ಮೇಲ್ಮನೆ ಚಿಂತಕರ ಚಾವಡಿಯಾಗಿ ಉಳಿಯಲಿ

ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಪ್ರಾತಿನಿಧ್ಯ ಎನ್ನುವುದು ಆಯಾ ಸಮುದಾಯಗಳಲ್ಲಿನ ಪ್ರತಿಭಾವಂತರನ್ನು ಹಿನ್ನೆಲೆಗೆ ತಳ್ಳಿ ಡಮ್ಮಿಗಳನ್ನು ಮುನ್ನೆಲೆಗೆ ತರಲಾಗುತ್ತಿದೆ. ಸಾಮಾಜಿಕ ಪ್ರಾತಿನಿಧ್ಯವನ್ನು ಅಕ್ಷರಶಃ ಅಣಕಿಸಲಾಗುತ್ತಿದೆ. ಕರ್ನಾಟಕ ವಿಧಾನ ಪರಿಷತ್ತು ನಿಜವಾದ ಅರ್ಥದಲ್ಲಿ ಚಿಂತಕರ ಚಾವಡಿ ಎನಿಸಿಕೊಳ್ಳಬೇಕೆಂದರೆ ಎಲ್ಲ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯಲ್ಲಿ ಕಾಳಜಿ ವಹಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಾದರೂ ಹಿರಿಯ ಸಾಹಿತಿಗಳು, ಕಲಾವಿದರು, ಸಂಗೀತಗಾರರು, ಪತ್ರಕರ್ತರು, ಶಿಕ್ಷಣ ತಜ್ಞರು ವಿಧಾನ ಪರಿಷತ್ತನ್ನು ಪ್ರವೇಶಿಸುವಂತಾಗಲಿ.;

Update: 2025-02-08 12:03 IST
ಮೇಲ್ಮನೆ ಚಿಂತಕರ ಚಾವಡಿಯಾಗಿ ಉಳಿಯಲಿ
  • whatsapp icon

ಕರ್ನಾಟಕ ವಿಧಾನ ಪರಿಷತ್ತು: ಚಿಂತಕರ ಚಾವಡಿ ಎಂಬ ಖ್ಯಾತಿ ಪಡೆದಿದೆ. ಅದನ್ನು ಹಿರಿಯರ ಮನೆ, ಬುದ್ಧಿವಂತರ ಸದನ ಎಂದೂ ಭಾವಿಸಿದ್ದಾರೆ. ಕರ್ನಾಟಕ ವಿಧಾನ ಸಭೆಯ ಸದಸ್ಯರು ಪ್ರತ್ಯಕ್ಷ ಮತದಾನದ ಮೂಲಕ ಆಯ್ಕೆಯಾಗಿ ಬಂದರೆ, ವಿಧಾನ ಪರಿಷತ್ತಿನ ಸದಸ್ಯರು ಪರೋಕ್ಷ ಮತದಾನ ಮತ್ತು ನಾಮನಿರ್ದೇಶನದ ಮೂಲಕ ಸದನ ಪ್ರವೇಶಿಸುತ್ತಾರೆ.

ಕರ್ನಾಟಕ ವಿಧಾನ ಪರಿಷತ್ತು ಮತ್ತು ಕರ್ನಾಟಕ ವಿಧಾನಸಭೆ ಎಂಬ ಹೆಸರಿನ ಉಭಯ ಸದನಗಳು ಸಂಸದೀಯ ಪ್ರಜಾಪ್ರಭುತ್ವದ ಅತ್ಯುನ್ನತ ಸಂಸ್ಥೆಗಳು. ಕಾಯ್ದೆ ರೂಪಿಸುವುದು ಸೇರಿದಂತೆ ಕರ್ನಾಟಕ ಸರಕಾರದ ಸಮಸ್ತ ಕಾರ್ಯ ವೈಖರಿಯ ಸ್ವರೂಪ ಮತ್ತು ದಿಕ್ಕು ದೆಸೆ ನಿರ್ಧರಿಸುವ ಅತ್ಯುನ್ನತ ವ್ಯವಸ್ಥೆ ಇದಾಗಿದೆ. ಮುಖ್ಯಮಂತ್ರಿ, ಮಂತ್ರಿಗಳು ಮತ್ತು ಆಡಳಿತ ವ್ಯವಸ್ಥೆಯನ್ನು ಒಳಗೊಂಡ ಸರಕಾರವನ್ನು ಹಾದಿ ತಪ್ಪದಂತೆ ನೋಡಿಕೊಳ್ಳುವ ಹೊಣೆಗಾರಿಕೆಯು ಉಭಯ ಸದನಗಳಿಗೆ ಸೇರಿದೆ.

ಪ್ರತೀ ಐದು ವರ್ಷಕ್ಕೊಮ್ಮೆ ನಡೆಯುವ ಸಾರ್ವತ್ರಿಕ ಮತದಾನದ ಮೂಲಕ, ನಿರ್ದಿಷ್ಟ ಪಡಿಸಿದ ವಿಧಾನಸಭಾ ಕ್ಷೇತ್ರಗಳಲ್ಲಿ ಆಯಾ ರಾಜಕೀಯ ಪಕ್ಷಗಳ ಟಿಕೆಟ್ ಮೇಲೆ ಅಥವಾ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಬಹುಮತದ ಗೆಲುವು ಸಾಧಿಸುವ ವ್ಯಕ್ತಿ ಜನಪ್ರತಿನಿಧಿ-ಶಾಸಕ ಎನಿಸಿಕೊಂಡು ವಿಧಾನಸಭೆಯ ಸದಸ್ಯನಾಗುತ್ತಾನೆ. ವಿಧಾನ ಸಭೆಯ ಸದಸ್ಯರ ಅವಧಿ ಐದು ವರ್ಷಗಳಿಗೆ ಮುಕ್ತಾಯವಾಗುತ್ತದೆ. ವಿಶೇಷ ಸಂದರ್ಭದಲ್ಲಿ ಅದಕ್ಕೂ ಮುಂಚೆ ವಿಸರ್ಜನೆ ಮಾಡಬಹುದು. ಆದರೆ ಕರ್ನಾಟಕ ವಿಧಾನಪರಿಷತ್ತು ಖಾಯಂ ಆಗಿರುತ್ತದೆ. ಅದರ ಸದಸ್ಯರ ಅವಧಿ ಆರು ವರ್ಷಗಳಾಗಿದೆ. ಪ್ರತೀ ಎರಡು ವರ್ಷಗಳಿಗೊಮ್ಮೆ ಸದನದ ಒಂದು ಮೂರಂಶ ಸದಸ್ಯರು ನಿವೃತ್ತಿಯಾಗುತ್ತಾರೆ. ಪರೋಕ್ಷ ಮತದಾನ ಅಥವಾ ನಾಮನಿರ್ದೇಶನದ ಮೂಲಕ ಅಷ್ಟೇ ಸಂಖ್ಯೆಯ ಸದಸ್ಯರು ಒಳಗೆ ಬರುತ್ತಾರೆ. ಈ ಸದನ ವಿಸರ್ಜನೆಯಾಗುವುದೇ ಇಲ್ಲ. ವಿಧಾನ ಪರಿಷತ್ತು: ಕರ್ನಾಟಕ ಸೇರಿದಂತೆ ಕೇವಲ ಆರು ರಾಜ್ಯಗಳಲ್ಲಿ ಅಸ್ತಿತ್ವದಲ್ಲಿ ಇದೆ. ಕೇಂದ್ರದಲ್ಲಿನ ಸಂಸತ್ತು: ಲೋಕಸಭೆ ಮತ್ತು ರಾಜ್ಯಸಭೆ ಎಂಬ ಎರಡು ಸದನಗಳು ಪಡೆದಿರುವಂತೆ ರಾಜ್ಯಗಳಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್ತುಗಳು ಇವೆ. ರಾಜ್ಯ ಸಭೆಯನ್ನು ಹಿರಿಯರ ಮನೆ, ಮೇಲ್ಮನೆ ಎಂದು ಗೌರವ ಭಾವದಲ್ಲಿ ಸಂಬೋಧಿಸುತ್ತಾರೆ. ಅಷ್ಟು ಮಾತ್ರವಲ್ಲ ರಾಜ್ಯಸಭೆ ಕಡ್ಡಾಯವಾಗಿ ಸಂಸತ್ತಿನ ಭಾಗವಾಗಿದೆ. ಆದರೆ ರಾಜ್ಯಗಳು ವಿಧಾನಪರಿಷತ್ತನ್ನು ಹೊಂದುವುದು ಕಡ್ಡಾಯವಾಗಿಸಿಲ್ಲ.

ಕರ್ನಾಟಕ ರಾಜ್ಯದಲ್ಲಿ ವಿಧಾನಪರಿಷತ್ತು 118 ವರ್ಷಗಳಿಂದ ಅಸ್ತಿತ್ವದಲ್ಲಿ ಇದೆ. ಸದಸ್ಯರ ಸಂಖ್ಯೆ ಮತ್ತು ಅದರ ಸ್ವರೂಪ ಕಾಲ ಕಾಲಕ್ಕೆ ಬದಲಾಗಿದೆ. ಮೈಸೂರಿನ ಪ್ರಗತಿಪರ ದೊರೆ 1907ರಲ್ಲಿ ಈ ಸದನವನ್ನು ಅಸ್ತಿತ್ವಕ್ಕೆ ಬರುವಂತೆ ನೋಡಿಕೊಂಡರು. ಜನತೆಯ ಪರವಾಗಿ ಮಹಾರಾಜರಿಗೆ ಸಲಹೆಗಳನ್ನು ನೀಡಲು ಅಧಿಕಾರೇತರ ಸದಸ್ಯರನ್ನು ನಾಮನಿರ್ದೇಶನ ಮಾಡಿಕೊಳ್ಳುತ್ತಿದ್ದರು. ಹಿರಿಯರು, ಅನುಭವಿಗಳು, ಚಿಂತಕರು ಇರುವಂತೆ ನಿಗಾ ವಹಿಸಲಾಗುತ್ತಿತ್ತು. ಆರಂಭದಲ್ಲಿ ಸದಸ್ಯರ ಸಂಖ್ಯೆ ಹತ್ತರಿಂದ ಹದಿನೈದಕ್ಕೆ ಸೀಮಿತಗೊಳಿಸಲಾಗಿತ್ತು. 1914ರಲ್ಲಿ ಕಾಯ್ದೆ ರೂಪಿಸಿ ಆ ಸಂಖ್ಯೆಯನ್ನು ಹದಿನೈದು-ಇಪ್ಪತ್ತಕ್ಕೆ ನಿಗದಿಗೊಳಿಸಿದರು. 1919ರಲ್ಲಿ ಆ ಸಂಖ್ಯೆಯನ್ನು ಕಾಯ್ದೆಯ ಮೂಲಕ 30ಕ್ಕೆ ಹೆಚ್ಚಿಸಿದರು. ಮತ್ತೆ 1923ರಲ್ಲಿ ಕಾಯ್ದೆ ರೂಪಿಸಿ ಸದಸ್ಯರ ಸಂಖ್ಯಾಬಲ 50 ಇರುವಂತೆ ಮಾಡಿದರು. 1956ರಲ್ಲಿ ರಾಜ್ಯ ಪುನರ್ ವಿಂಗಡಣಾ ಕಾಯ್ದೆ ಜಾರಿಗೆ ಬರುತ್ತಿದ್ದಂತೆ ಮೈಸೂರು ವಿಧಾನ ಪರಿಷತ್ತನ್ನು ಪುನರ್ ರಚಿಸಿದರು. ಆಗ ಆ ಸದನದ ಸಂಖ್ಯಾಬಲ 63ಕ್ಕೆ ಹೆಚ್ಚಿಸಿದರು. 1973ರಲ್ಲಿ ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣ ಮಾಡಿದ್ದರಿಂದ ಸಹಜವಾಗಿಯೇ ಮೇಲ್ಮನೆಗೆ ಕರ್ನಾಟಕ ವಿಧಾನ ಪರಿಷತ್ತು ಎಂದು ಕರೆಯತೊಡಗಿದರು. 1987ರವರೆಗೆ ಕರ್ನಾಟಕ ವಿಧಾನಪರಿಷತ್ತಿನ ಸಂಖ್ಯಾಬಲ 63ಕ್ಕೆ ಸೀಮಿತಗೊಳಿಸಲಾಗಿತ್ತು. 18 ಆಗಸ್ಟ್ 1986ರಂದು ಕರ್ನಾಟಕ ವಿಧಾನಸಭೆಯಲ್ಲಿ ನಿರ್ಣಯವೊಂದನ್ನು ಪಾಸು ಮಾಡಿದರು. ಮುಂದೆ ಅದು ಲೋಕಸಭೆಯ ಅನುಮೋದನೆಯನ್ನು ಪಡೆದುಕೊಂಡು ಕಾನೂನು ಆಯಿತು. ಆ ನಿರ್ಣಯದಂತೆ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರ ಸಂಖ್ಯೆ 75ಕ್ಕೆ ಹೆಚ್ಚಾಯಿತು. 8 ಸೆಪ್ಟಂಬರ್ 1987ರಿಂದ ಇಲ್ಲಿಯವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರ ಸಂಖ್ಯೆ 75ಕ್ಕೆ ಸೀಮಿತಗೊಳಿಸಲಾಗಿದೆ. ಕರ್ನಾಟಕ ವಿಧಾನ ಪರಿಷತ್ತಿನ 75 ಸದಸ್ಯರನ್ನು ಸಾರ್ವಜನಿಕ ಬದುಕಿನ ವಿಶೇಷ ವಲಯಗಳಿಂದ ಪರೋಕ್ಷ ಮತದಾನದ ಮೂಲಕ ಅಥವಾ ನಾಮ ನಿರ್ದೇಶನದ ಆಯ್ಕೆಯಾಗಿ ಬರುವಂತೆ ನೋಡಿಕೊಳ್ಳಲಾಗಿದೆ. ನೇರ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸದ ಅಪರೂಪದ ಬುದ್ಧಿವಂತ ವಲಯದ ಮತ್ತು ವಿವಿಧ ಸಾಮಾಜಿಕ ವಲಯದ ಪ್ರತಿನಿಧಿಗಳು ಈ ಸದನದಲ್ಲಿ ಇರಬೇಕೆಂಬುದು ಮೂಲ ಆಶಯ. 75 ಸದಸ್ಯರನ್ನು ಒಂದು ಕ್ರಮದಲ್ಲಿ ಆಯ್ಕೆ ಮಾಡಲಾಗುತ್ತದೆ. 75 ಸದಸ್ಯರ ಪೈಕಿ ಇಪ್ಪತ್ತೈದು ಸದಸ್ಯರು ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳ ಮೂಲಕ ಚುನಾಯಿತರಾಗಿ ಬರುತ್ತಾರೆ. ಕರ್ನಾಟಕದ ವಿವಿಧ ಭಾಗಗಳ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ಗೆ ಜನರಿಂದ ಚುನಾಯಿತರಾದ ಸದಸ್ಯರು ಈ ಇಪ್ಪತ್ತೈದು ಜನರನ್ನು ಚುನಾವಣೆ ಮೂಲಕ ಆಯ್ಕೆ ಮಾಡಿ ಕಳುಹಿಸುತ್ತಾರೆ. ಆರಂಭದಲ್ಲಿ ರಾಜಕೀಯ ಪಕ್ಷಗಳು ವಿಧಾನಸಭಾ ಚುನಾವಣೆ ಎದುರಿಸಲಾಗದ ವಿವಿಧ ಸಾಮಾಜಿಕ ವಲಯಕ್ಕೆ ಸೇರಿದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ, ಅದರಲ್ಲೂ ಅಪಾರ ರಾಜಕೀಯ ಪ್ರಜ್ಞೆ ಇರುವವರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುತ್ತಿದ್ದವು. ಕಳೆದ ಎರಡು ದಶಕಗಳಿಂದ ಎಲ್ಲ ರಾಜಕೀಯ ಪಕ್ಷಗಳು ಥೈಲಿ ಬಲವುಳ್ಳ ಅಭ್ಯರ್ಥಿಗಳನ್ನು ಹುಡುಕಿ ಕಣಕ್ಕಿಳಿಸುತ್ತವೆ. ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರಿಗೆ ಯಾರು ಹೆಚ್ಚು ಹಣ ನೀಡುತ್ತಾರೋ ಅವರು ಮೇಲ್ಮನೆ ಪ್ರವೇಶಿಸುತ್ತಾರೆ. ಅಂದರೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳ ಮೂಲಕ ಆಯ್ಕೆಯಾಗಿ ಬರುವವರಲ್ಲಿ ಬಹುತೇಕರು ಕರ್ನಾಟಕ ವಿಧಾನ ಪರಿಷತ್ತಿನ ಮೂಲ ಆಶಯಕ್ಕೆ ವಿರುದ್ಧವಾಗಿ ಇರುವವರೇ ಆಯ್ಕೆಯಾಗಿ ಬರುತ್ತಾರೆ ಎಂದಾಯಿತು. ಇನ್ನು ಇಪ್ಪತ್ತೈದು ಸದಸ್ಯರನ್ನು ವಿಧಾನಸಭಾ ಸದಸ್ಯರು ಮತದಾನ ಮಾಡಿ ಆಯ್ಕೆ ಮಾಡಿ ಕಳುಹಿಸುತ್ತಾರೆ. ಇಲ್ಲಿ ರಾಜಕೀಯ ಪಕ್ಷಗಳ ನಿರ್ಧಾರವೇ ಅಂತಿಮ. ವಿಪ್ ನೀಡಿದರೆ ಶಾಸಕರು ಪಕ್ಷ ಸೂಚಿಸಿದವರಿಗೆ ಮಾತ್ರ ಮತ ಚಲಾಯಿಸುತ್ತಾರೆ. ರಾಜಕೀಯ ಪಕ್ಷಗಳಿಗೆ, ಎಲ್ಲ ಸಾಮಾಜಿಕ ವಲಯದ ಬುದ್ಧಿವಂತರು ಈ ಸದನದ ಸದಸ್ಯರಾಗಿರಬೇಕೆಂಬ ಇರಾದೆ ಇದ್ದರೆ ತಮ್ಮದೇ ಪಕ್ಷದ ಬಲವಿಲ್ಲದ ಸಮುದಾಯಗಳ ಪ್ರತಿಭಾವಂತರಿಗೆ ಅವಕಾಶ ಕಲ್ಪಿಸಬೇಕು. ಬಲವಿಲ್ಲದ ಸಮುದಾಯಗಳ ಪ್ರತಿಭಾವಂತರು ಜನಬಲ, ಹಣಬಲ ಇಲ್ಲ ಎಂಬ ಕಾರಣಕ್ಕೆ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಳ್ಳುತ್ತಾರೆ. ಅಂತಹ ವಂಚಿತ ಪ್ರತಿಭಾವಂತರಿಗೆ ಮೇಲ್ಮನೆಯಲ್ಲಿ ಅವಕಾಶ ಕಲ್ಪಿಸುವುದು ಅರ್ಥ ಪೂರ್ಣ ಪ್ರಜಾಪ್ರಭುತ್ವದ ಆದ್ಯ ಕರ್ತವ್ಯ. ಆದರೆ ಎಲ್ಲ ರಾಜಕೀಯ ಪಕ್ಷಗಳು ಇಲ್ಲಿಯೂ ಜಾತಿ ಬಲ, ಹಣ ಬಲ ಇದ್ದವರಿಗೆ ಮಣೆ ಹಾಕುತ್ತವೆ. ವಿಧಾನಸಭೆಯಲ್ಲಿ ಸೋತ ಪ್ರಬಲರಿಗೆ, ಜನಸಮುದಾಯಗಳಲ್ಲಿ ವಿಶ್ವಾಸಾರ್ಹತೆ ಕಳೆದುಕೊಂಡವರಿಗೆ ಮರು ಹುಟ್ಟು ನೀಡಲು ವಿಧಾನಪರಿಷತ್ತಿನ ಸದಸ್ಯರನ್ನಾಗಿಸುತ್ತವೆ. ಬಿಜೆಪಿ ನಾಯಕ ಸಿ.ಟಿ. ರವಿಯವರನ್ನು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಮತದಾರ ತಿರಸ್ಕರಿಸಿದ್ದರು. ಅವರ ಕಾರ್ಯ ವೈಖರಿಗೆ ಬೇಸತ್ತೇ ತಿರಸ್ಕರಿಸಿದ್ದಾರೆ. ಅವರನ್ನು ಮೇಲ್ಮನೆ ಸದಸ್ಯರನ್ನಾಗಿಸಿದರೆ ಮತದಾರರ ಭಾವನೆಗಳನ್ನು ಅಪಮಾನಿಸಿದಂತೆ. ಬಿಜೆಪಿಯಲ್ಲಿನ ಪ್ರತಿಭಾವಂತ, ನಿಷ್ಠಾವಂತ ಕಾರ್ಯಕರ್ತರ ಅವಕಾಶಗಳನ್ನು ಕಿತ್ತುಕೊಂಡಂತೆ. ಈ ಮಾತು ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಧೋರಣೆಗೂ ಅನ್ವಯಿಸುತ್ತದೆ. ಎಂ.ಆರ್. ಸೀತಾರಾಮ್ ಹಣ ಬಲ ಉಳ್ಳ ಪ್ರಭಾವಿ ಅಭ್ಯರ್ಥಿ. ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಬರುತ್ತಿದ್ದರು. ಜನಸೇವೆಯಲ್ಲಿ ವಿಫಲರಾಗಿದ್ದರಿಂದ ಮತದಾರರು ಅವರನ್ನು ತಿರಸ್ಕರಿಸಿದ್ದಾರೆ. ಸೋತ ಸೀತಾರಾಮ್ ಅವರಿಗೆ ಮೇಲ್ಮನೆಯಲ್ಲಿ ಅವಕಾಶ ಕಲ್ಪಿಸುವುದು ಎಷ್ಟು ಸರಿ? ಕಾಂಗ್ರೆಸ್ ಪಕ್ಷಕ್ಕಾಗಿ ಹಗಲಿರುಳು ದುಡಿಯುವ, ಆ ಪಕ್ಷದ ತತ್ವ ಸಿದ್ಧಾಂತಗಳನ್ನು ಸದಾ ಸಮರ್ಥಿಸುವ, ವಂಚಿತ ಸಮುದಾಯಗಳ ಪ್ರತಿಭಾವಂತರು ಅನೇಕರಿದ್ದಾರೆ. ಕಾಂಗ್ರೆಸ್ ಪಕ್ಷದ ವಕ್ತಾರಿಕೆಯನ್ನು ಅತ್ಯಂತ ನಿಷ್ಠೆಯಿಂದ ಮಾಡುವ ರಮೇಶ್ ಬಾಬು ತರಹದ ಉತ್ಸಾಹಿ ತರುಣರನ್ನು ಮೇಲ್ಮನೆಗೆ ಕಳುಹಿಸಿದರೆ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಗೌರವ ನೀಡಿದಂತೆ.

ಆಯಾ ಪಕ್ಷಗಳ ಹೈಕಮಾಂಡ್ ನಿರ್ಧರಿಸುವ ಈ ಇಪ್ಪತ್ತೈದು ಸ್ಥಾನಗಳು ಒಂದೋ ಎರಡೋ ಹೊರತು ಪಡಿಸಿ; ಹಣ ಬಲದ ಕುಳಗಳ ಪಾಲಾಗುತ್ತಿವೆ. ಇನ್ನು ಹದಿನಾಲ್ಕು ಸ್ಥಾನಗಳು ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ಮೂಲಕ ಭರ್ತಿ ಮಾಡಲಾಗುತ್ತದೆ. ನೋಂದಾಯಿತ ಶಿಕ್ಷಕ ಮತ್ತು ಪದವೀಧರ ಮತದಾರರು ಮತ ಚಲಾಯಿಸುವ ಮೂಲಕ ಹದಿನಾಲ್ಕು ಸದಸ್ಯರನ್ನು ಗೆಲ್ಲಿಸಿ ಕಳಿಸುತ್ತಾರೆ. ಇತ್ತೀಚಿನ ವರ್ಷಗಳವರೆಗೆ ಶಿಕ್ಷಕರು ಮತ್ತು ಪದವೀಧರರು, ಪ್ರಾಮಾಣಿಕರು-ಪ್ರತಿಭಾವಂತರನ್ನು ಗೆಲ್ಲಿಸಿ ಕಳುಹಿಸುತ್ತಿದ್ದರು. ಬಸವರಾಜ ಹೊರಟ್ಟಿ, ಎಂ.ಆರ್. ತಂಗಾ ತರಹದ ಸಂಸದೀಯ ಪಟುಗಳು ಸದನದ ಗೌರವ ಹೆಚ್ಚಿಸಿದ ನಿದರ್ಶನ ಕರ್ನಾಟಕ ವಿಧಾನ ಪರಿಷತ್ತಿನ ಇತಿಹಾಸದಲ್ಲಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಶಿಕ್ಷಕರು ಮತ್ತು ಪದವೀಧರ ಮತದಾರರನ್ನು ಭ್ರಷ್ಟಗೊಳಿಸಿ ವಾಮಮಾರ್ಗದಿಂದ ಗೆಲ್ಲುವವರ ಸಂಖ್ಯೆ ಹೆಚ್ಚಾಗುತ್ತಿದೆ. ಶಿಕ್ಷಣ ವ್ಯಾಪಾರಿಗಳು, ಉದ್ಯಮಿಗಳು, ಭ್ರಷ್ಟ ಅಧಿಕಾರಿಗಳು ಹಣ ಬಲದ ಮೂಲಕ ಕರ್ನಾಟಕ ವಿಧಾನಪರಿಷತ್ತು ಪ್ರವೇಶಿಸುತ್ತಿರುವುದು ಅತ್ಯಂತ ದುರದೃಷ್ಟಕರ ಸಂಗತಿ. ರಾಜಕೀಯ ಪಕ್ಷಗಳು, ಕರ್ನಾಟಕ ವಿಧಾನಪರಿಷತ್ತಿನ ಘನತೆ ಗೌರವಕ್ಕೆ ಧಕ್ಕೆ ತರುವ ವ್ಯಕ್ತಿಗಳಿಗೆ ಅವಕಾಶ ಕೊಡಲೇಬಾರದು. ಇನ್ನುಳಿದ ಹನ್ನೊಂದು ಸ್ಥಾನಗಳನ್ನು ರಾಜ್ಯಪಾಲರು ಮುಖ್ಯಮಂತ್ರಿಗಳ ಶಿಫಾರಸ್ನ ಮೇರೆಗೆ ನಾಮ ನಿರ್ದೇಶನ ಮಾಡುತ್ತಾರೆ. ಸಾಹಿತ್ಯ, ಸಂಗೀತ, ಕಲೆ, ಶಿಕ್ಷಣ, ಸಹಕಾರ ಕ್ಷೇತ್ರದ ಸಾಧಕರನ್ನು ಗುರುತಿಸಿ ನಾಮ ನಿರ್ದೇಶನ ಮಾಡುವ ಪರಿಪಾಠ ಇತ್ತು. ಇತ್ತೀಚಿನ ವರ್ಷಗಳಲ್ಲಿ ಆ ಕ್ಷೇತ್ರಗಳ ನಾಮ ನಿರ್ದೇಶನಗಳು ಪುಢಾರಿಗಳ, ಹಣ ಬಲ ಉಳ್ಳವರ ಅಥವಾ ಸೋತ ಸಕ್ರಿಯ ರಾಜಕಾರಣಿಗಳ ಪಾಲಾಗುತ್ತಿವೆ.

ಸದ್ಯ ಈ ಕೋಟಾದಲ್ಲಿ ಚಲನಚಿತ್ರ ನಟಿ ಉಮಾಶ್ರೀ, ಉದ್ಯಮಿ ಎಂ.ಆರ್. ಸೀತಾರಾಮ್, ನಿವೃತ್ತ ಅಧಿಕಾರಿ ಸುಧಾಮ ದಾಸ್, ಕ್ರಿಕೆಟ್ ಮರೆತು ರಾಜಕಾರಣಿಯಾದ ಪ್ರಕಾಶ್ ರಾಠೋಡ್, ವ್ಯಾಪಾರಸ್ಥ ಯು.ಬಿ. ವೆಂಕಟೇಶ್, ಬಿಜೆಪಿ ಕಾರ್ಯಕರ್ತೆ ಭಾರತಿ ಶೆಟ್ಟಿ, ಮಾಜಿ ಮಂತ್ರಿ ಎಚ್. ವಿಶ್ವನಾಥ್, ಸಿದ್ದಿ ಸಮುದಾಯದ ಸಾಮಾಜಿಕ ಕಾರ್ಯಕರ್ತ ಶಾಂತರಾಮ ಸಿದ್ದಿ, ಅರ್ಥ ಶಾಸ್ತ್ರದ ಪ್ರಾಧ್ಯಾಪಕ ಪ್ರೊ. ಸಾಬಣ್ಣ ತಳವಾರ ಸದಸ್ಯರಾಗಿದ್ದಾರೆ.

ಕರ್ನಾಟಕ ವಿಧಾನ ಪರಿಷತ್ತಿನ ಇತಿಹಾಸದಲ್ಲಿ ಶ್ರೇಷ್ಠ ಸಾಹಿತಿ, ಕಲಾವಿದರು, ಸಂಗೀತಗಾರರು, ಶಿಕ್ಷಣ ತಜ್ಞರು ಸದಸ್ಯರಾಗಿ ನಾಮ ನಿರ್ದೇಶನಗೊಳ್ಳುತ್ತಿದ್ದರು. ಹಿರಿಯ ಜನಪದ ತಜ್ಞ ಎಚ್.ಎಲ್. ನಾಗೇಗೌಡರು, ಕ್ರಾಂತಿಕಾರಿ ಕಾದಂಬರಿಕಾರ ಬಸವರಾಜ ಕಟ್ಟೀಮನಿ, ಖ್ಯಾತ ಹಿಂದೂಸ್ತಾನಿ ಸಂಗೀತಗಾರರಾದ ಡಾ. ಗಂಗೂಬಾಯಿ ಹಾನಗಲ್, ಡಾ. ಮಲ್ಲಿಕಾರ್ಜುನ ಮನ್ಸೂರ್, ಶಿಕ್ಷಣ ತಜ್ಞ ಡಾ. ಎಚ್. ನರಸಿಂಹಯ್ಯ, ಹಿರಿಯ ಪತ್ರಕರ್ತರಾದ ಡಾ. ಪಾಟೀಲ್ ಪುಟ್ಟಪ್ಪ, ಖಾದ್ರಿ ಶಾಮಣ್ಣ, ಪಿ. ರಾಮಯ್ಯ, ಡಾ. ಸಿದ್ದಲಿಂಗಯ್ಯ, ಡಾ. ಎಲ್. ಹನುಮಂತಯ್ಯ, ಜ್ಞಾನ ಪೀಠ ಪುರಸ್ಕೃತ ಕವಿ ಡಾ. ಚಂದ್ರಶೇಖರ ಕಂಬಾರ ಅವರು ಈ ಸದನದ ಸದಸ್ಯರಾಗಿ ಕಾರ್ಯ ನಿರ್ವಹಿಸಿ ಘನತೆ ಗೌರವ ಹೆಚ್ಚಿಸಿದ್ದಾರೆ. ಸಂಸತ್ತಿನ ಮೇಲ್ಮನೆಯಾದ ರಾಜ್ಯ ಸಭೆಯಲ್ಲಿ ಈಗಲೂ ಸಾಹಿತಿ, ಕಲಾವಿದರು, ಶಿಕ್ಷಣ ತಜ್ಞರ ಪ್ರಾತಿನಿಧ್ಯ ಇರುವುದು ಎದ್ದು ಕಾಣುತ್ತದೆ. ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್, ಮೇರು ಗಾಯಕಿ, ಭಾರತ ರತ್ನ ಲತಾ ಮಂಗೇಶ್ಕರ್, ಹಿರಿಯ ಚಿತ್ರ ಸಾಹಿತಿ ಜಾವೇದ್ ಅಖ್ತರ್, ಚಲನಚಿತ್ರ ನಟಿಯರಾದ ರೇಖಾ, ಶಬಾನಾ ಆಜ್ಮಿ ಮುಂತಾದವರು ಕ್ರಿಯಾಶೀಲವಾಗಿ ಪಾಲ್ಗೊಂಡು ಸದನದ ಶೋಭೆ ಹೆಚ್ಚಿಸಿದ್ದರು.

ಕರ್ನಾಟಕ ವಿಧಾನ ಪರಿಷತ್ತಿಗೆ ಪ್ರತಿಭಾವಂತ ಸಾಹಿತಿ, ಕಲಾವಿದರು, ಸಂಗೀತಗಾರರು, ಪತ್ರಕರ್ತರು ನೇಮಕಗೊಂಡು ಅದೆಷ್ಟೋ ವರ್ಷಗಳು ಕಳೆದಿವೆ. ಚಲನಚಿತ್ರ ರಂಗದ, ಸಂಗೀತ ಕ್ಷೇತ್ರದ ಹಿರಿಯರನ್ನು, ಪ್ರತಿಭಾವಂತರನ್ನು ಗುರುತಿಸಿ ವಿಧಾನಪರಿಷತ್ತಿಗೆ ನಾಮಕರಣ ಮಾಡುವ ಪರಿಪಾಠಕ್ಕೆ ಸಂಪೂರ್ಣ ತಿಲಾಂಜಲಿ ನೀಡಲಾಗಿದೆ. ಮೊದಲ ಬಾರಿಗೆ ನಟಿ ಉಮಾಶ್ರೀ ಅವರನ್ನು ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡಿದಾಗ ಹೆಮ್ಮೆ ಎನಿಸಿತ್ತು. ಆದರೆ ಪಕ್ಷ ಸೇರಿ ಚುನಾವಣೆ ಎದುರಿಸಿ ಗೆದ್ದು ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ ಮೇಲೆ ಅವರು ಪಕ್ಷ ರಾಜಕಾರಣದ ಭಾಗವಾಗಿದ್ದರು. ಅಂಥವರನ್ನು ಮತ್ತೆ ಅದೇ ಕೋಟಾದಲ್ಲಿ ವಿಧಾನಪರಿಷತ್ತಿಗೆ ಕಳುಹಿಸುವುದು ತಾಂತ್ರಿಕವಾಗಿ ಸರಿ ಇರಬಹುದು. ಆದರೆ ನೈತಿಕವಾಗಿ ಸರಿಯಾದ ಕ್ರಮವಲ್ಲ. ಕಲೆ, ಸಾಹಿತ್ಯ, ಸಂಗೀತ, ಮಾಧ್ಯಮ, ಸಹಕಾರ, ಶಿಕ್ಷಣ ಕ್ಷೇತ್ರದ ನಿಜ ಸಾಧಕರನ್ನು ಗುರುತಿಸಿ ನಾಮನಿರ್ದೇಶನ ಮಾಡುವುದು ಮೇಲ್ಮನೆಯ ಪಾವಿತ್ರ್ಯ ಹೆಚ್ಚಿಸಿದಂತೆ. ವಿಧಾನಸಭೆಯ ಸದಸ್ಯರಿಂದ ಚುನಾಯಿಸಲ್ಪಡುವ 25 ಸದಸ್ಯರು ಆಯಾ ರಾಜಕೀಯ ಪಕ್ಷಗಳ ವಿವೇಚನಾ ಕೋಟಾ ಇದ್ದಂತೆ. ಪಕ್ಷಕ್ಕಾಗಿ ದುಡಿಯುವ ಪ್ರತಿಭಾವಂತರನ್ನು, ಸುದೀರ್ಘ ಅವಧಿಗೆ ದುಡಿದ ವಿವಿಧ ಸಾಮಾಜಿಕ ವಲಯದ ಅವಕಾಶ ವಂಚಿತ ಬುದ್ಧಿವಂತರನ್ನು ಗುರುತಿಸಿ ಆಯ್ಕೆ ಮಾಡಬಹುದು. ಯಾವ ರಾಜಕೀಯ ಪಕ್ಷದ ನಾಯಕರೂ ಆ ನಿಟ್ಟಿನಲ್ಲಿ ಗಂಭೀರವಾಗಿ ಆಲೋಚಿಸುವುದಿಲ್ಲ. ಹಾಗಾಗಿ ಮೇಲ್ಮನೆ ಎಂಬುದು ಸಿರಿವಂತರ ರಕ್ಷಾ ತಾಣವಾಗಿ ಪರಿಣಮಿಸಿದೆ. ಸಾಹಿತಿ, ಕಲಾವಿದರು, ಸಂಗೀತಗಾರರು, ಪತ್ರಕರ್ತರು, ಶಿಕ್ಷಣ ತಜ್ಞರ ಕೋಟಾದಲ್ಲಿ ಹನ್ನೊಂದು ಜನರನ್ನು ಅರ್ಹರನ್ನೇ ನಾಮನಿರ್ದೇಶನ ಮಾಡಿದರೂ ವಿಧಾನಪರಿಷತ್ತು ನಿಜವಾದ ಅರ್ಥದಲ್ಲಿ ಹಿರಿಯರ ಮನೆ ಎನಿಸಿಕೊಳ್ಳುವುದಿಲ್ಲ. ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಮತ್ತು ವಿಧಾನಸಭಾ ಸದಸ್ಯರಿಂದ ಆಯ್ಕೆಯಾಗುವ ಸದಸ್ಯರ ನೇಮಕದಲ್ಲೂ ಎಲ್ಲ ರಾಜಕೀಯ ಪಕ್ಷಗಳು ಸಂವಿಧಾನದ ಆಶಯಕ್ಕೆ ತಕ್ಕ ಹಾಗೆ ನಡೆದುಕೊಳ್ಳಬೇಕು. ಶಿಕ್ಷಕರ ಮತ್ತು ಪದವೀಧರ ಮತ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯಲ್ಲಿ ಅರ್ಹರಿಗೆ ಅವಕಾಶ ಕಲ್ಪಿಸಬೇಕು. ಆಗ ಮಾತ್ರ ವಿಧಾನ ಪರಿಷತ್ತು ನಿಜವಾದ ಅರ್ಥದಲ್ಲಿ ಹಿರಿಯರ ಮನೆ, ಚಿಂತಕರ ಚಾವಡಿ ಎನಿಸಿಕೊಳ್ಳುತ್ತದೆ. ವಿಧಾನಪರಿಷತ್ತಿನ ಇತ್ತೀಚಿನ ಚರ್ಚೆಗಳ ಗುಣಮಟ್ಟ ಏನನ್ನು ತೋರಿಸುತ್ತದೆ...? ಸಭಾಪತಿ, ಉಪ ಸಭಾಪತಿ ಎಷ್ಟೇ ಒಳ್ಳೆಯವರಿದ್ದರೂ ಸದನದ ಸದಸ್ಯರು ಗುಣಮಟ್ಟದ ಚರ್ಚೆಯಲ್ಲಿ ಆಸಕ್ತರಾಗದಿದ್ದರೆ ಮೇಲ್ಮನೆ ಮೇಲ್ಪಂಕ್ತಿ ಹಾಕುವುದಿಲ್ಲ. ಕಾನೂನು ಕಾಯ್ದೆ ರೂಪಿಸುವಲ್ಲೂ ಮೇಲ್ಮನೆ ಕೆಳಮನೆಗಿಂತ ಭಿನ್ನ ಎನಿಸಿಕೊಳ್ಳುವುದಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ ಏಳು ದಶಕಗಳೇ ಗತಿಸಿವೆ. ಇಲ್ಲಿಯವರೆಗೆ ಹಲವಾರು ಸಣ್ಣ ಪುಟ್ಟ ಸಮುದಾಯಗಳು ಚುನಾವಣೆಯಲ್ಲಿ ಗೆದ್ದು ಶಾಸನ ಸಭೆಯ ಪ್ರವೇಶ ಪಡೆದಿಲ್ಲ.. ಅಂತಹ ಸಮುದಾಯಗಳ ಪ್ರತಿಭಾವಂತರನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ಮುಖ್ಯವಾಹಿನಿಯಲ್ಲಿ ಗುರುತಿಸುವಂತಾಗಬೇಕು. ಅದು ಸಾಧ್ಯವಾಗಬೇಕೆಂದರೆ ಅಂತಹ ಅವಕಾಶ ವಂಚಿತ ಸಮುದಾಯದ ಪ್ರತಿಭಾವಂತರನ್ನು ವಿಧಾನಪರಿಷತ್ತಿನ ಸದಸ್ಯರಾನ್ನಾಗಿಸಬೇಕು. ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಪ್ರಾತಿನಿಧ್ಯ ಎನ್ನುವುದು ಆಯಾ ಸಮುದಾಯಗಳಲ್ಲಿನ ಪ್ರತಿಭಾವಂತರನ್ನು ಹಿನ್ನೆಲೆಗೆ ತಳ್ಳಿ ಡಮ್ಮಿಗಳನ್ನು ಮುನ್ನೆಲೆಗೆ ತರಲಾಗುತ್ತಿದೆ. ಸಾಮಾಜಿಕ ಪ್ರಾತಿನಿಧ್ಯವನ್ನು ಅಕ್ಷರಶಃ ಅಣಕಿಸಲಾಗುತ್ತಿದೆ. ಕರ್ನಾಟಕ ವಿಧಾನ ಪರಿಷತ್ತು ನಿಜವಾದ ಅರ್ಥದಲ್ಲಿ ಚಿಂತಕರ ಚಾವಡಿ ಎನಿಸಿಕೊಳ್ಳಬೇಕೆಂದರೆ ಎಲ್ಲ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯಲ್ಲಿ ಕಾಳಜಿ ವಹಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಾದರೂ ಹಿರಿಯ ಸಾಹಿತಿಗಳು, ಕಲಾವಿದರು, ಸಂಗೀತಗಾರರು, ಪತ್ರಕರ್ತರು, ಶಿಕ್ಷಣ ತಜ್ಞರು ವಿಧಾನ ಪರಿಷತ್ತನ್ನು ಪ್ರವೇಶಿಸುವಂತಾಗಲಿ. ಸಿದ್ದರಾಮಯ್ಯ ಅವರು ಎಂಭತ್ತರ ದಶಕದ ವಿಧಾನಪರಿಷತ್ತನ್ನು ಹತ್ತಿರದಿಂದ ನೋಡಿದ್ದಾರೆ. ಅದು ಹಣವಂತರ ಅಡಗು ತಾಣವಾಗುತ್ತಿರುವುದನ್ನು ತಡೆಯಬೇಕು. ಇದು ಎಲ್ಲ ರಾಜಕೀಯ ಪಕ್ಷಗಳ ಮುಖ್ಯ ಕಾಳಜಿಯಾಗಬೇಕು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News