ಪಾನಿಪೂರಿ ತಿನ್ನಲು ಹಿಂದಿ ಕಲಿಯಬೇಕೇ?

ನಮ್ಮದು ಬಹುಭಾಷೆ, ಸಂಸ್ಕೃತಿ ಹಾಗೂ ಧರ್ಮಗಳ ದೇಶ. ತ್ರಿಭಾಷಾ ಸೂತ್ರ ದೇಶಿ ಭಾಷೆಗಳ ಮೇಲೆ ನಡೆದ ಹಲ್ಲೆ; ಇಂಥ ಹೇರಿಕೆ ಪ್ರಜಾಸತ್ತಾತ್ಮಕವಲ್ಲ ಹಾಗೂ ಸಂವಿಧಾನವಿರೋಧಿ. ಸಂವಿಧಾನದ ರಕ್ಷಣೆ, ಪ್ರಜಾಪ್ರಭುತ್ವದ ಉಳಿವು ಮತ್ತು ಒಕ್ಕೂಟ ವ್ಯವಸ್ಥೆ ಮೇಲೆ ಪ್ರತಿನಿತ್ಯ ಹಲ್ಲೆ ನಡೆಯುತ್ತಿರುವ ಸಂದರ್ಭದಲ್ಲಿ ಭಾಷೆ-ಶಿಕ್ಷಣ ನೀತಿಗಳು ರಾಜಕೀಯಕ್ಕೆ ಹೊರತಾದುದು ಎಂದು ಭಾವಿಸಬಾರದು. ತಮಿಳುನಾಡಿನ ಜೊತೆಗೆ ಕರ್ನಾಟಕ ಸರಕಾರ ಕೈಜೋಡಿಸಬೇಕಿದೆ.
ತಮಿಳುನಾಡು ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಮತ್ತು ಪಿಎಂಶ್ರೀ (ಪ್ರಧಾನಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ) ಯೋಜನೆಗಳಿಗೆ ಅನುಮತಿಸದ ಕಾರಣ ಒಕ್ಕೂಟ ಸರಕಾರವು ಸರ್ವ ಶಿಕ್ಷಾ ಅಭಿಯಾನದ ಅನು ದಾನವನ್ನು ತಡೆಹಿಡಿದಿದೆ. ಇದು ಡಿಎಂಕೆ ಸರಕಾರ ಹಾಗೂ ಎನ್‌ಡಿಎ-3 ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ. ಎನ್‌ಡಿಎ ಸರಕಾರ ತ್ರಿಭಾಷಾ ಸೂತ್ರದ ಮೂಲಕ ಹಿಂದಿಯನ್ನು ಹೇರುತ್ತಿದೆ ಎಂದು ತಮಿಳುನಾಡು ದೂರಿದೆ. ಲೋಕಸಭೆಯಲ್ಲೂ ಈ ಸಂಬಂಧ ಟೀಕೆ-ಪ್ರತಿಟೀಕೆ ನಡೆದಿದೆ. ಶಿಕ್ಷಣ ಸಚಿವ ಪ್ರಧಾನ್ ಬಳಸಿದ ಪದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಡಿಎಂಕೆ ಸಂಸದರು ಕಲಾಪಕ್ಕೆ ಅಡ್ಡಿಯುಂಟು ಮಾಡಿದ್ದಾರೆ.
ತಮಿಳುನಾಡಿನಲ್ಲಿ ತ್ರಿಭಾಷಾ ಸೂತ್ರಕ್ಕೆ ಪ್ರತಿರೋಧಕ್ಕೆ ದೀರ್ಘ ಇತಿಹಾಸವಿದೆ. ತಮಿಳುನಾಡಿನಲ್ಲಿ ಡಿಸೆಂಬರ್ 1937ರಲ್ಲಿ ಮೊದಲ ಹಿಂದಿ ವಿರೋಧಿ ಚಳವಳಿ ನಡೆಯಿತು. ಮದ್ರಾಸ್ ಪ್ರೆಸಿಡೆನ್ಸಿಯ ಮುಖ್ಯಮಂತ್ರಿ ಸಿ.ರಾಜಗೋಪಾಲಾಚಾರಿ ಅವರು ಶಾಲೆಗಳಲ್ಲಿ ಹಿಂದಿಯನ್ನು ಕಡ್ಡಾಯಗೊಳಿಸಿದ್ದನ್ನು ಪ್ರತಿಭಟಿಸಿ ಜನ ರಸ್ತೆಗಿಳಿದರು. ಲೇಖಕ ಮರಿಮಲೈ ಅಡಿಗಳ್ ಹಾಗೂ ದ್ರಾವಿಡ ಮುಖಂಡ ಇವಿಆರ್ ಪೆರಿಯಾರ್ ಮತ್ತಿತರರು ಚಳವಳಿಯ ಮುಂದಾಳತ್ವ ವಹಿಸಿದ್ದರು. 1,271 ಜನ ಬಂಧಿಸಲ್ಪಟ್ಟರು. ಫೆಬ್ರವರಿ 1940ರಲ್ಲಿ ಗವರ್ನರ್ ಲಾರ್ಡ್ ಎರ್‌ಸ್ಕೈನ್ ಆದೇಶ ಹಿಂಪಡೆದರು. 1948ರಲ್ಲಿ ಒಮಂದೂರ್ ರಾಮಸ್ವಾಮಿ ರೆಡ್ಡಿಯಾರ್ ಅವರು ಹಿಂದಿ ಕಡ್ಡಾಯಗೊಳಿಸಿದ್ದನ್ನು ವಿರೋಧಿಸಿ, ಮತ್ತೊಮ್ಮೆ ಪ್ರತಿಭಟನೆ ನಡೆಯಿತು. ಅಧಿಕೃತ ಭಾಷಾ ಕಾಯ್ದೆ 1963ನ್ನು ವಿರೋಧಿಸಿ, 1964-65ರಲ್ಲಿ 3ನೇ ಚಳವಳಿ ನಡೆಯಿತು. ಆರಕ್ಕೂ ಹೆಚ್ಚು ಮಂದಿ ಬೆಂಕಿ ಹಚ್ಚಿಕೊಂಡು ಆತ್ಮಾಹುತಿ ಮಾಡಿಕೊಂಡರು; ಇಬ್ಬರು ಪೊಲೀಸರು ಸೇರಿದಂತೆ 60 ಮಂದಿ ಜೀವ ಕಳೆದು ಕೊಂಡರು. ಕೇಂದ್ರ ಸರಕಾರವು ಇಂಗ್ಲಿಷ್‌ನ್ನು ಆಡಳಿತ ಭಾಷೆಯಾಗಿ ಮುಂದುವರಿಸಲು ಕಾನೂನು ತಿದ್ದುಪಡಿ ಮಾಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ನಿಂತಿತು.
ಮೊದಲ ಕಾಂಗ್ರೆಸೇತರ ಮುಖ್ಯಮಂತ್ರಿ ಸಿ.ಎನ್. ಅಣ್ಣಾದುರೈ ಅವರು ಜನವರಿ 23,1968ರಂದು ದ್ವಿಭಾಷಾ ಸೂತ್ರವನ್ನು ಮಂಡಿಸಿದರು. 3 ದಿನಗಳ ಚರ್ಚೆ ಬಳಿಕ ಸದನವು ತ್ರಿಭಾಷಾ ಸೂತ್ರವನ್ನು ಕಿತ್ತೊಗೆಯಿತು. ‘‘ಹಿಂದಿ ಕಲಿಯುವ ಅಗತ್ಯವಿಲ್ಲ; ಜಗತ್ತಿನೊಂದಿಗೆ ಸಂವಹಿಸಲು ಇಂಗ್ಲಿಷ್ ಸಾಕು’’ ಎಂದು ಅವರು ಹೇಳಿದರು. ಅಂದಿನಿಂದ ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಚಾಲ್ತಿಯಲ್ಲಿದ್ದು, ಸಿಬಿಎಸ್‌ಸಿ ಶಾಲೆಗಳಲ್ಲಿ ಮಾತ್ರ ಹಿಂದಿ ಕಲಿಸಲಾಗುತ್ತಿದೆ. 1968ರ ಅಧಿಕೃತ ಭಾಷಾ ಗೊತ್ತುವಳಿಯು ತ್ರಿಭಾಷಾ ಸೂತ್ರಕ್ಕೆ ದಾರಿ ಮಾಡಿಕೊಟ್ಟಿತು. ಪಕ್ಷ ಯಾವುದೇ ಇರಲಿ, ತಮಿಳುನಾಡಿನ ರಾಜಕಾರಣಿಗಳು ಹಿಂದಿಯನ್ನು ಭಾಷೆಯಾಗಿ ಕಲಿಯಲು ಒಪ್ಪುವುದಿಲ್ಲ. ಕೇಂದ್ರ ಸರಕಾರ 2020ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯನ್ನು ಜಾರಿಗೊಳಿಸಿತು. ಆದರೆ, ಆಡಳಿತದಲ್ಲಿದ್ದ ಎಐಎಡಿಎಂಕೆ ಸರಕಾರ, ತಾನು ಈ ಕಾರ್ಯನೀತಿಯನ್ನು ಅಂಗೀಕರಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿತು. ಎನ್‌ಇಪಿ ‘‘ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ಶಿಕ್ಷಣ ಮಾಧ್ಯಮವು ಮನೆಮಾತು, ಮಾತೃಭಾಷೆ ಇಲ್ಲವೇ ಪ್ರಾದೇಶಿಕ ಭಾಷೆ ಆಗಿರಬೇಕು’’ ಎಂದು ಹೇಳುತ್ತದೆ. ಇದೊಂದು ಅನಿರ್ದಿಷ್ಟ/ಅಸ್ಪಷ್ಟ ಹೇಳಿಕೆ. ‘‘3 ಭಾಷೆಗಳಲ್ಲಿ ಯಾವುದನ್ನು ಕಲಿಯಬೇಕು ಎಂಬುದನ್ನು ವಿದ್ಯಾರ್ಥಿಗಳ ಆಯ್ಕೆಗೆ ಬಿಡಲಾಗಿದೆ. ಮೂರನೇ ಭಾಷೆ ಯಾವುದೇ ಭಾರತೀಯ ಭಾಷೆ ಆಗಿರಬಹುದು. ಕನಿಷ್ಠ 2 ಪ್ರಾದೇಶಿಕ ಭಾಷೆ ಇರಬೇಕು’’ ಎಂಬ ಸೂತ್ರ ಬಳಸಿಕೊಂಡು, ಹಿಂದಿ ಮತ್ತು ಸಂಸ್ಕೃತದ ಹೇರಿಕೆ ಆಗುತ್ತಿದೆ.
ಎನ್‌ಇಪಿ ಹೇರಿಕೆ
ಕರ್ನಾಟಕದ ಕಾಂಗ್ರೆಸ್ ಸರಕಾರ ಎನ್‌ಇಪಿಯನ್ನು ವಿರೋಧಿಸಿದೆ. ಆದರೆ, ಹಿಂದಿನ ಬಿಜೆಪಿ ಸರಕಾರ ಈ ಕಾರ್ಯನೀತಿಯನ್ನು ಅನುಷ್ಠಾನಗೊಳಿಸಿತ್ತು. ತಮಿಳುನಾಡಿನಲ್ಲಿ ಯಾರೂ ತ್ರಿಭಾಷಾ ಸೂತ್ರದ ಪರ ಉಸಿರೆತ್ತುವುದಿಲ್ಲ. ಇದಲ್ಲದೆ, ಅನುವರ್ತಿ ಪಟ್ಟಿಯಲ್ಲಿರುವ ಶಿಕ್ಷಣವನ್ನು ಎನ್‌ಇಪಿ ಮೂಲಕ ಕೈವಶ ಮಾಡಿಕೊಳ್ಳಲು ಕೇಂದ್ರ ಮುಂದಾಗಿದೆ; ಎನ್‌ಇಪಿ ಪ್ರಕಾರ ಪದವಿ ಕೋರ್ಸ್ ಅವಧಿ ನಾಲ್ಕು ವರ್ಷ. ಇದರಿಂದ ವಿದ್ಯಾರ್ಥಿಗಳು ಶಿಕ್ಷಣವನ್ನು ತೊರೆಯುತ್ತಾರೆ; ಎನ್‌ಇಪಿ ದುರ್ಬಲ ಸಮುದಾಯಗಳಿಗೆ ವಿರುದ್ಧವಾಗಿದೆ ಎನ್ನುವುದು ತಮಿಳುನಾಡು ವಾದ.
* ಎನ್‌ಇಪಿಯಲ್ಲಿ 3, 5 ಮತ್ತು 8ನೇ ತರಗತಿಯಲ್ಲಿ ಪರೀಕ್ಷೆ ನಡೆಸಬೇಕಾಗುತ್ತದೆ. ಇದರಿಂದ ಮಕ್ಕಳು ಪ್ರಾಥಮಿಕ ಹಂತದಲ್ಲೇ ಶಾಲೆಯನ್ನು ತೊರೆಯುತ್ತಾರೆ ಎಂದು ತಮಿಳುನಾಡು ವಾದಿಸುತ್ತಿದೆ.
* ಖಾಸಗಿ ಶಾಲೆಗಳ ಮಕ್ಕಳು ಹಣ ತೆತ್ತು, ಪೂರಕ ಕಲಿಕೆ(ಮನೆಪಾಠ-ಕೋಚಿಂಗ್) ಮಾಡುತ್ತಾರೆ; ಆದರೆ, ಸರಕಾರಿ ಶಾಲೆಗಳ ಮಕ್ಕಳಿಗೆ ಈ ವೆಚ್ಚವನ್ನು ಭರಿಸುವ ಸಾಮರ್ಥ್ಯ ಇರುವುದಿಲ್ಲ. ಸರಕಾರಿ ಶಾಲೆ ಮಕ್ಕಳು ಉದ್ಯೋಗ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು 3 ಭಾಷೆ ಕಲಿಯುವ ಅಗತ್ಯವಿದೆಯೇ?
* ಎನ್‌ಇಪಿ ಪ್ರಕಾರ, ಮೂರು ಭಾಷೆಗಳ ಕಲಿಕೆಯು ವಿದ್ಯಾರ್ಥಿಗಳ ಸಂಜ್ಞಾನಾತ್ಮಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ; ಉದ್ಯೋಗ ಅರ್ಹತೆ ಹೆಚ್ಚಿಸುತ್ತದೆ ಹಾಗೂ ರಾಷ್ಟ್ರೀಯ ಭಾವೈಕ್ಯವನ್ನು ಉತ್ತೇಜಿಸುತ್ತದೆ. ಜ್ಞಾನ ಗಳಿಕೆಗೆ ಮತ್ತು ಸಂವಹನಕ್ಕೆ ಭಾಷೆ ಅಗತ್ಯ ಸಾಧನ. ಆದರೆ, ಕಟ್ಟುಜಾಣ್ಮೆ(ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಯಂಥ ತಂತ್ರಜ್ಞಾನದಿಂದ ಜ್ಞಾನ ಗಳಿಕೆಗೆ ಭಾಷೆ ಬೇಕೇ ಬೇಕು ಎಂದು ಖಡಾಖಂಡಿತವಾಗಿ ಹೇಳಲು ಆಗದು. ನೀವು ಯಾವ ಭಾಷೆಯಲ್ಲಿ ಪ್ರಶ್ನೆ ಕೇಳಿದರೂ, ಗೂಗಲ್‌ನ ಜೆಮಿನಿ ಉತ್ತರ ಕೊಡುತ್ತದೆ. ಕಾಲಕ್ರಮೇಣ ಎಐ ತಂತ್ರಜ್ಞಾನ ಅಗ್ಗ ಆಗುತ್ತದೆ ಮತ್ತು ಇನ್ನಷ್ಟು ಉತ್ತಮಗೊಳ್ಳುತ್ತದೆ. ತಂತ್ರಜ್ಞಾನದಿಂದ ಜ್ಞಾನಗಳಿಕೆ ಶೀಘ್ರ ಹಾಗೂ ಸುಲಭವಾಗುತ್ತಿದೆ. ಭಾಷಾ ಕೌಶಲ ಮತ್ತು ಸಂಜ್ಞಾನಾತ್ಮಕ ಸಾಮರ್ಥ್ಯದ ನಡುವೆ ಸಂಬಂಧವಿದೆ; ಆದರೆ, ಹೆಚ್ಚು ಭಾಷೆ ಕಲಿತಲ್ಲಿ ಈ ಸಾಮರ್ಥ್ಯ ಹೆಚ್ಚುತ್ತದೆ ಎಂಬುದಕ್ಕೆ ಪುರಾವೆಯಿಲ್ಲ. ಮಗುವಿನ ಶಿಕ್ಷಣದ ಬುನಾದಿ ಮಾತೃಭಾಷೆಯಲ್ಲಿ ಇದ್ದರೆ, ಹೆಚ್ಚುವರಿ ಭಾಷೆಗಳ ಕಲಿಕೆ ಸುಲಭ. ಮೂರನೇ ಭಾಷೆಯ ಕಲಿಕೆಯಿಂದ ಆ ಭಾಷಿಕ ಸಮುದಾಯದೊಟ್ಟಿಗೆ ಸಂವಹನ ಸಾಧ್ಯವಾಗುತ್ತದೆ; ಅಷ್ಟೇ. ಅಂಥ ಕಲಿಕೆಯು ಶಿಕ್ಷಣದ ವಿವಿಧ ಹಂತದಲ್ಲೇ ಆಗಬೇಕು ಎಂದೇನಿಲ್ಲ; ಉದ್ಯೋಗಕ್ಕಾಗಿ ಬೇರೆ ರಾಜ್ಯಗಳಿಗೆ ಹೋದಾಗ ಸ್ಥಳೀಯ ಭಾಷೆಯನ್ನು ಕಲಿಯಬೇಕಾಗುತ್ತದೆ; ಕಲಿಯುತ್ತಾರೆ. ಬದುಕು ಕಟ್ಟಿಕೊಳ್ಳಲು ಅದು ಅಗತ್ಯ.
* ದೇಶದಲ್ಲಿ ಪ್ರಾಥಮಿಕ ಶಿಕ್ಷಣದ ಪರಿಸ್ಥಿತಿ ತೀರಾ ಕೆಟ್ಟದ್ದಾಗಿದೆ ಎಂದು ಏಸರ್ ಸಮೀಕ್ಷೆ 2024(ಆನ್ಯುಯಲ್ ಸ್ಟೇಟಸ್ ಆಫ್‌ಎಜುಕೇಷನ್ ರಿಪೋರ್ಟ್)ಹೇಳಿದೆ. ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಕಳಪೆಯಾಗಿದ್ದಲ್ಲಿ, ಅದು ಮಾಧ್ಯಮಿಕ ಹಾಗೂ ಹೈಯರ್ ಸೆಕೆಂಡರಿ ಶಿಕ್ಷಣದಲ್ಲೂ ಮುಂದುವರಿಯುತ್ತದೆ. ಬೋಧನೆಯ ಗುಣಮಟ್ಟ ಹೆಚ್ಚಳದ ಮೂಲಕ ಕಲಿಕೆಯಲ್ಲಿ ಪ್ರಗತಿ ಸಾಧಿಸಬೇಕೇ ಹೊರತು ಮಕ್ಕಳ ಮೇಲೆ ಇನ್ನೊಂದು ಭಾಷೆಯನ್ನು ಹೇರುವ ಮೂಲಕ ಅಲ್ಲ. ಶಿಕ್ಷಕರು ನಿಗದಿ ಪಡಿಸಿದ ಪಠ್ಯಕ್ರಮವನ್ನು ಮುಗಿಸಲು ಪರದಾಡುತ್ತಿದ್ದಾರೆ. ಶಿಕ್ಷಣವು ಕುತೂಹಲ, ವಿಮರ್ಶಾತ್ಮಕ ಚಿಂತನೆ ಮತ್ತು ಸೃಜನಶೀಲತೆಯನ್ನು ಬೆಳೆಸಬೇಕು: ಇದು 21ನೇ ಶತಮಾನದ ಅಗತ್ಯ. ಮೂರನೇ ಭಾಷೆಯ ಬದಲು ಪಠ್ಯಕ್ರಮದಲ್ಲಿ ಹೊಸ ವಿಷಯಗಳ ಸೇರ್ಪಡೆ-ವೈವಿಧ್ಯೀಕರಣ ಆಗಬೇಕಿದೆ.
* ಈಗಾಗಲೇ ಸರಕಾರಿ ಶಾಲೆಗಳು ಮೂಲಸೌಕರ್ಯದ ಕೊರತೆಯಿಂದ ಬಳಲುತ್ತಿವೆ; ಅನುದಾನ ಕೊರತೆಯಿಂದ ಅಗತ್ಯವಿರುವಷ್ಟು ಶಿಕ್ಷಕರ ನೇಮಕ ಆಗುತ್ತಿಲ್ಲ. ಇಂಥ ಸನ್ನಿವೇಶದಲ್ಲಿ ಮೂರನೇ ಭಾಷೆ ಕಡ್ಡಾಯಗೊಳಿಸಿದರೆ, ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕಾಗುತ್ತದೆ. ಸರಕಾರಗಳು ಶಿಕ್ಷಣ ಕ್ಷೇತ್ರಕ್ಕೆ ನೀಡುವ ಅನುದಾನದಲ್ಲಿ ಹೆಚ್ಚಿನ ಪಾಲು ವೇತನ-ಪಿಂಚಣಿಗೆ ಹೋಗುತ್ತದೆ. 3ನೇ ಭಾಷೆ ಶಿಕ್ಷಕರ ನೇಮಕದಿಂದ ಮೂಲಸೌಲಭ್ಯಕ್ಕೆ ಹಣದ ಕೊರತೆ ಇನ್ನಷ್ಟು ಹೆಚ್ಚಲಿದೆ.
ತ್ರಿಭಾಷಾ ಸೂತ್ರವೆಂಬ ಕುಣಿಕೆ
1948-49ರಲ್ಲಿ ರಾಧಾಕೃಷ್ಣನ್ ಆಯೋಗವು ಮುಂದಿಟ್ಟ ಸೂತ್ರವನ್ನು ಕೊಠಾರಿ ಆಯೋಗ ಅನುಮೋದಿಸಿತು. 1968ರಲ್ಲಿ ನಡೆದ ರಾಜಿಸಂಧಾನದಲ್ಲಿ ‘ಹಿಂದಿ ಭಾಷಿಕ ರಾಜ್ಯಗಳಲ್ಲಿ ಹಿಂದಿ, ಇಂಗ್ಲಿಷ್ ಮತ್ತು ಆಧುನಿಕ ಭಾರತೀಯ ಭಾಷೆ(ದಕ್ಷಿಣ ಭಾರತದ ಭಾಷೆಯೊಂದನ್ನು ಕಲಿಸುವುದು ಉತ್ತಮ) ಮತ್ತು ಹಿಂದಿ ಭಾಷಿಕವಲ್ಲದ ರಾಜ್ಯಗಳಲ್ಲಿ ಹಿಂದಿ, ಇಂಗ್ಲಿಷ್ ಮತ್ತು ಆಯಾ ರಾಜ್ಯದ ಭಾಷೆಯನ್ನು ಕಲಿಸುವುದು’ ಎಂಬ ಒಪ್ಪಂದಕ್ಕೆ ಬರಲಾಯಿತು. 1960ರ ಒಂದನೇ ಮತ್ತು 1980ರ ಎರಡನೇ ಶಿಕ್ಷಣ ನೀತಿಯಲ್ಲಿ ಈ ಸೂತ್ರವನ್ನು ಅಳವಡಿಸಿಕೊಳ್ಳಲಾಯಿತು. 2005ರ ಎನ್‌ಸಿಇಆರ್‌ಟಿಯ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು, ‘ತ್ರಿಭಾಷಾ ಸೂತ್ರ ಅಂತಿಮ ಗುರಿಯಲ್ಲ ಮತ್ತು ಭಾಷೆ ಕಲಿಕೆಗೆ ಮಿತಿ ಹೇರಿಕೆಯೂ ಅಲ್ಲ. ಬದಲಾಗಿ, ಜ್ಞಾನದ ವಿಸ್ತರಣೆ ಮತ್ತು ರಾಷ್ಟ್ರದ ಭಾವನಾತ್ಮಕ ಸಮಗ್ರತೆಯ ಆರಂಭಿಕ ಬಿಂದು’ ಎಂದು ಹೇಳಿತು. ಸಮಸ್ಯೆ ಏನೆಂದರೆ, ಉತ್ತರದ ರಾಜ್ಯಗಳು ಕನ್ನಡ, ತಮಿಳು, ತೆಲುಗು ಇತ್ಯಾದಿ ದಕ್ಷಿಣ ಭಾರತದ ಭಾಷೆಗಳನ್ನು ಕಲಿಸುವುದಿಲ್ಲ. ಬದಲಾಗಿ, ಹಿಂದಿಯ ಪ್ರಸಾರಕ್ಕೆ ವರ್ಷೇವರ್ಷೇ ಬಜೆಟ್ ಬೆಂಬಲ ಹೆಚ್ಚುತ್ತಿದೆ. 2025-26ರಲ್ಲಿ 95.64 ಕೋಟಿ ರೂ. ನೀಡಲಾಗಿದೆ. ಉತ್ತರ ಭಾರತ ಕೇಂದ್ರಿತ ಎಲ್ಲ ರಾಷ್ಟ್ರೀಯ ಪಕ್ಷಗಳೂ ಹಿಂದಿಯನ್ನು ಪ್ರೋತ್ಸಾಹಿಸುತ್ತವೆ.
ಅನುದಾನ ಸ್ಥಗಿತದ ಬೆದರಿಕೆ
ತಮಿಳುನಾಡು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಿಲ್ಲ ಎಂದು ಒಕ್ಕೂಟ ಸರಕಾರ ಸರ್ವ ಶಿಕ್ಷಾ ಅಭಿಯಾನದ ಅನುದಾನವನ್ನು ತಡೆಹಿಡಿದಿದೆ. ಫೆಬ್ರವರಿ 15ರಂದು ಈ ಸಂಬಂಧ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿಕೆ ನೀಡಿದ್ದರು. ಮುಖ್ಯಮಂತ್ರಿ ಸ್ಟಾಲಿನ್, ‘‘ತಮಿಳುನಾಡು ತ್ರಿಭಾಷಾ ಸೂತ್ರವನ್ನು ಒಪ್ಪದ ಕಾರಣ ಎನ್‌ಇಪಿಗೆ ಸಮ್ಮತಿಸಿಲ್ಲ. ತ್ರಿಭಾಷಾ ಸೂತ್ರವು ಹಿಂದಿ ಹೇರಿಕೆಗೆ ನೆಪ’’ ಎಂದರು. ಪ್ರಧಾನ್, ‘‘ತಮಿಳುನಾಡು ಸರಕಾರ ಸಂವಿಧಾನಕ್ಕೆ ಬದ್ಧವಾಗಿರಬೇಕು’’ ಎಂದು ಪ್ರತಿಕ್ರಿಯಿಸಿದರು. ‘‘ಒಂದುವೇಳೆ ತಮಿಳುನಾಡು ಕೇಂದ್ರಕ್ಕೆ ತೆರಿಗೆ ಪಾವತಿಸುವುದನ್ನು ನಿಲ್ಲಿಸಿದರೆ, ಏನಾಗುತ್ತದೆ?’’ ಎಂದು ಸ್ಟಾಲಿನ್‌ಸವಾಲೆಸೆದರು. ಲೋಕಸಭೆಯಲ್ಲೂ ಈ ಸಂಬಂಧ ಟೀಕೆ-ಪ್ರತಿಟೀಕೆ ನಡೆಯಿತು. ಪ್ರಧಾನ್ ಬಳಸಿದ ಪದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಡಿಎಂಕೆ ಸಂಸದರು ಕಲಾಪಕ್ಕೆ ಅಡ್ಡಿಯುಂಟು ಮಾಡಿದರು. ತಮಿಳುನಾಡಿನಲ್ಲಿ ಬಿಜೆಪಿ ಹೊರತುಪಡಿಸಿ ಎಲ್ಲ ಪಕ್ಷಗಳೂ ದ್ವಿಭಾಷಾ ಸೂತ್ರವನ್ನು ಬೆಂಬಲಿಸುತ್ತಿವೆ. ತಮಿಳುನಾಡು ಪಿಎಂಶ್ರೀ(ಪ್ರಧಾನಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯ) ಯೋಜನೆಯನ್ನೂ ವಿರೋಧಿಸುತ್ತಿದೆ. ಈ ಯೋಜನೆಯಡಿ ಮಗುವನ್ನು ಮೂರನೇ ವಯಸ್ಸಿನಲ್ಲಿ ಶಾಲೆಗೆ ಸೇರಿಸಬೇಕಾಗುತ್ತದೆ. ಆದರೆ, ತಮಿಳುನಾಡಿನಲ್ಲಿ ಭಿನ್ನ ಪದ್ಧತಿ ಜಾರಿಯಲ್ಲಿದೆ. ‘ಸಮಗ್ರ ಶಿಕ್ಷಣ ಅಭಿಯಾನ ಮತ್ತು ಪಿಎಂಶ್ರೀ ಯೋಜನೆಗಳಿಗೆ ಅನುದಾನ ಬಿಡುಗಡೆಗೆ ಸ್ಪಷ್ಟ ಮಾರ್ಗಸೂಚಿ ರೂಪಿಸಬೇಕು’ ಎಂದು ಒತ್ತಾಯಿಸುತ್ತಿವೆ. ‘ಅನುದಾನ ಬಿಡುಗಡೆಯಾಗದೆ ಇರುವುದರಿಂದ, 40 ಲಕ್ಷ ವಿದ್ಯಾರ್ಥಿಗಳು ಹಾಗೂ 32,000 ಸಿಬ್ಬಂದಿಗೆ ತೊಂದರೆಯಾಗಿದೆ’ ಎಂದು ತಮಿಳುನಾಡು ಹೇಳುತ್ತಿದೆ.
ಸರ್ವ ಶಿಕ್ಷಾ ಅಭಿಯಾನ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಮತ್ತು ಶಿಕ್ಷಕರ ಶಿಕ್ಷಣ ಯೋಜನೆಯನ್ನು ಒಗ್ಗೂಡಿಸಿ, 2018ರಲ್ಲಿ ಸಮಗ್ರ ಶಿಕ್ಷಣ ಅಭಿಯಾನವನ್ನು ಆರಂಭಿಸಲಾಯಿತು. ಇದರ ಶೇ.60ರಷ್ಟು ವೆಚ್ಚವನ್ನು ಕೇಂದ್ರ ಹಾಗೂ ಉಳಿಕೆ ವೆಚ್ಚ ವನ್ನು ರಾಜ್ಯಗಳು ಭರಿಸುತ್ತಿವೆ. ಎಲ್ಲ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಸಮಗ್ರ ಶಿಕ್ಷಣ ಅಭಿಯಾನದ ಗುರಿ. ತಮಿಳುನಾಡು ಮಾತ್ರವಲ್ಲದೆ ಕೇರಳ, ಪಂಜಾಬ್, ಪಶ್ಚಿಮ ಬಂಗಾಳಕ್ಕೂ ಸಮಗ್ರ ಶಿಕ್ಷಣ ಅಭಿಯಾನದ ಅನುದಾನವನ್ನು ಬಿಡುಗಡೆಗೊಳಿಸಿಲ್ಲ. ಕಳೆದ ವರ್ಷ ಕೂಡ ಕೇರಳ, ಪಂಜಾಬ್, ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ದಿಲ್ಲಿಗೆ ಅನುದಾನ ತಡೆಹಿಡಿಯಲಾಗಿತ್ತು. ‘ಎನ್‌ಇಪಿ ಮತ್ತು ಸಮಗ್ರ ಶಿಕ್ಷಣ ಅಭಿಯಾನಕ್ಕೆ ಯಾವುದೇ ಸಂಬಂಧವಿಲ್ಲ. ಕೇಂದ್ರ ಅನುದಾನ ಬಿಡುಗಡೆ ಮಾಡದೆ, ಎನ್‌ಇಪಿಗೆ ಒಪ್ಪಿಕೊಳ್ಳುವಂತೆ ರಾಜ್ಯಗಳ ಮೇಲೆ ಒತ್ತಡ ಹೇರುತ್ತಿದೆ’ ಎಂದು ರಾಜ್ಯಗಳು ದೂರುತ್ತಿವೆ.
ಕರ್ನಾಟಕ ಎನ್‌ಇಪಿಯನ್ನು ವಿರೋಧಿಸಿದೆ. ಹಿಂದಿನ ಬಿಜೆಪಿ ಸರಕಾರ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿತ್ತು. ರಾಜ್ಯ ಸರಕಾರ ಪ್ರತ್ಯೇಕ ನೀತಿಯನ್ನು ಜಾರಿಗೊಳಿಸಲು ನಿರ್ಧರಿಸಿದ್ದು, ಶಿಕ್ಷಣ ನೀತಿಯ ಕರಡು ಸಿದ್ಧಗೊಳಿಸಲು ಯುಜಿಸಿ ಮಾಜಿ ಅಧ್ಯಕ್ಷ ಪ್ರೊ. ಸುಖದೇವ್ ಥೋರಟ್ ನೇತೃತ್ವದ ಶಿಕ್ಷಣ ನೀತಿ ಆಯೋಗವನ್ನು ರಚಿಸಿದೆ. ಆಯೋಗದ ಶಿಫಾರಸಿನಂತೆ 3 ವರ್ಷ ಅವಧಿಯ ಪದವಿಯನ್ನು 2024-25ರ ಶೈಕ್ಷಣಿಕ ವರ್ಷದಿಂದ ಜಾರಿಗೊಳಿಸಲಾಗಿದೆ. ಆಯೋಗದ ಅಂತಿಮ ವರದಿ ಸಲ್ಲಿಕೆಯಾಗಬೇಕಿದೆ.
ಕಾರ್ಯಸೂಚಿಯ ಭಾಗ
ಮೋದಿ ಸರಕಾರಕ್ಕೆ ಒಕ್ಕೂಟ ತತ್ವದ ಬಗ್ಗೆ ನಂಬಿಕೆ ಇಲ್ಲ. ತಮಿಳುನಾಡಿನಲ್ಲಿ ಬಿಜೆಪಿ ನೇಮಿಸಿರುವ ರಾಜ್ಯಪಾಲರಿಗೆ ನ್ಯಾಯಾಲಯ ಛೀಮಾರಿ ಹಾಕಿದ್ದರೂ, ಅವರ ವರ್ತನೆ ಬದಲಾಗಿಲ್ಲ. ಪ್ರತಿಪಕ್ಷಗಳ ಸರಕಾರ ಇರುವ ಎಲ್ಲ ರಾಜ್ಯಗಳಲ್ಲೂ ರಾಜ್ಯಪಾಲರ ಕಿರಿಕಿರಿ ತಪ್ಪಿಲ್ಲ. ಪ್ರಶ್ನೆಯೇನೆಂದರೆ, ಯಾವ ಹಿಂದಿ ಭಾಷಿಕ ರಾಜ್ಯಗಳು ದಕ್ಷಿಣದ ಭಾಷೆಯನ್ನು ಕಲಿಸುತ್ತಿವೆ? ದಕ್ಷಿಣದ ರಾಜ್ಯಗಳು ಹಿಂದಿಯನ್ನು ಏಕೆ ಕಲಿಯಬೇಕು? ಉತ್ತರದ ರಾಜ್ಯಗಳು ಕನ್ನಡ/ತಮಿಳು ಇಲ್ಲವೇ ತೆಲುಗಿನ ಬದಲು ಸಂಸ್ಕೃತವನ್ನು ಆಯ್ಕೆ ಮಾಡಿಕೊಂಡಿವೆ. ತ್ರಿಭಾಷಾ ಸೂತ್ರಕ್ಕೆ ಭಂಗ ತಂದಿರುವುದು ಉತ್ತರದ ರಾಜ್ಯಗಳೇ ಹೊರತು ದಕ್ಷಿಣದ ರಾಜ್ಯಗಳಲ್ಲ. ದಕ್ಷಿಣದ ರಾಜ್ಯಗಳು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಉತ್ತೇಜನ, ಲಿಂಗ ಸಮಾನತೆ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಹಲವು ಯೋಜನೆಗಳನ್ನು ಆರಂಭಿಸಿವೆ. ಅವುಗಳ ಸಾಮಾಜಿಕ ಸೂಚ್ಯಂಕಗಳು ಉತ್ತಮವಾಗಿವೆ.
ಭಾಷೆ ಎನ್ನುವುದು ಸಾಂಸ್ಕೃತಿಕ ಮೌಲ್ಯಗಳ ಲಂಗರು; ಅದು ದೇಶವನ್ನು ಒಗ್ಗೂಡಿಸುವ ಸಾಮರ್ಥ್ಯ ಹೊಂದಿದೆ. ವಿದ್ಯೆ ಉದ್ಯೋಗಕ್ಕೆ ನೆರವಾಗಬೇಕು. ಸರಕಾರಗಳು ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ನೆರವಾಗುವಂಥ ಶಿಕ್ಷಣ ನೀಡಬೇಕು. ಇಂಗ್ಲಿಷ್ ಭಾಷಿಕರಿಗೆ ಕೇಂದ್ರ ಸೇವೆಗಳು, ಸೇನೆ, ನ್ಯಾಯಾಂಗ ಮತ್ತಿತರ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶವಿದೆ. ಇಂಗ್ಲಿಷ್ ಕಲಿಕೆಯು ವಿದ್ಯಾರ್ಥಿಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ; ಜಗತ್ತಿಗೆ ಇಂಗ್ಲಿಷ್ ಭಾಷಿಕರ ಅಗತ್ಯವಿದೆ. ಒಂದು ವೇಳೆ ಇಂಗ್ಲಿಷ್‌ನ್ನು ಹಿಂದಿ ಸ್ಥಳಾಂತರಿಸುವ ಕಾಲ ಬಂದಾಗ, ದಕ್ಷಿಣದ ರಾಜ್ಯಗಳು ಅದಕ್ಕೆ ಸಿದ್ಧವಾಗಬೇಕಾಗುತ್ತದೆ.
ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲವೂ ರಾಷ್ಟ್ರ ಭಾಷೆಗಳೇ. ಕರ್ನಾಟಕದಲ್ಲಿ ಕನ್ನಡವೇ ರಾಷ್ಟ್ರ ಭಾಷೆ. ಬಿಜೆಪಿಯ ಹಿಂದೂ, ಹಿಂದುತ್ವ ಹಾಗೂ ಹಿಂದುಸ್ಥಾನ ಕಾರ್ಯಸೂಚಿಯ ಭಾಗವೇ ಹಿಂದಿ ಹೇರಿಕೆ. ಕನ್ನಡಿಗರ ಹೊಂದಿಕೊಂಡು ಹೋಗುವ ಗುಣ ಅವರಿಗೆ ಮುಳುವಾಗಿದೆ. ಬೇಕಿದ್ದವರು ಹಿಂದಿ ಕಲಿಯಲಿ: ಆದರೆ, ಹಿಂದಿ ಹೇರಿಕೆಯನ್ನು ಸಹಿಸಬಾರದು.
ನಮ್ಮದು ಬಹುಭಾಷೆ, ಸಂಸ್ಕೃತಿ ಹಾಗೂ ಧರ್ಮಗಳ ದೇಶ. ತ್ರಿಭಾಷಾ ಸೂತ್ರ ದೇಶಿ ಭಾಷೆಗಳ ಮೇಲೆ ನಡೆದ ಹಲ್ಲೆ; ಇಂಥ ಹೇರಿಕೆ ಪ್ರಜಾಸತ್ತಾತ್ಮಕವಲ್ಲ ಹಾಗೂ ಸಂವಿಧಾನವಿರೋಧಿ. ಸಂವಿಧಾನದ ರಕ್ಷಣೆ, ಪ್ರಜಾಪ್ರಭುತ್ವದ ಉಳಿವು ಮತ್ತು ಒಕ್ಕೂಟ ವ್ಯವಸ್ಥೆ ಮೇಲೆ ಪ್ರತಿನಿತ್ಯ ಹಲ್ಲೆ ನಡೆಯುತ್ತಿರುವ ಸಂದರ್ಭದಲ್ಲಿ ಭಾಷೆ-ಶಿಕ್ಷಣ ನೀತಿಗಳು ರಾಜಕೀಯಕ್ಕೆ ಹೊರತಾದುದು ಎಂದು ಭಾವಿಸಬಾರದು. ತಮಿಳುನಾಡಿನ ಜೊತೆಗೆ ಕರ್ನಾಟಕ ಸರಕಾರ ಕೈಜೋಡಿಸಬೇಕಿದೆ.