇಳಿದೆ. ತಾಪಮಾನ ಹೆಚ್ಚು ಇರುವಾಗ ತಂತಿ ಬಿಸಿಯಾಗಿ, ವಿದ್ಯುತ್ ಹರಿವು ಕಡಿಮೆಯಾಗುತ್ತದೆ.ತಂತಿ ಕಡಿದು ಬೀಳುವುದು ಇಲ್ಲವೇ ಶಾರ್ಟ್ ಸರ್ಕಿಟ್ ಆಗಬಹುದು. ಇದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ.
ನೆದರ್‌ಲ್ಯಾಂಡ್ಸ್‌ನ ಡೆಲ್ಫ್ಟ್ ತಾಂತ್ರಿಕ ವಿಶ್ವವಿದ್ಯಾನಿಲಯದ ಅಧ್ಯಯನದ ಪ್ರಕಾರ, ನಗರ ಪ್ರದೇಶಗಳಲ್ಲಿ ಮೇ-ಜುಲೈ ಅವಧಿಯಲ್ಲಿ ವಿದ್ಯುತ್ ಕಟಾವು ಹೆಚ್ಚಿದೆ; ಹವಾನಿಯಂತ್ರಣ, ಕೂಲರ್ ಮತ್ತು ರೆಫ್ರಿಜರೇಟರ್ ಬಳಕೆಯಿಂದ ವಿದ್ಯುತ್ತಿಗೆ ಬೇಡಿಕೆ ಹೆಚ್ಚಿ, ಲೋಡ್ ಶೆಡ್ಡಿಂಗ್ ಆಗುತ್ತಿದೆ.
ವಿತರಣೆ ಸಂಸ್ಥೆ(ಡಿಸ್ಕಾಂ)ಗಳು ನವೀನ, ಸುಧಾರಿತ ಕಂಡಕ್ಟರ್‌ಗಳ ಬಳಕೆ, ಭೂಮಿಯಡಿ ಕೇಬಲ್ ಅಳವಡಿಕೆ ಹಾಗೂ ಶಾಖನಿರೋಧಕ ಅಥವಾ ಪ್ರತಿಫಲಿಸುವ ಬಣ್ಣಗಳ ಲೇಪನದಿಂದ ತಾಪಮಾನದ ವಿಪರಿಣಾಮ ಕಡಿಮೆಗೊಳಿಸಲು ಪ್ರಯತ್ನಿಸುತ್ತಿವೆ. ಹುದುದ್ ಚಂಡಮಾರುತದ ನಂತರ ಆಂಧ್ರಪ್ರದೇಶ ಪೂರ್ವ ವಿದ್ಯುತ್ ವಿತರಣಾ ಕಂಪನಿ ಲಿ., ವಿಶ್ವ ಬ್ಯಾಂಕ್‌ನಿಂದ ಧನಸಹಾಯ ಪಡೆದು, ಭೂಗತ ಕೇಬಲ್ ಅಳವಡಿಕೆ ಮಾಡಿದೆ.
ಪರ್ಯಾಯ ಇಂಧನಗಳ ಬಳಕೆಯಿಂದ ನೆಟ್‌ವರ್ಕ್‌ಗಳ ಮೇಲಿನ ಲೋಡ್ ಕಡಿಮೆ ಮಾಡುವುದು, ಕೃಷಿ ಫೀಡರ್ ಮತ್ತು ವಸತಿ ಫೀಡರ್‌ಗಳನ್ನು ಪ್ರತ್ಯೇಕಿಸುವುದು ಮತ್ತು ಸ್ಥಳೀಯ ಸೌರಚಾಲಿತ ಕೃಷಿ ಫೀಡರ್ ಸ್ಥಾಪನೆ ಮೂಲಕ ನೀರು ಪೂರೈಸುವ ಪ್ರಯತ್ನಗಳು ನಡೆದಿವೆ. ಮಹಾರಾಷ್ಟ್ರದಲ್ಲಿ ಪ್ರಯಾಸ್ ಎನರ್ಜಿ ಗ್ರೂಪ್ ಸ್ಥಾಪಿಸಿರುವ 1 ಮೆಗಾವ್ಯಾಟ್ ಸಾಮರ್ಥ್ಯದ ಸೌರ ಸ್ಥಾವರಗಳು 350 ಐದು ಅಶ್ವಶಕ್ತಿ(ಹೆಚ್‌ಪಿ) ಪಂಪ್‌ಗಳನ್ನು ಬೆಂಬಲಿಸುತ್ತವೆ. ಕೃಷಿಗೆ ತಡರಾತ್ರಿ ಅಥವಾ ಮುಂಜಾನೆ ವಿದ್ಯುತ್ ನೀಡುವುದರಿಂದ, ರೈತರ ಜೀವಕ್ಕೆ ಹಾನಿಯಲ್ಲದೆ, ನೀರು ವ್ಯರ್ಥವಾಗಲಿದೆ.
ವಿದ್ಯುತ್ ವಿತರಣೆ-ಪ್ರಸರಣ ಜಾಲದಲ್ಲಿ ಹಲವು ಸುಧಾರಣೆಗಳಾಗಿವೆ. ನಗರ ಭಾರತದಲ್ಲಿ ಪ್ರಸರಣ ಜಾಲ ಹೆಚ್ಚು ಸ್ಥಿರವಾಗಿದೆ; ಸ್ಮಾರ್ಟ್ ಮೀಟರ್ ಬಳಕೆ ಹೆಚ್ಚಿದೆ; ಸ್ಮಾರ್ಟ್‌ಗ್ರಿಡ್ ಮೂಲಕ ವಿದ್ಯುತ್ ಪೂರೈಕೆಯ ಮೇಲ್ವಿಚಾರಣೆ, ಸೋರುವಿಕೆ-ಕಳವು ಕಡಿತ ಗೊಳಿಸುವ ಕೆಲಸ ನಡೆಯುತ್ತಿದೆ. ಮೇಲ್ಛಾವಣಿ ಸೌರ ಘಟಕಗಳ ಮೂಲಕ ವಿದ್ಯುತ್ ಉತ್ಪಾದನೆ ನಿರೀಕ್ಷಿತ ಮಟ್ಟ ಮುಟ್ಟಿಲ್ಲ. ಇಂಧನ ಮೂಲಗಳ ವೈವಿಧ್ಯೀಕರಣದಿಂದ ಅಪಾಯಗಳಿಗೆ ಹೊಂದಿಕೊಳ್ಳುವುದು ಮತ್ತು ಎಲ್ಲ ಇಂಧನ ಮೂಲಗಳ ಮಿಶ್ರಣದ ಮೂಲಕ ಅಪಾಯದ ಸಾಧ್ಯತೆ ಕಡಿಮೆ ಮಾಡಬಹುದು.
ಆದರೆ, ವಿದ್ಯುತ್ ಉತ್ಪಾದನೆ-ವಿತರಣೆ ವ್ಯವಸ್ಥೆಯನ್ನು ಹವಾಮಾನ ಬದಲಾವಣೆ ಸವಾಲಿಗೆ ಸನ್ನದ್ಧಗೊಳಿಸಲು ಇಷ್ಟು ಸಾಲುವುದಿಲ್ಲ. ಸ್ಕಾಟ್ಲೆಂಡ್‌ನ ಗ್ಲಾಸ್ಕೋದಲ್ಲಿ 2021ರಲ್ಲಿ ನಡೆದ 26ನೇ ಹವಾಮಾನ ಶೃಂಗದಲ್ಲಿ ಪ್ರಧಾನಿ ಪಂಚಾಮೃತ್ ಗುರಿಯನ್ನು ಘೋಷಿಸಿದರು. ಆದರೆ, 2025ರ ಹವಾಮಾನ ಬದಲಾವಣೆ ಸಾಧನೆ ಸೂಚ್ಯಂಕದಲ್ಲಿ ದೇಶ 10ನೇ ಸ್ಥಾನಕ್ಕೆ ಕುಸಿಯಿತು. ಸ್ಪಷ್ಟ ಕಾರ್ಯಸೂಚಿಯಿಲ್ಲದೆ ಬರಿದೇ ಘೋಷಣೆಗಳಲ್ಲಿ ಕಾಲ ತಳ್ಳುತ್ತಿರುವುದರಿಂದ, ಹವಾಮಾನ ಸಂಕಷ್ಟದಿಂದ ಜನರ ಬವಣೆ ಮುಂದುವರಿಯಲಿದೆ.